ಚಾರ್ಮೋಡಿ! ಚಾರ್ಮಾಡಿ ಘಾಟಿಯ ಒಡಲಲ್ಲಿ ಹಲವು ಜಲಪಾತಗಳು ಧುಮ್ಮಿಕ್ಕುತ್ತವೆ. ಮಳೆಗಾಲದಲ್ಲಿ ಮಧ್ಯಾಹ್ನ 12 ಗಂಟೆಯಾದರೂ ಇಲ್ಲಿ ಮಂಜು ಕರಗುವುದಿಲ್ಲ. ಇಲ್ಲಿನ ಕಡಿದಾದ ರಸ್ತೆಗಳಿಗೆ ತಿಲಕವಿಟ್ಟಂತೆ ಈ ಬೆಳ್ನೊರೆಯ ಜಲಪಾತಗಳು ಕಂಗೊಳಿಸುತ್ತವೆ. ಇವುಗಳದ್ದು ಬಾನೆತ್ತರದ ನೋಟ. ದಟ್ಟ ಕಾನನದ ನಡುವೆ ಜುಳು ಜುಳು ನಾದದ ಸೊಬಗು. ಹಕ್ಕಿಗಳ ಕಲರವ ಬೆರೆತ ನೀರಿನ ಭೋರ್ಗರೆತ. ಚಾರ್ಮಾಡಿ ಎಂಬ ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ರಸ್ತೆ ವ್ಯಾಪ್ತಿಯ ಅತ್ಯದ್ಭುತ ಘಾಟಿ ಇದು. ಚಾರ್ಮಾಡಿಯು ಕೊಟ್ಟಿಗೆಹಾರ ಮತ್ತು ಬಣಕಲ್ ಊರುಗಳಿಗೆ ಹತ್ತಿರವಿದೆ. ಉಜಿರೆಯಿಂದ 11 ಕಿ.ಮೀ.ನಿಂದ ಆರಂಭವಾಗಿ ಮೂಡಿಗೆರಿಯಿಂದ 14 ಕಿ.ಮೀ. ದೂರದ ಕೊಟ್ಟಿಗೆಹಾರದವರೆಗೆ ಚಾರ್ಮಾಡಿ ಘಾಟ್‌ನ ಅಂದ ಹರಡಿದೆ. ನೀವು ಈ ಘಾಟಿಗೆ ಭೇಟಿ ಕೊಟ್ಟರೆ ಉಜಿರೆಯಿಂದ 9 ಕಿ.ಮೀ. ದೂರದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೂ ತೆರಳಬಹುದು. ಕೊಟ್ಟಿಗೆಹಾರ- ಕಳಸ ಮಾರ್ಗದಲ್ಲಿ ಸಾಗುವಾಗ ಸುಂಕಸಾಲೆಯಿಂದ 10 ಕಿ.ಮೀ. ಅಂತರದಲ್ಲಿ ಬೆಟ್ಟದ ಮೇಲಿನ ಬಳ್ಳರಾಯನದುರ್ಗ ಕೋಟೆಯನ್ನು ವೀಕ್ಷಿಸಬಹುದು. - ಚಿತ್ರ-ಲೇಖನ: ಎಸ್.ಎಲ್. ರಾಘವೇಂದ್ರ