ಚಿಕ್ಕಿ ಬೆಲ್ಲಪುರ ಅದೊಂದು ಗಿರಿಧಾಮ. ಸಹ್ಯಾದ್ರಿ ಶ್ರೇಣಿಯಲ್ಲಿ ಸೊಂಪಾಗಿರುವ ಆ ಸ್ಥಳಕ್ಕೆ ಹೋದರೆ ಪ್ರಕೃತಿಯ ಮಡಿಲಲ್ಲಿ ಕಳೆದು ಹೋದ ಅನುಭೂತಿ. ಪ್ರವಾಸಿಗರ ಪಾಲಿನ ಸ್ವರ್ಗವಷ್ಟೇ ಅಲ್ಲದೆ, ರುಚಿಭರಿತ ಚಿಕ್ಕಿ ಸಾಮ್ರಾಜ್ಯವೂ ಇಲ್ಲಿದೆ. ಈ ಕಾರಣಕ್ಕೆ ಪ್ರವಾಸಿಗರ ಪಾಲಿಗೆ 'ಲೋನಾವಾಲಾ' ಪ್ರೀತಿಯ ತಾಣ. ಮುಂಬೈ ಸುತ್ತಲು ಹೋದವರು ಲೋನಾವಾಲಾ ಚಿಕ್ಕಿಯ ಸವಿ ಸವಿಯದೇ ಮರಳಲಾರರು. ಖಂಡಾಲಾ ಘಾಟ್ ಸೀಳಿ ಹೊರಡುವಾಗ ಬೆಲ್ಲದ ಘಮ ಹಿತವಾಗಿ ಮೂಗಿಗೆ ಬಡಿದು ಲೋನಾವಾಲಾ ಸನಿಹ ಬರುತ್ತಿದೆ ಎಂಬ ಸುಳಿವು ನೀಡುತ್ತದೆ. ಲೋನಾವಾಲಾ ಪುಟ್ಟ ಹಳ್ಳಿ. ಆದರೆ ಚಿಕ್ಕಿಯಿಂದಾಗಿ ಅದು ದೇಶ- ವಿದೇಶದಲ್ಲಿ ಹೆಸರುವಾಸಿ. ವಿದೇಶಿಗರೂ ಲೋನಾವಾಲಾ ಚಿಕ್ಕಿಗೆ ಮಾರು ಹೋಗಿದ್ದಾರೆ. ಲೋನಾವಾಲಾ ಹಳ್ಳಿ ತುಂಬ 'ಮಗನಲಾಲ್ ಚಿಕ್ಕಿ' ಅಂಗಡಿ ಸಾಲುಗಟ್ಟಿ ನಿಂತು ನಮ್ಮನ್ನು ಕರೆಯುತ್ತವೆ. ಈ ಹಳ್ಳಿಯಲ್ಲಿ ಒಂದಲ್ಲ ಎರಡಲ್ಲ, 80 ಮಗನಲಾಲ್ ಚಿಕ್ಕಿ ಅಂಗಡಿಗಳಿವೆ. ಎಲ್ಲ ಅಂಗಡಿಗಳು ಒಂದೇ ರೀತಿ ಕಾಣಿಸುವುದು ಮತ್ತೊಂದು ವಿಶೇಷ. ಬಹುಶಃ ಮಗನಲಾಲ್ ಚಿಕ್ಕಿಯ ಹೆಸರಿರದಿದ್ದರೆ ಇಂಥದ್ದೊಂದು ಹಳ್ಳಿ ಇರುವುದು ಹೊರ ಜಗತ್ತಿಗೆ ಗೊತ್ತೇ ಆಗುತ್ತಿರಲಿಲ್ಲವೇನೋ! ರುಚಿಕಟ್ಟು, ಸ್ವಚ್ಛತೆ, ಉತ್ತಮ ಗುಣಮಟ್ಟದ ಕಾರಣಕ್ಕೆ ಮಗನಲಾಲ್ ಚಿಕ್ಕಿಗೆ ಇನ್ನಿಲ್ಲದ ಬೇಡಿಕೆ. ಇಲ್ಲಿನ ಎಲ್ಲ ಅಂಗಡಿಗಳಲ್ಲೂ ಗುಣಮಟ್ಟದ, ಸ್ವಾದಿಷ್ಟ ಚಿಕ್ಕಿ ಲಭ್ಯ. ಯಾವುದೇ ಅಂಗಡಿ ಆಯ್ದುಕೊಂಡರೂ ಸ್ವಾದದಲ್ಲಿ ಫರಕ್ ಕಾಣದು. ಶೇಂಗಾ ಚಿಕ್ಕಿ, ಏಲಕ್ಕಿ ಸ್ವಾದದ ಚಿಕ್ಕಿ, ಕೊಬ್ಬರಿ ಚಿಕ್ಕಿ, ಕಡಲೆ ಚಿಕ್ಕಿ, ಶುಂಠಿ ಚಿಕ್ಕಿ, ಗೋಡಂಬಿ, ಬಾದಾಮ್ ಮಿಶ್ರಿತ ಚಿಕ್ಕಿ- ಹೀಗೆ ಹತ್ತಾರು ಬಗೆಯ ಚಿಕ್ಕಿ ಬಾಯಲ್ಲಿ ನೀರೂರಿಸುತ್ತವೆ. ಪ್ರತಿಯೊಂದು ಅಂಗಡಿಯಲ್ಲಿ ನಿತ್ಯ ರು.25ರಿಂದ ರು.30 ಸಾವಿರ ವ್ಯಾಪಾರವಾಗುತ್ತದೆ. ಎಲ್ಲವೂ ಮಗನಲಾಲ್ ಚಿಕ್ಕಿ ಪ್ರಾಂಚೈಸಿ ಅಂಗಡಿಗಳೇ. ದೇಶ ವಿದೇಶಕ್ಕೆ ನಿತ್ಯ ಟನ್‌ಗಟ್ಟಲೆ ಚಿಕ್ಕಿ ರಫ್ತಾಗುತ್ತದೆ ಎನ್ನುತ್ತಾರೆ ಮಗನಲಾಲ್ ಚಿಕ್ಕಿಯ ಪ್ರಾಂಚೈಸಿ ಸಂಜಯ ಅಗರವಾಲ್. 1880ರಲ್ಲಿ ಚಿಕ್ಕಿ ಹುಟ್ಟು ಮಗನಲಾಲ್ ಚಿಕ್ಕಿಯ ಹುಟ್ಟೇ ಸ್ವಾರಸ್ಯಕರ. ಮಗನಲಾಲ್ ಅಗರವಾಲ್ ಚಿಕ್ಕಿಯ ಜನಕ. ಚಿಕ್ಕಿ ಎನ್ನುವ ಖಾದ್ಯ ಹುಟ್ಟಿದ್ದೇ ಇಲ್ಲಿಂದ. ಮುಂಬೈ ಹಾಗೂ ಲೋನಾವಾಲಾ ಮಧ್ಯದಲ್ಲಿ 1880ರಲ್ಲಿ ರೇಲ್ವೆ ಹಳಿ ನಿರ್ಮಿಸುತ್ತಿದ್ದ ಕಾಲಕ್ಕೆ ಮಗನಲಾಲ್, ಲೋನಾವಾಲಾದಲ್ಲಿ ಮಿಠಾಯಿ ಅಂಗಡಿ ಆರಂಭಿಸಿದರು. ಇವರು ಬೆಲ್ಲ ಹಾಗೂ ಶೇಂಗಾ ಮಿಶ್ರಿತ ಮಿಠಾಯಿ ಸಿದ್ಧಪಡಿಸಿ ಮಾರುತ್ತಿದ್ದರು. ಇದಕ್ಕೆ ಚಿಕ್ಕಿ ಎಂದು ಕರೆದರು. ರೇಲ್ವೆ ಹಳಿ ನಿರ್ಮಾಣವಾದ ಬಳಿಕ ಪ್ರಯಾಣಿಕರಿಂದ ಚಿಕ್ಕಿಗೆ ಭರ್ಜರಿ ಬೇಡಿಕೆ ಬಂತು. ಆ ಬಳಿಕ ಮಗನಲಾಲ್ ಚಿಕ್ಕಿ ಸಾಮ್ರಾಜ್ಯ ಬೆಳೆಯುತ್ತಾ ಹೋಯಿತು. ಪ್ರಸ್ತುತ ಮಗನಲಾಲ್ ಚಿಕ್ಕಿ ತಯಾರಿಸುವ ಎರಡು ಕಾರ್ಖಾನೆಗಳು ಲೋನಾವಾಲಾದಲ್ಲಿವೆ. ಹೆಚ್ಚಿರುವ ಬೇಡಿಕೆ ಪೂರೈಸಲು ಈಗ ಯಂತ್ರಗಳನ್ನು ಬಳಸುತ್ತಿದ್ದೇವೆ ಎನ್ನುತ್ತಾರೆ ಮಗನಲಾಲ್ ಅವರ ಮೊಮ್ಮಗ, ಕಾರ್ಖಾನೆ ನಿರ್ದೇಶಕ ಮಂಗೇಶ ಅಗರವಾಲ್. ಮೂರ್ನಾಲ್ಕು ತಿಂಗಳಾದರೂ ಕೆಡದಿರುವುದು, ಕಮಟು ವಾಸನೆ ಬಾರದಿರುವುದು ಮಗನಲಾಲ್ ಚಿಕ್ಕಿಯ ವಿಶೇಷ. ಚುಮುಚುಮು ಚಳಿಯಲ್ಲಿ, ಮಳೆಗಾಲದಲ್ಲಿ ಚಿಕ್ಕಿ ಮೆಲ್ಲುವ ಮಜಾನೇ ಬೇರೆ. ಮುಂಬೈ ಹೋಗುವುದಿದ್ದರೆ ಲೋನಾವಾಲಾ ಮರೆಯದಿರಿ. ಅಲ್ಲಿಗೆ ಹೋದರೂ ಚಿಕ್ಕಿಯನ್ನು ಮರೆಯದಿರಿ... = ಚಿತ್ರ-ಬರಹ: ಪ್ರಕಾಶ ಎಸ್. ಶೇಟ್ @.