ದುರ್ಗದ ದೇವಿ ಚಿತ್ರದುರ್ಗದ 'ಏಳು ಸುತ್ತಿನ ಕೋಟೆ' ದಕ್ಷಿಣ ಭಾರತದ ಎರಡನೇ ಅತಿ ದೊಡ್ಡ ಕೋಟೆ. ಮೊದಲನೆಯದು ತಮಿಳುನಾಡಿನ.. ಚಿತ್ರದುರ್ಗದ 'ಏಳು ಸುತ್ತಿನ ಕೋಟೆ' ದಕ್ಷಿಣ ಭಾರತದ ಎರಡನೇ ಅತಿ ದೊಡ್ಡ ಕೋಟೆ. ಮೊದಲನೆಯದು ತಮಿಳುನಾಡಿನ 'ಜಿಂಜಿ' (ಸೆಂಜಿ) ಕೋಟೆ. ದುರ್ಗದ ಕೋಟೆಯಲ್ಲಿ ಕಲ್ಲಿನ ಕೊಳಗಳು, ಗುಡಿ ಗೋಪುರಗಳು, ಗುಡ್ಡ ಗವ್ಹಾರಗಳು, ಮಠಮಾನ್ಯಗಳು, ಚಿಕ್ಕ ಚಿಕ್ಕ ಕೆರೆ ಹೊಂಡಗಳು ಜನ್ಮತಾಳಿವೆ. ಚಿತ್ರದುರ್ಗದಲ್ಲಿ ಪಾಳೆಗಾರರಿಗಿಂತ ಮುಂಚಿತವಾಗಿ ಆಳ್ವಿಕೆ ಮಾಡಿದ ಬಾದಾಮಿ ಚಾಲುಕ್ಯರು, ನೊಣಂಬರು, ಶಾತವಾಹನರು, ಕದಂಬರು, ಹೈದರ್, ಟಿಪ್ಪು, ವಿಜಯನಗರ, ಹೊಯ್ಸಳರು, ಮೈಸೂರು ಒಡೆಯರು ಆಳಿಹೋದ ಕುರುಹುಗಳು ಬಯಲು ಸ್ಮಾರಕಗಳೇ ಮ್ಯೂಸಿಯಂ ಆಗಿವೆ. 6-7ನೇ ಶತಮಾನದಲ್ಲಿ ಆಳಿದ ಬಾದಾಮಿ ಚಾಲುಕ್ಯರ ಚಿಕ್ಕ ಗುಹಾಂತರ ದೇವಾಲಯವಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಬಾಗಲಕೋಟೆ ಜಿಲ್ಲೆಯ ಪ್ರವಾಸಿ ತಾಣವಾದ ಬಾದಾಮಿಯಲ್ಲಿ ವರ್ಷಕ್ಕೊಮ್ಮೆ ಬರುವ 'ಬನದ ಹುಣ್ಣಿಮೆ' ಎಂದು ಬನಶಂಕರಿ ಜಾತ್ರೆ ನಡೆಯುತ್ತದೆ. ಅಂದೇ ಚಿತ್ರದುರ್ಗದಲ್ಲೂ ಕೋಟೆ ಒಳ ಪ್ರವೇಶದಲ್ಲಿಯೇ ಇರುವ ಬನಶಂಕರಿ ಅಮ್ಮನವರ ಜಾತ್ರೆ ಪ್ರತಿ ವರ್ಷ ಕೋಟೆಯ ಒಳಗೆ ನಡೆಯುತ್ತದೆ. ಐತಿಹಾಸಿಕ ಹಿನ್ನೆಲೆ ಬಾದಾಮಿ ಚಾಲುಕ್ಯರು ಚಿತ್ರದುರ್ಗದಲ್ಲಿ ಆಳ್ವಿಕೆ ನಡೆಸುವಾಗ ದೇವಾಲಯ ಕಟ್ಟಿಸಿದ್ದಾರಂತೆ. 16 ರಿಂದ 18ನೇ ಶತಮಾನದವರೆಗೆ ಆಳಿಹೋದ ಚಿತ್ರದುರ್ಗದ ಪಾಳೆಗಾರರು ಇದನ್ನು ಜೀರ್ಣೋದ್ಧಾರ ಮಾಡಿ ಇನ್ನಷ್ಟು ಮೆರಗು ತರಲು ಕಾರಣಕರ್ತರಾದರು. ದೇವಾಲಯದ ಆಕಾರ ಇಲ್ಲೊಂದು ಹೆಬ್ಬಂಡೆ ಸರಿ ಸುಮಾರು 30 ಅಡಿ ಅಗಲ, 20 ಅಡಿ ಇದೆ. ಹೆಬ್ಬಂಡೆಯನ್ನು ಕೊರೆದು ದೇಗುಲ ನಿರ್ಮಿಸಲಾಗಿದೆ. ಮುಂದಿನ ಆವರಣವು 50 ಅಡಿ ವಿಸ್ತೀರ್ಣವಿದೆ. ಬಾದಾಮಿಯಲ್ಲಿ ಬಿಟ್ಟರೆ ಈ ಚಿತ್ರದುರ್ಗದಲ್ಲೇ ಗುಹಾಂತರ ದೇಗುಲ ಇರುವುದು. ಒಳ ಪ್ರವೇಶಿಸಬೇಕಾದರೆ ಬಗ್ಗಿಯೇ ನಡೆಯಬೇಕು. ಅಲ್ಲಿ ಸಂಪೂರ್ಣ ಕತ್ತಲು. ದೀಪದ ವ್ಯವಸ್ಥೆ ಇದ್ದು, ಭಕ್ತಾದಿಗಳಿಗೆ, ಪ್ರವಾಸಿಗರಿಗೆ ಅನುಕೂಲಕರ ದರ್ಶನಕ್ಕೆ ತೊಂದರೆಯಿಲ್ಲ. ಕಿಡಿಗೇಡಿಗಳ ಕೃತ್ಯ ಶ್ರಾವಣ ಮಾಸ, ಕಾರ್ತೀಕ ಮತ್ತು ಶಿವರಾತ್ರಿ ದಿನಗಳಂದು ವಿಶೇಷ ಪೂಜೆ ಇರುತ್ತದೆ. ಒಳಭಾಗದಲ್ಲಿ ಎರಡು ಮೂರ್ತಿಗಳಿವೆ. ಅನೇಕ ವರ್ಷಗಳ ಹಿಂದೆ ಯಾರೋ ಕಿಡಿಗೇಡಿಗಳು ನಿಧಿ ಆಸೆಗಾಗಿ ದೇವಿಯ ವಿಗ್ರಹವನ್ನು ಭಗ್ನಗೊಳಿಸಿದ್ದಾರೆ. ಭಗ್ನಗೊಳಿಸಿದ ವಿಗ್ರಹವನ್ನು ಹಿಂದುಗಳು ಪೂಜಿಸದೆ ಇರುವುದರಿಂದ, ದೇಗುಲದ ಒಳಗೆ ಮತ್ತೊಂದು ಬನಶಂಕರಿಯ ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸದ್ಯ ಎರಡು ಮೂರ್ತಿಗಳಿವೆ. < - ಬಿ. ಮೊಹಿದ್ದೀನ್ ಖಾನ್