ನ್ಯಾನೋ ಥರನೇ ಮತ್ತೊಂದು... ನ್ಯಾನೋ ಬಂದಾಗ ರಸ್ತೆಯೆಲ್ಲ ಆ ಕಾರಿನಿಂದ ತುಂಬಿ ಹೋಗಬಹುದು ಎಂದು ಆತಂಕಪಟ್ಟವರೇನು ಕಡಿಮೆ ಇಲ್ಲ. ಆಟೋಗಳ ಬದಲಿಗೆ ನ್ಯಾನೋ ಬಂದುಬಿಡಬಹುದು ಎಂದರು. ಬೈಕುಗಳನ್ನು ಖರೀದಿಸುವವರು ನ್ಯಾನೋ ಮೊರೆ ಹೋಗಬಹುದು ಎಂದರು. ಆದರೆ ಹಾಗೇನೂ ಆಗಲಿಲ್ಲ. ಆದರೆ, ಈಗ ಗ್ರೀವ್ಸ್ ಕಾಟನ್ ಸಂಸ್ಥೆ ಕಂಡುಹಿಡಿದಿರುವ ಸಣ್ಣ ಪೆಟ್ರೋಲ್ ಎಂಜಿನ್ ತ್ರಿಚಕ್ರ ವಾಹನಗಳನ್ನು ನುಂಗಿಹಾಕಬಹುದು ಎಂಬ ಅನುಮಾನ ಮೂಡಿಸಿದೆ. ಗ್ರೀವ್ಸ್ ಕಾಟನ್ ನಮ್ಮ ದೇಶದ ಅತ್ಯಂತ ದೊಡ್ಡ ಮೂರುಚಕ್ರ ವಾಹನಗಳ ಎಂಜಿನ್ ತಯಾರಿಕಾ ಕಂಪನಿಯಾಗಿದೆ. ಈಗ ಈ ಕಂಪನಿ 4 ಚಕ್ರ (ದೊಡ್ಡ ಕಾರಲ್ಲ) ವಾಹನಗಳಿಗಾಗಿ ಹೊಸ ಎಂಜಿನ್ ತಯಾರಿಸಿದೆ. ಈ ಎಂಜಿನ್ ಕೇವಲ 265ಸಿಸಿ ಸಾಮರ್ಥ್ಯದ್ದಾಗಿದೆ. ಈ ಕಾರಣಕ್ಕಾಗಿಯೇ ಇದು ಬಾಡಿಗೆ ವಾಹನವಾಗಿ ನಾಲ್ಕು ಚಕ್ರ ವಾಹನ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಹುದು ಎಂಬ ನಿರೀಕ್ಷೆಯಿದೆ. ಆದರೆ, ಬಾಡಿಗೆ ಅಥವಾ ಸಾರ್ವಜನಿಕರನ್ನು ಸಾಗಿಸುವ ವಾಹನವಾಗಿ 4 ಚಕ್ರದ ವಾಹನದ ಸುರಕ್ಷೆ ಮತ್ತು ಇತರ ಸಂಗತಿಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಗ್ರೀವ್ಸ್ ಕಾಟನ್ ಮಾತ್ರ ಈ ಎಂಜಿನ್‌ನ ಯಶಸ್ಸಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಬಜಾಜ್ ಸೇರಿದಂತೆ ಇತರ ಕಂಪನಿಗಳ ಜತೆಗೆ 4 ಚಕ್ರ ವಾಹನದ ತಯಾರಿಕೆಗೆ ಉತ್ಸುಕವಾಗಿದೆ.