ವೇಲೀ ಎಂಬ ಜಾಲಿ ತಾಣ ದೇವರ ಸ್ವಂತ ನಾಡು ಎಂದು ಹೆಸರಾಗಿರುವ ಪ್ರಕೃತಿ ರಮ್ಯ ರಾಜ್ಯವಾದ ಕೇರಳದಲ್ಲಿ ಪ್ರವಾಸೀ ಆಕರ್ಷಣೆಗಳು ಹಲವಾರು. ಅಂಥ ಒಂದು ಸುಂದರ ಪ್ರವಾಸೀತಾಣ, ತಿರುವನಂತಪುರದ(ತ್ರಿವೇಂಡ್ರಂ) ವೇಲೀ ಎಂಬ ಪ್ರವಾಸೀಗ್ರಾಮ. ಕೇರಳದ ರಾಜಧಾನಿಯಾದ ತಿರುವನಂತಪುರ, ಅನಂತಪದ್ಮನಾಭ ದೇವಾಲಯದಿಂದ ಬಹಳ ಪ್ರಸಿದ್ಧ. ತಿರುವನಂತಪುರವೆಂಬ ಹೆಸರು ಬರಲು ಕಾರಣವಾಗಿರುವ ಈ ದೇವಾಲಯದಲ್ಲಿ ದೊರಕಿದ ಬಹು ಮೌಲ್ಯಯುಕ್ತವಾದ ಅತುಲೈಶ್ವರ್ಯದಿಂದ ಇದು ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ಅಷ್ಟು ಮಾತ್ರವಲ್ಲದೆ, ಭವ್ಯ ವಾಸ್ತುಶಿಲ್ಪದಿಂದಲೂ ಪ್ರಾಚೀನತೆಯಿಂದಲೂ ಇದೊಂದು ಶ್ರೀಮಂತ ದೇವಾಲಯವಾಗಿದ್ದು ಪ್ರಮುಖ ಯಾತ್ರಾಸ್ಥಳವೂ ಆಗಿದೆ! ತ್ರಿವೇಂಡ್ರಂನಲ್ಲಿ ಇದರಂತೆ ಸುಂದರವಾದ ಒಂದು ಪಿಕ್‌ನಿಕ್ ತಾಣವೂ ಇದೆ. ಅದುವೇ ವೇಲೀ ಎಂಬ ಪ್ರವಾಸೀ ಗ್ರಾಮ. ಇದು ತ್ರಿವೇಂಡ್ರಂ ನಗರದಿಂದ ಎಂಟು ಕಿ.ಮೀ. ದೂರದಲ್ಲಿದ್ದು, ಶಂಖುಮುಗಂ ಎಂಬ ಸಮುದ್ರತೀರ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿದೆ. ವೇಲೀ ನದಿ ಅರಬ್ಬೀ ಸಮುದ್ರವನ್ನು ಸೇರುವ ಸ್ಥಳದ ಬಳಿ ಈ ಪ್ರವಾಸೀಗ್ರಾಮವಿದೆ. ಇಲ್ಲಿ ಮನಮೋಹಕ ಉದ್ಯಾನವನವಿದ್ದು ಎಲ್ಲೆಲ್ಲೂ ಹಸಿರಾಗಿದೆ ಹಾಗೂ ಸುಂದರವಾದ ಪುಷ್ಪಗಿಡಗಳಿವೆ. ಹೂಕುಂಡಗಳಲ್ಲಿ ಪುಷ್ಪಗಿಡಗಳನ್ನು ಬೆಳೆಸಿ ಸುಂದರ ವಿನ್ಯಾಸದಲ್ಲಿಟ್ಟಿರುವ ರೀತಿ ಮನಸೆಳೆಯುತ್ತದೆ. ತಿಳಿನೀರಿನ ತಟಾಕವೊಂದಿದ್ದು ಅದರಲ್ಲಿ ಸೊಗಸಾದ ಶಂಖ ಕೆತ್ತನೆಗಳಿವೆ. ಉದ್ಯಾನವನದಲ್ಲಿ ಅಂತೆಯೇ ಸ್ತ್ರೀ ರೂಪ, ಬೆಸೆದುಕೊಂಡಿರುವ ಹಾವುಗಳು ಮೊದಲಾದ ಕೆತ್ತನೆಗಳಿದ್ದು ಮನಸೆಳೆಯುತ್ತವೆ. ಈ ಕೆತ್ತನೆಗಳನ್ನು ನಿರ್ಮಿಸಿರುವುದು ಕೇರಳದ ಪ್ರಸಿದ್ಧ ಕಲಾವಿದರಾದಕನ್ನಿರಾಮನ್ ಕನಯಿರವರು. ಈ ಉದ್ಯಾನವನದಲ್ಲಿ, ತಟಾಕದ ಕಟ್ಟೆಗಳ ಮೇಲೆ ಕುಳಿತು ಇಲ್ಲಿನ ಪ್ರಶಾಂತ ವಾತಾವರಣದ ಸೌಂದರ್ಯವನ್ನು ಸವಿಯುತ್ತಾ ವಿಶ್ರಮಿಸಿಕೊಳ್ಳಬಹುದು. ಪ್ರೇಮಿಗಳಿಗೂ ನವ ದಂಪತಿಗಳಿಗೂ ಇದೊಂದು ರಮ್ಯ ತಾಣ. ಛಾಯಾಚಿತ್ರಕಾರರೂ ಇಲ್ಲಿ ತಮ್ಮ ಕ್ಯಾಮರಾಗಳಿಗೆ ಒಳ್ಳೆಯ ಭೋಜನವುಣಿಸಬಹುದು. ವೇಲೀ ನದಿಯಲ್ಲಿ ದೋಣಿವಿಹಾರಕ್ಕೆ ಅವಕಾಶವಿದೆ. ಪೆಡಲ್‌ಬೋಟ್‌ಗಳಲ್ಲಿ ಇಲ್ಲವೇ ರೋ-ಬೋಟ್‌ಗಳಲ್ಲಿ ದೋಣಿವಿಹಾರ ಮಾಡುವುದು ಬಹಳ ಆಹ್ಲಾದಕರ ಅನುಭವ. ವೇಲೀ ನದಿ ಸಮುದ್ರವನ್ನು ಸೇರುವ ಪ್ರದೇಶವು ನೋಡಲು ಮನೋಹರ. ದೋಣಿವಿಹಾರ ಮಾಡುತ್ತಾ ನದಿಯ ದಡದಲ್ಲಿರುವ ಅನೇಕ ಪಕ್ಷಿಗಳನ್ನೂ ನೋಡಿ ಆನಂದಿಸಬಹುದು. ಇಲ್ಲಿ ನದಿಗೆ ಹೊಂದಿಕೊಂಡಂತೆ ಒಂದು ಉಪಹಾರ ಮಂದಿರವೂ ಇದೆ. ವೇಲಿಗೆ ಬಹು ಸಮೀಪವೇ ಶಂಖುಮುಗಂ ಬೀಚ್ ಇದ್ದು, ಈ ಸಮುದ್ರತೀರವು ನೋಡಲು ಶಂಖದ ಮುಖದಂತಿರುವುದರಿಂದ ಇದಕ್ಕೆ ಶಂಖುಮುಗಂ ಎಂದು ಕರೆಯುತ್ತಾರೆ. ಅದರ ಸಮುದ್ರ ತೀರದ ಮೇಲೆ ನಡೆದು ಹೋಗುವುದು ಇಲ್ಲವೇ ಕಟ್ಟೆಗಳ ಮೇಲೆ ಕುಳಿತು ಸಮುದ್ರವೀಕ್ಷಣೆ ಮಾಡುವುದೇ ಸೊಗಸು. ಇಲ್ಲಿ ಕುದುರೆ ಸವಾರಿಯೂ ಸಂತಸ ಹೆಚ್ಚಿಸುವುದು. ಸಮುದ್ರತೀರದ ಬಳಿಯೇ ಬೆಸ್ತರ ವಸತಿಗಳಿವೆ. ಸಮುದ್ರತೀರದ ಎದುರಿಗೆ 'ಇಂಡಿಯಾ ಕಾಫಿ ಹೌಸ್‌' ಎಂಬ ಉಪಹಾರ ಮಂದಿರವಿದೆ. ಇಲ್ಲಿ ಕಾಫಿ, ತಿಂಡಿ ಸೇವಿಸುತ್ತಾ ಎದುರಿಗಿರುವ ಸಮುದ್ರ ನೋಡಬಹುದು. ಇದೊಂದು ಸುಂದರ ಅನುಭವ. ಈ ಉಪಹಾರ ಮಂದಿರದ ಸನಿಹವೇ ಕನ್ನಿರಾಮನ್ ಕನಯಿಯವರು ನಿರ್ಮಿಸಿರುವ 35 ಮೀಟರ್ ಉದ್ದದ, ಬೃಹತ್ ಗಾತ್ರದ ಮತ್ಸ್ಯಕನ್ನಿಕೆಯ, ಅಂದರೆ ಮರ್‌ಮೇಯ್ಡ್‌ನ ಕಾಂಕ್ರೀಟಿನ ಅದ್ಭುತವಾದ ಕೆತ್ತನೆಯಿದೆ. ಬೃಹತ್ ಚಿಪ್ಪೊಂದರಲ್ಲಿ ವೈಯ್ಯಾರದಿಂದ ಮೈಚೆಲ್ಲಿ ಮಲಗಿರುವ ಈ ಮತ್ಸ್ಯಕನ್ನಿಕೆ ಬಹಳ ಸುಂದರವಾಗಿದ್ದು, ನೈಜವೆನಿಸುವಂತಿದ್ದು, ಮನಸೆಳೆಯುತ್ತದೆ. ಅಂತೆಯೇ, ಕಾಲಿನ ಮೇಲೆ ಕಾಲು ಹಾಕಿಕೊಂಡು ವಿಶ್ರಮಿಸುತ್ತಿರುವ ಒಬ್ಬಪುರುಷನ ಸುಂದರ ಕೆತ್ತನೆಯೂ ಇಲ್ಲಿದೆ. ಇಲ್ಲಿ ಒಳಾಂಗಣ ಮನರಂಜನಾತಾಣ, ಮಕ್ಕಳಿಗಾಗಿ ಟ್ರಾಫಿಕ್ ಚಿಹ್ನೆಗಳ ಉದ್ಯಾನವನಗಳಿವೆ. ಸನಿಹದಲ್ಲೇ ನಕ್ಷತ್ರಾಕಾರದ ಒಂದು ಉಪಹಾರ ಮಂದಿರ ಹಾಗೂ ಕಪ್ಪೆಚಿಪ್ಪು ಮತ್ತು ಮುತ್ತಿನ ಆಕೃತಿಗಳು ಮನಸೆಳೆಯುತ್ತವೆ. ಈ ಸುಂದರ ತಾಣಗಳ ಸಮೀಪವೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. -ಡಾ. ಬಿ. ಆರ್. ಸುಹಾಸ್ 9880451062 (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ ://..//---//%27s-/55398ಗೆ ಭೇಟಿನೀಡಿ.