ಹೋಂಡಾ ಮಿನಿಎಸ್‌ಯುವಿ ಇದಿನ್ನೂ ಹೆಸರಿಡದ ಕೂಸು. ಹೆಸರೇ ಇಟ್ಟಿಲ್ಲ, ಇನ್ನು ಮಾರುಕಟ್ಟೆಗೆ ಬರೋದು ಹೌದಾ ಎಂದು ಬೇಸರಪಟ್ಟುಕೊಳ್ಳಬೇಡಿ. ಹೋಂಡಾ ಕಂಪನಿ ಸದ್ದಿಲ್ಲದೇ ಮಿನಿಎಸ್‌ಯುವಿ ತಯಾರಿ ನಡೆಸಿದೆ ಎಂಬ ಸುದ್ದಿಯಿದೆ. ಅತ್ಯಂತ ಆಕರ್ಷಕ ಶೈಲಿ ಇದರ ಪ್ರಮುಖ ಆಕರ್ಷಣೆಯಾಗಲಿದೆ. ಅರ್ಬನ್ ಎಸ್‌ಯುವಿ ಎಂಬ ಹೆಸರಿಟ್ಟು ಹೋಂಡಾ ಕಂಪನಿ ಮಿನಿಎಸ್‌ಯುವಿ ಯೋಜನೆ ರೂಪಿಸಿದೆ. ಇದು ಹೊಸ ಜಾಝ್ ಮಾದರಿಯ ಚಾಸಿ ಮೇಲೆ ರೂಪಿತಗೊಳ್ಳಲಿದೆ. ಇತ್ತೀಚೆಗೆ ಹೋಂಡಾ ಕಂಪನಿ ಇದರ ಕಾಲ್ಪನಿಕ ಅಥವಾ ಮಾದರಿ ಚಿತ್ರಗಳನ್ನೂ ಬಿಡುಗಡೆ ಮಾಡಿದೆ. ಮಾದರಿ ಚಿತ್ರಕ್ಕೂ ನಿಜವಾಗಿ ಮಾರುಕಟ್ಟೆಗೆ ಬರುವ ವಾಹನಕ್ಕೂ ಕೆಲವು ವ್ಯತ್ಯಾಸಗಳು ಇರಬಹುದಾದರೂ ಮಾದರಿ ಚಿತ್ರದಲ್ಲಂತೂ ಅರ್ಬನ್ ಎಸ್‌ಯುವಿ ಅತ್ಯಂತ ಆಕರ್ಷಕ ಶೈಲಿ ಹೊಂದಿದೆ. ಹಿಂಬದಿಯಲ್ಲಿ ಅಡ್ಡಕ್ಕೆ ವಿಸ್ತರಿಸಿದಂತಿರುವ ಬ್ರೇಕ್‌ಲೈಟ್‌ಗಳು ಅತ್ಯಂತ ಆಕರ್ಷಕ ರೂಪ ನೀಡಿವೆ. ಆದರೆ ತೆರಿಗೆ ಅನುಕೂಲಕ್ಕಾಗಿ ಈ ಅರ್ಬನ್ ಎಸ್‌ಯುವಿಯನ್ನು 4 ಮೀಟರ್‌ಗಿಂತ ಕಡಿಮೆ ಉದ್ದ ಇಡಲಾಗುವುದೋ ಅಥವಾ ಅದಕ್ಕಿಂತ ಹೆಚ್ಚು ಉದ್ದ ಇರಲಿದೆಯೋ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೋಂಡಾ ಅಮೇಝ್‌ನಲ್ಲಿ ಕೆಲಸ ಮಾಡುತ್ತಿರುವ 1.5 ಲೀ. ಐಡಿಟೆಕ್ ಡೀಸೆಲ್ ಎಂಜಿನ್ ಇದರಲ್ಲೂ ಕೆಲಸ ಮಾಡಲಿದೆ. ಆದರೆ ಹೆಚ್ಚು ಅಶ್ವಶಕ್ತಿಯೊಂದಿಗೆ. ಆದರೆ 1.2 ಐವಿಟೆಕ್ ಅಥವಾ 1.5 ಐವಿಟೆಕ್ ಇವೆರಡರಲ್ಲಿ ಯಾವ ಪೆಟ್ರೋಲ್ ಎಂಜಿನ್ ಅನ್ನು ಕಂಪನಿ ಬಳಸಲಿದೆ ಎಂಬುದು ಕೂಡ ನಿಗೂಢವಾಗಿದೆ. ಎಂಜಿನ್ ಯಾವುದೇ ಆದರೂ ಕೇವಲ ಅತ್ಯುತ್ತಮ ವಿನ್ಯಾಸದ ಮೂಲಕವೇ ಇದು ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ. ಇದರ ದರ 8-12 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಗೆ ಬರುವ ಹೊತ್ತಿಗೆ ದರ ಕೊಂಚ ಹೆಚ್ಚಿದರೂ ಆಶ್ಚರ್ಯವಿಲ್ಲ. - ವಕ್ರದಂತ