ಬೊಂಬಾಟ್ ಬಂಗಲೆ ಚಾಮರಾಜನಗರ ಜಿಲ್ಲೆಯಲ್ಲಿ ಮಲೆಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟ, ಗೋಪಾಲಸ್ವಾಮಿ ದೇಗುಲದಂತೆ ಪ್ರವಾಸಿಗರನ್ನು ಸೆಳೆಯುತ್ತಿರುವುದು, ಯಳಂದೂರಿನ ಜಹಗೀರ್‌ದಾರ್ ಬಂಗಲೆ. ಇದು 1901ರಲ್ಲಿ ನಿರ್ಮಾಣವಾವಾಯಿತು. ಇದರ ವಿನ್ಯಾಸ ಅದ್ಭುತವಾಗಿದ್ದರೂ ನಿರ್ವಹಣೆ ಕೊರತೆಯಿಂದಾಗಿ ಪಾಳು ಬಿದ್ದಿತ್ತು. ಯಳಂದೂರು ದಿವಾನರಾಗಿದ್ದ ಪೂರ್ಣಯ್ಯ ಅವರ ಸ್ಮರಣಾರ್ಥ ಈ ಬಂಗಲೆ ಈಗ ಮ್ಯೂಸಿಯಂ ಆಗಿ ಸಿದ್ಧವಾಗುತ್ತಿದೆ. ಪೂರ್ಣಯ್ಯ ಕಾಲವಾದ ನಂತರ ಅವರ ಸ್ಮರಣೆಗಾಗಿ ನಿರ್ಮಿಸಿದ ಭವನವೇ ಜಹಗೀರ್‌ದಾರ್ ಬಂಗಲೆ. ಈ ಬಂಗಲೆ ನಿಮಾರ್ಣವಾಗಿ (1901) 112 ವರ್ಷವಾಗಿದ್ದು, ಪೂರ್ಣಯ್ಯ ಕಾಲವಾಗಿ ಈ 2012ಕ್ಕೆ ಇನ್ನೂರು ವರ್ಷವಾಗಿದೆ. ಹೈದರಾಲಿ, ಟಿಪ್ಪುಸುಲ್ತಾನ್ ಹಾಗೂ ಮೈಸೂರು ಅರಸರ ಕಾಲದಲ್ಲಿ ದಿವಾನರಾಗಿದ್ದ ಪೂರ್ಣಯ್ಯ ಸಾಕಷ್ಟು ಚಾಣಾಕ್ಷರಾಗಿದ್ದರು. ಯಳಂದೂರು ತಾಲೂಕನ್ನು ಪೂರ್ಣಯ್ಯ ಅವರಿಗೆ 1907ರಲ್ಲಿ ಜಹಗೀರ್ ಆಗಿ ಕೊಡುಗೆ ನೀಡಲಾಗಿತ್ತು. ಈ ಅವಕಾಶ ಬಳಸಿ ಪೂರ್ಣಯ್ಯ, ತಾಲೂಕನ್ನು ಮಾದರಿಗೊಳಿಸಿ 1812ರಲ್ಲಿ ಇಹಲೋಕ ತ್ಯಜಿಸಿದರು. ಪೂರ್ಣಯ್ಯ ಸ್ಮರಣಾರ್ಥ ಅವರ ವಂಶಸ್ಧರಾದ ಕೃಷ್ಣಮೂರ್ತಿ 1901ರಲ್ಲಿ ಈ ಬಂಗಲೆ ನಿರ್ಮಿಸಿದರು. ಇತ್ತೀಚಿನವರೆಗೂ ಈ ಬಂಗಲೆ ಪೂರ್ಣಯ್ಯ ವಂಶಸ್ಥರಾದ ಸುಕನ್ಯಾ ಎಂಬವರ ಅಧೀನದಲ್ಲಿತ್ತು. ಇದೀಗ ಈ ಪ್ರಾಚೀನ ಕಟ್ಟಡದ ದುಃಸ್ಥಿತಿ ಅರಿತು ಪ್ರಾಚ್ಯವಸ್ತು ಇಲಾಖೆ ಪೂರ್ಣಯ್ಯ ವಂಶಸ್ಥರೊಂದಿಗೆ ಮಾತುಕತೆ ನಡೆಸಿ ಕಟ್ಟಡವನ್ನು ಪಟ್ಟಣ ಪಂಚಾಯ್ತಿಗೆ ವರ್ಗಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಹದೇಶ್ವರ ಬೆಟ್ಟ, ಬಿ.ಆರ್. ಹಿಲ್ಸ್‌ನಂಥ ಪ್ರವಾಸಿ ಸ್ಥಳಗಳಿಗೆ ಯಳಂದೂರು ಮೂಲಕವೇ ತೆರಳಬೇಕು. ಇದೇ ಎನ್‌ಎಚ್ 209ರಲ್ಲಿ ಸಿಗುವ ಪಾಳುಬಿದ್ದಿದ್ದ ಬಂಗಲೆಯಲ್ಲಿ ನಿರ್ಮಾಣವಾಗುವ ಈ ಮ್ಯೂಸಿಯಂ ಅನ್ನು ಕಣ್ತುಂಬಿಕೊಳ್ಳಬಹುದು. ರು. 1 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಿಸಿ, ಪ್ರವಾಸಿ ತಾಣವಾಗಿ ರೂಪಿಸಲಾಗುತ್ತಿದೆ. ಕರ್ನಾಟಕ, ತಮಿಳುನಾಡಿನ ತಂಜಾವೂರು ಶಿಲ್ಪ ಕಲಾವಿದರು, ತಜ್ಞ ವಾಸ್ತುಶಿಲ್ಪಿಗಳು, ತಜ್ಞ ಮರಗೆತ್ತನೆ ಕಲಾವಿದರಿಂದ ಅಭಿವೃದ್ಧಿ ಸಾಗಿದೆ. ಜಿಲ್ಲೆಯ ಪ್ರಥಮ ವಸ್ತು ಸಂಗ್ರಹಾಲಯವಾಗಿ ಇದು ರೂಪುಗೊಳ್ಳಲಿದೆ. ಬಂಗಲೆ ಒಳಗೆ ದಿವಾನ್ ಪೂರ್ಣಯ್ಯ ಅವರ ಕಡತಗಳು, ಜಿಲ್ಲಾದ್ಯಂತ ಇರುವ ಪ್ರಾಚೀನ ಶಿಲ್ಪಕಲೆಗಳು, ವರ್ಣಚಿತ್ರಗಳು ಹಾಗೂ ಜಿಲ್ಲೆಯ ಇತಿಹಾಸ ಸಾರುವ ಕುರುಹುಗಳು, ಪರಂಪರೆ ಬಿಂಬಿಸುವ ಅಪರೂಪದ ವಸ್ತುಗಳನ್ನು ಇಡಲು ಮ್ಯೂಸಿಯಂ ತಯಾರಿಗೆ ಅಂತಿಮ ಸ್ಪರ್ಶ ನಡೆದಿದೆ. ಹಿಂದೆ ಯಳಂದೂರು ತಾಲೂಕಿನ ಇಡೀ ಆಡಳಿತ ಕಚೇರಿ ಜಹಗೀರ್‌ದಾರ್ ಬಂಗಲೆಯಲ್ಲಿದ್ದವು. ಈ ಪ್ರದೇಶದ ಜಹಗೀರನ್ನು ಹೊಂದಿದ್ದರಿಂದ ಎಲ್ಲ ರೀತಿಯ ಕಂದಾಯಗಳು ಜನತೆಯಿಂದ ಸಂದಾಯವಾಗುತ್ತಿತ್ತು. ಅಂದಿನ ಕಾಲಕ್ಕೆ ಈ ಕಟ್ಟಡವೇ ಯಳಂದೂರು ಪ್ರದೇಶಕ್ಕೆ ವಿಧಾನಸೌಧವಾಗಿತ್ತು. ರಾಜರ ಆಳ್ವಿಕೆಯವರೆಗೂ ಉತ್ತಮ ನಿರ್ವಹಣೆಯಲ್ಲಿದ್ದ ಈ ಕಟ್ಟಡ ಸ್ವಾತಂತ್ರ್ಯ ನಂತರ ಕಡೆಗಣನೆಗೆ ತುತ್ತಾಗಿತ್ತು. ಶಾನುಭೋಗರು, ಪಟೇಲರ ಕಚೇರಿಗಳಿದ್ದ ಈ ಬಂಗಲೆ ಕೊಠಡಿಗಳು ಸರ್ಕಾರಿ ಕಚೇರಿಗಳಾಗಿ ಪರಿವರ್ತನೆಗೊಂಡವು. ತಾಲೂಕು ಬೋರ್ಡ್ ಕಚೇರಿ, ಅರಣ್ಯ ಇಲಾಖೆ, ಬಿಡಿಓ, ಸಿಡಿಪಿಓ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಕಚೇರಿಗಳು ಈ ಕಟ್ಟಡದಲ್ಲಿದ್ದವು. ಹೀಗೆ ಬನ್ನಿ... ಬೆಂಗಳೂರು- ದಿಂಡಿಗಲ್ ಹೆದ್ದಾರಿ 209 ಮಾರ್ಗವಾಗಿ ಮದ್ದೂರು- ಕೊಳ್ಳೆಗಾಲ- ಯಳಂದೂರು ರಸ್ತೆಯಲ್ಲಿ 130 ಕಿ.ಮೀ. ಸಾಗಿದರೆ ಈ ಬಂಗಲೆ (ಮ್ಯೂಸಿಯಂ) ನೋಡಬಹುದು. ಬೆಂಗಳೂರು- ಮೈಸೂರು ಚಾಮರಾಜನಗರ ತಲುಪಿ (180 ಕಿ.ಮೀ.) ಅಲ್ಲಿಂದ ಪುನಃ 20 ಕಿ.ಮೀ. ಸಾಗಿ ಯಳಂದೂರು ಪಟ್ಟಣ ತಲುಪಬಹುದು. - ದೇವರಾಜು ಕಪ್ಪಸೋಗೆ ಚಿತ್ರ: ಅಂಬಳೆ ವೀರಭದ್ರ ನಾಯಕ