ಅಬ್ಬಬ್ಬಾ, 9 ಗೇರ್! 4 ಸ್ಪೀಡ್ ಗೇರ್‌ಬಾಕ್ಸ್‌ನಿಂದ 5 ಸ್ಪೀಡ್ ಗೇರ್‌ಬಾಕ್ಸ್‌ಗೆ ಬಂದಾಯ್ತು. ಈಗ ಬೈಕ್‌ಗಳೂ 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುತ್ತವೆ. ಕೆಲವು ಕಾರುಗಳಲ್ಲಿ 6 ಸ್ಪೀಡ್ ಗೇರ್‌ಬಾಕ್ಸ್‌ಗಳೂ ಇವೆ. ವಾಹನ ಆಸಕ್ತರೆಲ್ಲ ಅಚ್ಚರಿಪಡುವಂತೆ ಲ್ಯಾಂಡ್‌ರೋವರ್ ಸಂಸ್ಥೆ 9ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ವಾಹನ ತಯಾರಿಸಿದೆ. ಇದನ್ನು ಸದ್ಯದಲ್ಲೇ ಜಿನಿವಾದಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋನಲ್ಲಿ ಪ್ರದರ್ಶಿಸಲಿದೆ. 9 ಸ್ಪೀಡ್ ಆಟೋ ಗೇರ್‌ಬಾಕ್ಸ್‌ನಿಂದಾಗಿ ಕಾರು ವೇಗವಾಗಿ ಹೋಗುವಾಗ ಹೆಚ್ಚು ಶಬ್ದ ಮಾಡುವುದಿಲ್ಲ ಮತ್ತು ಹೆಚ್ಚು ಇಂಧನ ಬಳಸುವುದಿಲ್ಲ. ವಾಹನದ ಮಾಲಿನ್ಯ ಮಟ್ಟ ಕಡಿಮೆಯಾಗುವುದರ ಜತೆಗೆ, ಇಂಧನ ಕ್ಷಮತೆಯೂ ಹೆಚ್ಚುತ್ತದೆ. ಲ್ಯಾಂಡ್‌ರೋವರ್, ಗೇರ್‌ಬಾಕ್ಸ್ ತಯಾರಿಕಾ ಸಂಸ್ಥೆ ಝೆಡ್‌ಎಫ್ ಜತೆಸೇರಿ ಈ ಗೇರ್‌ಬಾಕ್ಸ್ ತಯಾರಿಸಿವೆ. ಜತೆಗೆ, 1-2 ಗೇರ್‌ಗಳಲ್ಲಿ ಹೆಚ್ಚು ಶಕ್ತಿ ಸಿಗುವಂತೆ ಮಾಡಲಾಗಿದೆ. ಇದರಿಂದಾಗಿ ಗುಡ್ಡ-ಬೆಟ್ಟಗಳ ರಸ್ತೆಯಲ್ಲಿ (ಆಫ್‌ರೋಡಿಂಗ್) ಸರಾಗವಾಗಿ ಚಲಿಸುವಂತೆ ಮಾಡಲಾಗಿದೆ. ಅತ್ಯಂತ ವೇಗವಾಗಿ ಗೇರ್‌ಗಳು ಬದಲಾಗುವ ವ್ಯವಸ್ಥೆ ಇದರಲ್ಲಿದೆ. ತುಂಬ ವೇಗವಾಗಿ ಹೋಗುತ್ತಿರುವ ಸಂದರ್ಭದಲ್ಲಿ ತ್ವರಿತವಾಗಿ ವೇಗ ಕಡಿಮೆ ಮಾಡಬೇಕಾಗಿ ಬಂದಾಗ ಬಳಸಲೆಂದೇ 'ಸ್ಕಿಪ್‌ಶಿಫ್ಟ್‌' (ಅಂದರೆ 9ರಿಂದ ನೇರವಾಗಿ 7-6ನೇ ಗೇರ್‌ಗಳಿಗೆ ಬರುವ) ಎಂಬ ಸೌಲಭ್ಯವನ್ನೂ ನೀಡಲಾಗಿದೆ. ಈಗಿರುವ 6 ಸ್ಪೀಡ್ ಗೇರ್‌ಬಾಕ್ಸ್‌ಗಿಂತ ಹಗುರವಾಗಿರುವುದು ಇದರ ಇನ್ನೊಂದು ಹೆಗ್ಗಳಿಕೆ.