ಕಾರು ಖಾರ ಕಾರ್ ಕೊಳ್ಳೋದಿದ್ರೆ ಈಗ್ಲೆ ಕೊಂಡ್ಕೊಂಡ್ಬಿಡಿ. ವಾಹನ ಸಾಲದ ಬಡ್ಡಿದರ ಕಡಿಮೆ ಇದೆ. ಕಾರು ದರವೂ ಕಡಿಮೆಯಿದೆ. ಇಲ್ಲಾಂದ್ರೆ ಕನಿಷ್ಠ ಇನ್ನೊಂದು ವರ್ಷ ಕಾರು ಖರೀದಿ ಮುಂದೂಡಬೇಕಾಗಬಹುದು. ಕೇಂದ್ರ ಸರ್ಕಾರದ ವಿರುದ್ಧ ಈಗಾಗಲೇ ಕಿಡಿಕಾರುತ್ತಿರುವ ಕಾರು ಹಾಗೂ ಇತರ ವಾಹನ ಉತ್ಪಾದಕರು ಕಾರುಗಳ ಬೆಲೆಯನ್ನು ಶೇ.2ರಿಂದ ಶೇ.10ರವರೆಗೆ ಏರಿಸುವ ಸಾಧ್ಯತೆಯಿದೆ. ಇದಲ್ಲದೇ ಎಸ್‌ಯುವಿ ಕಾರುಗಳ ಬೆಲೆ ಶೇ.13ರವರೆಗೂ ಏರುವ ಅಂದಾಜಿದೆ. 2013-14ರ ಆರ್ಥಿಕ ವರ್ಷದಲ್ಲಿ ಕಾರು ಕೊಳ್ಳುವವರ ಕಿಸೆಗೆ ಕತ್ತರಿಬೀಳುವುದು ಖಂಡಿತ. ಕೇಂದ್ರ ಬಜೆಟ್‌ನಲ್ಲಿ ಆಟೊಮೊಬೈಲ್ ಕೈಗಾರಿಕೆಗೆ ವಿತ್ತ ಸಚಿವರು ಹೆಚ್ಚೇನು ಪ್ರಾಶಸ್ತ್ಯ ನೀಡಿಲ್ಲ. ಇದರಿಂದ ಪರೋಕ್ಷವಾಗಿ ಭಾರತದ ಮಧ್ಯಮ ಶ್ರೀಮಂತ ವರ್ಗಗಳ ಜೇಬಿಗೆ ಕತ್ತರಿ ಬೀಳುವುದು ಖಾತರಿಯಾಗಿದೆ. ಈಗಾಗಲೇ ನಿರೀಕ್ಷೆಗೆ ತಕ್ಕಂತೆ ಭಾರತೀಯ ಅಟೋಮೊಬೈಲ್ ಕೈಗಾರಿಕೆ ಪ್ರಗತಿ ಸಾಧಿಸಲು ವಿಫಲವಾಗಿದೆ. ಪ2016ರ ಅಂತ್ಯಕ್ಕೆ ಭಾರತೀಯ ಕಂಪನಿಗಳ ವಹಿವಾಟು ಸುಮಾರು ರು. 80 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿತ್ತು. ಆದರೆ ಪ್ರಸ್ತುತ ಮಾರುಕಟ್ಟೆ ಬೆಳವಣಿಗೆಯಿಂದ ಇದು ರು. 60 ಲಕ್ಷ ಕೋಟಿಗೆ ಸೀಮಿತವಾಗುವ ಅಂದಾಜಿದೆ. ಇದಕ್ಕೆ ಅಟೊಮೊಬೈಲ್ ದಿಗ್ಗಜರು ನೀಡುವ ಕಾರಣವೆಂದರೆ ಕೇಂದ್ರ ಸರ್ಕಾರದ ಅಸಮರ್ಪಕ ತೆರಿಗೆ ನೀತಿ. ಬಜೆಟ್‌ನಲ್ಲಿ ಏನಾಯಿತು? ಭಾರತದ ವಾಹನಗಳ ಉದ್ಯಮದಲ್ಲಿ 2010-11 ಪ್ರಮುಖ ವರ್ಷ. ಎಲ್ಲ ತರಹದ ವಾಹನಗಳು ಶೇ.30ಕ್ಕೂ ಅಧಿಕ ಪ್ರಮಾಣದಲ್ಲಿ ಖರೀದಿಯಾಗಿದ್ದವು. ಆದರೆ ಕೇಂದ್ರ ಸರ್ಕಾರದ ತೆರಿಗೆ ನೀತಿಯಿಂದ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥ ಇಳಿಯುತ್ತಾ ಹೋಯಿತು. ಇದರಿಂದ ಅಟೋಮೊಬೈಲ್ ದಿಗ್ಗಜರು ಕೇಂದ್ರ ಸರ್ಕಾರಕ್ಕೆ ಬೇಡಿಕೆಗಳ ಮಹಾಪೂರವನ್ನೇ ಸಲ್ಲಿಸಿದ್ದರು. ಆದರೆ ಇದ್ಯಾವುದನ್ನು ತಲೆಗೆ ಹಚ್ಚಿಕೊಳ್ಳದ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅಟೋ ಮೊಬೈಲ್ ಕೈಗಾರಿಕೆಗಳ ಮೇಲಿನ ತೆರಿಗೆ ನೀತಿಯಲ್ಲಿ ಬಹುಪಾಲು ಯಥಾಸ್ಥಿತಿ ಕಾದುಕೊಂಡಿದ್ದಾರೆ. ಎಸ್‌ಯುವಿ ಕಾರುಗಳ ಮೇಲಿನ ಅಬಕಾರಿ ಸುಂಕವನ್ನು ಶೇ.27ರಿಂದ ಶೇ.30ರವರೆಗೆ ಏರಿಸಿದರು. ಇನ್ನು ಸಾರ್ವಜನಿಕ ವಾಹನಗಳ ಸೇವೆಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.13ಕ್ಕೆ ಇಳಿಸಲಾಗಿದೆ. ಇದರಿಂದ ಸಾರ್ವಜನಿಕ ಸೇವೆಗೆ ಬಳಸುವ ಬಸ್‌ಗಳ ದರದಲ್ಲಿ ಮಾತ್ರ ಯಾವುದೇ ಹೆಚ್ಚಳವಾಗುವ ಸಾಧ್ಯತೆಯಿಲ್ಲ. ಇನ್ನುಳಿದಂತೆ ವಿದೇಶಿ ವಾಹನಗಳ ಆಮದು ಸುಂಕವನ್ನು ಶೇ.25 ಹೆಚ್ಚು ಮಾಡಲಾಗಿದೆ. ಉದ್ಯಮಿಗಳ ಅಹವಾಲೇನಾಗಿತ್ತು? ಸಣ್ಣ ಕಾರುಗಳ ವಿಭಾಗ ಹೊರತುಪಡಿಸಿ ಉಳಿದ ಕಾರುಗಳಿಗೆ ಶೇ.24ರಿಂದ ಶೇ.27ರವರೆಗೆ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಸಣ್ಣ ಕಾರುಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾರುಗಳ ತೆರಿಗೆ ನೀತಿಯನ್ನು ಸಮವಾಗಿಡಬೇಕು. ಎಲ್ಲ ಕಾರುಗಳ ಮೇತಿನ ತೆರಿಗೆಯನ್ನು ಶೇ.22ಕ್ಕೆ ಇಳಿಸಬೇಕು ಎನ್ನುವುದು ದೊಡ್ಡ ಬೇಡಿಕೆಯಾಗಿತ್ತು. ಇದಲ್ಲದೇ ಮೊಟಾರ್ ಬೈಕ್‌ಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸುವಂತೆ ಒತ್ತಡ ಹೇರಲಾಗಿತ್ತು. ಇದನ್ನು ಹೊರತುಪಡಿಸಿ ವಾಹನಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲು ಒತ್ತಾಯಿಸಲಾಗಿತ್ತು. ಈಗಿರುವ ಶೇ.10ರಿಂದ 13ರವರೆಗಿನ ಬಡ್ಡಿದರವನ್ನು ಒಂದಂಕಿಗೆ ಇಳಿಸುವಂತೆ ಮನವಿ ಸಲ್ಲಿಸಿದ್ದರೂ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಮತ್ತೊಂದೆಡೆ ಆರ್‌ಬಿಐ ಕೂಡ ಬಡ್ಡಿದರ ಇಳಿಕೆಗೆ ಒಪ್ಪಿಗೆ ಸೂಚಿಸಿಲ್ಲ. ಇವೆರಡು ಅಂಶಗಳು ಉದ್ಯಮಿಗಳ ನಿದ್ದೆಗೆಡಿಸಿವೆ. ಬೆಲೆಯಲ್ಲಿ ತೀವ್ರ ಹೆಚ್ಚಳ ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಟೋಯೊಟಾ ಇನೋವಾ, ಫಾರ್ಚುನರ್, ಮಹೀಂದ್ರ ಎಕ್ಸ್‌ಯುವಿ, ಟಾಟಾ ಸಫಾರಿ ಸೇರಿದಂತೆ 1500 ಸಿಸಿಗೂ ಅಧಿಕ ಸಾಮರ್ಥ್ಯದ ಎಂಜಿನ್‌ಗಳ ಕಾರಿನ ದರದಲ್ಲಿ ಭಾರಿ ಬದಲಾವಣೆಯಾಗಲಿದೆ. ದೊಡ್ಡ ಕಾರುಗಳ ದರದಲ್ಲಿ 1 ಲಕ್ಷಕ್ಕೂ ಅಧಿಕ ದರ ಹೆಚ್ಚಾಗುವ ಸಾಧ್ಯತೆಯಿದೆ. ಅಬಕಾರಿ ಸುಂಕದಿಂದ ಶೇ.3 ಹಾಗೂ ಬೇಡಿಕೆ ಈಡೇರದಿದ್ದರೆ ಮೊದಲೇ ನಿರ್ಧರಿಸಿದ್ದ ಶೇ.10ರ ದರ ಬದಲಾವಣೆ ಗ್ರಾಹಕರಿಗೆ ತಲೆನೋವಾಗಲಿದೆ. ಇದಲ್ಲದೇ ಡೀಸೆಲ್ ಹಾಗೂ ಪೆಟ್ರೋಲ್ ಕಾರುಗಳ ಮಾರಾಟ ವ್ಯತ್ಯಾಸ ತಡೆಯಲು ಡೀಸೆಲ್ ಕಾರುಗಳ ದರವನ್ನು ಹೆಚ್ಚಿಸುವ ಬಗ್ಗೆ ಉದ್ಯಮ ವಲಯ ಚಿಂತನೆ ನಡೆಸಿದೆ. ಈ ಬಗ್ಗೆ ಈಗಾಗಲೇ ವಾಹನಗಳ ಮಾರಾಟ ಒಕ್ಕೂಟ ಸ್ಪಷ್ಟಪಡಿಸಿದೆ. ಡೀಸೆಲ್ ಕಾರುಗಳ ತಲೆನೋವು! ಈ ಐದು ವರ್ಷಗಳಲ್ಲಿನ ಪೆಟ್ರೋಲಿಯಂ ದರ ನಿರ್ವಹಣೆ ವೈಫಲ್ಯವೂ ಉದ್ಯಮದ ಮೇಲೆ ಭಾರಿ ಪೆಟ್ಟು ಬಿದ್ದಿದೆ. ಮಾರುತಿ ಸುಝುಕಿ, ಹುಂಡೈ, ಟಾಟಾ ಸೇರಿದಂತೆ ಇತರ ಕಾರು ಉದ್ಯಮಗಳ ಪೆಟ್ರೋಲ್ ಕಾರನ್ನು ಕೇಳುವವರಿಲ್ಲದಂತಾಗಿದೆ. ಕಾರಿನ ಮಾರಾಟದಲ್ಲಿ ಶೇ.80ಕ್ಕೂ ಅಧಿಕ ಡೀಸೆಲ್ ಕಾರುಗಳೇ ವ್ಯಾಪಾರವಾಗುತ್ತಿವೆ. ಭಾರತದಲ್ಲಿ ಅಧಿಕ ಕಾರು ಮಾರಾಟ ಮಾಡುವ ಮಾರುತಿ ಸುಝುಕಿಯಲ್ಲಿ ಇದು ಶೇ.85ನ್ನು ದಾಟಿದೆ. ಇದರಿಂದ ಪೆಟ್ರೋಲ್ ಕಾರುಗಳ ಉತ್ಪಾದನೆಗೆ ಹೊಡೆತ ಬಿದ್ದಿದೆ. ಉತ್ಪಾದನೆ ಘಟಕವು ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಪೆಟ್ರೋಲ್ ಕಾರುಗಳದ್ದೇ ಹೆಚ್ಚಿದೆ. ಇದರಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರುಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಡೀಸೆಲ್ ಕಾರುಗಳಿಗಾಗಿ ತಿಂಗಳುಗಟ್ಟಲೇ ಕಾಯಬೇಕಾದ ಅನಿವಾರ್ಯತೆಯಿದೆ. ಮಾರುತಿ, ಹುಂಡೈ ಸೇರಿದಂತೆ ಪ್ರಮುಖ ಕಂಪನಿಗಳು ಹೆಚ್ಚುವರಿ ಡೀಸೆಲ್ ಕಾರು ತಯಾರಿಗೆ ಘಟಕಗಳನ್ನು ಪ್ರಾರಂಭಿಸುತ್ತಿದ್ದರೂ ಬೇಡಿಕೆಗೆ ಸ್ಪಂದಿಸಲಾಗುತ್ತಿಲ್ಲ. ಡೀಸೆಲ್ ದರ ಏರಿಸಿ! ಡೀಸೆಲ್ ಹಾಗೂ ಪೆಟ್ರೋಲ್ ಕಾರುಗಳ ಖರೀದಿಯಲ್ಲಿನ ವ್ಯತ್ಯಾಸ ಇಳಿಸುವ ಉದ್ದೇಶದಿಂದ ಡೀಸೆಲ್ ದರವನ್ನೇ ಏರಿಸಿ ಎಂದು ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇಲ್ಲವಾದಲ್ಲಿ ಎರಡು ಇಂಧನಗಳ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡಿ ಎಂದು ದುಂಬಾಲುಬಿದ್ದಿದ್ದವು. ಆದರೆ ಕೇಂದ್ರ ಸರ್ಕಾರವು ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವನ್ನೇ ಮಾಡಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಏರಿಕೆಯಾಗುತ್ತಿವೆ. ಅಂತರಗಳು ಹೆಚ್ಚಾಗುತ್ತಲೇ ಇವೆ. ಒಂದೆಡೆ ದರ ಹಾಗೂ ತೆರಿಗೆ ಹೆಚ್ಚಳದಿಂದ ಖರೀದಿ ಕಡಿಮೆಯಾದರೆ, ಮತ್ತೊಂದೆಡೆ ಪೆಟ್ರೋಲ್ ಬೆಲೆ ಏರಿಕೆಯಿಂದ ಪೆಟ್ರೋಲ್ ಎಂಜಿನ್ ಕಾರುಗಳನ್ನು ಕೇಳುವವರೆ ಇಲ್ಲದಂತಾಗುತ್ತಿದೆ. ಮಾರಾಟದಲ್ಲಿ ಇಳಿಕೆ 2012 ಮತ್ತು 2013ರ ಫೆಬ್ರವರಿಯಲ್ಲಿನ ಕಾರು ಹಾಗೂ ಮೋಟಾರ್ ಬೈಕ್ ಮಾರಾಟವನ್ನು ಗಮನಿಸಿದರೆ ಇಳಿತವಾಗಿದೆ. ರೆನಾಲ್ಟ್, ಮಹೀಂದ್ರಾ, ಹೋಂಡಾ ಮೋಟಾರ್ ಬೈಕ್ ಹಾಗೂ ಯಮಹಾ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದೆಲ್ಲ ಉದ್ದಿಮೆಗಳ ಮಾರುಕಟ್ಟೆ ಕುಸಿದಿದೆ. ಮಾರುತಿಹಾಗೂ ಹುಂಡೈ ಕಾರುಗಳ ಮಾರಾಟದಲ್ಲಿ ಶೇ.10ರಷ್ಟು ಕುಸಿತವಾಗಿದ್ದರೆ, ಟಾಟಾ ಕಾರುಗಳಲ್ಲಿ ಶೇ.70ರಷ್ಟು ಕುಸಿತವಾಗಿದೆ. ಈ ನಾಟಕೀಯ ಕುಸಿತವು ಉದ್ದಿಮೆಗಳಿಗೆ ತಲೆನೋವು ತಂದಿದ್ದು, ವಿಪರ್ಯಾಸವೆಂಬಂತೆ ಬಜೆಟ್‌ನಲ್ಲಿ ಕೂಡ ಉದ್ದಿಮೆಗೆ ಹಿನ್ನೆಡೆಯಾಗುವ ಅಂಶಗಳು ಸೇರಿವೆ. -ರಾಧೆ