ಮಿರ್ಜಾನ್ ಉತ್ತರ ಕನ್ನಡ ಜಿಲ್ಲೆಯ ಕುಮಟ ನಗರದಿಂದ 10 ಕಿ.ಮೀ. ಅಂತರದಲ್ಲಿ ಅಘನಾಶಿ ನದಿ ತೀರದಲ್ಲಿ ಐತಿಹಾಸಿಕವಾಗಿ ಖ್ಯಾತಿಯಾಗಿರುವ ಮಿರ್ಜಾನ್ ಕೋಟೆಯಿದೆ. ಮಿರ್ಜಾನ್‌ನಿಂದ 1.2 ಮೈಲು ದೂರದಲ್ಲಿ ಅಘನಾಶಿ ನದಿಯು ಅರಬ್ಬೀ ಸಮುದ್ರ ಸೇರುವ ಪ್ರದೇಶದಲ್ಲಿ ಮಿರ್ಜಾನ್ ಕೋಟೆಯ ಭವ್ಯರೂಪ ನೋಡಬಹುದು. ಸುಮಾರು 10-12 ಎಕರೆ ವಿಸ್ತೀರ್ಣ ಪ್ರದೇಶದಲ್ಲಿರುವ ಈ ಕೋಟೆ ಸುತ್ತಲೂ ಆಳವಾದ ಕಂದಕಗಳು, ಎತ್ತರವಾದ ಗೋಡೆಗಳು, ಬುರು ಜುಗಳು, ಎರಡು ಆಳದ ಬಾವಿಗಳು, ವರ್ತುಲಾಕಾರದ ಆಗಸೆ ಬಾಗಿಲು, ರಾಜ ದರ್ಬಾರು ಮತ್ತು ಅರಮನೆಯ ಅಧಿಕಾರಿಗಳ ನಿವಾಸಗಳ ಅವಶೇಷಗಳನ್ನು ಕಾಣಬಹುದಾಗಿದೆ. ಜೊತೆಗೆ ನಮಾಜು ಮಾಡುವ ಸ್ಥಳ ಹಾಗೂ ಹಿಂದೂ ಮೂರ್ತಿಗಳಿರುವುದು ವಿಶೇಷ. ಇತಿಹಾಸ ಹಿಂದೆ ಈ ಪ್ರದೇಶ ಅಕ್ಕಿ ಮತ್ತು ಕಾಳು ಮೆಣಸಿನ ಕೇಂದ್ರವಾಗಿತ್ತು. ಇಲ್ಲಿ ಅರಬರು ವ್ಯಾಪಾರ ನಡೆಸುತ್ತಿದ್ದರು. ಕಾಲಕ್ರಮೇಣ ಪೋರ್ಚುಗೀಸರ ವ್ಯಾಪಾರ ಕೇಂದ್ರವಾಯಿತು. ನಂತರ ಈ ಕೋಟೆ ವಿಜಯನಗರದ ಆಳ್ವಿಕೆಗೆ ಒಳಪಟ್ಟಿತು. ಕಾಳು ಮೆಣಿಸಿನ ರಾಣಿಯೆಂದು ಕರೆಸಿಕೊಂಡ ಚೆನ್ನಬೈರಾದೇವಿ (ಕ್ರಿ.ಶ.1548-1599) ಈ ಕೋಟೆಯಲ್ಲಿ ಅಧಿಕಾರ ನಡೆಸುತ್ತಿದ್ದರು. ನಂತರ 1608ರಲ್ಲಿ ಬಿಜಾಪುರದ ಆದಿಲ್‌ಶಾಹಿ ಪ್ರತಿನಿಧಿಯಾದ ಸರಪನ್ ಮಲ್ಲಾರ್ ಈ ಕೋಟೆಯನ್ನು ಹೊಸ ಮಾದರಿಯಾಗಿ ವಿನ್ಯಾಸಗೊಳಿಸಿದರು. ಆತನು ತಾನು ಕಟ್ಟಿಸಿದ ಈ ಕೋಟೆಯನ್ನು ಅಭಿಮಾನ ಪ್ರೀತಿಗಳಿಂದ ಮೇರಿಜಾನ್ (ನನ್ನ ಪ್ರಾಣ) ಎಂದು ಕರೆದಿದ್ದರಿಂದ ಮುಂದೆ ಇದು ಮಿರ್ಜಾನ್ ಎಂದಾಯಿತಂತೆ! 15ನೇ ಶತಮಾನದ ಕೊನೆಯಲ್ಲಿ ಮಿರ್ಜಾನ್ ಮಹತ್ವದ ಪಟ್ಟಣವಾಗಿ ಹೆಸರು ಪಡೆಯಿತು. ರಾ.ಹೆ. 66 ಕುಮಟ- ಕಾರವಾರ ರಸ್ತೆಯಲ್ಲಿ ಸಿಗುವ ಮಿರ್ಜಾನ್ ಕೋಟೆಗೆ ವಿಶಾಲವಾದ ದಾರಿ ಇದ್ದು, ಸಂಜೆಯ ವೇಳೆಗೆ ತಂಪಾಗಿ ಬೀಸುವ ಗಾಳಿಯು ಸುಮಧುರ ಅನುಭವವನ್ನು ಕೊಡುತ್ತದೆ. ಇದು ಅರಬ್ಬೀ ಸಮುದ್ರದ ದಡದಲ್ಲಿದ್ದು, ಮಾರ್ಚ್, ಮೇ ತಿಂಗಳಿನಲ್ಲಿ ವಿದೇಶಿ ಪ್ರವಾಸಿಗರು ಸೇರಿದಂತೆ, ರಾಜ್ಯ, ರಾಷ್ಟ್ರದ ಪ್ರವಾಸಿಗರ ದಂಡೇ ಇಲ್ಲಿ ಸೇರಿರುತ್ತದೆ. ಕೇಂದ್ರ ಕುಮಟದಿಂದ ಇಲ್ಲಿಗೆ ಖಾಸಗಿ ಟೆಂಪೋ ಸೌಲಭ್ಯ ಮತ್ತು ರಾಜ್ಯ ರಸ್ತೆ ಸಾರಿಗೆ ಸೌಲಭ್ಯ ಇದೆ. ಕೋಟೆಯ ಒಳಗೆ ಅರಸೀ ಚೆನ್ನಬೈರದೇವಿ ಸಿಂಹಾಸನರೂಢಳಾಗಿದ್ದ ಸಿಂಹಾಸನದ ಕುರುಹುಗಳಿವೆ. ಆಸ್ಥಾನ ನಡೆಸುತ್ತಿದ್ದ ವಿಶಾಲವಾದ ಆವರಣವಿದೆ. ಗತಕಾಲದ ವೈಭವ ಸಾರುವ ಅನೇಕ ಕುರುಹುಗಳು ಇಲ್ಲಿ ಕಾಣ ಸಿಗುತ್ತವೆ. ಶಿಥಿಲಗೊಂಡ ಅರಮನೆಯ ಕುಟೀರಗಳು ಆಗಿನ ವೈಭವದ ಆಡಳಿತಕ್ಕೆ ಸಾಕ್ಷಿಯಾಗಿ ನಿಂತಿವೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಈ ಕೋಟೆಯ ಮೇಲೆ 18್ಢ12 ಅಡಿ ಉದ್ದದ ರಾಷ್ಟ್ರ ಧ್ವಜ ಹಾರಿಸಲಾಗುತ್ತದೆ. ದೆಹಲಿ ಕೆಂಪು ಕೋಟೆಯ ಮೇಲಿನ ರಾಷ್ಟ್ರ ಧ್ವಜದ ನಂತರ ಗಾತ್ರದಲ್ಲಿ 2ನೇ ಸ್ಥಾನ ಹೊಂದಿದೆ. ಆದರೆ ಈ ಧ್ವಜವು ಈಗ ಶಿಥಿಲಗೊಂಡಿದ್ದು 12್ಗ8 ಅಡಿ ಅಳತೆಯ ಧ್ವಜ ಹಾರಿಸಲಾಗುತ್ತದೆ. ರಾಷ್ಟ್ರೀಯ ಹಬ್ಬದ ದಿನ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳು ಪಥ ಸಂಚಲನ ಮಾಡುತ್ತಾರೆ. ಇಲ್ಲಿ ಹಲವಾರು ಸಿನಿಮಾಗಳು ಚಿತ್ರೀಕರಣಗೊಂಡಿವೆ. ಹೋಗುವುದು ಹೀಗೆ... ಕೋಟೆಯು ಬೆಂಗಳೂರಿನಿಂದ 450 ಕಿ.ಮೀ. ದೂರದಲ್ಲಿದೆ. ಕುಮಟಾದವರೆಗೆ ರಾಜ್ಯ ರಸ್ತೆ ಸಾರಿಗೆ ಮತ್ತು ರೈಲು ವ್ಯವಸ್ಥೆ ಇದೆ. ಅಲ್ಲಿಂದ ಮಿರ್ಜಾನ್ ಕೋಟೆಗೆ 15 ನಿಮಿಷದ ದಾರಿ. ಅಲ್ಲಿಗೆ ಖಾಸಗಿ ಬಸ್ಸು, ಸಿಟಿ ಬಸ್ಸು ಸೇವೆ ಇದೆ. ಕುಮಟಾದಲ್ಲಿ ಊಟದ ವ್ಯವಸ್ಥೆ ಇದೆ. ಪ್ರವಾಸಕ್ಕೆ ಸೂಕ್ತ ಸಮಯ ಜನವರಿಂದ ಮೇ ತಿಂಗಳು. ಮಳೆಗಾಲದಲ್ಲಿ ಪ್ರವಾಸ ಸೂಕ್ತವಲ್ಲ. ಹತ್ತಿರದ ಪ್ರೇಕ್ಷಣಿಯ ಸ್ಥಳಗಳು, ಗೋಕರ್ಣ (40 ಕಿ.ಮೀ.), ಕಾರವಾರ (60 ಕಿ.ಮೀ), ಶಿರಸಿ (60 ಕಿ.ಮೀ.), ಯಾಣ (20 ಕಿ.ಮೀ.) ಇದೆ. ಹಿಂದೆ ಈ ಪ್ರದೇಶ ಅಕ್ಕಿ ಮತ್ತು ಕಾಳು ಮೆಣಸಿನ ಕೇಂದ್ರವಾಗಿತ್ತು. ಇಲ್ಲಿ ಅರಬರು ವ್ಯಾಪಾರ ನಡೆಸುತ್ತಿದ್ದರು. ಕಾಲಕ್ರಮೇಣ ಪೋರ್ಚುಗೀಸರ ವ್ಯಾಪಾರ ಕೇಂದ್ರವಾಯಿತು. = ಚಿತ್ರ, ಲೇಖನ: ಬಳಕೂರು ವಿ. ಎಸ್. ನಾಯಕ್