ಅಲ್ಲಾ ಶರಣು! 'ದೇವನೂಬ್ಬ ನಾಮ ಹಲವು' ಎಂಬಂತೆ ಬೀದರ್ ನಗರಕ್ಕೆ ಸಮೀಪದ ಅಷ್ಟೂರ ಗ್ರಾಮದ ಅಹ್ಮದ ಶಾ ಅಲಿ ವಲಿ ಬಹಮನಿ ದರ್ಗಾದ ಗುಂಬಜ್‌ಗಳು ಹಿಂದೂ ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕಗಳಾಗಿವೆ. ಈ ದರ್ಗಾದಲ್ಲಿ ಮುಸ್ಲಿಂಮರಿಗೆ ಅಹ್ಮದ ಶಾ ಅಲಿ ವಲಿ ಆರಾಧ್ಯ ದೈವವಾದರೆ, ಹಿಂದುಗಳಿಗೆ ಅಲ್ಲಮಪ್ರಭುವಾಗಿ ಪೂಜೆ ಪಡೆಯುವುದು ವಿಶೇಷ. ಹಿಂದು ಮುಸ್ಲಿಂ ಭಾವೈಕ್ಯದಲ್ಲಿ ನಂಬಿಕೆಯಿಟ್ಟಿದ್ದ ಅಹ್ಮದ್ ಶಾ ಅಲಿ ಬಹಮನಿ ಅವರ ಜನ್ಮದಿನ ನಿಮಿತ್ತ ಗೋರಿಯ ಗುಂಬಜ್‌ಗೆ ತೆರಳುವ ಸಾವಿರಾರು ಜನರು ಭಕ್ತಿ ಸಮರ್ಪಣೆ ಮಾಡುವುದು ಹಲವು ಶತಮಾನಗಳಿಂದ ನಡೆದು ಬಂದಿದೆ. ಅಷ್ಟೂರಿನ ಅಲ್ಲಮಪ್ರಭು ದೇವರು ಜಗತ್ತಿಗೆ ಸಹೋದರತೆ, ಸಮಾನತೆಯೊಂದಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹದಂತಹ ಮಹಾನ್ ತತ್ವಗಳನ್ನು ಸಾರಿರುವ ಶರಣ. ಅವರ ಸ್ಮರಣೆಯಲ್ಲೇ ಪ್ರತಿವರ್ಷ ಜಾತ್ರೆ ನೆರವೇರುತ್ತದೆ. ರಾಜ್ಯ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಸಾವಿರಾರು ಯಾತ್ರಾರ್ಥಿಗಳು, ಪ್ರವಾಸಿಗರು ನಿತ್ಯ ಇಲ್ಲಿಗೆ ಆಗಮಿಸಿ ದರ್ಗಾಕ್ಕೆ ಹೂವಿನ ಚಾದರ್ ಸಮರ್ಪಿಸುತ್ತಾರೆ. ಅಗರಬತ್ತಿ ಹಚ್ಚಿ ಪೂಚಿಸಿ, ಪ್ರಾರ್ಥಿಸಿ ಅಹ್ಮದ್ ಶಾಹ್‌ಗೆ ನಮಿಸುತ್ತಾರೆ. ಇಲ್ಲಿ ಹಿಂದುಗಳು ಅಲ್ಲಮಪ್ರಭು ಗುಡಿ ಎಂದೂ, ಮುಸ್ಲಿಮರು ವಲಿ ದರ್ಗಾ ಎಂದೂ ಪರಿಗಣಿಸುವ ಅಹ್ಮದ್ ಶಾಹ್‌ನ ಸಮಾಧಿಯು ಅಪರೂಪದ ಭಾವೈಕ್ಯತೆಯ ತಾಣಗಳಲ್ಲೊಂದು. ಅಲ್ಲಮಪ್ರಭು ಮಹಾರಾಜರೇ ಸಾನ್ನಿಧ್ಯ ಅಷ್ಟಕ್ಕೂ ಈ ದರ್ಗಾದ ಜಾತ್ರೆಗೆ ಚಾಲನೆ ನೀಡುವವರು ಪಕ್ಕದ ಗುಲ್ಬರ್ಗ ಜಿಲ್ಲೆಯ ಮಾಡಿಹಾಳ್ ಮತ್ತು ಆಳಂದನ ಅಲ್ಲಮಪ್ರಭು ಮಹಾರಾಜರೆಂದೇ ಗುರುತಿಸಿಕೊಳ್ಳುವ ಗುರುಗಳು. ಪ್ರತಿ ವರ್ಷ ಹೋಳಿ ಹಬ್ಬದ ನಂತರ ನಡೆಯುವ ಜಾತ್ರೆಯ ಸಂದರ್ಭ ಕಾಲ್ನಡಿಗೆಯಲ್ಲಿಯೇ ಆಗಮಿಸುವ ಗುರುಗಳು ದರ್ಗಾ ಮುಂದೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡುತ್ತಾರೆ. ಮೂರ್ನಾಲ್ಕು ದಿನಗಳವರೆಗೆ ನಡೆಯುವ ಈ ಜಾತ್ರೆಯ ಸಂದರ್ಭ ಪಟಾಕಿ ಸಿಡಿಸುವುದು ಮತ್ತು ಅಂತರರಾಜ್ಯ ಕುಸ್ತಿ ಸ್ಪರ್ಧೆ ಏರ್ಪಡಿಸುವದು ತಲೆತಲಾಂತರಗಳಿಂದ ನಡೆದು ಬಂದ ಸಂಸ್ಕೃತಿ. ದರ್ಗಾ ಮುಂದೆ ಭಕ್ತರು ಎಣ್ಣೆ ದೀಪ ಹಚ್ಚಿ ಭಕ್ತಿ ಸಮರ್ಪಿಸುತ್ತಾರೆ. ಬೀದರ್‌ನಿಂದ 3 ಕಿಮೀ ದೂರದ ಅಷ್ಟೂರು ಗ್ರಾಮ ಪ್ರವೇಶಿಸುವ ಮುನ್ನವೇ ಬಹಮನಿ ಅರಸರ ಗೋರಿಗಳ ಸಾಲು ನೋಡಲು ಸಿಗುತ್ತದೆ. ಇಲ್ಲಿ ಅಲ್ಲಾವುದ್ದಿನ್ ಗೋರಿ, ಸಿಡಿಲ ಹೊಡೆತಕ್ಕೆ ಸಿಲುಕಿ ಅರ್ಧ ಕುಸಿದಿರುವ ಹುಮಾಯೂನ್ ಸಮಾಧಿ, ಅದರ ಪಕ್ಕದಲ್ಲಿಯೇ ಇರುವ ಮಕ್ದುಮ್ ಏ ಜಹಾನ್, ನರ್ಗಿಸ್ ಬೇಗಂ, ನಿಜಾಮ್ ಶಾಹ, ಮಹಮೂದ ಶಾಹ ಬಹಮನಿ, ಮೊಹಮ್ಮದ ಶಾ ಬಹಮನಿ, ಅಹಮದ್ ಶಾ ಬಹಮನಿ, ಅಲ್ಲಾಮುದ್ದೀನ್ ಶಾಹ ಬಹಮನಿ, ವಲಿವುಲ್ಲಾ ಶಾಹ ಬಹಮನಿ, ಖಲೀಮಲ್ಲಾ ಶಾಹ ಬಹಮನಿ ಗೋರಿಗಳಿವೆ. ಅಹಮದ್ ಶಾಹ್‌ನ ಈ ಗೋರಿ ಮೇಲ್ಭಾಗದಲ್ಲಿ ಅಂದರೆ ಗುಂಬಜಿನ ಒಳಭಾಗದಲ್ಲಿ ಚಿನ್ನದ ಲೇಪನ ಹಾಗೂ ವೈವಿಧ್ಯಮಯ ಬಣ್ಣ ಬಳಸಿದ್ದು ಆಕರ್ಷಕವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ. ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ವ್ಯಾಪ್ತಿಗೆ ಈ ಗುಂಬಜ್‌ಗಳು ಬರುತ್ತಿದ್ದು ಪ್ರವಾಸಿ ತಾಣಗಳನ್ನಾಗಿಸುವುದಷ್ಟೇ ಇಲ್ಲಿ ಪುರಾತನ ಸ್ಮಾರಕ ಸ್ಥಳಗಳನ್ನು ಸಂರಕ್ಷಿಸುವತ್ತಲೂ ವಿಶೇಷ ಆಸಕ್ತಿ ವಹಿಸಲಾಗುತ್ತಿದೆ. ಹೀಗೆಬನ್ನಿ ಬೀದರ್‌ನಿಂದ 3 ಕಿ.ಮೀ. ದೂರದಲ್ಲಿದೆ ಅಷ್ಟೂರು ಗುಂಬಜ್‌ಗಳ ಪ್ರದೇಶ. ಕೇಂದ್ರ ಬಸ್ ನಿಲ್ದಾಣದಿಂದ ಆಟೋ ರಿಕ್ಷಾಗಳು ಲಭ್ಯ. ಬೀದರ್ ಕೋಟೆ ವೀಕ್ಷಣೆಗೆ ಬಂದವರು ಅಲ್ಲಿಂದಲೇ ಆಟೋ ಸೌಲಭ್ಯ ಪಡೆದು ಅಷ್ಟೂರಿಗೆ ತೆರಳಬಹುದು. ಹೈದ್ರಾಬಾದ್‌ನಿಂದ ಬೀದರ್ 115 ಕಿಮೀ. ದೂರವಿದೆ. ರಾಷ್ಟ್ರೀಯ ಹೆದ್ದಾರಿ 9ರ ಮಾರ್ಗವಾಗಿ ಬೀದರ್‌ಗೆ ಬರಲು ಕರ್ನಾಟಕದ ಈಶಾನ್ಯ ಸಾರಿಗೆ ಸಂಸ್ಥೆ, ಆಂಧ್ರಪ್ರದೇಶ ಬಸ್ ಮತ್ತು ರೈಲು ಸೌಲಭ್ಯಗಳಿವೆ. ಗುಲ್ಬರ್ಗದಿಂದ ಶ್ರೀರಂಗಪಟ್ಟಣ ಬೀದರ್ ರಸ್ತೆ ಮಾರ್ಗವಾಗಿ 110 ಕಿಮೀ ದೂರ ಪ್ರಯಾಣಿಸಿಯೂ ಬೀದರ್ ತಲುಪಬಹುದು. - ಅಪ್ಪಾರಾವ್ ಸೌದಿ ಚಿತ್ರಗಳು: ಗೋಪಿಚಂದ ತಾಂದಳೆ ಬೀದರ್