ಜಾಲಿಕಟ್ಟೆ ಜಾತ್ರೆ ಬಿಜ್ಜಳನ ಆಳ್ವಿಕೆ. ಆತನ ಉಪಟಳ ತಾಳಲಾಗದೆ ಶರಣರ ದಂಡು ಸುರಕ್ಷಿತ ತಾಣಗಳನ್ನು ಅರಸಿ ಹೊರಟಿದೆ. ಅಂತಹ ಒಂದು ತಂಡ ಕೆಲಕಾಲ ಆಶ್ರಯ ಪಡೆದದ್ದು ಜಾಲಿಕಟ್ಟಿಯಲ್ಲಿ. ಅಲ್ಲಿಯೇ ಅಣ್ಣ ಬಸವಣ್ಣನ ಪ್ರತೀಕವಾಗಿ ಶರಣರು ನಂದಿ ವಿಗ್ರಹ ಪ್ರತಿಷ್ಠಾಪಿಸಿಕೊಂಡು ಪೂಜಿಸಿದರು. ಬಿಜ್ಜಳನ ಸೈನಿಕರು ಬರುತ್ತಿರುವ ಸೂಚನೆ ನೀಡಿದ್ದೂ ನಂದಿಯೇ. ಹೀಗಾಗಿ ಇದು ಶರಣರ ಪವಿತ್ರ ಕ್ಷೇತ್ರ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಜಾಲಿಕಟ್ಟೆ ಎನ್ನುವ ಗ್ರಾಮದ ಐತಿಹ್ಯ ಬಿಚ್ಚಿಕೊಳ್ಳುವುದು ಹೀಗೆ. ಮಡಿವಾಳ ಮಾಚಯ್ಯ ಮತ್ತಿತರ ಶರಣರು ಜಾಲಿಕಟ್ಟೆಯ ಬೆಟ್ಟ ಪ್ರದೇಶದಲ್ಲಿ ತಂಗಿದ್ದರಂತೆ. ಇಲ್ಲಿರುವ ಕಡಿದಾದ ಬೆಟ್ಟ, ಅಲ್ಲಿ ಬೆಳೆದು ನಿಂತ ಸಸ್ಯ ಸಂಕುಲ, ಸದಾ ಹರಿಯುವ ನೀರಿನ ಝರಿ ಶರಣರ ಇರುವಿಕೆಗೆ ಸೂಕ್ತವಾಗಿತ್ತು. ಇಂಥ ಸಂದರ್ಭದಲ್ಲಿ ಮಾಚಿದೇವನ ಅನುಚರರು 'ಬಸವೇಶ್ವರ'ರ ಸಂಕೇತವಾಗಿ 'ನಂದಿ'ಯನ್ನು ಪೂಜಿಸಿದರು. ಇಲ್ಲಿರುವ ಬೆಟ್ಟದಲ್ಲಿ ಬೆಳಗಿನ ಜಾವ ನಂದಿಯೊಂದು ಜೋರಾಗಿ ಕೂಗತೊಡಗಿತಂತೆ. ಎಂದೂ ಈ ರೀತಿ ಕೂಗದ ನಂದಿ ಈಗ ಕೂಗಲು ಕಾರಣ ಏನು ಎಂದು ಆ ಬೆಟ್ಟವನ್ನೇರಿ ನಂದಿ ಮುಖ ಮಾಡಿದ್ದ ಆ ದಿಕ್ಕಿನತ್ತ ನೋಡಿದಾಗ ಅಲ್ಲಿಂದ ಸುಮಾರು 25 ಕಿ.ಮೀ. ಅಂತರದ ಚುಂಚನೂರ ಗ್ರಾಮದ ಸ್ಥಳದಿಂದ ಕೆಂಧೂಳಿ ಕಾಣತೊಡಗಿತು. ಆ ಕೆಂಧೂಳಿ ಬಿಜ್ಜಳ ಅರಸರ ಸೈನಿಕರ ಕುದುರೆಗಳ ಕಾಲ್ತುಳಿತದಿಂದ ಎದ್ದು ಚಿಮ್ಮಿದ್ದು ಕಂಡ ಶರಣರು ದೇವತಾ ಸ್ವರೂಪಿ ಬಸವಣ್ಣನೇ ನಮಗೆ ಎಚ್ಚರಿಸಿದನೆಂದು ಆ ನಂದಿ ಕೂಗಿದ ಸ್ಥಳದಲ್ಲಿ 'ಕೂಗುವ ಬಸವಣ್ಣ' ದೇವಾಲಯ ಪ್ರತಿಷ್ಠಾಪನೆ ಮಾಡಿದರು. ನಂತರ ಶರಣರು ಕಾರೀಮನಿ, ಮುರಗೋಡ, ಬೈಲಹೊಂಗಲ ಮಾರ್ಗವಾಗಿ 'ಉಳವಿ' ಕ್ಷೇತ್ರದತ್ತ ಪಯಣಿಸಿದರು ಎಂಬುದು ಐತಿಹ್ಯ. ಇದನ್ನು ಪುಷ್ಟೀಕರಿಸುವಂತೆ ಮಾಚಯ್ಯನವರ ಸಮಾಧಿ ಸ್ಥಳ ಕೂಡ ಕಾರೀಮನಿ ಹತ್ತಿರವಿದೆ. ಇನ್ನೊಂದು ದೃಷ್ಟಾಂತವಿದೆ. ಜೇಡರು ತಮ್ಮ ಗದ್ದೆಗಳನ್ನು ಹಾಳು ಮಾಡಿ ಉಪಟಳ ನೀಡುತ್ತಿದ್ದ ಪ್ರಾಣಿಯನ್ನು ಕೊಂದು ಈ ಬೆಟ್ಟದಲ್ಲಿ ಗಿಡಗಂಟೆಗಳ ಮಧ್ಯದಲ್ಲಿ ಸುಟ್ಟು ಹೊರಟು ಹೋದರು. ಕಾಲ್ನಡಿಗೆಯಲ್ಲಿ ಮುಂಬೈಗೆ ಹೊರಟಿದ್ದ ಒಬ್ಬರಿಗೆ ಸುಟ್ಟಿರುವ ಬೂದಿಯಲ್ಲಿ ಪ್ರಾಣಿಯ ಬುರುಡೆ, ಎಲಬುಗಳು ಗೋಚರಿಸಿದವು. 'ದೇವರೇ, ಈ ಅಮಾಯಕ ಪ್ರಾಣಿಯಂತೆ ಇನ್ನಾವ ಪ್ರಾಣಿಗೂ ಇಂಥ ಘೋರ ಸಾವು ಈ ಸ್ಥಳದಲ್ಲಿ ಸಂಭವಿಸದಿರಲಿ. ಮಾಡದ ತಪ್ಪಿಗಾಗಿ ಆಪಾದಿತನಾಗಿರುವ ನಾನು ನಿನ್ನ ಅನುಗ್ರಹದಿಂದ ದೋಷಮುಕ್ತನಾದರೆ ಈ ಸ್ಥಳದಲ್ಲಿ ದೇವಾಲಯ ನಿರ್ಮಿಸುವೆ' ಎಂದುಕೊಂಡು ಮುಂಬೈಗೆ ತೆರಳಿದರಂತೆ. ಆ ವ್ಯಕ್ತಿ ನಿರ್ದೋಷಿ ಎಂದು ತೀರ್ಪು ಬಂದು ಆತ ಈ ಸ್ಥಳದಲ್ಲಿ ನಂದಿ ವಿಗ್ರಹದ ಬಸವಣ್ಣ ಮೂರ್ತಿ ಪ್ರತಿಷ್ಠಾಪಿಸಿದರು ಎನ್ನುವುದು ಆ ಕಥೆ. ನಂದಿ, ಅದರ ಎದುರಿಗೆ ಇರುವ ಈಶ್ವರ ಲಿಂಗ, ದೇವಾಲಯ ಆವರಣದಲ್ಲಿರುವ ಶಿವ-ಪಾರ್ವತಿ ದೇವಾಲಯ, ಶಿವಶರಣೆ ನೀಲಾಂಬಿಕಾ ದೇವಾಲಯ, ನೂರಾ ಹದಿನೇಳು ಮೆಟ್ಟಿಲುಗಳನ್ನೇರಿ ಬಂದರೆ ಬೆಟ್ಟದಲ್ಲಿರುವ ಪುಟ್ಟ 'ಕೂಗು ಬಸವಣ್ಣ' ದೇವಾಲಯ, ಸಸ್ಯಸಂಕುಲದಿಂದ ಗಮನ ಸಳೆಯುವ ಬೆಟ್ಟದ ಪ್ರಾಕೃತಿಕ ಸೌಂದರ್ಯ ಭಕ್ತ ಜನರ ಮನ ಸೂರೆಗೊಳ್ಳದಿರದು. ದೇವಾಲಯದ ವಿನ್ಯಾಸವೂ ಸುಂದರವಾಗಿದೆ. ಶಿಖರದವರೆಗೂ ಸುತ್ತಲೂ ಶರಣರ ಮೂರ್ತಿಗಳನ್ನು ನಿರ್ಮಿಸಲಾಗಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ಕಲ್ಯಾಣ ಮಂಟಪವಿದೆ. ಪಂಚಾಮೃತ ಅಭಿಷೇಕ, ದೀಡು ನಮಸ್ಕಾರ, ಜವುಳ ಇಳಿಸುವುದು ಇಲ್ಲಿ ನಡೆಯುವ ಪ್ರಮುಖ ಸೇವೆಗಳು. ವಿವಿಧ ಸೇವೆಗಳಿಗೆ 25 ರುಪಾಯಿಯಿಂದ 555 ರುಪಾಯಿ ಇದೆ. ಪ್ರತಿ ಅಮವಾಸ್ಯೆಯಂದು ಭಕ್ತ ಜನರಿಂದ ಅನ್ನ ಸಂತರ್ಪಣೆ, ಶಿವರಾತ್ರಿ ಸಂದರ್ಭದಲ್ಲಿ ಏಳು ದಿನಗಳ ಕಾಲ ಹಗಲು-ರಾತ್ರಿ 'ಓಂ ನಮಃ ಶಿವಾಯ' ಮಂತ್ರೋಚ್ಚಾರಣೆ ಜಾಲಿಕಟ್ಟೆ ಗ್ರಾಮಸ್ಥರಿಂದ ನಡೆಯುವುದು. ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಅನ್ನ ಸಂತರ್ಪಣೆ, ಶ್ರಾವಣ ಮಾಸದ ಕೊನೆಯ ಸೋಮವಾರದಂದು ವಿಜೃಂಭಣೆ ರಥೋತ್ಸವ ನಡೆಯುತ್ತದೆ. ಹೀಗೆ ಬನ್ನಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿದೆ ಜಾಲಿಕಟ್ಟೆ. ಸವದತ್ತಿಯಿಂದ 28 ಕಿ.ಮೀ., ಯರಗಟ್ಟಿ ಹಾಗೂ ಮುನವಳ್ಳಿಗಳಿಂದ 12 ಕಿ.ಮೀ. ಅಂತರ. ಸರ್ಕಾರಿ ಸಂಚಾರ ವಿರಳವಾಗಿದ್ದು, ಖಾಸಗಿ ವಾಹನಗಳು ನಿಯಮಿತವಾಗಿ ಸಂಚರಿಸುತ್ತಿರುತ್ತವೆ. - ವೈ.ಬಿ. ಕಡಕೋಳ