ಇನ್ನೋವಾದಲ್ಲಿ ಇನ್ನೇನೋ ಬದಲಾವಣೆ! ಈಗ ಫೇಸ್‌ಲಿಫ್ಟ್ ಜಮಾನಾ. ಬಹುತೇಕ ಕಾರುಗಳು ಹೊಸರೂಪ ಪಡೆದುಕೊಂಡು ಮಾರುಕಟ್ಟೆಗೆ ಬರುತ್ತಿವೆ. ಕೆಲವೇ ತಿಂಗಳ ಹಿಂದೆ ಕೊಂಚ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬಂದಿದ್ದ ಟೊಯೊಟಾ ಇನ್ನೋವಾ ಈಗ ಮತ್ತೆ ಅಂಥ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಬರಲಿದೆ. ಈ ಬಾರಿಯ ಹೊಸ ಬೆಳವಣಿಗೆಯೆಂದರೆ ಝೆಡ್ ಎಂಬ ಹೊಸ ವೇರಿಯೆಂಟ್ ಬರಲಿದೆ. ಹಿಂದಿನ ಬಾರಿಯಂತೆ ಈ ಬಾರಿಯೂ ಎದುರುಗಡೆ ಗ್ರಿಲ್ ಮತ್ತು ಬಂಪರ್ ಬದಲಾವಣೆಗೆ ಗುರಿಯಾಗಿದೆ. ಎದುರಿನ ಸ್ಮೈಲಿ ಗ್ರಿಲ್ ಹೋಗಿ ಕ್ರೋಮ್ ಕೋಟೆಡ್ ಗ್ರಿಲ್ ಬಂದಿದೆ. ಗ್ರಿಲ್ ಗಾತ್ರ ಕೂಡ ದೊಡ್ಡದಾಗಿದೆ. ಬಂಪರ್ ಹೆಚ್ಚು ಬದಲಾವಣೆಗೆ ಒಳಗಾಗಿದೆ. ಇದರ ಪರಿಣಾಮವಾಗಿಯೇ ಹೊಸ ಫಾಗ್ ಲ್ಯಾಂಪ್‌ಗಳು ಬಂದಿವೆ. ಈವರೆಗೆ ಜಿ, ಜಿಎಕ್ಸ್, ವಿಎಕ್ಸ್ ಮಾದರಿಯಲ್ಲಿ ಇನ್ನೋವಾ ಸಿಗುತ್ತಿದ್ದರೆ, ಈಗ ಝೆಡ್ ಮಾದರಿಯನ್ನು ಹೊಸದಾಗಿ ಪರಿಚಯಸಲಾಗುತ್ತಿದೆ. ಲೆದರ್ ಸೀಟುಗಳು, ವುಡನ್ ಟ್ರಿಮ್ ಇರುವ ಇಂಟೀರಿಯರ್ಸ್ ಇದರ ವಿಶೇಷ. ಹಿಂಭಾಗದ ನಂಬರ್ ಪ್ಲೇಟ್ ಮೇಲ್ಭಾಗದಲ್ಲಿ ದೊಡ್ಡ ಕ್ರೋಮ್‌ಪ್ಲೇಟ್ ಅಳವಡಿಸಿರುವುದು ಹಿಂಭಾಗದ ವಿನ್ಯಾಸಕ್ಕೆ ಹೊಸ ಮೆರುಗು ನೀಡಿದೆ.