ತುಂಗೆಯೊಡಲ ದಂಗೆ ಪಶ್ಚಿಮ ಘಟ್ಟಗಳ ವರಾಹ ಪರ್ವತ ಪ್ರದೇಶದ ಸುಂದರ ಪ್ರಕೃತಿ ಮಡಿಲಿನಲ್ಲಿ ಜನ್ಮ ತಾಳಿದ್ದೇನೆ. ಹಚ್ಚ ಹಸಿರಿನ ಪರ್ವತಗಳ ನಡುವೆ ಹರಿಯುವ ನಾನು, ಪಂಚಭೂತಗಳಲ್ಲಿ ಒಬ್ಬಳಾಗಿದ್ದು, ಜಲಚರ ಸೇರಿದಂತೆ ಸಕಲ ಜೀವ ಸಂಕುಲಕ್ಕೆ ಜೀವನಾಡಿ. ಬಯಲು ಸೀಮೆಯ ಜೀವನದಿ ನಾನೇ ತುಂಗಭದ್ರೆ. ನನ್ನ ಹರವಿನುದ್ದಕ್ಕೂ ಸಾವಿರಾರು ಪುಣ್ಯಸ್ಥಳಗಳು ಜನ್ಮ ತಾಳಿವೆ. ಶೃಂಗೇರಿ ಶಾರದೆ ನನ್ನ ಸಾಕಿ ಬೆಳೆಸಿದಳು. ತುಂಗಭದ್ರೆಯಾಗಿ 'ಕೂಡಲಿ'ಯಲ್ಲಿ ಸಂಗಮಿಸಿ ಮುಂದೆ ಧರ್ಮ, ವರಾಹ, ತುಂಗ, ಭದ್ರೆ, ಸರಸ್ವತಿಯರೆಂಬ ಪಂಚನದಿಗಳಾಗಿ ಹರಿಯುತ್ತಿದ್ದೇವೆ. ಮುಂದೆ ಗುರುರಾಯರ ಪವಿತ್ರ ಪಾದಗಳನ್ನು ತೊಳೆದು ಆಂಧ್ರದ ಕರ್ನೂಲು ಜಿಲ್ಲೆಯ ಸಂಗಮೇಶ್ವರಂ ಬಳಿ ಕೃಷ್ಣ ನದಿಗೆ ಸೇರಿಕೊಂಡು ಬಂಗಾಲಕೊಲ್ಲಿಯಲ್ಲಿ ಲೀನವಾಗುತ್ತೇನೆ. ಇಲ್ಲಿಗೆ ನನ್ನ ಸಣ್ಣ ಪರಿಚಯ ಮುಗಿಯಿತು. ನನಗೀಗ ಒಂದೇ ದಿಗಿಲು. ನನ್ನ ಒಡಲು ಅಪಾಯದಲ್ಲಿ ಸಿಲುಕಿದೆ. ಈ ಭ್ರಷ್ಟ ವ್ಯವಸ್ಥೆಯ ರಾಯಭಾರಿಗಳಾದ ಮರಳು ಲೂಟಿಕೋರರು ನನ್ನೊಡಲನ್ನು ಬರಿದು ಮಾಡುತ್ತಿದ್ದಾರೆ. ಪವಿತ್ರಳಾಗಿದ್ದ ನನ್ನನ್ನು ಅಪವಿತ್ರಳನ್ನಾಗಿಸಿದ್ದಾರೆ. ಸಕ್ಕರೆಯಷ್ಟು ಸಿಹಿಯಾಗಿದ್ದ ನನ್ನಲ್ಲಿ ವಿಷ ಬೆರೆಸುತ್ತಿದ್ದಾರೆ. ಈ ಹಿಂದೆ ನಿತ್ಯ ನನ್ನ ಮೇಲೆ ಯಾಂತ್ರೀಕೃತ ದೋಣಿಗಳ ಅಬ್ಬರ, ಭಾರಿ ಯಂತ್ರಗಳ ಸದ್ದು, ದೊಡ್ಡ ದೊಡ್ಡ ವಾಹನಗಳ ಓಡಾಟ, ಜೆಸಿಬಿಗಳ ಒಡಲು ಅಗೆತಕ್ಕೆ ನಲುಗಿ ಹೋಗಿರುವ ನನ್ನನ್ನು ರಕ್ಷಿಸಲು ಯಾರೂ ಸಿದ್ಧರಿಲ್ಲ. ಹಾಗಾಗಿ ನನ್ನ ಕಣ್ಣೀರ ಕಥೆ ಹೇಳುತ್ತಿದ್ದೇನೆ. ದಯಮಾಡಿ ಆಲಿಸಿ, ನನ್ನನ್ನು ರಕ್ಷಿಸಬಲ್ಲಿರಾ? ಹೌದು, ನಾನು 640 ಕಿ.ಮೀ. ಉದ್ದ ಹರಿಯುತ್ತೇನೆ. ಕೋಟ್ಯಂತರ ಅನ್ನದಾತರ ಬರಡು ಭೂಮಿಗೆ ನೀರು ಹರಿದು ರೈತರ ಬಾಳಿಗೆ ಬೆಳಕಾಗಿ, ನೂರಾರು ಕಾರ್ಖಾನೆಗಳ ಉಗಮಕ್ಕೆ ನಾಂದಿಯಾಗಿ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿಸಿದ ಪುಣ್ಯವಂತೆಯೇ ಈ ಸಿಹಿ ನೀರಿನ ತುಂಗಭದ್ರೆ. 'ಗಂಗಾ ಸ್ನಾನ- ತುಂಗಾ ಪಾನ' ಎಂಬ ಮಾತಿದೆ. ಅಂತೆಯೇ ತುಂಗೆಯ ನೀರು ಹರಿಯುತ್ತಿದ್ದರೆ ನೀರಿಗೆ ಇರುವೆಗಳು ಮುತ್ತುತ್ತವೆಂತೆ ಅಷ್ಟು ಸಿಹಿ ನೀರನ್ನು ಯಾಂತ್ರೀಕೃತ ದೋಣಿಗಳಿಂದ ಅನುಪಯುಕ್ತ ಇಂಧನ ಸೋರಿಕೆಯಾಗಿ ಜೀವಜಲ ಜೀವ ಸಂಕುಲಕ್ಕೆ ಕಂಟಕವಾಗುವ ಪರಿಸ್ಥಿತಿ ಬಂದಿದೆ. ನನ್ನ ಒಡಲೊಳಗಿರುವ ಸಂಪತ್ತನ್ನು (ಮರಳು) ಹಗಲು ದರೋಡೆ ಮಾಡುತ್ತಿದ್ದಾರೆ. ಇಂಥ ಹಗಲು ದರೋಡೆಕೋರರನ್ನು ನನ್ನ ರಕ್ಷಕರು (ವಿವಿಧ ಸರ್ಕಾರಿ ಇಲಾಖೆ ನೌಕರರು) ಹಿಡಿದು ಎಷ್ಟೇ ಶಿಕ್ಷಿಸಿದರೂ ನನ್ನ ಮೇಲಾಗುತ್ತಿರುವ ಅನ್ಯಾಯ ಮಾತ್ರ ಇನ್ನೂ ತಪ್ಪಿಲ್ಲ. ನನ್ನ ಸಂಪತ್ತನ್ನು ಲೂಟಿಗೈದು ಅಪಾರ ಹಣ ಸಂಪಾದಿಸಿರುವವರು ಮತ್ತಷ್ಟು ಅಕ್ರಮಕ್ಕಿಳಿದಿದ್ದರು. ಆದರೆ ನನ್ನ ಬಗ್ಗೆ ಕನಿಕರ ಇರುವ ಅದೆಷ್ಟೋ ಜನ ಅವರಿಗೆ ತಕ್ಕ ಪಾಠ ಕಲಿಸಿ ಮೂಲೆಗುಂಪು ಮಾಡಿದ್ದಾರೆ. ಆದರೂ ರಾಜಕೀಯದಲ್ಲಾಗಿರುವ ನಷ್ಟ ತುಂಬಿಕೊಳ್ಳಲು ಮತ್ತೆ ನನ್ನ ಸಂಪತ್ತು ಲೂಟಿ ಮಾಡಲು ಸಿದ್ಧರಾಗಿದ್ದಾರೆ ಆ ಪಾಪಿಗಳು. ನನ್ನ ಮೇಲೆ ಹೀಗೆ ನಿರಂತರ ಅನ್ಯಾಯವಾಗುತ್ತಿದ್ದರೆ ಭವಿಷ್ಯದಲ್ಲಿ ಹನಿ ಹನಿ ಜೀವಜಲಕ್ಕೂ ಪರದಾಡುವ ಪರಿಸ್ಥಿತಿ ಬರುತ್ತದೆ. ಇದರಿಂದ ಉಷ್ಣತೆ ಹೆಚ್ಚಾಗಿ ಬೆಂಕಿ ಉಗುಳುವ ಮುನ್ನವೇ ಎಚ್ಚೆತ್ತುಕೊಂಡು ನನ್ನನ್ನು ರಕ್ಷಣೆ ಮಾಡಿ. ನನ್ನ ರಕ್ಷಣೆಗೆ ದಕ್ಷ ಅಧಿಕಾರಿಗಳನ್ನು ಬಯಸುತ್ತಿದ್ದೇನೆ. ಆಗ ನನ್ನ ಮೂಲ ಸ್ಥಿತಿಗೆ ಬರಲು ಸಾಧ್ಯ, ಮೈ ತುಂಬಾ ಮರಳು ಹರಡಿಕೊಂಡು ಸುಂದರ ಮದುವಣಗಿತ್ತಿಯಂತೆ ಕಾಣುತ್ತೇನೆ. ಆಗ ಪರಿಸರ, ಶುದ್ಧ ಗುಣಮಟ್ಟದ ನೀರು, ಅಂತರ್ಜಲ ಹೆಚ್ಚಳ ಸೇರಿದಂತೆ ಎಲ್ಲದಕ್ಕೂ ಅನುಕೂಲ. ಇಷ್ಟು ಹೇಳಿ ನನ್ನ ಕಥೆ ಮುಗಿಸುತ್ತೇನೆ. ಕೃಪೆ ತೋರಿ ನನ್ನನ್ನು ರಕ್ಷಿಸುವಿರಾ? ಇಂತಿ ನಿಮ್ಮ ಮನೆ ಮಗಳು ತುಂಗಭದ್ರೆ - ಚಂದ್ರು ಕೊಂಚಿಗೇರಿ