ಹೆವೆನ್ ಇನ್ ಸೆವೆನ್ 1.35 ಕೋಟಿ ಕೊಟ್ಟು ಕಾರು ಖರೀದಿಸುವವರು ಇಂಧನ ಕ್ಷಮತೆ (ಕಿ.ಮೀ. ಪ್ರತಿ ಲೀಟರ್) ಬಗ್ಗೆ ತಲೆಕೆಡಿಸಿಕೊಳ್ತಾರಾ? ಅವರು ತಲೆಕೆಡಿಸಿಕೊಳ್ತಾರೋ ಇಲ್ಲವೋ ಆದರೆ ಬಿಎಂಡಬ್ಲ್ಯು ಕಂಪನಿ ತಲೆಕೆಡಿಸಿಕೊಂಡಿದೆ. ಪರಿಸರ ಕಾಳಜಿ ಮತ್ತು ಇಂಧನ ಕ್ಷಮತೆ ಹೆಚ್ಚಿಸುವ ಉದ್ದೇಶವಿಟ್ಟುಕೊಂಡೋ ಹೈಬ್ರಿಡ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಆ ಕಾರಿನ ಹೆಸರು ಆ್ಯಕ್ಟಿವ್ ಹೈಬ್ರಿಡ್ 7. ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಜತೆಗೆ ಬ್ಯಾಟರಿ ಚಾಲಿತ ಅಥವಾ ಎಲೆಕ್ಟ್ರಿಕ್ ಎಂಜಿನ್ ಅನ್ನೂ ಹೊಂದಿದೆ. ಕೇವಲ ಇಷ್ಟೇ ಆಗಿದ್ದರೆ ಅದರಲ್ಲೇನೂ ಹೊಸತನ ಇರಲಿಲ್ಲ. ನೀವು ಬ್ರೇಕ್ ಹಾಕಿದಾಗ, ಆಕ್ಸಿಲರೇಟರ್ ಕೊಡದೇ ಇದ್ದಾಗ ಮತ್ತು ಇಳಿಜಾರು ಪ್ರದೇಶದಲ್ಲಿ ಹೋಗುವಾಗ ಇದರ ಬ್ಯಾಟರಿ ರೀಚಾರ್ಜ್ ಆಗುತ್ತದೆ! ಇದು ಈ ಕಾರಿನ ಮ್ಯಾಜಿಕ್. ಇದೊಂಥರ ಸ್ಮಾರ್ಟ್‌ಫೋನ್ ರೀತಿಯ ಸ್ಮಾರ್ಟ್ ಕಾರು! ಆಕ್ಸಿಲರೇಟರ್ ಮೇಲಿನ ಕಾಲು ತೆಗೆಯುತ್ತಿದ್ದಂತೆ ಪೆಟ್ರೋಲ್ ಅಥವಾ ಡೀಸೆಲ್ ಮೂಲಕ ಚಾಲನೆಯಲ್ಲಿರುವ ಎಂಜಿನ್ ಆಫ್ ಆಗುತ್ತದೆ. ಈ ವೇಳೆ ಸ್ವಲ್ಪವೂ ಇಂಧನ ಖರ್ಚಾಗದು. ತಕ್ಷಣ ಕಾರಿನಲ್ಲಿರುವ ಬ್ಯಾಟರಿ ರೀಚಾರ್ಜ್ ಆಗುತ್ತದೆ. ಮತ್ತೆ ಆಕ್ಸಿಲರೇಟ್ ಮಾಡಿದಾಗ ಬ್ಯಾಟರಿ ಮತ್ತು ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಒಟ್ಟುಗೂಡಿ ಕೆಲಸ ಮಾಡುತ್ತವೆ. ಇದರಿಂದಾಗಿ ಈ ಕಾರಿನ ಇಂಧನ ಕ್ಷಮತೆ ಹೆಚ್ಚುತ್ತದೆ. ಈ ಕಾರಿನಲ್ಲಿ ಮ್ಯಾಪ್ ಅಳವಡಿಸಲಾಗಿದೆ. ಹೋಗಬೇಕಾದ ಸ್ಥಳವನ್ನು ಮ್ಯಾಪ್‌ನಲ್ಲಿ ಗುರುತು ಮಾಡಿದರೆ, ಆ ದಾರಿಯನ್ನು ಗಮನಿಸಿ, ಅದಕ್ಕೆ ತಕ್ಕಂತೆ ಎಂಜಿನ್ ಮತ್ತು ಇಂಧನ ಬಳಸುವ ಸಾಮರ್ಥ್ಯ ಈ ಕಾರಿಗಿದೆ. ಇಷ್ಟೇ ಅಲ್ಲ. ಇಂಧನ ಕ್ಷಮತೆ ಹೆಚ್ಚಿಸಲು ಚಾಲಕನಿಗೇ ಸಲಹೆ ಕೊಡುವ ಸಾಮರ್ಥ್ಯವೂ ಈ ಕಾರಿಗಿದೆ. ಮ್ಯಾಪ್‌ನಲ್ಲಿರುವ ಮಾಹಿತಿ ಆಧರಿಸಿ ಮುಂದೆ ಬರುವ ರಸ್ತೆಯನ್ನು ಅವಲೋಕಿಸಿ ಆಕ್ಸಿಲರೇಟರ್ ಬಿಡುವಂತೆ ಅಥವಾ ಕಡಿಮೆ ಮಾಡುವಂತೆ ಸಲಹೆ ನೀಡುತ್ತದೆ. ಚಾಲಕರು ಅದನ್ನು ಸರಿಯಾಗಿ ಪಾಲಿಸಿದರೆ ಅತ್ಯುತ್ತಮ ಇಂಧನ ಕ್ಷಮತೆ ಸಾಧಿಸಲು ಸಾಧ್ಯ. ಇಕೊ, ಇಕೊ ಪ್ರೊ, ಸ್ಪೋರ್ಟ್ಸ್, ಸ್ಪೋರ್ಟ್ಸ್ ಪ್ಲಸ್ ಮುಂತಾದ ಆಯ್ಕೆಗಳಿದ್ದು, ನೀವು ಮಾಡಿದ ಆಯ್ಕೆಗೆ ಅನುಗುಣವಾಗಿ ಕಾರು ಕೆಲಸ ಮಾಡುತ್ತದೆ. ಇದೆಲ್ಲದರ ನಡುವೆಯೂ ಕಾರಿನ ವೇಗ ಅಥವಾ ಬಿಎಂಡಬ್ಲ್ಯು ಕಾರು ಓಡಿಸುವವರು ಬಯಸುವ ಪವರ್‌ಗೆ ಕೊರತೆಯಾಗದಂತೆ ಎಚ್ಚವಹಿಸಲಾಗಿದೆ ಎಂದು ಕಂಪನಿ ಹೇಳಿದೆ. ಇಕೊ ಪ್ರೊ ಮೋಡ್‌ನಲ್ಲಿ ಶೇ.20ರಷ್ಟು ಇಂಧನ ಉಳಿಸುವ ಸಾಮರ್ಥ್ಯ ಈ ಕಾರಿಗಿದೆ ಎನ್ನುತ್ತದೆ ಕಂಪನಿ. ಚಾಲನೆ ವೇಳೆ ಇನ್ನೊಂದು ವಾಹನವನ್ನು ಹಿಂದಿಕ್ಕುವಾಗ ಹೆಚ್ಚಿನ ವೇಗ ಬೇಕೆಂದು ನೀವು ಆಕ್ಸಿಲರೇಟರ್ ಒತ್ತಿದರೆ ಇದನ್ನು ಅರ್ಥಮಾಡಿಕೊಂಡು ಎಲೆಕ್ಟ್ರಿಕ್ ಎಂಜಿನ್‌ನಿಂದ ಈ ಹೆಚ್ಚಿನ ಶಕ್ತಿಯನ್ನು ತಕ್ಷಣ ನೀಡುವ ಚುರುಕು ಕಾರಿಗಿದೆ. ಇದರಿಂದ ನೀವು ಹೆಚ್ಚಿಸಿದ ವೇಗಕ್ಕೆ ಹೆಚ್ಚಿನ ಇಂಧನ ಖರ್ಚಾಗುವುದಿಲ್ಲ. ಇದರಲ್ಲಿರುವ ಅಧಿಕ ಸಾಮರ್ಥ್ಯದ ಲೀಥಿಯಂ ಬ್ಯಾಟರಿ ಕನಿಷ್ಠ 1 ಲಕ್ಷ ಕಿ.ಮೀ. ಅಥವಾ 5 ವರ್ಷ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿದೆ. 6 ಕ್ಯಾಮೆರಾಗಳನ್ನು ಈ ಕಾರಿಗೆ ಅಳವಡಿಸಲಾಗಿದ್ದು, ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ನೀವು ವಾಹನ ಚಲಾಯಿಸಬಹುದಾಗಿದೆ. ಕಾರು ಪಾರ್ಕ್ ಮಾಡುವಾಗ, ರಿವರ್ಸ್ ತೆಗೆದುಕೊಳ್ಳುವಾಗ, ಇಕ್ಕಟ್ಟಿನ ಜಾಗದಿಂದ ಕಾರನ್ನು ತೆಗೆಯುವಾಗ ಮುಂತಾದ ವೇಳೆ ಇದು ಸಹಾಯಕ. ಇದರೊಂದಿಗೆ ನೈಟ್ ವಿಷನ್ (ರಾತ್ರಿಯೂ ಕಾಣುವ) ಕ್ಯಾಮೆರಾ ಅಳವಡಿಸಲಾಗಿದೆ. ಬಂಪರ್‌ನ ಗ್ರಿಲ್‌ನಲ್ಲಿ ಅಳವಡಿಸಲಾಗಿರುವ ನೈಟ್ ವಿಷನ್ ಕ್ಯಾಮೆರಾ ರಾತ್ರಿ ಚಾಲನೆ ವೇಳೆಯಲ್ಲಿ ಮನುಷ್ಯರು ಮತ್ತು ಪ್ರಾಣಿಗಳನ್ನು ಕೊಂಚ ದೂರದಿಂದಲೇ ಗುರುತಿಸುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಸಾಮಾನ್ಯ ಕಣ್ಣಿಗೆ ಕಾಣದ ಅವುಗಳನ್ನು ಮೊದಲೇ ಗುರುತಿಸಲು ಸಹಕಾರಿಯಾಗಲಿದೆ. ಚಾಲಕನ ಎದುರಿಗಿರುವ ಸ್ಕ್ರೀನ್‌ನಲ್ಲಿ ಪ್ರಾಣಿ ಅಥವಾ ಮನುಷ್ಯ ಇರುವುದನ್ನು ಹೊಳೆಯುವಂತೆ ಮಾಡಿ ತೋರಿಸುತ್ತದೆ. ಇಷ್ಟೇ ಅಲ್ಲ, 100-150 ಮೀಟರ್ ದೂರದಲ್ಲಿರುವ ಮನುಷ್ಯ ಅಥವಾ ಪ್ರಾಣಿಯನ್ನು ಗುರುತಿಸಿದ ತಕ್ಷಣ ಎರಡು ಸ್ಪಾಟ್‌ಲೈಟ್‌ಗಳು ಅದರ ಮೇಲೆ ಬೀಳುವಂತೆ ಮಾಡುತ್ತದೆ. ಆದರೆ ಇದರಿಂದ ಚಾಲನೆಗೆ ಯಾವುದೇ ತೊಂದರೆ ಆಗಂದಂತೆ ಅಥವಾ ಕಣ್ಣುಕುಕ್ಕದಂತೆ ಕಾಳಜಿ ವಹಿಸಲಾಗಿದೆ. ಚಾಲಕನಿಗೆ ಮನುಷ್ಯ ಅಥವಾ ಪ್ರಾಣಿ ಇರುವ ಬಗ್ಗೆ ಮತ್ತು ಮನುಷ್ಯ ಅಥವಾ ಪ್ರಾಣಿಗೆ ವಾಹನ ಬರುತ್ತಿರುವ ಬಗ್ಗೆ ಎಚ್ಚರಿಸುವ ಉದ್ದೇಶದಿಂದ ಈ ಲೈಟ್ ಅಳವಡಿಸಲಾಗಿದೆ. ರಸ್ತೆಯಲ್ಲಿ ಮನುಷ್ಯ ಅಥವಾ ಪ್ರಾಣಿ ಇರುವ ಬಗ್ಗೆ ಸ್ಕ್ರೀನ್‌ನಲ್ಲಿ ತೋರಿಸುವುದರ ಜತೆಗೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಬ್ರೇಕ್‌ಗೆ ಏನೇನು ಬೇಕೊ ಆ ವ್ಯವಸ್ಥೆಯನ್ನೂ ಕಾರು ಸಿದ್ಧಪಡಿಸಿಕೊಳ್ಳುತ್ತದೆ. ಸ್ಕ್ರೀನ್ ಜತೆಗೆ ಕಾರಿನ ಎದುರಿನ ಗ್ಲಾಸ್ ಮೇಲೆಯೇ ಕಾರಿನ ವೇಗ, ಹೋಗಬೇಕಾದ ದಾರಿ ತೋರಿಸುವ ಮ್ಯಾಪ್‌ನ ದಿಕ್ಸೂಚಿ, ರಾತ್ರಿ ರಸ್ತೆಯಲ್ಲಿ ಪ್ರಾಣಿ ಅಥವಾ ಮನುಷ್ಯರಿರುವ ಬಗೆಗಿನ ಎಚ್ಚರಿಕೆಯನ್ನು ಮೂಡಿಸುವ ವ್ಯವಸ್ಥೆಯೂ ಇದೆ. ಇದರಿಂದ ಚಾಲಕ ರಸ್ತೆಯ ಮೇಲೆ ದೃಷ್ಟಿ ನೆಟ್ಟಿರುವ ಸಂದರ್ಭದಲ್ಲೇ ಅಗತ್ಯ ಮಾಹಿತಿಗಳನ್ನು ಗಮನಿಸಲು ಸಾಧ್ಯವಿದೆ. - ವಕ್ರದಂತ