ಹಲಸಿ ಬೆಳಸಿ ಉತ್ತರ ಕರ್ನಾಟಕದಲ್ಲಿ ಹಂಪಿ ಬಿಟ್ಟರೆ ಶಿಲ್ಪಕಲಾ ವೈಭವ ಕಾಣಸಿಗುವುದು ಬಾದಾಮಿ, ಐಹೊಳೆ... ಉತ್ತರ ಕರ್ನಾಟಕದಲ್ಲಿ ಹಂಪಿ ಬಿಟ್ಟರೆ ಶಿಲ್ಪಕಲಾ ವೈಭವ ಕಾಣಸಿಗುವುದು ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ಎನ್ನುವುದು ಜನರ ಮನಸ್ಸಿನಲ್ಲಿ ನೆಲೆ ನಿಂತಿರುವ ಭಾವನೆ. ಖಾನಾಪುರ ತಾಲ್ಲೂಕಿನ ಹಲಸಿ ಇಂದಿಗೂ ಅಪರಿಚಿತ ಗ್ರಾಮವೇ. ಕದಂಬರ ಎರಡನೇ ರಾಜಧಾನಿಯಾಗಿದ್ದ, ಅಪರೂಪದ ಶಿಲ್ಪಕಲೆಯ ಬೀಡಾಗಿರುವ ಈ ಊರಿಗೆ ಪ್ರವಾಸೋದ್ಯಮ ದೃಷ್ಟಿಯಿಂದ ಸಲ್ಲಬೇಕಾದ ನ್ಯಾಯ ಸಿಕ್ಕಿಲ್ಲ ಎನ್ನುವುದು ಅಕ್ಷರಶಃ ಸತ್ಯ. ಹಲಸಿ ಗ್ರಾಮದಲ್ಲಿ ಕದಂಬರ ಕಾಲದ ಏಳೆಂಟು ಪ್ರಾಚೀನ ದೇವಾಲಯಗಳಿವೆ. ಶಿಲ್ಪಕಲೆ ದೃಷ್ಟಿಯಿಂದ ಒಂದನ್ನೊಂದು ಮೀರಿಸುವಂತಿವೆ. ಅವುಗಳಲ್ಲಿ ಮುಖ್ಯವಾದದ್ದು ಲಕ್ಷ್ಮೀನರಸಿಂಹ ದೇವಾಲಯ. ಈ ದೇವಾಲಯವನ್ನು 10ನೇ ಶತಮಾನದಲ್ಲಿ ಕದಂಬ ಅರಸರಾದ ಶಿವಚಿತ್ತ ಹಾಗೂ ವಿಷ್ಣಚಿತ್ತ ಸಹೋದರರು ಕಟ್ಟಿಸಿದ್ದಾರೆಂಬ ಪ್ರತೀತಿ. ಇಡೀ ದೇವಾಲಯವನ್ನು ಶಿಲೆಯಲ್ಲಿ ನಿರ್ಮಿಸಲಾಗಿದೆ. ಪೂರ್ವ ಪಶ್ಚಿಮಾಭಿಮುಖವಾಗಿ ಎರಡು ಗರ್ಭಗುಡಿಗಳಿರುವುದು ಹಾಗೂ ದೇವಾಲಯಕ್ಕೆ ಪೂರ್ವ-ಪಶ್ಚಿಮಕ್ಕೆ ಎರಡು ಬಾಗಿಲುಗಳಿರುವುದು ವಿಶೇಷ. ಪೂರ್ವಾಭಿಮುಖವಾಗಿರುವ ಗರ್ಭಗುಡಿಯಲ್ಲಿ 5 ಅಡಿ ಎತ್ತರದ ಕುಳಿತ ಭಂಗಿಯಲ್ಲಿನ ಏಕಶಿಲೆಯ ನಾರಾಯಣ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಸುತ್ತಲೂ ಪ್ರಭಾವವಳಿಯಲ್ಲಿ ಅತ್ಯಂತ ಸೂಕ್ಷ್ಮ ಕೆತ್ತನೆಯಿದೆ. ಈ ಮೂರ್ತಿಯ ಎಡಬದಿಯಲ್ಲಿ 3 ಅಡಿ ಎತ್ತರದ ಸ್ವಯಂಭೂ ಬಾಲನರಸಿಂಹ ಮೂರ್ತಿ ಇದೆ. ಬಲಬದಿಯಲ್ಲಿ ಅಮೃತ ಶಿಲೆಯಲ್ಲಿ ನಿರ್ಮಿಸಿದ ಎದುರು ಮುಖದ ಆಂಜನೇಯ ಮೂರ್ತಿ ಆಕರ್ಷಣೀಯವಾಗಿದೆ. ವಿಶೇಷವಾಗಿ ಎಲ್ಲೆಡೆ ಆಂಜನೇಯನ ಮೂರ್ತಿ ಎಡಗಡೆ ವಾಲಿರುತ್ತದೆ. ಆದರೆ, ಇಲ್ಲಿ ಮುಖ ನೇರವಾಗಿರುವುದು ವಿಶೇಷ. ಕಾಲಲ್ಲಿ ಶನಿದೇವರನ್ನು ಮೆಟ್ಟಿ ನಿಂತಿದ್ದು, ಹಣೆ ಮೇಲೆ ಸುದರ್ಶನ ಚಕ್ರ ಇದೆ. ಐದು ಅಡಿಯ ಭೂವರಾಹ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿರುವ 5 ಅಡಿ ಎತ್ತರದ ಭೂವರಾಹ ಮೂರ್ತಿ ಮನಮೋಹಕ. ಭೂದೇವಿಯನ್ನು ರಕ್ಷಿಸಲು ವರಾಹ ಅವತಾರದ ವಿಷ್ಣು, ಭೂದೇವಿಯನ್ನು ಹೆಗಲ ಮೇಲೆ ಹೊತ್ತು ಒಂದು ಕಾಲು ಕೂರ್ಮದ ಮೇಲೆ, ಮತ್ತೊಂದು ಕಾಲನ್ನು ಆದಿಶೇಷನ ಮೇಲಿಟ್ಟು ಅವತರಿಸಿದ್ದಾನೆ. ಏಕಶಿಲೆಯಲ್ಲಿ ನಿರ್ಮಾಣವಾಗಿರುವ ಈ ಮೂರ್ತಿಯೂ ಅತ್ಯಂತ ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ. ಕಾಲಿನ ಉಗುರು ಸಹ ಸ್ಪಷ್ಟವಾಗಿ ಗೋಚರಿಸುವಷ್ಟು ಅತಿಸೂಕ್ಷ್ಮ ಕೆತ್ತನೆ ಗಮನ ಸೆಳೆಯುತ್ತದೆ. ಈ ಮೂರ್ತಿಯ ಎಡದಲ್ಲಿನ ಸೂರ್ಯನಾರಾಯಣ ಮೂರ್ತಿ, ಬಲಬದಿಯಲ್ಲಿನ ಮಹಾಲಕ್ಷ್ಮೀ ಮೂರ್ತಿಗಳು ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಾಣವಾಗಿವೆ. ದೇವಾಲಯ ಗರ್ಭಗುಡಿಯ ಎರಡೂ ದ್ವಾರಬಾಗಿಲು ಹಾಗೂ ಒಳಾಂಗಣದಲ್ಲಿ ಏಕಶಿಲೆಯ ಕಂಬಗಳಿದ್ದು, ಈ ಕಂಬಗಳಲ್ಲಿ ಆಕರ್ಷಕ ಕೆತ್ತನೆಯಿದೆ. ಗತಕಾಲದ ಬಾವಿಯೂ ದೇಗುಲದ ಆವರಣದಲ್ಲಿದೆ. ಪ್ರತಿವರ್ಷ ಶೀಗೆ ಹುಣ್ಣಿಮೆಯಂದು ರಥೋತ್ಸವ ಜರುಗುತ್ತದೆ. ಗ್ರಾಮದ ಬೆಟ್ಟದ ತುದಿಯಲ್ಲಿ ರಾಮತೀರ್ಥ ದೇವಾಲಯವಿದೆ. ಹೊಂಡದಲ್ಲಿರುವ ಈ ದೇವಾಲಯದ ಅರ್ಧಭಾಗ ಸದಾ ನೀರಿನಲ್ಲಿಯೇ ನಿಂತಿರುತ್ತದೆ. ಈ ಬೆಟ್ಟದ ತುದಿಯಲ್ಲಿ ನಿಂತು ನೋಡಿದರೆ ಕಾಣುವ ಸಹ್ಯಾದ್ರಿ ಪರ್ವತದ ನೋಟ ಕಣ್ಣಿಗೆ ಹಬ್ಬ. ನಾಜೂಕಿನ ರಾಧಾ-ಕೃಷ್ಣ ಒಂದು ತಿಂಗಳ ಹಿಂದೆ ಗ್ರಾಮದಲ್ಲಿರುವ ಕಲ್ಮೇಶ್ವರ ದೇವಸ್ಥಾನಕ್ಕೆ ಆವರಣಗೋಡೆ ನಿರ್ಮಿಸಲು ಜೆಸಿಬಿ ಯಂತ್ರದಿಂದ ನೆಲ ಅಗಿಯುವಾಗ ಅಪರೂಪದ ಶಿಲ್ಪವೊಂದು ಪತ್ತೆಯಾಗಿದ್ದು, ಅದನ್ನು ನರಸಿಂಹ ದೇವಸ್ಥಾನದ ಹಿಂಬದಿಯ ಕೊಠಡಿಯಲ್ಲಿಡಲಾಗಿದೆ. ನಾಲ್ಕು ಅಡಿ ಎತ್ತರದ ರಾಧಾ-ಕೃಷ್ಣರ ಈ ಮೂರ್ತಿ ನೋಡಗರನ್ನು ಆಕರ್ಷಿಸುತ್ತದೆ. ಶಿಲ್ಪದ ಪ್ರಭಾವಳಿಯಲ್ಲಿ ಅತ್ಯಂತ ನಾಜೂಕಿನ ಕೆತ್ತನೆಯಿದೆ. = ಸದಾನಂದ ಮಜತಿ