ಬನ್ನಿ ಬಾದಾಮಿ ಜಾತ್ರೆಗೆ ಬಾದಾಮಿ ಎಂದರೆ ನೆನಪಾಗುವುದು ಎರಡೇ. ಒಂದು ತಿನ್ನುವ ಬಾದಾಮಿ ಬನಶಂಕರಿ ಮತ್ತು ಶಿಲ್ಪಕಲಾ ವೈಭವ. ದೇಶದ ಶಕ್ತಿಪೀಠಗಳಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಬನಶಂಕರಿ ದೇವಿಯ ಕ್ಷೇತ್ರವೂ ಒಂದು. ಪುಷ್ಯ ಮಾಸ ಕಾಲಿಡುತ್ತಿದ್ದಂತೆ ಅಲ್ಲಿ ಜಾತ್ರೆಯ ಸಡಗರ. ಒಂದು ತಿಂಗಳು ನಡೆಯುವ ಜಾತ್ರೆಗೆ ರಾಜ್ಯದ ಅತಿ ದೊಡ್ಡ ಜಾತ್ರೆ ಎನ್ನುವ ಹಿರಿಮೆ. ಗೋಪುರದಲ್ಲಿ ವಿಗ್ರಹವಿಲ್ಲ! ದೇವಸ್ಥಾನದ ಶಿಖರವು ಚೌಕ ಕೋನಾಕಾರದಲ್ಲಿ ಹಂತಹಂತವಾಗಿ ಮೇಲೇರುತ್ತಾ ಹೋಗಿದೆ. ಈ ಗೋಪುರದಲ್ಲಿ ನಾವು ಯಾವ ವಿಗ್ರಹವನ್ನೂ ಕಾಣುವುದಿಲ್ಲ. ನಾಲ್ಕು ದಿಕ್ಕಿನಲ್ಲೂ ದ್ವಾರಗಳು, ನಾಲ್ಕು ದೀಪ ಸ್ತಂಭಗಳಿವೆ. ದೇವಾಲಯದ ಅಕ್ಕಪಕ್ಕದಲ್ಲಿ ಪರಿವಾರ ದೇವತೆಗಳ ಗುಡಿಗಳಿವೆ. ಈಗಲೂ ಕಾರ್ತೀಕ ಮಾಸದಲ್ಲಿ ಈ ದೀಪಸ್ತಂಭಗಳಲ್ಲಿ ಭಕ್ತಾದಿಗಳು ದೀಪವನ್ನು ಬೆಳಗಿಸುತ್ತಾರೆ. ಈಗಿರುವ ದೇವಾಲಯದ ಕಟ್ಟಡವು ಯಾವ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನುವ ಬಗ್ಗೆ ನಿರ್ದಿಷ್ಟ ದಾಖಲೆಗಳಿಲ್ಲ. 1500 ವರ್ಷಗಳ ಹಿಂದಿನದು ಎಂದು ಭಾವಿಸಬಹುದು. ಹಳೆಯ ಬನಶಂಕರಿ ದೇವಾಲಯದ ಗರ್ಭ ಗೃಹವು ಮಣ್ಣಿನಲ್ಲಿ ಹೂತುಹೋಗಿದೆ. ಈಗಿರುವ ದೇವಿಯ ಪೀಠದಲ್ಲಿ ಶಾಲಿವಾಹನ ಶಕ 603 ಎಂದು ಬರೆದಿರುವುದು ಕಾಣುತ್ತದೆ ಮತ್ತು ಈ ಪೀಠದಲ್ಲಿಯೇ 'ಪರಶುರಾಮ ಆನಗಳ' ಎಂಬುವವರ ಹೆಸರು ಸಹ ಇದೆ. ಬನಶಂಕರಿ ದೇವಿಯ ವಿಗ್ರಹವು ಐದು ಅಡಿ ಉದ್ದ ಇದ್ದು ಕಪ್ಪು ಶಿಲೆಯಲ್ಲಿ ಸುಂದರವಾದ ಸಿಂಹರೂಪಿಣಿಯಾಗಿ ನೆಲೆಸಿರುವಳು. ದೇವಿ ತ್ರಿನೇತ್ರೆ, ಅಷ್ಟಭುಜೆ. ಬಲಗೈಯಲ್ಲಿ ಖಡ್ಗ, ಘಂಟೆ, ತ್ರಿಶೂಲ, ಲಿಪಿ; ಎಡಗೈನಲ್ಲಿ ಢಮರು, ಹಾಲು, ರುಂಡ ಮತ್ತು ಅಮೃತ ಪಾತ್ರೆಗಳು. ಇವಳನ್ನು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಎಂತಲೂ ಕರೆಯವರು. ಬಲಗೈಯು ಸಜ್ಞಾನದ ಸಂಕೇತ ಮತ್ತು ಎಡಗೈಯು ಶೌರ್ಯದ ಸಂಕೇತವಾಗಿದೆ. ಬನದ ಹುಣ್ಣಿಮೆ ಪ್ರತಿ ವರ್ಷ ಬನಶಂಕರಿದೇವಿಯ ಜಾತ್ರೆ ಬರುವುದು ಪುಷ್ಯ ಮಾಸದ ಹುಣ್ಣಿಮೆಯ ದಿನ (ಈ ವರ್ಷ ಜನವರಿ 16). ಆ ದಿನವನ್ನು ಬನದ ಹುಣ್ಣಿಮೆ ಎನ್ನುವರು. ಉತ್ಸವ ಶುರುವಾಗುವುದು ಪುಷ್ಯ ಶುಕ್ಲ ಅಷ್ಟಮಿಯಂದು. ಅಂದು ಅಷ್ಟಭುಜಗಳಾದ, ಅಷ್ಟಸಿದ್ಧಿ ಕೊಡುವ ದೇವಿಯನ್ನು ಭಕ್ತಿಯಿಂದ ಪೂಜಿಸಿ ಘಟಸ್ಥಾಪನೆ ನೆರವೇರಿಸಲಾಗುತ್ತದೆ. ಚತುರ್ದಶಿಯಂದು 108 ತರಕಾರಿಗಳ ಪಲ್ಯವನ್ನು ಮಾಡಿ ದೇವಿಗೆ ನೈವೇದ್ಯವನ್ನು ಮಾಡುವರು. ಆ ದಿನವನ್ನು ಪಲ್ಯದ ಹಬ್ಬ ಎಂದು ಕರೆಯುವರು. ಬನದ ಹುಣ್ಣಿಮೆಯಂದು ರಥೋತ್ಸವ ನಡೆಯುವುದು. ನೆರೆ ರಾಜ್ಯಗಳಿಂದಲೂ ಆಗಮಿಸುವ ಭಕ್ತರು ಜಾತಿ, ಮತ, ಭೇದ ಮರೆತು, ಮೇಲು ಕೀಳೆಂಬುದನ್ನು ಬಿಟ್ಟು ಭಾವಪರವಶದಲ್ಲಿ ಜಯಘೋಷ ಹಾಕುತ್ತಾ ರಥ ಎಳೆಯುವರು. ಈ ಸಮಯದಲ್ಲಿ ಭಕ್ತರುಗಳು 'ಬಾದಾಮಿ ಬನಶಂಕರಿ ನಿನ್ನ ಪಾದಕಶಂಭೂಕೋ' ಎಂದು ಘೋಷವನ್ನು ಹಾಕುವರು. ಜಾತ್ರೆಯ ದಿನ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಸೇರುತ್ತಾರೆ. ರಥೋತ್ಸವ ಆಗಿ ಐದನೇ ದಿನದಂದು ಕಳಸ ಇಳುವ ಕಾರ್ಯಕ್ರಮದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಮುಗಿಯುವುದು. 'ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡಿ ಬಾದಾಮಿ ಬನಶಂಕರಿಯ ಜಾತ್ರೆಯನ್ನು' ಎಂದು ಇಲ್ಲಿನ ಹಿರಿಯ ವ್ಯಕ್ತಿಗಳು ಹೇಳುತ್ತಾರೆ. ಬನಸಿರಿ ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಬಾದಾಮಿಯು ಅವರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇವರು ಬನಶಂಕರಿ ದೇವಿಯನ್ನು ತಮ್ಮ ಆರಾಧ್ಯ ದೇವತೆ ಮತ್ತು ಕುಲದೇವತೆಯಾಗಿ ಮಾಡಿಕೊಂಡಿದ್ದರು. ಅಗಸ್ತ್ಯ ಋಷಿಗಳು ಬನಶಂಕರಿಯನ್ನು ಬನಸಿರಿದೇವಿ ಎಂದು ಕರೆದಿದ್ದಾರೆ. 'ಬನ' ಎಂದರೆ ಅರಣ್ಯ, 'ಸಿರಿ' ಎಂದರೆ ಸಂಪತ್ತು. ರೊಟ್ಟಿ ಪಲ್ಯ ತಿನ್ನಿ ಬಾದಾಮಿ ಬನಶಂಕರಿ ಗುಡಿಗೆ ಹೋದಾಗ ಮೊದಲು ನಮಗೆ ದರ್ಶನವಾಗುವುದು ರಸ್ತೆ ಬದಿಯಲ್ಲಿ ರೊಟ್ಟಿ, ಪಲ್ಯ, ಮೊಸರು ಇಟ್ಟುಕೊಂಡು ವ್ಯಾಪಾರ ಮಾಡುವ ಮಹಿಳೆಯರು. ಜಾತ್ರೆ ಸಮಯದಲ್ಲಿ ದೇವಿ ದರ್ಶನ ಮಾಡಿ ಸಿನಿಮಾ, ನಾಟಕ ನೋಡಿದರೆ ಜಾತ್ರೆ ಮುಗಿಯುವುದಿಲ್ಲ. ಇಲ್ಲಿನ ಪ್ರಸಿದ್ಧ ಜೋಳದ ರೊಟ್ಟಿ ಪಲ್ಯ, ಕೆನೆ ಮೊಸರು ಹಸಿಮೆಣಸಿನ ಚಟ್ನಿಯನ್ನು ಸವಿಯಬೇಕು. ಈ ರೊಟ್ಟಿ ಊಟದ ದರವೂ ಬಹಳ ಕಡಿಮೆ. ರೊಟ್ಟಿ ಮಾರುವ ಮಹಿಳೆಯರು ಜಾತ್ರೆ ಸಮಯದಲ್ಲಿ ಹಗಲು ರಾತ್ರಿ ಎನ್ನದೆ ತಿಂಗಳುಗಟ್ಟಲೆ ರೊಟ್ಟಿ ವ್ಯಾಪಾರ ಮಾಡಿ 7 ರಿಂದ 8 ಸಾವಿರ ರೂ. ಲಾಭ ಪಡೆಯುತ್ತಾರೆ! ಜಾತ್ರೆ ಸಮಯದಲ್ಲಿ ಕೆಲವು ಭಕ್ತರುಗಳು ಈ ರೊಟ್ಟಿಗಳನ್ನು ಖರೀದಿಸಿ ಅಲ್ಲಿನ ಭಿಕ್ಷುಕರಿಗೆ ಮತ್ತು ಅನಾಥರಿಗೆ ದಾನ ಮಾಡುತ್ತಾರೆ. ಹಾಗೆಯೇ ಜಾತ್ರೆಗೆ ಹೋದಾಗ ಬಾದಾಮಿ ಗುಹೆಗಳು, ಸುಮಾರು 11 ಎಕರೆಯಲ್ಲಿ ವ್ಯಾಪಿಸಿರುವ ಶಿಲ್ಪಕಲಾ ವೈಭವಗಳನ್ನು ನೋಡಲು ಮರೆಯಬೇಡಿ. -ಮಂಡಗದ್ದೆ ಪ್ರಕಾಶ್‌ಬಾಬು ಕೆ.ಆರ್.