ಹಸಿರು ಪಾಠ ಈ ಶಾಲೆ ಮಕ್ಕಳ ಹಸಿರು ಪ್ರೇಮ ಬೆರಗು ಮೂಡಿಸುವಂಥದ್ದು. ಆಟ- ಪಾಠದ ಜತೆಗೆ ಪರಿಸರ ಪೋಷಿಸಿ... ಈ ಶಾಲೆ ಮಕ್ಕಳ ಹಸಿರು ಪ್ರೇಮ ಬೆರಗು ಮೂಡಿಸುವಂಥದ್ದು. ಆಟ- ಪಾಠದ ಜತೆಗೆ ಪರಿಸರ ಪೋಷಿಸಿ ಅದರ ಮಹತ್ವವನ್ನು ಇತರರಿಗೆ ತಿಳಿಸುತ್ತಿದ್ದಾರೆ. ಇಂಥದ್ದೊಂದು ಅಪರೂಪದ ಶಾಲೆ ಇರುವುದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ಕನ್ನನಾಯಕನಕಟ್ಟೆಯಲ್ಲಿ. ಅಲ್ಲಿನ ಸರ್ಕಾರಿ ಹಿರಿಯ ಪ್ರಾಛಮಿಕ ಶಾಲೆ ಇಂಥ ವಿಶಿಷ್ಟ ಕೆಲಸ ಮಾಡುತ್ತಿದೆ. ಪರಿಸರ ನೈರ್ಮಲ್ಯ, ನಂದನವನ, ಸಾವಯವ ಕೃಷಿ ಪಾಠ, ತ್ಯಾಜ್ಯ ವಿಲೇವಾರಿ, ಜತೆಗೆ ಕಲಿಕೆಯಲ್ಲಿ ಶಿಸ್ತು, ಕ್ರಮಬದ್ಧತೆ, ಸ್ವ- ಮೌಲ್ಯಮಾಪನ... ಹೀಗೆ ಹತ್ತು- ಹಲವು ವೈಶಿಷ್ಟ್ಯದಿಂದ ಶಾಲೆ ಗಮನ ಸೆಳೆಯುತ್ತದೆ. 70 ಜಾತಿಯ ಗಿಡ ಕನ್ನನಾಯಕನಕಟ್ಟೆ ಚಿಕ್ಕ- ಚೊಕ್ಕ ಗ್ರಾಮ. ಇಲ್ಲಿ ರೈತಾಪಿ ವರ್ಗವೇ ಹೆಚ್ಚು. ಇಲ್ಲಿನ ಸರ್ಕಾರಿ ಶಾಲೆಗೆ ಸುಮಾರು ಆರು ದಶಕದ ಇತಿಹಾಸ. ಆದರೆ, ಈ ಶಾಲೆಯ ಸೊಬಗು ಜಗತ್ತಿಗೆ ತೆರೆದುಕೊಂಡಿದ್ದು ಕಳೆದ ಎರಡು ದಶಕಗಳೀಚೆಗೆ. ಇಲ್ಲಿ ಹೂವು, ಹಣ್ಣು, ಔಷಧಿ ಸಸ್ಯಗಳು ಹಾಗೂ ಶೋ ಪ್ಲಾಂಟೇಷನ್ ಸಸಿಗಳು... ಹೀಗೆ 70ಕ್ಕೂ ಹೆಚ್ಚು ಜಾತಿಯ ನೂರಾರು ಮರ- ಗಿಡಗಳು ಈ ಸಸ್ಯಕಾಶಿಯಲ್ಲಿವೆ. ಹೀಗಾಗಿ ಈ ಶಾಲೆಗೆ ಮರ- ಗಿಡಗಳೇ ತೋರಣ. ಮಕ್ಕಳಿಗೆ ಕೃಷಿ ವಿವಿ ಇದು ಮಕ್ಕಳಿಗೆ ಕೃಷಿ ವಿಶ್ವವಿದ್ಯಾಲಯದಂತಿದೆ. ಮಕ್ಕಳು ಪಾಟಿ, ಪೆನ್ಸಿಲ್, ಪೆನ್ನಿನ ಜತೆಗೆ ಸಲಿಕೆ, ಗುದ್ದಲಿ ಹಿಡಿದು ಬೆವರು ಸುರಿಸಿ, ಮರ- ಗಿಡ ಬೆಳೆಸುತ್ತಾರೆ. ಪ್ರತಿ ಮಕ್ಕಳಿಗೆ ಅವರ ಶಕ್ತಾನುಸಾರ ಗಿಡಗಳ ದೇಕರೇಖಿ ವಹಿಸಿಕೊಳ್ಳುತ್ತಾರೆ. ಬಿಸಿಯೂಟಕ್ಕೆ ತಾಜಾ ಸೊಪ್ಪು, ತರಕಾರಿ ಬೆಳೆಯುತ್ತಾರೆ. ಮರ- ಗಿಡಗಳಿಗೆ ಹನಿ ನಿರಾವರಿ ವ್ಯವಸ್ಥೆ, ಇಂಗು ಗುಂಡಿಗಳ ನಿರ್ಮಾಣ, ಮಳೆ ನೀರು ಕೊಯ್ಲು ಮಾಡುವ ಮೂಲಕ ಜೀವಜಲ ಸಂರಕ್ಷಣೆಗೆ ಕಟಿಬದ್ಧರಾಗಿದ್ದಾರೆ. ಇನ್ನು ಮಣ್ಣು ಸವಕಳಿ ತಡೆಗೆ ಕೈತೋಟದ ನಡುವೆ ಬದುಗಳ ನಿರ್ಮಾಣ, ಕಸ ವಿಲೇವಾರಿಗೆ ತೊಟ್ಟಿ ನಿರ್ಮಿಸಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ನುಡಿಮುತ್ತುಗಳ ಫಲಕಗಳನ್ನು ಅಲ್ಲಲ್ಲಿ ನೇತು ಹಾಕಿ ಶಾಲೆಗೆ ಭೇಟಿ ನೀಡುವವರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಗೊಬ್ಬರ ತಯಾರಿಕೆ ಮರ- ಗಿಡಗಳ ತರಗೆಲೆ, ಬಿಸಿಯೂಟದ ತ್ಯಾಜ್ಯದಿಂದ ಎರೆಹುಳ ಗೊಬ್ಬರ ತಯಾರಿಸಿ, ಗಿಡಗಳ ಬುಡಕ್ಕೆ ಇಡುತ್ತಾರೆ. ಮಕ್ಕಳೇ ಗ್ರಾಮಸ್ಥರಲ್ಲಿ ಸಾವಯವ ಕೃಷಿ, ಪ್ರಕೃತಿಯ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ಜಾಥಾ ಹಮ್ಮಿಕೊಳ್ಳುತ್ತಾರೆ. ಜಿಲ್ಲಾ ಮಟ್ಟದ ಸಾವಯವ ಗ್ರಾಮದ ರೈತರ ಅನುಭವ ಹಂಚಿಕೆ ಕಾರ್ಯಕ್ರಮದಲ್ಲಿ ಸಾವಯವ ಗೊಬ್ಬರದ ಉಪಯುಕ್ತತೆ ಬಗ್ಗೆ ಪ್ರಬುದ್ಧವಾಗಿ ಮಾತನಾಡಿ ಪರಿಸರ, ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ. ಶಿಕ್ಷಕರ ಸಾಥ್ ಶಾಲಾ ಶಿಕ್ಷಕರೂ ಮಕ್ಕಳಿಗೆ ಸಾಥ್ ನೀಡುತ್ತಿದ್ದು, ಜವಾಬ್ದಾರಿ ಹಂಚಿಕೆ ಮಾಡುತ್ತಾರೆ. ಮುಖ್ಯ ಗುರುಗಳಾದ ಎಚ್.ಎಂ. ಗುರುಬಸವರಾಜ್ ಅವರು ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಸಹ ಶಿಕ್ಷಕರಾದ ಕೆ. ಎಸ್. ಮಂಜುನಾಥ್, ಬಿ. ಶಿವಪುತ್ರಗೌಡ, ಕೆ. ಬಸವರಾಜ್, ಬಿ. ಹೇಮಣ್ಣ, ಕೆ. ರುದ್ರಾಚಾರಿ, ಪಿ. ರಹಿಮಾನ್ ಸಾಹೇಬ್ ಅವರೂ ಶ್ರದ್ಧೆ ವಹಿಸಿ ಕೆಲಸ ಮಾಡುತ್ತಾರೆ. ಸಮುದಾಯ ಸಹಭಾಗಿತ್ವ ಶಿಕ್ಷಕ ವೃಂದ, ಎಸ್‌ಡಿಎಂಸಿ, ಸಮುದಾಯದ ಪರಿಸರ ಪ್ರಜ್ಞೆ, ಸಹಭಾಗ್ವಿತ, ನೈತಿಕತೆ, ಮಕ್ಕಳ ನಿರಂತರ ಶ್ರಮ, ಇಚ್ಛಾಶಕ್ತಿಯ ಒಟ್ಟು ಫಲಿತಾಂಶ ಈ ಶಾಲಾ ಕೈತೋಟ. ಸರ್ಕಾರಿ ಶಾಲೆಯನ್ನು ಸರ್ಕಾರವೇ ನೋಡಲಿ ಎನ್ನುವ ಮನಸ್ಥಿತಿ ಗ್ರಾಮಸ್ಥರಿಗಿಲ್ಲ. ಬದಲಾಗಿ ಸ್ವಯಂಪ್ರೇರಿತರಾಗಿ ಲಕ್ಷಗಟ್ಟಲೆ ದೇಣಿಗೆ ನೀಡಿ ಮಕ್ಕಳ ಕಲಿಕೆಗೆ ಬೇಕಾದ ಸೌಕರ್ಯ ಒದಗಿಸಿ, ಔದಾರ್ಯ ಮೆರೆಯುತ್ತಾರೆ. ಅದರಲ್ಲೂ ಶಾಲೆಯ ಕೈತೋಟವನ್ನು ಗ್ರಾಮಸ್ಥರು ನಮ್ಮದು ಎಂಬ ಭಾವದಿಂದ ನೋಡುತ್ತಿದ್ದಾರೆ. ಇದು ಶಾಲೆಯ ಪರಿಸರಕ್ಕೆ ಶ್ರೀರಕ್ಷೆ. ಹೀಗಾಗಿ ಈ ವನದ ಫಲಕ್ಕೆ ಅನ್ಯರು ಕೈ ಹಾಕುವುದಿಲ್ಲ. ಕೈತೋಟದ ಫಲಾನುಭವಿಗಳು ಈ ಮಕ್ಕಳೇ. ಇನ್ನು ಪ್ರತಿವರ್ಷ ಹುಣಸೆ, ಬೇವಿನ ಬೀಜ ಇತ್ಯಾದಿಗಳನ್ನು ಹರಾಜು ಹಾಕಿ, ಬಂದ ಹಣವನ್ನು ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸುತ್ತಾರೆ. ಅಜೀಂ ಪ್ರೇಮ್‌ಜಿ ಪ್ರಶಸ್ತಿ ಮಕ್ಕಳು ಪರಿಸರ ಕಾಳಜಿಯ ಜೊತೆಗೆ ಕಲಿಕೆ, ಕ್ರೀಡೆಯಲ್ಲಿಯೂ ಮುಂದಿದ್ದಾರೆ. ಶಾಲೆಯ ಸರ್ವತೋಮುಖ ಅಭಿವೃದ್ಧಿ ಗುರುತಿಸಿ ಶಿಕ್ಷಣ ಇಲಾಖೆಯು 2002- 03ನೇ ಸಾಲಿನ ತಾಲೂಕಿನ ಅತ್ಯುತ್ತಮ ಶಾಲಾ ಪ್ರಶಸ್ತಿ, ಅಜೀಂ ಪ್ರೇಮ್‌ಜಿ ಫೌಂಡೇಷನ್ ಹಾಗೂ ಸರ್ಕಾರದ ಸಹಭಾಗಿತ್ವದ ಕಲಿಕಾ ಖಾತ್ರಿ ಯೋಜನೆಯಲ್ಲಿ ಎರಡು ಬಾರಿ 'ಎ', ಒಂದು ಬಾರಿ 'ಬಿ' ಗ್ರೇಡ್ ಪ್ರಶಸ್ತಿ, ನೈರ್ಮಲ್ಯ ಪ್ರಶಸ್ತಿ ಮತ್ತು ಪರಿಸರ ಮಿತ್ರ ಪ್ರಶಸ್ತಿಗೆ ಭಾಜನವಾಗಿದೆ. - ಸ್ವರೂಪಾನಂದ ಎಂ. ಕೊಟ್ಟೂರು