ಚುಕ್ಕಿ ಮುನಿಯ ಶಾಲೆಯ ಕಂಪ್ಯೂಟರ್ ಕೊಠಡಿ ಬಾಗಿಲ ಮೇಲೆನೋ ಸಪ್ಪಳವಾದಂತಾಗಿ ಮೇಲ್ನೋಡಿದೆ. ಗುಬ್ಬಚ್ಚಿಗಿಂತಲೂ... ಶಾಲೆಯ ಕಂಪ್ಯೂಟರ್ ಕೊಠಡಿ ಬಾಗಿಲ ಮೇಲೆನೋ ಸಪ್ಪಳವಾದಂತಾಗಿ ಮೇಲ್ನೋಡಿದೆ. ಗುಬ್ಬಚ್ಚಿಗಿಂತಲೂ ಸಣ್ಣ ಗಾತ್ರದ ಎರಡು ಪಕ್ಷಿಗಳು ಚಟುವಟಿಕೆಯಿಂದ ಕೂಡಿದ್ದವು. ಅಲ್ಲಿ ಏನೋ ಹುಡುಕುತ್ತಿರುವಂತೆ ಕಾಣುತ್ತಿದ್ದವು. ಗಮನಿಸಿ ನೋಡಿದರೆ, ಅವು ಚಿಕ್ಕೆ ಮುನಿಯಗಳಾಗಿದ್ದವು. ಅಲ್ಲಿ ಗೂಡು ರಚಿಸಲು ಸ್ಥಳ ಪರೀಕ್ಷಿಸುವಂತೆ ಅತ್ತ-ಇತ್ತ ಹಾರಾಡುತ್ತಿದ್ದವು. ಕೊನೆಗೂ ಅವು ಅಲ್ಲಿ ಸಂಸಾರ ಹೂಡಲು ತೀರ್ಮಾನಿಸಿ ಉದ್ದುದ್ದ ಹಸಿ ಹುಲ್ಲೆಸುಳುಗಳನ್ನು ಕಿತ್ತು ತಂದು ಗೂಡು ರಚಿಸುವಲ್ಲಿ ನಿರತವಾದವು. ಈ ಪಕ್ಷಿಗಳ ಬಗ್ಗೆ ಹೆಚ್ಚು ತಿಳಿಯಲು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 'ಹಕ್ಕಿಪುಕ್ಕ' ಹಿಡಿದು ಕುಳಿತೆ. ಆಕಾಶದಲ್ಲಿ ಅಲೆಗಳಂತೆ ಹಾರುತ್ತಾ, ಕೆಲವೊಮ್ಮೆ ಗೆಜ್ಜೆ ಸಪ್ಪಳದಂತೆ ಕೂಗುತ್ತಾ, ಮಗದೊಮ್ಮೆ ಟಿಕೀಂ... ಟಿಕೀಂ... ಎಂದು ಉಲಿಯುತ್ತಾ, ಬತ್ತದ ಗದ್ದೆಗಳ ಮೇಲೆ ದಾಳಿ ಇಡುವ ಗುಬ್ಬಚ್ಚಿ ಕುಟುಂಬಕ್ಕೆ ಸೇರಿದ ಹಕ್ಕಿಯೇ ಚುಕ್ಕಿ ಮುನಿಯ. ನಾಲೆ ನಾಡಿನ ಬತ್ತದ ಗದ್ದೆ ಬಯಲುಗಳಲ್ಲಿ ವರ್ಷಪೂರ್ತಿ ಕಾಳುಕಡಿಗಳನ್ನು ಸಂಗ್ರಹಿಸುತ್ತಾ, ಆ ಪ್ರದೇಶಗಳಲ್ಲಿ ಇವು ಠಿಕಾಣಿ ಹೂಡುತ್ತವೆ. ಒಂದೆರಡರ ಸಂಖ್ಯೆಯಿಂದ ಆರಂಭವಾಗಿ 100ರವರೆಗೂ ಒಟ್ಟಾಗಿ ಗುಂಪು ಕಟ್ಟಿಕೊಳ್ಳಬಲ್ಲವು. ಕಂದು ಬಣ್ಣದ ಇವುಗಳ ಎದೆ ಭಾಗದಲ್ಲಿ ಮೀನಿನ ಹುರಪೆಯಂತೆ ಬಿಳಿ ಚುಕ್ಕೆಗಳನ್ನು ಹೊಂದಿವೆ. ಗ್ರಾಮೀಣರಿಂದ ಅಬ್ಬಲಕ್ಕಿ ಎಂದು ಕರೆಸಿಕೊಳ್ಳುವ ಇವು ಸಾಮಾನ್ಯವಾಗಿ ಮಳೆಗಾಲದಲ್ಲಿ ಸಂತಾನಾಭಿವೃದ್ಧಿಗೆ ಮುಂದಾಗಿ 3ರಿಂದ 4 ಮೊಟ್ಟೆಗಳನ್ನು ಇಡುತ್ತವೆ. 12 ದಿನಗಳ ಕಾಲ ಗಂಡು ಮತ್ತು ಹೆಣ್ಣುಗಳೆರಡೂ ಸೇರಿ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುತ್ತವೆ - ಚಿತ್ರ-ಲೇಖನ: ನಾಮದೇವ ಕಾಗದಗಾರ