ಆಟೋ ಅಂತ್ಯ ಮೂರು ಚಕ್ರಗಳ ಆಟೋಗಳ ಬದಲಿಗೆ ನಾಲ್ಕು ಚಕ್ರಗಳ ಸಣ್ಣ ಕಾರುಗಳು ದೇಶದ ಮಹಾನಗರಗಳ ರಸ್ತೆಗಳನ್ನು ಆಳಲಿವೆ. ಮೂರು ಚಕ್ರಗಳ ಆಟೋಗಳ ಬದಲಿಗೆ ನಾಲ್ಕು ಚಕ್ರಗಳ ಸಣ್ಣ ಕಾರುಗಳು ದೇಶದ ಮಹಾನಗರಗಳ ರಸ್ತೆಗಳನ್ನು ಆಳಲಿವೆ. ಸುರಕ್ಷತೆಯ ದೃಷ್ಟಿಯಿಂದ ನಗರ ಸಂಚಾರಕ್ಕಾಗಿ ಸಣ್ಣ ಕಾರುಗಳಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ... 'ಅತಿರಥ ಮಹಾರಥ ಸಾರಥಿ...' ಎಂದು ಆಟೋಗಳಲ್ಲಿ ಕೂತು ಹಾಡು ಹೇಳುವ ಕಾಲ ಅಂತ್ಯವಾಗಲಿದೆಯೇ? ಸದ್ಯದ ಮಟ್ಟಿಗೆ ಇಂಥದ್ದೊಂದು ಕಲ್ಪನೆಯನ್ನು ನೆನೆಸಿಕೊಳ್ಳಲು ಸಾಧ್ಯವಾಗದಿರಬಹುದು. ಆದರೆ, ಈ ದಶಕದಂತ್ಯದೊಳಗೆ ಭಾರತದ ಮಹಾನಗರಗಳಲ್ಲಿ ಮೂರು ಚಕ್ರಗಳ ಆಟೋ ರಿಕ್ಷಾ ಜಟಕಾ ಗಾಡಿಯಂತೆ ಕಣ್ಮರೆಯಾಗಲಿವೆ. ಬಾಂಬೆ ರಿಕ್ಷಾಗಳನ್ನು ಇಂದು ಹಳೆಯ ಬಾಲಿವುಡ್ ಚಿತ್ರಗಳಲ್ಲಿ ಮಾತ್ರ ನೋಡಲು ಸಾಧ್ಯ. ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರು ಅಥವಾ ನಿಮ್ಮೂರಿನಲ್ಲಿ ನೋಡುತ್ತಿರುವ ಆಟೋ ರಿಕ್ಷಾಗಳೂ ಚಿತ್ರಗಳಿಗಷ್ಟೇ ಸೀಮಿತ. ಮೂರು ಚಕ್ರಗಳ ಆಟೋಗಳ ಬದಲಿಗೆ ನಾಲ್ಕು ಚಕ್ರಗಳ ಸಣ್ಣ ಕಾರುಗಳು ದೇಶದ ಮಹಾನಗರಗಳ ರಸ್ತೆಗಳನ್ನು ಆಳಲಿವೆ. ಸುರಕ್ಷತೆಯ ದೃಷ್ಟಿಯಿಂದ ನಗರ ಸಂಚಾರಕ್ಕಾಗಿ ಸಣ್ಣ ಕಾರುಗಳಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಉದ್ಯಮ ವಲಯದಿಂದಲೂ ಇಬ್ಬಗೆಯ ಅಭಿಪ್ರಾಯಗಳು ಬರುತ್ತಿವೆ. ಆದರೆ, ತಜ್ಞರ ಪ್ರಕಾರ ಇನ್ನೆರಡು ವರ್ಷಗಳಲ್ಲಿ ಅಧಿಕೃತವಾಗಿ ದೇಶದ ಮಹಾನಗರಗಳ ರಸ್ತೆಗೆ ಆಟೋಗಳ ಬದಲು ಸಣ್ಣ ಕಾರುಗಳು ಇಳಿಯಲಿವೆ. ಈ ಹಿಂದೆ ಟಾಟಾ ಸಂಸ್ಥೆಯ ನ್ಯಾನೋ ಕಾರು ಮಾರುಕಟ್ಟೆಗೆ ಬರುವ ಮೊದಲು ಇಂಥದ್ದೇ ಮಾತು ಕೇಳಿ ಬಂದಿತ್ತು. ಆದರೆ ಕಾರಿನ ದರ ಹೆಚ್ಚಳದಿಂದ ನ್ಯಾನೋ ಎನ್ನುವುದು ಕಾರಿನ ಮತ್ತೊಂದು ರೂಪವಾಗಿ ಮೂಲೆಗುಂಪಾಗಿ ಹೋಯಿತು. ಆದರೆ, ಈಗ ಬಜಾಜ್ ಸಂಸ್ಥೆಯು 'ಆರ್‌ಇ-60' ಎಂಬ ಸಣ್ಣ ಕಾರಿನ ಮೂಲಕ ಈ ಸುದ್ದಿಗೆ ಮತ್ತೆ ಜೀವ ನೀಡಿದೆ. ಈ ಪ್ರಯತ್ನ ಹಾಗೂ ಕೇಂದ್ರದ ಪ್ರಸ್ತಾವನೆಗೆ ಬಹುತೇಕ ಅಟೋಮೊಬೈಲ್ ಉದ್ಯಮಗಳು ಬೆಂಬಲವ್ಯಕ್ತಪಡಿಸಿದ್ದರೂ, ಮಾರುಕಟ್ಟೆಗೆ ತಾವು ತಯಾರಿರದ ಕಾರಣದಿಂದ ಹುಳುಕು ಹುಡುಕುತ್ತಿವೆ. ಮತ್ತೊಂದೆಡೆ ಈ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಮೊದಲ ಸಂಸ್ಥೆ ಬಜಾಜ್ ಆಗುತ್ತದೆ ಎಂಬ ಬೇಜಾರನ್ನು ಕೆಲ ಸಂಸ್ಥೆಗಳು ಹೊರಹಾಕುತ್ತಿವೆ. ಏನಿದು ಆರ್‌ಇ-60? ಬಜಾಜ್ 2008ರಲ್ಲಿ ಈ ಕಾರಿನ ಉತ್ಪಾದನೆಗೆ ಕೈಹಾಕಿತು. ಸುಮಾರು ರು. 550 ಕೋಟಿ ಬಂಡವಾಳ ಹೂಡಿ ತುಂಬಾ ಹುರುಪಿನಲ್ಲೇ ಈ ಸಾಹಸಕ್ಕೆ ಧುಮುಕಿತು. ಬಳಿಕ 2012ರ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಇದರ ಮಾದರಿ ಪ್ರದರ್ಶನವನ್ನು ಮಾಡಲಾಗಿತ್ತು. ನಂತರ ಕಾರಿನ ಅಭಿವೃದ್ಧಿ ಸಂದರ್ಭದಲ್ಲಿ ನಿಸಾನ್ ಮತ್ತು ರೇನೋ ಸಂಸ್ಥೆಗಳೂ ಈ ಬಗ್ಗೆ ಆಸಕ್ತಿ ಹೊಂದಿದ್ದವು. ಆ ಬಳಿಕ ಬಜಾಜ್ ಸಂಸ್ಥೆಯು ಸಣ್ಣ ಕಾರನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ತರುವ ಪ್ರಯತ್ನದಲ್ಲಿದೆ. ಆರ್‌ಇ-60 ಕಾರಿನ ಬೆಲೆಯು ರು. 1.30 ಲಕ್ಷದಿಂದ ರು. 2 ಲಕ್ಷದವರೆಗೆ ಇರಬಹುದು. ಬಜಾಜ್ ಸಂಸ್ಥೆಯ ಮೂಲದ ಪ್ರಕಾರ ಬಜಾಜ್ ಆಟೋ ರಿಕ್ಷಾಗಳ ದರಕ್ಕಿಂತ ತುಸು ಹೆಚ್ಚು ಹಾಗೂ ನ್ಯಾನೋ ಕಾರಿಗಿಂತ ಕಡಿಮೆ ದರದಲ್ಲಿ ಇದು ಲಭ್ಯವಾಗಲಿದೆ. ಪ್ರಾಥಮಿಕ ಹಂತದಲ್ಲಿ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನಲ್ಲಿ ಈ ಸಣ್ಣ ಕಾರು ಲಭ್ಯವಿದೆ. ಪ್ರತಿ ಲೀಟರ್‌ಗೆ 35 ಕಿ.ಮೀ. ಇಂಧನ ಕ್ಷಮತೆ ಹೊಂದಿರುವ ಬಜಾಜ್ ಸಣ್ಣ ಕಾರು, ಇಂಧನ ಕ್ಷಮತೆ ಹಾಗೂ ಸುರಕ್ಷತೆ ದೃಷ್ಟಿಯಿಂದಲೂ ಸುರಕ್ಷಿತ ಎನ್ನುವುದು ಉದ್ದಿಮೆಗಳ ವಾದ. ಚಾಲಕರನ್ನು ಹೊರತುಪಡಿಸಿ ಮೂವರು ಪ್ರಯಾಣಿಕರಿಗಿಲ್ಲಿ ಸ್ಥಳಾವಕಾಶ. ಆದರೆ ಆಟೋದಲ್ಲಿನ ಲೆಕ್ಕಾಚಾರ ತೆಗೆದುಕೊಂಡರೆ ಹಿಂದಿನ ಸೀಟಿನಲ್ಲಿಯೇ ಮೂವರು ಕೂರಬಹುದು. ಇದರಿಂದ ಆಟೋಕ್ಕಿಂತ ಒಬ್ಬರು ಹೆಚ್ಚು ಪ್ರಯಾಣಿಕರು ಇಲ್ಲಿ ಕೂರಲು ಅವಕಾಶವಿದೆ. ಆಟೋಕ್ಕಿಂತ ಹೆಚ್ಚಿನ ತೂಕ ಹಾಗೂ 4 ಚಕ್ರಗಳಿರುವುದರಿಂದ ರಸ್ತೆ ಸುರಕ್ಷತೆಗೆ ಹೇಳಿ ಮಾಡಿಸಿದಂತಿದೆ. 40 ಲೀಟರ್ ಬೂಟ್ ಸ್ಪೇಸ್ ಇದ್ದು, 20 ಬಿಎಚ್‌ಪಿ ಪವರ್ ಹೊಂದಿದೆ. ಆರ್‌ಇ- 60 ಕಾರು 216 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿದರೆ ಮಾಸಿಕವಾಗಿ 5 ಸಾವಿರ ಕಾರುಗಳ ಉತ್ಪಾದನೆಗೆ ಬಜಾಜ್ ಸಿದ್ಧವಾಗಿದೆ. ಯೂರೋಪಿಯನ್ ಮಾರುಕಟ್ಟೆಯಲ್ಲಿ ಮುಂದಿನ ಒಂದು ವರ್ಷದಲ್ಲಿ ಇಂಥ 16 ಕಾರುಗಳು ದೊರಕುವ ಸಾಧ್ಯತೆಯಿದೆ. ಕೇಂದ್ರದ ನಿರ್ಧಾರ ಪ್ರಕಟವಾದ ಮೇಲೆ ಕಾರು ಉತ್ಪಾದನೆಯ ಬಗ್ಗೆ ಚಿಂತನೆ ನಡೆಸಲು ನಿಸಾನ್ ಹಾಗೂ ರೇನೋ ಕಂಪನಿಗಳು ಸ್ಕೆಚ್ ಹಾಕಿವೆ. ಕಿತ್ತಾಟಕ್ಕೆ ಕಾರಣವಾದ ಸಣ್ಣಕಾರು ಆಟೋ ರಿಕ್ಷಾಗಳ ಜಾಗಕ್ಕೆ ಸಣ್ಣ ಕಾರುಗಳನ್ನು ತರಬೇಕು ಎಂದು 2004ರಲ್ಲೇ ಮಾರುತಿ ಸುಝುಕಿ ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ವಿಚಿತ್ರವೆಂದರೆ ಆಗ ಇದೇ ಬಜಾಜ್ ಸಂಸ್ಥೆ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ ಭಾರತದ ಆಟೋ ರಿಕ್ಷಾಗಳ ಮಾರುಕಟ್ಟೆಯಲ್ಲಿ ಬಜಾಜ್ ಸಂಸ್ಥೆಯೇ ಅಗ್ರಸ್ಥಾನ ಹೊಂದಿದೆ. ಮಾಸಿಕವಾಗಿ ಸುಮಾರು 25 ಸಾವಿರ ಆಟೋಗಳನ್ನು ಬಜಾಜ್ ಮಾರುತ್ತದೆ. ತನ್ನ ಮಾರುಕಟ್ಟೆಗೆ ಸಣ್ಣ ಕಾರುಗಳು ಪೆಟ್ಟು ನೀಡುತ್ತವೆ ಎನ್ನುವುದು ಬಜಾಜ್ ಲೆಕ್ಕಾಚಾರವಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿನ ಬದಲಾವಣೆಗೆ ಬಜಾಜ್ ಸಂಸ್ಥೆಯೇ ಮುಂದಾಳತ್ವ ವಹಿಸಿದೆ. ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದ ಸಂಸ್ಥೆಯೇ ಸಣ್ಣ ಕಾರುಗಳ ಬೆಂಬಲಕ್ಕೆ ನಿಂತಿರುವುದು ಏಕೆ ಎಂದು ಮೊದಲು ಸ್ಪಷ್ಟಪಡಿಸಬೇಕು ಎಂದು ಟಿವಿಎಸ್ ಪ್ರಶ್ನಿಸಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಆಟೋ ರಿಕ್ಷಾಗಳ ಉತ್ಪಾದನೆಯಲ್ಲಿ ಟಿವಿಎಸ್ ಕೂಡ ಪಾಲು ಹೊಂದಿದೆ. ಮತ್ತೊಂದೆಡೆ ಪಿಯಾಜಿಯೋ ಕಂಪನಿ ಕೂಡ ಇದೇ ದಾಟಿಯಲ್ಲಿ ಮಾತನಾಡುತ್ತಿದೆ. ದೇಶದಲ್ಲಿನ ಇತರ ಅಟೋಮೊಬೈಲ್ ಉದ್ದಿಮೆಗಳೂ ಇಂತಹ ಕಾರುಗಳ ಉತ್ಪಾದನೆಗೆ ಸಮರ್ಥವಾದ ಬಳಿಕ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಬೇಕು. ಭಾರತದ ಸಾರಿಗೆ ವ್ಯವಸ್ಥೆಗೆ ಇದು ಹೇಳಿ ಮಾಡಿಸಿದಂತಿದೆ ಎಂದು ಪ್ರತಿಕ್ರಿಯಿಸಿದೆ. ಪರ ವಿರೋಧ -ಯುರೋಪಿಯನ್ ದೇಶಗಳಲ್ಲಿ ಇಂಥ ಸಣ್ಣ ಕಾರುಗಳನ್ನು ಈಗಾಗಲೇ ಬಳಸಲಾಗುತ್ತಿದ್ದು, ಸ್ಟೀಯರಿಂಗ್ ಹಾಗೂ ಚಾಲಕನ ನಡುವಿನ ಅಂತರ ಕಡಿಮೆ ಇರುವುದರಿಂದ ಶೇ.17ರಷ್ಟು ಅಪಘಾತಕ್ಕೆ ಇದು ಕಾರಣವಾಗಿದೆ. -ಈ ಅಂತರವನ್ನು ಸಮರ್ಪಕವಾಗಿ ಬಗೆಹರಿಸಿದರೆ ಕೇಂದ್ರ ಸರ್ಕಾರದ ಹಸಿರು ನಿಶಾನೆ ಪಡೆಯಬಹುದು. -ಭಾರತದ ಇತರ ಕಂಪನಿಗಳು ಸಣ್ಣ ಕಾರುಗಳ ಉತ್ಪಾದನೆಗೆ ಮುಂದಾಗಿಲ್ಲ, ಉಳಿದ ಉದ್ದಿಮೆಗಳಿಗೂ ಕಾಲಾವಕಾಶ ನೀಡಿ ಬಜಾಜ್‌ಗೆ ಅನುಮತಿ ನೀಡಬೇಕು. ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಆಗುತ್ತದೆ. -ಮೂರು ಚಕ್ರಗಳ ಆಟೋ ರಿಕ್ಷಾವು ಸುರಕ್ಷಿತವಾಗಿಲ್ಲ, ಬದಲಾಗಿ 4 ಚಕ್ರಗಳಿದ್ದರೆ ಸುರಕ್ಷಿತವಾಗಿರುತ್ತದೆ. -ಇಂಧನ ಕ್ಷಮತೆ ಹಾಗೂ ಪ್ರಯಾಣಿಕರ ಸಂಖ್ಯೆಯ ದೃಷ್ಟಿಯಿಂದಲೂ ಇದು ಉತ್ತಮ. -ಐಷಾರಾಮಿ ಸೌಲಭ್ಯವೂ ದೊರೆಯುತ್ತದೆ. ಆದರೆ ದರ ತುಸು ಹೆಚ್ಚು. -ಪ್ರಾಥಮಿಕ ಹಂತದಲ್ಲಿ ದೇಶದ ಮಹಾನಗರಗಳಲ್ಲಿ ಇದು ಜಾರಿಗೆ ಬರಬಹುದು. - ರಾಧೆ