ಸಾತ್ವಿಕ ಸಿರಿದೇವಿ ಜಾತ್ರೆ ಎಂದಮೇಲೆ ಕುರಿ, ಕೋಳಿ ಇತ್ಯಾದಿಗಳ ಬಲಿ ಇದ್ದದ್ದೇ. ಅದನ್ನು ತಡೆಯಲು ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಕದ್ದುಮುಚ್ಚಿ ... ಜಾತ್ರೆ ಎಂದಮೇಲೆ ಕುರಿ, ಕೋಳಿ ಇತ್ಯಾದಿಗಳ ಬಲಿ ಇದ್ದದ್ದೇ. ಅದನ್ನು ತಡೆಯಲು ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಕದ್ದುಮುಚ್ಚಿ ಬಲಿ ಕೊಡುತ್ತಾರೆ. ಆದರೆ ರಾಜ್ಯದ ಜಾಗೃತ ದೇಗುಲಗಳ ಪೈಕಿ ಒಂದಾಗಿರುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷಿದ್ಧ. ಸಾತ್ವಿಕ ದೇವಿಗೆ ಕೇವಲ ಹಣ್ಣು-ಕಾಯಿ, ಸಿಹಿ ಖಾದ್ಯಗಳ ನೈವೇದ್ಯ ಸಮರ್ಪಣೆ. ಎರಡು ವರ್ಷಕ್ಕೆ ಒಮ್ಮೆ ನಡೆಯುವ ಶಿರಸಿ ಜಾತ್ರೆಗೆ ರಾಜ್ಯದ ಅತಿದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆ. ಕರಾವಳಿ ಜಿಲ್ಲೆಗಳು, ಉತ್ತರ ಕರ್ನಾಟಕದ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ಹರಕೆ ತೀರಿಸುತ್ತಾರೆ. ಗೋವಾ, ತಮಿಳುನಾಡು, ಆಂದ್ರಪ್ರದೇಶ,ಕೇರಳ,ಮಹಾರಾಷ್ಟ್ರಗಳಲ್ಲಿ ಸಹ ದೇವಿಯ ಪಾರಂಪರಿಕ ಭಕ್ತರಿದ್ದು ಜಾತ್ರೆಯ ಸಮಯದಲ್ಲಿ ಆ ಕುಟುಂಬಸ್ಥರೆಲ್ಲ ಆಗಮಿಸಿ ಪಾಲ್ಗೊಳ್ಳುತ್ತಾರೆ. ಜಾತ್ರೆ ಸಂದರ್ಭದಲ್ಲಿ ಸೇರುವ ಭಕ್ತರ ದಟ್ಟಣೆ, ಸಲ್ಲಿಸುವ ಸೇವೆಗಳ ಮಹತ್ವ, ಸೇರುವ ಅಂಗಡಿಮುಂಗಟ್ಟುಗಳ ವಿಸ್ತಾರ, ಮೆರವಣಿಗೆ ವೈಭವಗಳ ದೃಷ್ಟಿಯಿಂದಲೂ ಇದನ್ನು ಅತಿದೊಡ್ಡ ಜಾತ್ರೆ ಎಂದು ಗುರುತಿಸಲಾಗಿದೆ. ಮಾರಿಕಾಂಬಾ ದೇವಾಲಯ ಕ್ರಿ.ಶ.1688 ರಲ್ಲಿ ನಿರ್ಮಾಣವಾಯಿತು ಎನ್ನುತ್ತವೆ ದಾಖಲೆಗಳು. ಸೋಂದೆಯ ರಾಜ 2ನೇ ಸದಾಶಿವರಾಯನು ತನ್ನ ಗುರುಗಳಾದ ಸ್ವಾಮಿ ನಂದಿಕೇಶ್ವರರ ಸೂಚನೆಯಂತೆ ದೇವಾಲಯ ಜೀರ್ಣೋದ್ಧಾರಗೊಳಿಸಿ ನಿತ್ಯ ಪೂಜೆಗೆ ವ್ಯವಸ್ಥೆ ಕಲ್ಪಿಸಿದನಂತೆ. ಕ್ರಿ.ಶ.1760ರಲ್ಲಿ ಚಂದ್ರಶಾಲೆಯ ನಿರ್ಮಾಣ, 1873ರಲ್ಲಿ ಮುಂಭಾಗದ ಮುಖ ಮಂಟಪ ಮತ್ತು ಛಾವಣಿ ನಿರ್ಮಾಣ, 1925ರಲ್ಲಿ ಮುಂಭಾಗದ ಎತ್ತರದ ಪೌಳಿ ನಿರ್ಮಾಣ ಮತ್ತು ವರ್ಣಮಯ ಕಲಾತ್ಮಕ ಮೆರಗು ನೀಡುವ ಕಾರ್ಯ ನಡೆದ ಬಗ್ಗೆ ದಾಖಲೆಗಳಿವೆ. ಗಾಂಧೀಜಿ ಕಾರಣ ಮಾರಿಕಾಂಬೆಗೆ ಕೋಣವನ್ನು ಬಿಡುವ ಪದ್ಧತಿಯಿದೆ. ದೇವಸ್ಥಾನದ ಆವರಣವೇ ಮಹಿಷನ ವಾಸಸ್ಥಾನ. ಜಾತ್ರೆಗೆ ಒಂದು ವಾರ ಮೊದಲು ಕೋಣನ ಮೆರವಣಿಗೆ. ಉಳಿದ ಜಾತ್ರೆಗಳಲ್ಲಿ ಕೋಣ ಬಲಿಕೊಡುವ ಪದ್ಧತಿಯಿದ್ದರೆ ಇಲ್ಲಿ ಜಾತ್ರಾ ಗದ್ದುಗೆ ಪ್ರವೇಶಿಸುವ ದ್ವಾರದ ಬಳಿ ಕೋಣನ ರಕ್ತವನ್ನು ಸಿರಿಂಜ್ ಮೂಲಕ ತೆಗೆದು ನೆಲಕ್ಕೆ ಸಿಂಪಡಿಸಲಾಗುತ್ತದೆ. ಹರಕೆಯಾಗಿ ಕುರಿ, ಕೋಳಿ ಬಲಿ ನಿಷೇಧವಿದೆ. 1942ರಲ್ಲಿ ಮಹಾತ್ಮಾಗಾಂಧಿಯವರು ಶಿರಸಿಗೆ ಆಗಮಿಸಿದ್ದಾಗ ಪ್ರಾಣಿ ಬಲಿ ನಡೆಯುವ ದೇಗುಲಕ್ಕೆ ನಾನು ಕಾಲಿಡಲಾರೆ ಎಂದರಂತೆ. ಅಡಳಿತ ಮಂಡಳಿ 'ಇನ್ನು ಮುಂದೆ ಪ್ರಾಣಿ ಬಲಿ ನೀಡುವುದಿಲ್ಲ' ಎಂದು ವಾಗ್ದಾನ ಮಾಡಿದ ನಂತರ ಭೇಟಿಯಿತ್ತರಂತೆ ಗಾಂಧೀಜಿ. ಜಾತ್ಯತೀತ ಜಾತ್ರೆ ಜಾತ್ರೆ ವಿಧಿವಿಧಾನಗಳಲ್ಲಿ ಸರ್ವ ಜಾತಿಯವರಿಗೂ ಪ್ರಾತಿನಿಧ್ಯವಿದೆ. ಶಿರಸಿಯ ನಾಡಿಗರ ಗಲ್ಲಿಯಲ್ಲಿರುವ ನಾಡಿಗರ ಮನೆಯವರು ಮಾರಿಕಾಂಬೆಯ ತವರು ಮನೆಯ ಪಾತ್ರ ವಹಿಸುತ್ತಾರೆ. ಸರ್ವಾಭರಣ ಭೂಷಿತೆ ಮಾರಿಕಾಂಬೆಗೆ ಮಾಂಗಲ್ಯ ಧಾರಣ ನಡೆಯುತ್ತಿದ್ದಂತೆ ಲಂಬಾಣಿ ಮಹಿಳೆಯರು ಸೋಬಾನೆ ಹಾಡು ಹಾಡುತ್ತಾರೆ. ತವರು ಮನೆಯ ಕುಟುಂಬದವರ ಪ್ರಥಮ ಪೂಜೆ ಮುಗಿದ ನಂತರ ಚಕ್ರಸಾಲಿಗಳು, ಬಾಬುದಾರರು ಬೆಳಗಿನವರೆಗೆ ಪೂಜೆ ಮುಂದುವರೆಸುತ್ತಾರೆ. ಪೂಜಾರಿ ಕುಟುಂಬ, ಕಸಬೆಗೌಡರ ಕುಟುಂಬ,ಮಡಿವಾಳ, ಕಟ್ಟೀರ, ಕೇದಾರಿ, ಉಪ್ಪಾರರು, ಮೇಟಿಗಳು, ಕುರುಬರು, ಮೇಟಿಗಳು, ಮೇದಾರರು, ಮೆತ್ರಿಗಳು, ಜೋಗತಿಯವರು, ಆಸಾದಿಗಳು, ಉಗ್ರಾಣಿ ಕುಟುಂಬದವರು ಜಾತ್ರೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಜಾತ್ರೆಗಾಗಿ ದೇವಸ್ಥಾನದಿಂದ ಹೊರಬೀಳುವ ಮಾರಿಕಾಂಬೆ ಪುನಃ ದೇವಸ್ಥಾನ ಪ್ರವೇಶಿಸುವುದು ಯುಗಾದಿಯಂದು. ಅಲ್ಲಿಯವರೆಗೆ ದೇವಸ್ಥಾನದಲ್ಲಿ ಪೂಜಾಕೈಂಕರ್ಯಗಳಿಲ್ಲ. -ಚಿತ್ರ- ಲೇಖನ: ಎನ್.ಡಿ.ಹೆಗಡೆ ಆನಂದಪುರಂ