ಉಂಚಳ್ಳಿ ಮಿಂಚುಳ್ಳಿ ಜೋಗದಷ್ಟೇ ಅತ್ಯಾಕರ್ಷಕ ಜಲಪಾತವೊಂದು ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ಇದೆ. ಹೇಳಿಕೇಳಿ ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರೂರು. ಜೋಗ ಜಲಪಾತದಷ್ಟೇ ಅತ್ಯದ್ಭುತ, ಅತ್ಯಾಕರ್ಷಕ ಸೊಬಗಿನಿಂದ ಕೂಡಿರುವ ಜಲಪಾತವೊಂದು ಸಿದ್ದಾಪುರ ತಾಲೂಕಿನ ಹೆಗ್ಗರಣಿ ಬಳಿ ಇದೆ. ಸಹ್ಯಾದ್ರಿ ಬೆಟ್ಟದಲ್ಲಿರುವ ಈ ಫಾಲ್ ಮಳೆಗಾಲ, ಚಳಿಗಾಲದಲ್ಲಿ ಕಾಮನಬಿಲ್ಲಿನ ಅಪರೂಪದ ಕ್ಷಣಗಳನ್ನು ಆಗಾಗ ಸೃಷ್ಟಿಸುತ್ತದೆ. ದಟ್ಟಾರಣ್ಯದ ಹಸಿರು ಸೊಬಗು, ಹಕ್ಕಿಗಳ ಚಿಲಿಪಿಲಿ ನಿನಾದದ ಮಧ್ಯೆ ತಂಗಾಳಿ ಸೀಳಿ ಚಾರಣ ನಡೆಸಲೆಂದೇ ಚಾರಣಿಗರು ಈ ಫಾಲ್‌ನತ್ತ ಧಾವಿಸುವುದು ವಿಶೇಷ. ಹೆಗ್ಗರಣಿಯಿಂದ ಐದು ಕಿ.ಮೀ ಚಾರಣ ನಡಿಗೆ ಅತ್ಯದ್ಭುತಅನುಭವ ನೀಡುವಂಥದು. ಮಳೆಗಾಲ, ಚಳಿಗಾಲದಲ್ಲಂತೂ ಇಲ್ಲಿನ ಪಯಣ ಅತ್ಯಂತ ಮೋದ ತರುವುದು. ಬೆಳ್ಳಿ ಮೋಡದ ಮರೆಯಲ್ಲಿ ಸುಕನಸುಗಳಲ್ಲಿ ಮೈಮರೆತ ಗಂಧರ್ವ ಕನ್ಯೆಯ ಸೀರೆ ಸೆರಗು ಜಾರಿ ಬಿದ್ದಿದೆಯೇನೋ ಎಂಬಂತೆ ಬೆಳ್ಳಿಧಾರೆಗಳಿಂದ ಬಳುಕುವ ಜಲಧಾರೆ ಅಲ್ಲೇ ವಾಸ್ತವ್ಯ ಹೂಡಿಬಿಡಬೇಕೆಂಬ ಭಾವ ಸೃಷ್ಟಿಸುವಂಥ ಚೆಲುವಿನಂಥದು. ಧುಮ್ಮಿಕ್ಕುವ ಎಲ್ಲ ಜಲಪಾತಗಳೂ ಭೋರ್ಗರೆದು ಶಬ್ದ ಸೃಷ್ಟಿಸುತ್ತವೆ ನಿಜ. ಆದರೆ, ಉಂಚಳ್ಳಿಯದು ಅದಕ್ಕಿಂತ ಹೆಚ್ಚು. ಕಣಿವೆಗಳಲ್ಲಿ ಹಾದು ನೂರಾರು ಅಡಿಗಳಿಂತ ಪುನಃ ಪ್ರಪಾತಕ್ಕೆ ಬೀಳುವಾಗ ಏಳಿಸುವ ಶಬ್ಧ ಕಿವಿಗಡಚಿಕ್ಕುತ್ತದೆ, ಕಿವಿಗಳನ್ನು ಮುಚ್ಚಿಕೊಳ್ಳುವಷ್ಟು. ಇದರ ಪರಿಣಾಮವೇ ಈ ಫಾಲ್‌ಗೆ ಹೀಗೂ ಕರೆಯಲಾಗುತ್ತದೆ 'ಕೆಪ್ಪ ಜೋಗ'. ಲಷಿಂಗ್ಟನ್ ಎಂದೂ ಕರೆಯಲಾಗುವ ಜಲಧಾರೆ ಸುಮಾರು 116 ಮೀಟರ್ (381 ಅಡಿ) ಎತ್ತರದಿಂದ ಧುಮ್ಮಿಕ್ಕುವ ಅಘನಾಶಿನಿ ನದಿಯ ಬಳುವಳಿ. ಬ್ರಿಟಿಷ್ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿದ್ದ ಜೆ.ಡಿ. ಲಷಿಂಗ್ಟನ್ 1845ರಲ್ಲಿ ಪತ್ತೆಹಚ್ಚಿದ ಇತಿಹಾಸ ಈ ಫಾಲ್‌ನದ್ದು. ಅಕ್ಟೋಬರ್‌ನಿಂದ ಫೆಬ್ರವರಿ ಅವಧಿ ಭೇಟಿಗೆ ಸೂಕ್ತ ಸಮಯ. ಏಕೆಂದರೆ, ಮಳೆಗಾಲದಲ್ಲಿ ಈ ಫಾಲ್ ಹೆಚ್ಚು ಭೋರ್ಗರೆಯುತ್ತದೆ. ಚಾರಣ ವೇಳೆ ಕೆಲ ದುರ್ಗಮ ಹಾದಿಗಳಲ್ಲಿ ಕ್ರಮಿಸುವುದು ಕಷ್ಟವಾಗಬಹುದು. ದಾರಿಯುದ್ದಕ್ಕೂ ಸ್ಥಳೀಯರು ಸಿಗುವುದರಿಂದ ಮಾಹಿತಿ ಪಡೆದು ಅಬ್ಬಿ ಸಮೀಪಿಸಬಹುದು. ಬೇಸಿಗೆ ಕಾಲದಲ್ಲಿ ಫಾಲ್ಸ್ ಧುಮ್ಮಿಕ್ಕುವ ಬಂಡೆಗಳ ರಾಶಿಯನ್ನು ಏರುವ ಸಾಹಸ ಕೆಲವರು ಮಾಡುತ್ತಾರೆ. ಕಾಲು ಜಾರಿದರೆ ಸೀದಾ ಫಾಲ್ ಬುಡಕ್ಕೆ. ಆದ್ದರಿಂದ ಇಂಥ ಸಾಹಸ ಮಾಡದಿರುವುದು ಒಳ್ಳೆಯದು. ಜಲಪಾತನ್ನು ನೋಡಲು ಸೂಕ್ತ ಮೆಟ್ಟಿಲುಗಳು ಹಾಗೂ ವೀಕ್ಷಣಾ ಗೋಪುರದ ವ್ಯವಸ್ಥೆ ಇದೆ. ಫಾಲ್ಸ್‌ಗೆ ತೆರಳುವ ಮಾರ್ಗ ಮಧ್ಯೆ ಅಣಬೆ ಆಕಾರದಲ್ಲಿ ನಿರ್ಮಿಸಿರುವ ಗೋಪುರಗಳಲ್ಲಿ ನಿಂತು ಅಬ್ಬಿ ವೀಕ್ಷಿಸುವುದು ಮಜವೋ ಮಜಾ. ಈ ಫಾಲ್‌ಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಪ್ರವಾಸಿ ಇಲಾಖೆಯ ಗೇಟ್‌ನಿಂದ 500 ಮೀಟರ್ ಕಾಡು ಮಧ್ಯೆಯ ಕಚ್ಚಾ ರಸ್ತೆಯಲ್ಲಿ ಸಾಗಿದರೆ ಉಂಚಳ್ಳಿ ಫಾಲ್‌ನ ಆರ್ಭಟದ ನೈಜದರ್ಶನವಾಗಬಲ್ಲದು. ಹೀಗೆ ಬನ್ನಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ 35 ಕಿ.ಮೀ., ಕುಮಟಾದಿಂದ 70 ಕಿ.ಮೀ., ಶಿರಸಿಯಿಂದ 25 ಕಿ.ಮೀ., ಬೆಂಗಳೂರಿನಿಂದ 425 ಕಿ.ಮೀ. ದೂರದಲ್ಲಿ ಈ ಫಾಲ್ ಇದೆ. ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿ. ರೇಲ್ವೆ ಯಾನವಾದರೆ ತಾಳಗುಪ್ಪ, ಕುಮಟಾ, ಹುಬ್ಬಳ್ಳಿ ಸಮೀಪದ ನಿಲ್ದಾಣಗಳು. ರಸ್ತೆ ಮಾರ್ಗದಲ್ಲಿ ಬರುವವರು ಕುಮಟಾ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಅಮ್ಮಿನಳ್ಳಿ ಬಳಿ ಹೆಗ್ಗರಣಿಗೆ ಹೋಗುವ ಮಾರ್ಗದಲ್ಲಿ ತಿರುವು ಪಡೆಯಬಹುದು. ಅಥವಾ ಹೆಗ್ಗರಣಿಗೆ ನೇರವಾಗಿ ತೆರಳಲು ಬಸ್ ವ್ಯವಸ್ಥೆಯೂ ಇರುವುದರಿಂದ ಪ್ರವಾಸಿಗರು ಹೆಚ್ಚು ಆಯಾಸ ಪಡುವ ಅಗತ್ಯವಿಲ್ಲ. ಹೆಗ್ಗರಣಿಯಿಂದ ಐದಾರು ಕಿ.ಮೀ. ದೂರವಿರುವ ಫಾಲ್ಸಿಗೆ ತೆರಳಲು ಖಾಸಗಿ ಜೀಪು, ಬೈಕ್ ಮತ್ತಿತರ ವಾಹನಗಳ ಸೌಲಭ್ಯ ಇದೆ. ಹಸಿವು ನೀಗಿಸಿಕೊಳ್ಳಲು ಬೇಕಾದ ತಿಂಡಿ, ತಿನಿಸು, ಊಟದ ವ್ಯವಸ್ಥೆಯನ್ನು ಹೆಗ್ಗರಣಿಯಲ್ಲೇ ಮಾಡಿಕೊಳ್ಳಬೇಕು. ಫಾಲ್ಸ್ ಸಮೀಪ ಸಣ್ಣಪುಟ್ಟ ಗೂಡಂಗಡಿ ಬಿಟ್ಟರೆ ಕ್ಯಾಂಟೀನ್, ಹೋಟೆಲ್‌ಗಳಿಲ್ಲ. ಅಂದಹಾಗೆ, ಇಲ್ಲಿನ ಸಂಚಾರಕ್ಕೆ ಜೀಪ್ ಹೆಚ್ಚು ಸೂಕ್ತವಾಗಬಹುದು. ಪ್ರವಾಸಿಗರು ಶಿರಸಿಯಲ್ಲಿ ಉಳಿಯಲು ವ್ಯವಸ್ಥೆ ಇದೆ. ಚಿತ್ರ-ಲೇಖನ: ಚಂದ್ರಹಾಸ ಚಾರ್ಮಾಡಿ