ತಾಜ್ ಜೆರಾಕ್ಸ್ ಬೀಬಿ ಕಾ ಮಕ್ಬರಾ ಹೆಸರಿನ ಈ ಅಪೂರ್ವ ನಿರ್ಮಾಣ ಮಹಾರಾಷ್ಟ್ರದ ಔರಂಗಾಬಾದಿನಲ್ಲಿದೆ. ಬೀಬಿ ಕಾ ಮಕ್ಬರಾ (ರಿಪ್ಲಿಕಾ ಆಫ್ ತಾಜ್‌ಮಹಲ್) ಹೆಸರಿನ ಈ ಅಪೂರ್ವ ನಿರ್ಮಾಣ ಮಹಾರಾಷ್ಟ್ರ ರಾಜ್ಯದ ಔರಂಗಾಬಾದಿನಲ್ಲಿದೆ. ಇವೆರಡೂ ಮೊಗಲ್ ದೊರೆಗಳ ಕೊಡುಗೆಯಾಗಿವೆ. ಔರಂಗಾಬಾದ್‌ಗೆ 5 ಕಿ.ಮೀ. ದೂರದಲ್ಲಿ ಆಗ್ರಾದ 'ತಾಜ್‌ಮಹಲ್‌'ನ್ನು ನೆನಪಿಸುತ್ತಾ ಭವ್ಯವಾಗಿ ನಿಂತಿದೆ ಈ ಮಹಿಳೆಯರ ಸಮಾಧಿ ಅರ್ಥಾತ್ 'ಬೀಬಿ ಕಾ ಮಕ್ಬರಾ'... ವಿಶ್ವವಿಖ್ಯಾತ ಪ್ರೇಮಸ್ಮಾರಕ ಆಗ್ರಾದ ತಾಜಮಹಲ್ ಯಾರಿಗೆ ತಾನೇ ಗೊತ್ತಿಲ್ಲ? 5ನೇ ಮೊಗಲ್ ಚಕ್ರವರ್ತಿ ತನ್ನ ಪ್ರಿಯ ಪತ್ನಿ ಮಮ್ತಾಜ್‌ಳ ನೆನಪಿಗಾಗಿ 1631ರಲ್ಲಿ ಕಟ್ಟಲು ಪ್ರಾರಂಭಿಸಿದ್ದ ಈ ಕಟ್ಟಡ ಸಂಪೂರ್ಣವಾಗಲು ಬರೋಬ್ಬರಿ 22 ವರ್ಷಗಳೇ ಬೇಕಾಯಿತು. ಕಟ್ಟಡವು 1646ಕ್ಕೆ ಪೂರ್ಣವಾಯಿತಾದರೂ ಕಟ್ಟಡದ ಸುತ್ತಲಿನ ಕೆಲಸಗಳಿಗೆ ಹೆಚ್ಚುವರಿ 5 ವರ್ಷಗಳೇ ಬೇಕಾಯಿತು. ಈ ಕಟ್ಟಡದಲ್ಲಿ ಶುದ್ಧ ಮಾರ್ಬಲ್ ಹಾಗೂ 28 ಬಗೆಯ ಬೆಲೆಬಾಳುವ ಕಲ್ಲುಗಳನ್ನು ಬಳಸಿ 32 ಮಿಲಿಯನ್ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುಂದರವಾದ ತಾಜ್‌ಮಹಲ್ ಎತ್ತರವಾದ ಚಪ್ಪಟೆಯಾಕಾರದ ಜಗುಲಿಯ ಮೇಲೆ 4 ಎತ್ತರದ ಸ್ತಂಭಗಳ ಮಧ್ಯೆ ಭವ್ಯವಾಗಿ ನಿರ್ಮಿಸಲಾಗಿದ್ದು, ಐತಿಹಾಸಿಕ ಹಾಗೂ ಶಿಲ್ಪವೈಭವದಿಂದಾಗಿ ಜಗತ್ತನ್ನೇ ತನ್ನೆಡೆಗೆ ಸೆಳೆಯುತ್ತಿದೆ. ಈ ಅದ್ಭುತ ಕಟ್ಟಡ ನಿರ್ಮಾಣಕ್ಕೆ 20,000 ಕೆಲಸಗಾರರು, 1000 ಆನೆಗಳೂ ಶ್ರಮಿಸಿವೆ. ಇಂಥ ತಾಜ್‌ನ ಪ್ರತಿಕೃತಿಯೊಂದು ಭಾರತದಲ್ಲೇ ಇದೆ ಎಂದರೆ ನೀವು ನಂಬಲೇಬೇಕು! ಅದು ಬೀಬಿ ಕಾ ಮಕ್ಬರಾ. ಹೌದು. ಬೀಬಿ ಕಾ ಮಕ್ಬರಾ (ರಿಪ್ಲಿಕಾ ಆಫ್ ತಾಜ್‌ಮಹಲ್) ಹೆಸರಿನ ಈ ಅಪೂರ್ವ ನಿರ್ಮಾಣ ಮಹಾರಾಷ್ಟ್ರ ರಾಜ್ಯದ ಔರಂಗಾಬಾದಿನಲ್ಲಿದೆ. ಇವೆರಡೂ ಮೊಗಲ್ ದೊರೆಗಳ ಕೊಡುಗೆಯಾಗಿವೆ. ಔರಂಗಾಬಾದ್‌ಗೆ 5 ಕಿ.ಮೀ. ದೂರದಲ್ಲಿ ಆಗ್ರಾದ 'ತಾಜ್‌ಮಹಲ್‌'ನ್ನು ನೆನಪಿಸುತ್ತಾ ಭವ್ಯವಾಗಿ ನಿಂತಿದೆ ಈ ಮಹಿಳೆಯರ ಸಮಾಧಿ ಅರ್ಥಾತ್ 'ಬೀಬಿ ಕಾ ಮಕ್ಬರಾ'. ಆಗ್ರಾದ ತಾಜ್‌ಮಹಲ್‌ನದ್ದೇ ವಾಸ್ತುಶೈಲಿ ಹೊಂದಿರುವ ಮಕ್ಬರಾ, 'ಡೆಕ್ಕನ್ ಕಾ ತಾಜ್‌' ಎಂದೂ ಪ್ರಸಿದ್ಧ. ಕಟ್ಟಡದ ಬಗ್ಗೆ ಈ ಕಟ್ಟಡವನ್ನು ಔರಂಗಜೇಬನ ಮಗ ಆಜಂ ಷಾ, ಅವನ ತಾಯಿ (ಔರಂಗಜೇಬನ ಮೊದಲ ಪತ್ನಿ) ರಬಿಯಾ ಉಲ್ ದೌರಾನಿ (ದಿಲರಾಸ್‌ಬಾನು) ಅವರ ಗೌರವಾರ್ಥ ಕ್ರಿ.ಶ. 1651-57 ರಲ್ಲಿ ನಿರ್ಮಿಸಿದ್ದಾರೆ. ಇದರ ನಿರ್ಮಾಣ ವಾಸ್ತುತಜ್ಞ ಅತಾ ಉಲ್ಲಾ, ವಾಸ್ತುಶಿಲ್ಪಿ ಹನ್ಸಪತ್ ರಾಯ್ ಅವರೆಂದು ಶಾಸನ ಹೇಳುತ್ತದೆ. ಔರಂಗಜೇಬ್ ಈ ನಿರ್ಮಾಣಕ್ಕೆ ಮಗನಿಗೆ 7 ಲಕ್ಷ ರು. ಕೊಟ್ಟಿದ್ದನಂತೆ. 6,68,203 ರುಪಾಯಿ, 7 ಆಣೆ ಖರ್ಚಾಗಿದೆಯಂತೆ. ಇದರಿಂದ ತಾಜ್‌ಮಹಲ್ ಮತ್ತು ಬೀಬಿ ಕಾ ಮಕ್ಬರಾ ಕಟ್ಟಡಗಳ ಮಧ್ಯ ವ್ಯತ್ಯಾಸ ಗುರುತಿಸಬಹುದು. ತೀರಾ ಭವ್ಯತೆ ಇಲ್ಲದ ಇದನ್ನು 'ಬಡವರ ತಾಜ್‌' ಎಂದೂ ಕರೆಯುತ್ತಾರೆ. ಈ ಕಟ್ಟಡವನ್ನು ಚೌಕಾಕಾರದ ವೇದಿಕೆಯಲ್ಲಿ ಕಟ್ಟಲಾಗಿದೆ. ನಾಲ್ಕೂ ಮೂಲೆಯಲ್ಲೂ ನಾಲ್ಕು ಸ್ತಂಭ (ಮಿನಾರ್)ಗಳನ್ನು ಹೊಂದಿದೆ. ಅವುಗಳಲ್ಲಿ ಮೇಲಕ್ಕೆ ಹತ್ತಲು ನೆಲಮಟ್ಟದಿಂದ ಮೆಟ್ಟಿಲುಗಳಿವೆ. ಸುಮಾರು 458 ್ಢ 257 ಮೀಟರ್ ವಿಸ್ತೀರ್ಣದಲ್ಲಿದೆ. ಎಲ್ಲಾ ಕಡೆಯೂ ಆಗ್ರಾ ತಾಜ್ ಬಳಿಯಂತೆಯೇ ಒಂದೇ ರೀತಿಯ ಉದ್ಯಾನಗಳನ್ನು ಹೊಂದಿದೆ. ಕೊಳ, ಕಾಲುದಾರಿ, ಕಾಲುವೆ, ಕಾರಂಜಿಗಳಿವೆ. ಕಟ್ಟಡವು ಮೇಲೆ ಮತ್ತು ಕೆಳಗೆ ಶುದ್ಧ ಮಾರ್ಬಲ್ಲುಗಳ ಹಾಸು. ಮಧ್ಯಭಾಗದಲ್ಲಿ ಬಸಾಲ್ಟ್ ಶಿಲೆ (ಅಗ್ನಿಶಿಲೆ, ಜ್ವಾಲಾಮುಖಿ ಶಿಲೆ) ಬಳಸಿ, ಪ್ಲಾಸ್ಟರ್ ಆಫ್ ಪ್ಯಾರಿಸ್, ಮಾರ್ಬಲ್ ಫಿನಿಷ್‌ನ ಗಿಲಾವು, ಕಚ್ಚುಗಾರೆಯಿಂದ ವಿಶಿಷ್ಟವಾಗಿ ಕಂಗೊಳಿಸುವಂತೆ ರೂಪಿಸಲಾಗಿರುವುದು ಇದರ ವೈಶಿಷ್ಟ್ಯ. ಹೆಬ್ಬಾಗಿಲು ದಾಟಿ ಒಳಹೋದರೆ ಮೊಗಸಾಲೆಯು ಅಷ್ಟಕೋನಾಕಾರದಲ್ಲಿ ಸಮಾಧಿ ಸುತ್ತುವರಿದಿದೆ. ಅಲ್ಲಿಂದ ಕೆಳಗಿರುವ ಸಮಾಧಿಯು ಪರಿಣಾಮಕಾರಿಯಾಗಿ ಕಾಣಿಸುತ್ತದೆ. ಸಮಾಧಿಯ ಮೇಲ್ಭಾಗದಲ್ಲಿ ಎತ್ತರದ ಗುಮ್ಮಟವಿದ್ದು, ಸುಂದರ ಶಿಲ್ಪಕಲೆಯ ಜಾಲಂದರದ ಕಿಟಕಿಗಳು ಕಟ್ಟಡದ ಸೌಂದರ್ಯವನ್ನು ಹೆಚ್ಚಿಸಿವೆ. ಆಗ್ರಾದಂತೆಯೇ ಸುಂದರ ಶಿಲ್ಪಕಲೆಯನ್ನೂ, ಹೂಗಳ ಫಲಕಗಳನ್ನೂ ಹೊಂದಿ ಅಲಂಕಾರಗೊಂಡಿರುವ ಈ ತಾಜ್ ನೋಡಿದರೆ ಥಟ್ಟನೆ ತಾಜ್‌ಮಹಲ್ ಎಲ್ಲೂ ಬಿಟ್ಟುಕೊಡುವುದಿಲ್ಲ, ಹಾಗಿದೆ. ಅಜಂ ಷಾ ಅವರಿಗಿದ್ದ ಮಾತೃಪ್ರೀತಿಯ ಧ್ಯೋತಕವಾಗಿ ನಿಂತಿದೆ ಬೀಬಿ ಕಾ ಮಕ್ಬರಾ. ಹೀಗೆಬನ್ನಿ... ಔರಂಗಾಬಾದ್ ಬೆಂಗಳೂರಿನಿಂದ 1008 ಕಿ.ಮೀ., ಮುಂಬೈನಿಂದ 362 ಕಿ.ಮೀ., ನಾಸಿಕ್‌ನಿಂದ 208 ಕಿ.ಮೀ. ಹಾಗೂ ಶಿರಡಿಯಿಂದ 121 ಕಿ.ಮೀ. ಅಂತರದಲ್ಲಿದೆ. ಒಮ್ಮೆಯಾದರೂ ನೋಡಲೇಬೇಕೆನಿಸುವ ಐತಿಹಾಸಿಕ ತಾಣವಿದು. - ಚಿತ್ರ-ಲೇಖನ: ಸೀತಾ ಎಸ್. ನಾರಾಯಣ