ಶರಾವತಿ ಕಣಿವೆ ಕೂಗು ಇದು ಶರಾವತಿ ಕೊಳ್ಳ. ಕೌತುಕ, ಬೆರಗು, ಬೆಡಗು, ಜೀವ ವೈವಿಧ್ಯತೆಗಳ ಆಗರ... ಇದು ಶರಾವತಿ ಕೊಳ್ಳ. ಕೌತುಕ, ಬೆರಗು, ಬೆಡಗು, ಜೀವ ವೈವಿಧ್ಯತೆಗಳ ಆಗರ. ಆದರೆ ಈಗ ಮಾನವನ ಹಸ್ತಕ್ಷೇಪದಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಇಲ್ಲಿನ ಜೀವ ವೈವಿಧ್ಯತೆಗೆ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಉಗಮಿಸುವ ಶರಾವತಿ ನದಿ ಹೊನ್ನಾವರ ಬಳಿ ಅರಬ್ಬೀ ಸಮುಧ್ರ ಸೇರುವ ನಡುವಣ 128 ಕಿ.ಮೀ ಉದ್ದಕ್ಕೂ ಜೀವಚೈತನ್ಯದಿಂದ ಹರಿಯುತ್ತದೆ. ಜೀವಸಂಕುಲಕ್ಕೆ ಉಸಿರಾಗಿದೆ. ವಿಶ್ವಪ್ರಸಿದ್ಧ ಜೋಗ ಜಲಪಾತ, ಲಿಂಗನಮಕ್ಕಿ ಅಣೆಕಟ್ಟು, ಕತ್ತಲೆಕಾನು, ಅಪರೂಪದ ಸಿಂಗಳೀಕ, ವಿರಳ ಸಂಖ್ಯೆಲ್ಲಿರುವ ಕುಂಬಾರಕಪ್ಪೆ, ಸಸ್ಯ ವೈವಿದ್ಯಗಳ ತಾಣವಾಗಿದೆ. ಇಲ್ಲಿನ ಅಭಯಾರಣ್ಯದಲ್ಲಿ ಸಿಂಹ ಬಾಲದ ಕೋತಿ, ಹುಲಿ, ಚಿರತೆ, ಕಪ್ಪು ಚಿರತೆ, ಕಾಡು ನಾಯಿ, ನರಿ, ಕರಡಿಗಳಿವೆ. ಜಿಂಕೆ, ಸಂಬಾರ್, ಕಾಡುಹಂದಿ, ಕುಂಬಾರಕಪ್ಪೆ, ಕತ್ತಲೆಕಾನು, ಬಾನೆಟ್ ಕೋತಿ, ಮಲಬಾರ್ ದೊಡ್ಡ ಅಳಿಲು, ಹಾರುವ ದೈತ್ಯ ಅಳಿಲು, ಮುಳ್ಳು ಹಂದಿ, ನೀರು ನಾಯಿ, ಇರುವೆ ಭಕ್ಷಕ ಪ್ರಾಣಿ, ಕಾಳಿಂಗ ಸರ್ಪ, ಕರಿ ನಾಗರ, ಹೆಬ್ಬಾವು, ಇಲಿ, ಹಾವು, ಮೊಸಳೆ, ಮಾನಿಟರ್ ಹಲ್ಲಿ, ಹಾರ್ನ್‌ಬಿಲ್, ರಾಕೆಟ್ ಬಾಲದ ಕಾಜಾಣ ಸೇರಿದಂತೆ ಜೀವ ವೈವಿಧ್ಯತೆಗಳ ಆಗರವಿದು. ಅಮೂಲ್ಯ ಔಷಧಿ ಸಸ್ಯಗಳೂ ಹೇರಳ. ಮಾನವನ ಹಸ್ತಕ್ಷೇಪ ಸಮೃದ್ಧ ಶರಾವತಿ ನದಿಗೆ ಬೃಹದಾಕಾರದ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗಿದೆ. ಇದು 1964ರಲ್ಲಿ ನಿರ್ಮಾಣವಾಗಿದ್ದು, 1819 ಅಡಿ ಎತ್ತರ, 2.4 ಕಿ.ಮೀ ಉದ್ದ ಇದೆ. 1991.71 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ. ಇನ್ನು ಗೇರುಸೊಪ್ಪೆ ಬಳಿ 2002ರಲ್ಲಿ ಶರಾವತಿ ಟೇಲರೇಸ್ ಹೆಸರಿನಲ್ಲಿ ಅಣೆಕಟ್ಟು ನಿರ್ಮಿಸುವಾಗ ನಡೆದ ಪರಿಸರ ಹೋರಾಟ ದೇಶಾದ್ಯಂತ ಗಮನ ಸೆಳೆದಿತ್ತು. ಅಪ್ಪಿಕೋ ಚಳವಳಿ ಎಂಬ ಹೊಸ ಪರಿಕಲ್ಪನೆಯನ್ನೇ ಹುಟ್ಟುಹಾಕಿತು. ಎಷ್ಟೇ ಹೋರಾಟ ನಡೆದರೂ ಗೇರುಸೊಪ್ಪೆಯಲ್ಲಿ ಅಣೆಕಟ್ಟು ನಿರ್ಮಾಣವಾಗಿಯೇ ಬಿಟ್ಟಿತು. ಸಾವಿರಾರು ಹೆಕ್ಟೇರ್ ಕಾಡು ಬಲಿಯಾಯಿತು. ಅಣೆಕಟ್ಟು ನಿರ್ಮಾಣ ಆಗುವಾಗ ರಸ್ತೆ ನಿರ್ಮಾಣ, ಬೃಹತ್ ವಾಹನಗಳು, ಯಂತ್ರೋಪಕರಣಗಳ ಭರಾಟೆ, ಮಾನವನ ಹಸ್ತಕ್ಷೇಪದಿಂದ ಕೊಳ್ಳ ಅಲ್ಲೋಲಕಲ್ಲೋಲವಾಯಿತು. ಜೀವ, ಸಸ್ಯ ವೈವಿಧ್ಯ ನಲುಗಿತು. ಚಿಪ್ಪೆಕಲ್ಲುಗಳು, ಮತ್ಸ್ಯ ವೈವಿಧ್ಯಕ್ಕೆ ಅಣೆಕಟ್ಟೆಗಳಿಂದ ಹೊರಬರುವ ನೀರು ಮಾರಕವಾಯಿತು. ನಿಮ್ಹಾನ್ಸ್ ಸಂಶೋಧನಾ ಅಭ್ಯರ್ಥಿ, ಹೊನ್ನಾವರ ಮೂಲದವರೆ ಆದ ರವಿ ಹೆಗಡೆ, ಶರಾವತಿ ಕೊಳ್ಳದ ಅಪರೂಪದ ಜೀವ ವೈವಿಧ್ಯತೆ ರಕ್ಷಣೆಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಅತಿಕ್ರಮಣ, ಗೂಡಂಗಡಿಗಳ ತೆರವು ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ನಿರಂತರವಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಆನೆ ಸಂತತಿಯ ನಾಶ ಶರಾವತಿ ಕೊಳ್ಳದಲ್ಲಿ ಆನೆ ಸಂತತಿ ಅಪಾರವಾಗಿತ್ತು. ಲಿಂಗನಮಕ್ಕಿ ಹಾಗೂ ಗೇರುಸೊಪ್ಪೆ ಎಂಬ ಎರಡು ಅಣೆಕಟ್ಟುಗಳ ನಡುವೆ ಸಿಲುಕಿದ ಆನೆಗಳು ಬಂಧಿಯಂತಾದವು. ಹಿಂಡು ಹಿಂಡಾಗಿದ್ದ ಆನೆಗಳು ಒಂದೊಂದಾಗಿ ಮೃತಪಟ್ಟು ಎರಡು ವರ್ಷಗಳ ಹಿಂದೆ ಆನೆ ಸಂತತಿಯೆ ನಾಶವಾಯಿತು. ಇನ್ನು ಅಳಿವಿನ ಅಂಚಿನಲ್ಲಿರುವುದೆಂದು ಗುರಿತಿಸಲಾದ ಸಿಂಗಳೀಕಗಳ 32 ಗುಂಪುಗಳ ಶರಾವತಿ ಕಣಿವೆಯಲ್ಲಿವೆ. ಅಂದರೆ ಸುಮಾರು 250ಕ್ಕೂ ಹೆಚ್ಚು ಸಿಂಗಳೀಕಗಳು ಇರುವುದನ್ನು ಗುರುತಿಸಲಾಗಿದೆ. ಇವನ್ನು ಉಳಿಸಿಕೊಳ್ಳುವ ಅಗತ್ಯವಿದೆ. -ವಸಂತ್‌ಕುಮಾರ್ ಕತಗಾಲ