ವಂಡರ್ ವೆಂಬನಾಡು! ಈ ಬೇಸಿಗೆಯಿಂದ ಬಚಾವಾಗಲು ಹಿಮಾಲಯಕ್ಕೆ ಓಡಿಹೋಗೋಣ ಅಂತನ್ನಿಸುತ್ತದೆ. ಆದರೆ, ಆ ಹಿಮಾಲಯ ಇರುವುದು ನಮ್ಮಿಂದ ಬಹಳ ದೂರದಲ್ಲಿ. ಕೇರಳದ ವೆಂಬನಾಡಿಗೆ ಹೋದರೆ, ದೇಹಕ್ಕೆ ತಂಪಿನಸುಖ ಸಿಗಬಹುದೇನೋ! ಭಾರತದ ಅತಿದೊಡ್ಡ ಸರೋವರಗಳ ಪೈಕಿ ಈ ವೆಂಬನಾಡ್ ಜಲಧಾಮವೂ ಒಂದು. ಕೇರಳದಲ್ಲೇ ಆಕರ್ಷಕ ತಾಣ. ವೆಂಬನಾಡ್‌ನ ಅತ್ತ ಇತ್ತ ಇಣುಕಿದರೆ ಚಿತ್ತಾಕರ್ಷಕ ನಿತ್ಯ ಹರಿದ್ವರ್ಣ ಕಾಡು ಮತ್ತು ತೆಂಗಿನ ಮರಗಳ ತೋಟ ಮುದ ನೀಡುತ್ತದೆ. ನಡುವೆ ಪಲ್ಲರ್‌ಪದಂ ಮತ್ತು ವಿಲ್ಲಿಂಗ್ಟನ್ ಎಂಬ ಎರಡು ದ್ವೀಪಗಳಿವೆ. ಅಲ್ಲಲ್ಲಿ ಸುಣ್ಣದ ಚಿಪ್ಪಿನ ಸಂಗ್ರಹ ಹಾಗೂ ಸಿಗಡಿ ಮೀನಿನ ಕೃಷಿ ಕಂಡುಬರುತ್ತದೆ. ಸಮುದ್ರದ ನೀರು ಒಳಗೆ ಬರದಂತೆ ತಡೆಯಲು ತನ್ನೀರ್‌ಮುಕ್ಕೋಂ ಎಂಬ 1252 ಮೀಟರ್ ಎತ್ತರದ ಬೃಹತ್ ಗೋಡೆಯಿದೆ. ಸರೋವರ ತೀರದ ಚಕ್ರಂವಾಡಿಯಲ್ಲಿ ಒಂದು ಮ್ಯೂಸಿಯಂ ಇದೆ. ದೋಣಿಯ ಮನೆ! ತೀರದುದ್ದಕ್ಕೂ ಇರುವ ವಿವಿಧ ಬಗೆಯ ಕಾಟೇಜ್‌ಗಳು, ತೆಂಗಿನ ಗರಿಗಳಿಂದ ನಿರ್ಮಿತವಾದ ರೆಸಾರ್ಟ್‌ಗಳು ಕೈ ಬೀಸಿ ಕರೆಯುತ್ತವೆ. ರುಚಿಯಾದ ಕೇರಳದ ಸಾಂಪ್ರದಾಯಿಕ ಮೀನು ಮತ್ತು ಅಕ್ಕಿಯ ತಿನಿಸುಗಳೂ ಸಿಗುತ್ತವೆ. ತೆಂಗಿನಗರಿಗಳಿಂದ ಹೆಣೆದ ಟೋಪಿ ನೋಡಿದಾಗೆಲ್ಲ ಕೊಳ್ಳಬೇಕೆನಿಸುತ್ತದೆ. ದೋಣಿಮನೆಗಳಲ್ಲಿ ರಾತ್ರಿಯಿಡೀ ವಿಹರಿಸಬಹುದು. ದ್ವೀಪಗಳಲ್ಲಿ ತಂಗಬಹುದು. ಸುತ್ತಲೂ ನೀರು, ಮೇಲೆ ಆಕಾಶದಿಂದ ಆವರಿಸಿದ್ದು ತಂಪುಗಾಳಿಯಲ್ಲಿ ಮೈ ಹರವಿ ಮಲಗಿದಾಗ ಸಿಗುವ ಸುಖದ ವರ್ಣನೆಗೆ ಪದಗಳೇ ಸಿಗವು. ಕುಮಾರಕೋಂನ ಗರಿ! ಸರೋವರಕ್ಕೆ ತಗುಲಿಕೊಂಡೇ ಕುಮಾರಕೋಂ ಪಕ್ಷಿಧಾಮವಿದೆ. ಇದು ಪಕ್ಷಿ ವಿಜ್ಞಾನಿಗಳ ಸ್ವರ್ಗವೂ ಹೌದು. 14 ಎಕರೆ ವಿಸ್ತೀರ್ಣದ ಅಭಯಾರಣ್ಯದಲ್ಲಿ ಸೈಬೀರಿಯಾ, ಹಿಮಾಚಲ ಪ್ರದೇಶಗಳಿಂದ ವಲಸೆ ಬಂದ ನೂರಾರು ವಿಧದ ಬಣ್ಣ ಬಣ್ಣದ ಸಹಸ್ರಾರು ಪಕ್ಷಿಗಳಿರುತ್ತವೆ. ಪೊದೆ, ಮರದ ಪೊಟರೆ, ಗೂಡು ಇತ್ಯಾದಿಗಳಲ್ಲಿ ಸಂತಾನೋತ್ಪಾದನೆಯ ಝಲಕ್ ಅನ್ನು ಕಣ್ಣಾರೆ ಕಂಡಾಗಲೇ ಅದರ ಸ್ಪಷ್ಟ ವರ್ಣನೆ ಸಾಧ್ಯ. ಜಲಪಕ್ಷಿಗಳು, ಕೋಗಿಲೆ, ಬಾತು, ಕೊಕ್ಕರೆ, ಗಿಳಿ, ಗರುಡ ಮುಂತಾದವುಗಳೊಂದಿಗೆ ಅಪರೂಪದ ಪಕ್ಷಿಗಳೂ ಇರುತ್ತವೆ. ಮೇ ತಿಂಗಳಾಂತ್ಯದಲ್ಲಿ ಸ್ವಂತ ಊರಿನತ್ತ ಪ್ರಯಾಣಿಸಿದರೆ ವಾಪಸಾಗುವುದು ನವೆಂಬರ್‌ನಲ್ಲಿ. ರೋಡ್‌ಮ್ಯಾಪ್ ಬೆಂಗಳೂರಿನಿಂದ 579 ಕಿ.ಮೀ. ದೂರದಲ್ಲಿರುವ ಕೊಟ್ಟಾಯಂ ರೈಲು ನಿಲ್ದಾಣದಿಂದ 13 ಕಿ.ಮೀ. ದೂರವಿದೆ. ವಿಮಾನ ನಿಲ್ದಾಣದಿಂದ 66 ಕಿ.ಮೀ. ದೂರವಿದೆ. ರಾಜ್ಯದ ಅಲಪ್ಪುಳಂ, ಕೊಟ್ಟಾಯಂ ಮತ್ತು ಎನರ್ಕುಲಮ್ ಜಿಲ್ಲೆಗಳ ತನಕ ವ್ಯಾಪಿಸಿರುವ ಸರೋವರ 96 ಕಿ.ಮೀ. ಉದ್ದವಾಗಿದೆ. 14 ಕಿ.ಮೀ. ಅಗಲ, 12 ಮೀಟರ್ ಆಳವಿದೆ. ಇದರ ನೀರು 6 ಪ್ರಮುಖ ನದಿಗಳಲ್ಲಿ ಬೆಸೆಯುತ್ತದೆ. ದೋಣಿ ಹಾವಿನಂತೆ ಸಾಗಬೇಕು! ವರ್ಷವೂ ಅಗಸ್ಟ್ ತಿಂಗಳ ಎರಡನೇ ಶನಿವಾರ ಈ ಸರೋವರದಲ್ಲಿ ದೋಣಿ ಪಂದ್ಯ ನಡೆಯುತ್ತದೆ. 100ರಿಂದ 120 ಅಡಿ ಉದ್ದದ ಮರದ ದೋಣಿಗಳಲ್ಲಿ 150 ಮಂದಿ ಅಂಬಿಗರು ಏರಿಕೊಂಡು ಹಾವಿನಂತೆ ದೋಣಿ ನಡೆಸುವ ರೋಮಾಂಚಕ ಪಂದ್ಯವಿದು. 1952ರಲ್ಲಿ ಅಂದಿನ ಪ್ರಧಾನಿ ನೆಹರೂ ಇಲ್ಲಿಗೆ ಭೇಟಿ ನೀಡಿದ ಕಾರಣ ಅವರ ಹೆಸರಿನಲ್ಲೇ ಗೆದ್ದವರಿಗೆ ಟ್ರೋಫಿ ನೀಡಲಾಗುತ್ತಿದೆ. ಸರೋವರ ತೀರದ ಸೂರ್ಯೋದಯ ಮತ್ತು ಅಸ್ತಮಾನ ಆಗುಂಬೆಯ ನೆನಪು ತಂದೀತು. -ಪ. ರಾಮಕೃಷ್ಣ ಶಾಸ್ತ್ರಿ