ತುಂಬರದ ಅಬ್ಬರ ಬೇಸಿಗೆಯ ಬೇಗೆಗೆ ಜೀವ ಕಳೆದುಕೊಂಡಂತೆ ಕಾಣುತ್ತಿದ್ದ ಜಲಪಾತಗಳೆಲ್ಲ ಮಳೆಗಾಲದ ಅಬ್ಬರಕ್ಕೆ ಮೈದುಂಬಿಕೊಂಡು ಅಬ್ಬರಿಸುತ್ತಿವೆ. ಅಂಥ ಜಲಪಾತಗಳಲ್ಲೊಂದು ತುಂಬರಗೋಡ. ದೊಡ್ಡ ಗುಡ್ಡದಿಂದ ಮುತ್ತಿನ ಹನಿಗಳಂತೆ ಭುವಿಗಿಳಿದು ಬರುವ ತುಂಬರಗೋಡ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿದೆ. ಅಜಮಾಸು 30 ಅಡಿಗಳ ಎತ್ತರದಿಂದ ಬೀಳುವ ಈ ಜಲಪಾತ ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ನೋಡಲು ಕಷ್ಟಪಡಬೇಕಾಗಿಲ್ಲ. ಮಾನವ ನಿರ್ಮಿತ ಕಳೆದೊಂದು ದಶಕಕ್ಕೂ ಮುನ್ನ ತುಂಬರಗೋಡ ಪ್ರದೇಶದಲ್ಲಿ ಕಲ್ಲಿನ ಗಣಿಗಳಿದ್ದವು. ದೊಡ್ಡದೊಂದು ಗುಡ್ಡವೇ ಕಲ್ಲಿನಿಂದ ಆವೃತವಾಗಿತ್ತು. ಆದರೆ ಆ ಕಲ್ಲಿನ ಗುಡ್ಡವನ್ನು ಗಣಿಗಾರಿಕೆಗೆ ಕಡಿದ ನಂತರ ಕಡಿದಾದ ಪ್ರದೇಶ ನಿರ್ಮಾಣವಾಯಿತು. ಈ ಪ್ರದೇಶದಲ್ಲಿ ಹರಿಯುತ್ತಿದ್ದ ತುಂಬರಗೋಡ ಹಳ್ಳ ಜಲಪಾತವಾಗಿ ಧುಮ್ಮಿಕ್ಕಲಾರಂಭಿಸಿತು. ಗುಡ್ಡದಿಂದ ಕಲ್ಲುಗಣಿಯ ಆಳಕ್ಕೆ ಬೀಳುವ ಜಲಪಾತವನ್ನು ನೋಡುವುದೇ ಸೊಗಸು. ಜೂನ್‌ನಿಂದ ಡಿಸೆಂಬರ್ ಸಮಯದಲ್ಲಿ ಜಲಪಾತದ ಅಬ್ಬರ ಜೋರಾಗಿರುತ್ತದೆ. ಮುಖ್ಯ ರಸ್ತೆಯಿಂದ 500 ಮೀಟರ್ ದೂರದಲ್ಲಿಯೇ ಜಲಪಾತವಿದ್ದು, ಈ ಸ್ಥಳ ಒಂದಾನೊಂದು ಕಾಲದಲ್ಲಿ ಕಲ್ಲು ಗಣಿಯಾಗಿದ್ದರಿಂದ ನೀರು ಬೀಳುವ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶ ಬಹಳ ಆಳವಿದೆ. ಅಲ್ಲದೇ ಚೂಪಾದ ಕಲ್ಲುಗಳೂ ಇವೆ. ಹೀಗಾಗಿ ಈಜುವುದು ಅಪಾಯಕರ. ಆದರೆ ನಿಂತು ನೋಡಲು, ವಾರಾಂತ್ಯದಲ್ಲಿ ಪಿಕ್‌ನಿಕ್ ಮಾಡಲು ಹೇಳಿ ಮಾಡಿಸಿದಂಥ ತಾಣವಿದು. ಹೋಗುವ ಬಗೆ ಶಿರಸಿ-ಸಿದ್ದಾಪುರ ರಸ್ತೆಯಲ್ಲಿ ಶಿರಸಿಯಿಂದ 25 ಕಿ.ಮೀ ಹಾಗೂ ಸಿದ್ದಾಪುರದಿಂದ 14 ಕಿ.ಮೀ ದೂರದಲ್ಲಿ 16ನೇ ಮೈಲ್ ಎನ್ನುವ ಊರಿದೆ. ಈ ಊರಿನಿಂದ 2ಕಿ.ಮೀ ಅಂತರದಲ್ಲಿ ತುಂಬರಗೋಡ ಎನ್ನುವ ಊರಿಗೆ ತೆರಳುವ ಮಾಹಿತಿ ಫಲಕ ಕಾಣುತ್ತದೆ. ಇಲ್ಲಿಯೇ ರಸ್ತೆ ಪಕ್ಕದಲ್ಲಿ ಜಲಪಾತವಿದೆ. -ವಿನಯ ದಂಟಕಲ್