ಶತ ಪಥ ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಕಲ್ಲಗದ್ದೆ ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿದ್ದು... ಭಾರತೀಯ ಬದುಕಿಗೆ ಆಂಗ್ಲ ಪ್ರಣೀತ ಆಧುನಿಕ ಶಿಕ್ಷಣದ ಪ್ರವೇಶ ಹೊಸದೊಂದು ಯುಗದ ನಾಂದಿಯಾಯಿತು. ಆದರೆ ಆಂಗ್ಲರ ಆಕ್ರಮಣ, ದಬ್ಬಾಳಿಕೆ ಮತ್ತು ದಾಸ್ಯದಲ್ಲಿರುವ ನಮ್ಮ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರು ನೀಡಿದ ಶಿಕ್ಷಣವೇ ಸ್ಫೂರ್ತಿಯಾದುದು ವಿಚಿತ್ರವಾದರೂ ಸತ್ಯ. ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಕಲ್ಲಗದ್ದೆ ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿದ್ದು 1913 ಜೂನ ತಿಂಗಳಲ್ಲಿ. ಇಡೀ ಭಾರತ ಆ ಸಂದರ್ಭದಲ್ಲಿ ಸುಡುವ ಕೆಂಡದ ಮೇಲೆ ನಿಂತಿತ್ತು. ಬ್ರಿಟಿಷ್ ಸರಕಾರದ ದುರಾಡಳಿತ, ಅತಿವೃಷ್ಟಿ-ಅನಾವೃಷ್ಟಿಗಳು ದೇಶವನ್ನು ತೀವ್ರ ಆಹಾರದ ಕೊರತೆಗೆ ನೂಕಿದ್ದವು. ಉಳಿದೆಲ್ಲ ಗ್ರಾಮಗಳಂತೆ ಕಲ್ಲಗದ್ದೆ ಮತ್ತು ಸುತ್ತಲಿನ ಗ್ರಾಮಗಳೂ ಉಪವಾಸದಿಂದ ನರಳುತ್ತಿದ್ದವು. ಬೊಂಬಾಯಿ ಮತ್ತು ಮೈಸೂರು ಪ್ರಾಂತಗಳ ಗಡಿಗ್ರಾಮವಾದ ಕಲ್ಲಗದ್ದೆಯಲ್ಲಿಯೇ ಬ್ರಿಟಿಷರು ನಿರ್ಮಿಸಿದ ಸುಂಕದಕಟ್ಟೆ ಮತ್ತು ಪೋಲಿಸ್ ಚೌಕಿಯಿತ್ತು. ಅನ್ನದ ಹಸಿವು ಮತ್ತು ಅಕ್ಷರದ ಹಸಿವು ಇವೆರಡೇ ಆಕಾಲದ ದೊಡ್ಡ ಸವಾಲುಗಳು. ಅಲ್ಲಿ ಇಲ್ಲಿ ಚೂರು ಪಾರು ಕಲಿತ ವಿದ್ಯೆಯಿಂದ ಆ ದಿನದ ಸ್ವಾತಂತ್ರ್ಯ ಹೋರಾಟದ ಕರಪತ್ರಗಳನ್ನು ಓದಿ ಅರ್ಥೈಸಿಕೊಳ್ಳುತ್ತಿದ್ದ ದಿ. ಕೃಷ್ಣಪ್ಪ ಹೆಗಡೆ, ನಾಗಪ್ಪ ಹೆಗಡೆ ಕಲ್ಲಗದ್ದೆ, ಕೃಷ್ಣಪ್ಪ ಹೆಗಡೆ ಕೋಡಗದ್ದೆ, ನಾಗಪ್ಪ ಹೆಗಡೆ ಗೋರನ್, ಪರಮೇಶ್ವರ ಭಟ್ಟ ಕಲಗದ್ದೆ ಇವರುಗಳ ಅಕ್ಷರದ ಹಸಿವು ಇಲ್ಲಿ ಶಾಲೆ ಪ್ರಾರಂಭವಾಗಲು ಕಾರಣವಾಯಿತು. ನವಿಲುಗೋಣ ದಿ.ರಾಮಚಂದ್ರ ಭಟ್ಟರಿಂದ 1911ರಲ್ಲಿಯೇ ಖಾಸಗಿಯಾಗಿ ಶುಭಾರಂಭಗೊಂಡಿದ್ದ ಶಾಲೆ 1913ರಲ್ಲಿ ಕಲ್ಲಗದ್ದೆ ಹೊರವಲಯದ 'ಸುಬ್ಬಮ್ಮನ ಕಟ್ಟೆ'ಯಲ್ಲಿ ಸೋಗೆಯ ಕುಟೀರದಲ್ಲಿ ಸರಕಾರಿ ಶಾಲೆಯಾಗಿ ವಿದ್ಯಾಕೃಷಿಗೆ ನಾಂದಿಹಾಡಿತು. ಕಲ್ಲಗದ್ದೆ ಗ್ರಾಮದ ಭಾಗವೇ ಆಗಿದ್ದ ಕೋಡಗದ್ದೆ, ಹನುಮಾವಿನಜಡ್ಡಿ ಗ್ರಾಮಗಳ ಮಕ್ಕಳಲ್ಲೂ ಅಕ್ಷರ ಕ್ರಾಂತಿಯ ಮುನ್ನುಡಿ ಬರೆಯಿತು; ಸ್ವಾತಂತ್ರ್ಯ ಹೋರಾಟದ ಕೆಚ್ಚು ಹೆಚ್ಚಿಸಿತು. 1933ರ ಒಂದು ದಿನ ಶಾಲೆ ಎಂಬ ಸೋಗೆಯ ಕುಟೀರ ಬೆಂಕಿಗೆ ಆಹುತಿಯಾಯಿತು. ಎರಡು ದಶಕದ ಶಾಲಾ ದಾಖಲೆ ನಾಶವಾಯಿತು. ಆಗ ಗ್ರಾಮದ ಶಕ್ತಿದೈವ ಶ್ರೀ ನೀಲಕಂಠೇಶ್ವರ ದೇವಾಲಯದ ವಿಶಾಲ ಪ್ರಾಂಗಣ ವಿದ್ಯೆಯ ಹರಿವಿಗೆ ಕೈಬೀಸಿ ಕರೆಯಿತು. ಸುಮಾರು 35 ವರ್ಷ ಇಲ್ಲಿಯೇ ಪಾಠ, ಪ್ರವಚನಗಳು ನಡೆದವು. ಸಿದ್ದಾಪುರ ತಾಲ್ಲೂಕಿನ ಆ ಕಾಲದ 11 ಸರಕಾರಿ ಶಾಲೆಗಳಲ್ಲಿ ಈ ಶಾಲೆಯೂ ಒಂದಾಗಿತ್ತು. ಸುತ್ತಲಿನ ಗ್ರಾಮಗಳಲ್ಲದೇ ಹೊರಜಿಲ್ಲೆ ಮತ್ತು ತಾಲ್ಲೂಕುಗಳಿಂದ ವಿದ್ಯಾರ್ಥಿಗಳು ಬರಲಾರಂಭಿಸಿದರು. ಆಗ ಪ್ರತ್ಯೇಕ ಸ್ಥಳದ ತೀವ್ರ ಅವಶ್ಯಕತೆ ಉಂಟಾಯಿತು. ಇಂಥ ಸಂದಿಗ್ಧ ಸಮಯದಲ್ಲಿ ವಿದ್ಯಾಭಿಮಾನಿ ದಿ. ಪರಮೇಶ್ವರ ಹೆಗಡೆ ಕಂಚೀಮನೆ ಶಾಲಾ ಕಟ್ಟಡಕ್ಕಾಗಿ ಒಂದು ಎಕರೆ ನಿವೇಶನವನ್ನು ದಾನ ಮಾಡಿದರು. 1950ರ ದಶಕದಲ್ಲಿ ಈ ವಿದ್ಯಾಲಯ 'ಜೀವನ ಶಿಕ್ಷಣ ಶಾಲೆ' ಎಂಬ ಅಭಿದಾನ ಪಡೆಯಿತು. ಈ ಸಂದರ್ಭದಲ್ಲಿ ಆಗಮಿಸಿದ ದಿ. ಜಿ.ಎಂ.ಪಂಡಿತ್ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಲ್ಲದೇ ಸ್ವಪ್ರಯತ್ನದಿಂದ ಕಿರಿಯ ಶಾಲೆಯ ಸ್ಥಾನದಿಂದ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿಸಿದರು. ಇದೇ ನಿವೇಶನದಲ್ಲಿ 1958ರಲ್ಲಿ ಸರಕಾರದ ಯಾವ ಸಹಾಯವನ್ನೂ ಪಡೆಯದೇ ಸ್ಥಳೀಯರ ಶ್ರಮದಾನ ಮತ್ತು ಆರ್ಥಿಕ ಸಹಾಯದ ಬಲದಲ್ಲಿ ಮಣ್ಣು ಗೋಡೆ, ಹಂಚಿನ ಛಾವಣಿಯ ಎರಡು ಕೊಠಡಿಗಳುಳ್ಳ ಭದ್ರ ಶಾಲಾ ಕಟ್ಟಡ ನಿರ್ಮಾಣವಾಯಿತು. ಆಗ ಶಿಕ್ಷಕರಿಗೆ ವಿದ್ಯಾರ್ಥಿಗಳ ಮನೆಯೇ ವಾಸಸ್ಥಳ, ಸಮಾಜ ಅಥವಾ ಸರಕಾರ ನೀಡುವ ಅಲ್ಪ ಗೌರವಧನವೇ ಅವರು ಪಡೆಯುವ ಗುರುದಕ್ಷಿಣೆಯಾಗಿತ್ತು. ಕಳೆದೊಂದು ಶತಮಾನದಲ್ಲಿ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು 63 ಶಿಕ್ಷಕರುಗಳಿಂದ ವಿದ್ಯೆ ಪಡೆದು ಸಭ್ಯ ಸಚ್ಚಾರಿತ್ರ್ಯವಂತ ನಾಗರಿಕರಾಗಿ ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ಪ್ರತಿಭಾಪೂರ್ಣ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ವ್ಯಾಪಾರ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಮಹತ್ವಪೂರ್ಣ ಸಂಶೋಧನೆಯಲ್ಲಿ ಮಿಂಚುತ್ತಿದ್ದಾರೆ. ಪ್ರಗತಿಪರ ಕೃಷಿಕರಾಗಿ ಸಾಧನೆಗೈಯುತ್ತಿದ್ದಾರೆ. ಶಾಲೆ ಹಲವು ದಶಕಗಳಿಂದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಜಿಲ್ಲೆ, ರಾಜ್ಯಮಟ್ಟದಲ್ಲಿ ಗುರುತು ಮೂಡಿಸುತ್ತಿದೆ. ಶತಮಾನೋತ್ಸವದ ಸಂಭ್ರಮದಲ್ಲಿರುವ ಶಾಲೆಯ 'ಶತ-ಪಥ'ದ ನೆನಪಿಗಾಗಿ ಗ್ರಾಮಸ್ಥರು ತಮ್ಮ ಶ್ರಮದಾನದಿಂದ ವಿಶಾಲ ಆಟದ ಮೈದಾನ ನಿರ್ಮಿಸಿದ್ದಾರೆ. ಕಲ್ಲಗದ್ದೆಯಲ್ಲಿತ್ತು ನೀನಾಸಂ! 50ರ ದಶಕದಲ್ಲಿ ಇದೇ ಶಾಲೆಯ ಹಿರಿಯ ವಿದ್ಯಾರ್ಥಿಗಳು ಸಂಘಟಿಸಿದ ನೀಲಕಂಠೇಶ್ವರ ನಾಟಕ ಸಂಘ (ನೀನಾಸಂ) ತನ್ನ ರಂಗಚಟುವಟಿಕೆಯಿಂದ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿತ್ತು. ಸ್ವತಃ ಕವಿಯಾಗಿದ್ದ ವೆಂಕಟರಮಣ ಹೆಗಡೆ ಕೆಳಗಿನ ಗೋರನ್ ನಾಟಕ ನಿರ್ದೇಶನ, ಹರಿಕೀರ್ತನೆ ಮತ್ತು ನಟನೆಯಲ್ಲಿ ಸಿದ್ಧಹಸ್ತರಾಗಿದ್ದರು. ಯಕ್ಷಗಾನ ಮತ್ತು ನಾಟಕ ಪ್ರಯೋಗಗಳಿಗಾಗಿಯೇ ಇವರು ಸ್ಥಾಪಿಸಿದ ನೀನಾಸಂ ಬೆಳವಣಿಗೆಯಲ್ಲಿ ಗಣಪತಿ ಭಟ್ಟ ಹೊಂಡದ್, ಬಂಗಾರೇಶ್ವರ ಹೆಗಡೆ ಕೋಡಗದ್ದೆ, ಮಹಾಬಲೇಶ್ವರ ಹೆಗಡೆ ಕೋಡಗದ್ದೆ, ವೆಂಕಟಾಚಲ ಹೆಗಡೆ ಕಲ್ಲಗದ್ದೆ, ಗಣಪತಿ ಹೆಗಡೆ ಮುಂತಾದ ಹಿರಿಯರು ಪ್ರಮುಖ ಪಾತ್ರ ನಿರ್ವಹಿಸಿದರು. ರಕ್ತರಾತ್ರಿ, ಬಡತನದ ಭೂತ, ಸತ್ಯವಾನ್ ಸಾವಿತ್ರಿ. ಸ್ತ್ರೀ ಮುಂತಾದ ನಾಟಕಗಳು ಆ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. - ಸುಬ್ರಾಯ ಮತ್ತೀಹಳ್ಳಿ