ಎಸಿ ಟ್ರ್ಯಾಕ್ಟರ್ ಎಂಟ್ರಿ ಬಹುಶಃ ಇನ್ನು ಬೆವರಿಳಿಸಿ ದುಡಿಯುವ ರೈತರ ಸಂಖ್ಯೆ ಕುಗ್ಗಬಹುದು! ಏಕೆಂದರೆ, ಭಾರತದಲ್ಲೂ ಹವಾನಿಯಂತ್ರಿತ ಟ್ರ್ಯಾಕ್ಟರ್‌ಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ. ಸುಡು ಬಿಸಿಲಿನಲ್ಲಿ ಗದ್ದೆ ಹೂಡುವಾಗ ಬೆವರು ಸುರಿಸುವ ಅಗತ್ಯವಿಲ್ಲ. ಬದಲಾಗಿ ಹವಾನಿಯಂತ್ರಿತ ಕ್ಯಾಬಿನ್‌ನಲ್ಲಿ ಕುಳಿತು ಟ್ರ್ಯಾಕ್ಟರ್ ಚಲಾಯಿಸಬಹುದು. ಭಾರತದ ಪ್ರತಿಷ್ಠಿತ ಟ್ರ್ಯಾಕ್ಟರ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ಸೋನಾಲಿಕಾವು ನೂತನ ಹವಾನಿಯಂತ್ರಿತ ಟ್ರ್ಯಾಕ್ಟರ್ ಅನ್ನು ಹೊರತಂದಿದೆ. ಹೆವಿ ಡ್ಯೂಟಿ ಟ್ರ್ಯಾಕ್ಟರ್ ಸರಣಿಯ ವರ್ಲ್ಡ್‌ಟ್ರ್ಯಾಕ್ 90 ಎಚ್‌ಪಿ ವಾಹನ ಇದಾಗಿದೆ. ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ತಂತ್ರಜ್ಞಾನದ ಪವರ್ ಸ್ಟೈರಿಂಗ್ ಹೊಂದಿರುವ ಈ ಟ್ರ್ಯಾಕ್ಟರ್, ನಾಲ್ಕು ಸೈಕಲ್ ಟರ್ಬೋ ಚಾರ್ಜ್ 90 ಎಚ್‌ಪಿ ಹಾಗೂ 4087 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ. ಸುಮಾರು 2500 ಕೆ.ಜಿ. ತೂಕವನ್ನು ಇದು ಒಯ್ಯಲು ಸಮರ್ಥವಾಗಿದೆ. ಭಾರತದಲ್ಲಿ ಐಎಸ್‌ಒ14001 ಮಾನ್ಯತೆ ಪಡೆದ ಮೊದಲ ಟ್ರ್ಯಾಕ್ಟರ್ ಕಂಪನಿಯಾದ ಸೋನಾಲಿಕಾ, ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡುವ ಕನಸು ಇರಿಸಿಕೊಂಡಿದೆ. ಈ ಟ್ರ್ಯಾಕ್ಟರ್ ಬಳಕೆಯಿಂದ ರೈತರು ಕೇವಲ ಬೆವರುವುದಷ್ಟೇ ನಿಲ್ಲುವುದಿಲ್ಲ. ಚಳಿಗಾಲ ಹಾಗೂ ಮಳೆಗಾಲದಲ್ಲಿ ಗದ್ದೆ ಹೂಡುವಾಗ ಚಳಿಯಲ್ಲಿ ನಡಗುವ ಪ್ರಮೇಯವು ಇರುವುದಿಲ್ಲ. ಬದಲಾಗಿ ಇದೇ ಹವಾನಿಯಂತ್ರಿತ ಕ್ಯಾಬಿನ್‌ನಲ್ಲಿ ಬಿಸಿ ಗಾಳಿಯನ್ನು ಪಡೆಯಬಹುದು.