ಪುಣ್ಯಪುರ ಗದಗ ಜಿಲ್ಲೆಯ ಐತಿಹಾಸಿಕ ಪಟ್ಟಣ ಲಕ್ಷ್ಮೇಶ್ವರ ಜಿಲ್ಲೆಗೇ ಮುಕುಟಮಣಿ. ಆದಿಕವಿ ಪಂಪ ತನ್ನ ಮಹಾನ್‌ಕೃತಿ 'ಪಂಪ ಭಾರತ'ವನ್ನು (ಆದಿ ಪುರಾಣ) ರಚಿಸಿದ್ದೇ ಲಕ್ಷ್ಮೇಶ್ವರದಲ್ಲಿ. ಲಕ್ಕುಂಡಿ ಹೊರತು ಪಡಿಸಿದರೆ ಪ್ರಾಚೀನ ದೇವಸ್ಥಾನಗಳು ಮತ್ತು ಶಿಲ್ಪಕಲೆಗೆ ಹೆಸರಾದ ಜಿಲ್ಲೆಯ ಮತ್ತೊಂದು ಊರು ಲಕ್ಷ್ಮೇಶ್ವರ. ಬಾದಾಮಿ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರಾಚೀನ ಪಟ್ಟಣ ಪುಲಿಗೆರೆ, ಲಕ್ಷ್ಮೀಪುರ ಎಂಬ ಹೆಸರಿನಿಂದ ಬಹು ಪ್ರಾಮುಖ್ಯತೆ ಪಡೆದುಕೊಂಡಿತ್ತು. ದಕ್ಷಿಣದಲ್ಲಿ ಒಂದೇ ದೇವಸ್ಥಾನ ಲಕ್ಷ್ಮೇಶ್ವರದ ಕೇಂದ್ರಬಿಂದು ಸೋಮೇಶ್ವರ ದೇವಸ್ಥಾನ. ದಕ್ಷಿಣ ಭಾರತದಲ್ಲಿ ಈ ರೀತಿಯ ಮತ್ತೊಂದು ದೇವಾಲಯವಿಲ್ಲ. ಇಲ್ಲಿನ ವಿಶೇಷವೆಂದರೆ ಸೋಮನಾಥನು ಪಾರ್ವತಿ ಸಮೇತನಾಗಿ ತನ್ನ ವಾಹನ ನಂದಿಯನ್ನೇರಿ ಹೊರಟಿರುವುದು. ಪಾರ್ವತಿ ಶಿವನ ಬೆನ್ನ ಹಿಂದೆ ಕುಳಿತುಕೊಂಡು ಸವಾರಿ ಹೊರಟಿರುವ ಅಪರೂಪದ ಮೂರ್ತಿ ಈ ದೇವಾಲಯದಲ್ಲಿದೆ. ಈ ದೇವಾಲಯ ಮೂರು ಪ್ರಮುಖ ದ್ವಾರ ಹೊಂದಿದೆ. ಇದೇ ಆವರಣದಲ್ಲಿರುವ ತೆರೆದ ಬಾವಿಯೂ ತನ್ನ ವಿನ್ಯಾಸದಿಂದಲೇ ಅಚ್ಚರಿ ಮೂಡಿಸುತ್ತದೆ. ಲಕ್ಷ್ಮೇಶ್ವರ ದೇವಸ್ಥಾನ, ವಾಚೇಶ್ವರ ದೇವಸ್ಥಾನ, ಲಕ್ಷ್ಮೀನಾರಾಯಣ ದೇವಾಲಯ ಹೀಗೆ ಅನೇಕ ಪ್ರಮುಖ ದೇವಾಲಯಗಳಿವೆ. ಹತ್ತಾರು ಜೈನ ಬಸದಿಗಳಲ್ಲಿ ಶಂಖ ಬಸದಿ ಪ್ರಮುಖವಾದದ್ದು. 22ನೇ ಜೈನ ತೀರ್ಥಂಕರರಾದ ನೇಮಿನಾಥರು ಇಲ್ಲಿ ತಂಗಿದ್ದರಂತೆ. ಇನ್ನೊಂದು ಮಹತ್ವದ ಸ್ಥಳ ದೂದಪೀರಾ ದರ್ಗಾ. ಇದು 19ನೇ ಶತಮಾನದಲ್ಲಿ ಉತ್ತರ ಭಾರತದಿಂದ ಲಕ್ಷ್ಮೇಶ್ವರಕ್ಕೆ ಬಂದು ನೆಲೆಸಿರುವ ಸೂಫಿ ಸಂತ ಹಜರತ್ ಸೈಯದ್ ಸುಲೇಮಾನ್ ಬಾದಶಾಹ ಖಾದ್ರಿ ಹಂಕಾರಿ ಬಗದಾದಿ ಉರ್ಫ್ ದೂದಪೀರಾ ಅಜ್ಜನವರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನುವ ಪ್ರತೀತಿ ಇದೆ. ಪಟ್ಟಣದ ಪ್ರಮುಖ ದರ್ಗಾ ಜುಮ್ಮಾ ಮಸೀದಿ. ಇಲ್ಲಿ ಕಲ್ಲು ಸರಪಳಿ ನೋಡಬಹುದಾಗಿದೆ. ನಿಮಗೆ ಇತಿಹಾಸ, ಧಾರ್ಮಿಕ ಹಿನ್ನೆಲೆಗಳನ್ನು ಅರಿತುಕೊಳ್ಳುವ ಆಸಕ್ತಿ ಇದ್ದರೆ ಲಕ್ಷ್ಮೇಶ್ವರವನ್ನು ನೋಡಲು ಒಂದು ದಿನ ಸಾಲದು. ಮುಕ್ಕೋಟಿ ಲಿಂಗ ಲಕ್ಷ್ಮೇಶ್ವರದ ಸಮೀಪದಲ್ಲಿರುವ ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗಗಳನ್ನು ಸ್ಥಾಪಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಸಮೀಪದಲ್ಲಿರುವ ಶಿರಹಟ್ಟಿಯ ಫಕ್ಕೀರೇಶ್ವರ ಮಠವು ಭಾವೈಕ್ಯತೆಗೆ ಹೆಸರಾಗಿದೆ. ಶಿರಹಟ್ಟಿಯ ಪಕ್ಕದಲ್ಲಿರುವ ವರವಿಯ ಮೌನೇಶ್ವರ ದೇವಾಲಯ ಕೂಡಾ ವಿಶ್ವಕರ್ಮ ಸಮಾಜದವರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಮರಾಠರ ಪ್ರಸಿದ್ಧ ದೊರೆ ಶಿವಾಜಿಗೆ ಖಡ್ಗವನ್ನು ದಯಪಾಲಿಸಿದ ದೇವಿ ಹೊಳಲಮ್ಮ ದೇವಿಯ ದೇವಸ್ಥಾನವು ಸಮೀಪದ ಶ್ರೀಮಂತಗಡದಲ್ಲಿದೆ. ಹೀಗೆ ಇನ್ನೂ ಹತ್ತು ಹಲವು ವಿಶೇಷತೆಗಳನ್ನು ಲಕ್ಷ್ಮೇಶ್ವರ ಸುತ್ತಮುತ್ತಲ ಪ್ರದೇಶ ಹೊಂದಿದೆ. ಹೀಗೆ ಬನ್ನಿ ಲಕ್ಷ್ಮೇಶ್ವರ ಗದಗದಿಂದ 40 ಕಿ.ಮೀ ಅಂತರದಲ್ಲಿ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗೆ ಹೊಂದಿಕೊಂಡೇ ಇದೆ. ಹುಬ್ಬಳ್ಳಿಯಿಂದ 50 ಕಿ.ಮೀ. ಲಕ್ಷ್ಮೇಶ್ವರ ಸಮೀಪದಲ್ಲಿರುವ ಯಲುವಿಗಿ ಹಾಗೂ ಗುಡಗೇರಿ ರೈಲು ನಿಲ್ದಾಣಗಳ ಮೂಲಕ ಇಲ್ಲಿಗೆ ಬರಬಹುದು. ವಾಸ್ತವ್ಯಕ್ಕೆ ಹುಬ್ಬಳ್ಳಿ ಅಥವಾ ಗದಗ ಸೂಕ್ತ. ಲಕ್ಷ್ಮೇಶ್ವರ ಊಟ, ತಿಂಡಿಗೆ ತೊಂದರೆ ಇಲ್ಲ. -ಶಿವಕುಮಾರ ಕುಷ್ಟಗಿ