ಮನಸು ಗಾಂಧಿ ಬಜಾರು ತಿಂಗಳಿಗೆ ನಾಲ್ಕೈದು ಬಾರಿ ಗಾಂಧಿಬಜಾರಿಗೆ ಬಂದು ಹೋಗದಿದ್ದರೆ ಏನನ್ನೋ ಕಳೆದುಕೊಂಡಂತೆ... ತಿಂಗಳಿಗೆ ನಾಲ್ಕೈದು ಬಾರಿಯಾದರೂ ಗಾಂಧಿಬಜಾರಿಗೆ ಬಂದು ಹೋಗದಿದ್ದರೆ ಏನನ್ನೋ ಕಳೆದುಕೊಂಡಂತೆ ಅನಿಸುತ್ತದೆ. ಮನಸು ಯಾಕೋ ಖಾಲಿ ಖಾಲಿ ಆಗುತಿದೆ ಅಂತನ್ನಿಸುತ್ತದೆ... ಬಸವನಗುಡಿ ಮತ್ತು ಮಲ್ಲೇಶ್ವರ ಬಡಾವಣೆಗಳು ಬೆಂಗಳೂರಿನ ಅತ್ಯಂತ ಹಳೇ ಬಡಾವಣೆಗಳು. ಬಸವನ ಗುಡಿಯ ಕೇಂದ್ರ ಬಿಂದುವೆಂದರೆ ಗಾಂಧಿ ಬಜಾರ್. ಇದು ಪ್ರಮುಖ ವ್ಯಾಪಾರಿ ಸ್ಥಳ ಕೂಡ. ಈ ರಸ್ತೆಯಲ್ಲಿ ಓಡಾಡುವುದೇ ಒಂದು ವಿಶೇಷ. ಗಾಂಧಿ ಬಜಾರ್ ವೃತ್ತದಲ್ಲಿರುವ ಬಸವನಗುಡಿ ಸಹಕಾರ ಸಂಘ ಸಂಸ್ಥೆಯ ಹಿಂಬದಿಯಲ್ಲಿ ಅಲ್ಲಿನ ನೌಕರರಿಗಾಗಿ ನಿರ್ಮಿಸಿದ್ದ ನಾಲ್ಕು ಮನೆಗಳಲ್ಲಿ ಒಂದು ನನ್ನ ಬಾಲ್ಯದ ಅಂಗಳ. ಈಗ ಆ ಮನೆಗಳು ಬರಿಯ ನೆನಪಷ್ಟೇ. ಏಕೆಂದರೆ ಆ ಕಟ್ಟಡ ಈಗ ಹೊಸ ರೂಪವಾಗಿ ಬಸವ ಆಗಿದೆ. ಅಲ್ಲಿ ನಾನು ಓದಿದ ಪ್ರಾಥಮಿಕ ಶಾಲೆ ಎಚ್.ಬಿ. ಸಮಾಜದ ಎದುರಿಗೆ ಇದ್ದಿದ್ದು, ಅದೂ ಕೂಡ ಕಾಲಗರ್ಭದಲ್ಲಿ ಲೀನವಾಗಿದೆ. ಕವಿ ಕೆ.ಎಸ್. ನಿಸಾರ್ ಅಹಮದ್‌ರ 'ಗಾಂಧಿ ಬಜಾರ್‌' ಎನ್ನುವ ಕವಿತೆ ಈ ರಸ್ತೆ ಹೇಗೆ ಜನ ಸಾಮಾನ್ಯರಿಂದ ಹಿಡಿದು ಕವಿಗಳ ಕಲ್ಪನೆಗೂ ವಸ್ತುವಾಗಿತ್ತು ಎಂಬುದನ್ನು ತಿಳಿಸುತ್ತದೆ. ಟಾಗೋರ್ ವೃತ್ತದಿಂದ ರಾಮಕೃಷ್ಣಾಶ್ರಮದವರೆಗೂ ಈ ರಸ್ತೆ ಚಾಚಿಕೊಂಡಿದ್ದು, ಇಡೀ ರಸ್ತೆಯ ಪ್ರಮುಖ ಆಕರ್ಷಣೆಯೆಂದರೆ ಈಗಲೂ ಇಕ್ಕೆಲಗಳಲ್ಲಿ ಕಾಣುವ ಬೃಹತ್ ಸಾಲು ಮರಗಳು. ಇದರಿಂದ ಚಿಲಿಪಿಲಿಗುಟ್ಟುವ ಅಸಂಖ್ಯ ಪಕ್ಷಿಗಳ ಕಲರವ ಕಿವಿತುಂಬುತ್ತದೆ. ಟಾಗೋರ್ ವೃತ್ತದ ಹಿಂಬದಿಯಲ್ಲಿ ಹಲವು ವರ್ಷಗಳ ಕಾಲ ಇದ್ದ ಟ್ಯಾಕ್ಸಿ ಸ್ಟ್ಯಾಂಡ್ ಮರೆಯಾಗಿ ಈಗ ಗ್ರೇಡ್ ಸಪರೇಟರ್ ಹೆಸರಿನಲ್ಲಿ ಅದರ ಸುತ್ತಮುತ್ತಲಿನ ಮೇರು ಕಟ್ಟಡಗಳಾದ ಸರ್ಕಾರಿ ಶಾಲೆ, ಮಾಸ್ತಿ ಕ್ಲಬ್, ಅಂಚೆ ಕಚೇರಿ ಇವೆಲ್ಲವನ್ನೂ ತನ್ನ ಹಳ್ಳಕ್ಕೆ ಹಾಕಿಕೊಂಡಿದೆ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಟ್ಟಡ ಮಾತ್ರ ಅದೃಷ್ಟವಂತನಂತೆ ಬಚಾವಾಗಿ ಉಳಿದಿದೆ. ಕಾಲ ಎಷ್ಟೇ ಬದಲಾಗಿದ್ದರೂ ಈ ರಸ್ತೆ ತನ್ನತನ ಬಿಟ್ಟುಕೊಟ್ಟಿಲ್ಲ. ದಾರಿಯ ಎರಡೂ ಬದಿಯಲ್ಲಿರುವ ತರಕಾರಿ, ಹಣ್ಣು, ಹೂವುಗಳ ಮಾರಾಟ ಮಳಿಗೆಗಳು ಇದನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡಿದೆ. ಹಬ್ಬಗಳು ಬಂದರಂತೂ ಕೇಳುವಂತೆಯೇ ಇಲ್ಲ. ಇಡೀ ರಸ್ತೆಯಿರಲಿ, ಅದರ ಆಜುಬಾಜು ರಸ್ತೆಗಳೂ ನವವಧುವಿನಂತೆ ಸಿಂಗಾರಗೊಳ್ಳುತ್ತವೆ. ಅನೇಕ ಹೊಸ ಮಳಿಗೆಗಳು ತಲೆಯೆತ್ತಿದ್ದರೂ ಕೆಲವು ಹಳೆ ತಲೆಮಾರಿನವು ಇನ್ನೂ ತಮ್ಮ ಇರುವನ್ನು ಸಾರಿ ಹೇಳುತ್ತವೆ. ಅನೇಕ ಹಿರಿಯರ ತಾಣವಾಗಿದ್ದ ಹರಟೆಕಟ್ಟೆ ಕಾಣದಾಗಿದ್ದರೂ ಅದರ ಎದುರಿನ ಈಶ್ವರ ದೇಗುಲ ಈಗಲೂ ಆಸ್ತಿಕರ ಭಾವನೆಗಳಿಗೆ ಓಗೊಡುತ್ತಿದೆ. ವೆಂಕಟೇಶ್ವರ ಸ್ವೀಟ್ಸ್, ಅಡ್ಯಾರ ಆನಂದ ಭವನ ಇವೆಲ್ಲ ಈ ರಸ್ತೆಯಲ್ಲಿ ಸಿಹಿ ತಿಂಡಿ ಪ್ರಿಯರನ್ನು ಸೆಳೆಯುತ್ತಿದ್ದರೂ ಹತ್ತಿರದ ಸುಬ್ಬಮ್ಮನ ಅಂಗಡಿ, ಮಂಜುನಾಥ ಕ್ಯಾಂಡಿಮೆಂಟ್ಸ್ ಅಂದಿನಿಂದ ಇಂದಿನವರೆಗೂ ಚಕ್ಕುಲಿ, ಕೋಡುಬಳೆ, ಹುರಿಗಾಳು, ಕೊಬ್ಬರಿ ಮಿಠಾಯಿ ಹೀಗೆ ಹತ್ತು ಹಲವು ತಿನಿಸುಗಳಿಗೆ ಮನೆ ಮಾತಾಗಿದೆ. ಅಲ್ಲದೆ ಯಾವುದೇ ಹಬ್ಬ ಹರಿದಿನಗಳಾಗಲಿ, ಇವರು ತಯಾರಿಸಿ ಮಾರಾಟ ಮಾಡುವ ವಿವಿಧ ರೀತಿಯ ಒಬ್ಬಟ್ಟುಗಳು, ಕಡುಬಿಗೆ ಮನೆಯಲ್ಲೇ ತಯಾರಿಸಿದರೂ ಈ ಮಟ್ಟದ ಸವಿರುಚಿ ಸಿಗಲಾರದು. ಇತರ ತಿಂಡಿ ತಿನಿಸುಗಳ ವಿಚಾರಕ್ಕೆ ಬಂದರೆ ಇಲ್ಲಿ ಅನೇಕ ಹೊಟೇಲುಗಳಿದ್ದರೂ ಅವುಗಳಲ್ಲಿ ತಾನೇ ತಾನಾಗಿ ಇರುವುದು ವಿದ್ಯಾರ್ಥಿ ಭವನ. ಇದು ಗಾಂಧಿಬಜಾರಿಗೆ ಅನ್ವರ್ಥ ನಾಮವೆಂದರೂ ಅತಿಶಯವಿಲ್ಲ. ಗಾಂಧಿ ಬಜಾರಿಗೆ ಬಂದವರು ವಿದ್ಯಾರ್ಥಿ ಭವನದ ಮಸಾಲೆ ದೋಸೆ ಸವಿಯದೇ ಹೋಗಲಾರರು! ಬಹಳ ವರ್ಷಗಳ ಕಾಲ ಸಾರಿಗೆ ಸಂಸ್ಥೆಯ ರೂಟ್ ನಂ. 11ರ (ಗಾಂಧಿ ಬಜಾರಿನಿಂದ ಮೆಜೆಸ್ಟಿಕ್‌ವರೆಗೆ) ಬಸ್ ನಿಲ್ದಾಣ ಇಲ್ಲಿ ಪ್ರಾಮುಖ್ಯತೆ ಪಡೆದಿತ್ತು. ಅದೇ ರೀತಿ ಆಗ ಓಡಾಡುತ್ತಿದ್ದ ಒಕ್ಕಣ್ಣಿನ ಗಜ ಗಾಂಭೀರ್ಯದ ಮಹಡಿ ಬಸ್ಸುಗಳು ಮತ್ತು ರಸ್ತೆ ರೈಲುಗಳು ಸಹ. ಈಗ ಈ ಬಸ್ ನಿಲ್ದಾಣವೂ ಇಲ್ಲ, ಇನ್ನು ಮಹಡಿ ಬಸ್ಸುಗಳಂತೂ ಸಾರಿಗೆ ಸಂಸ್ಥೆಯವರಿಗೇ ನೆನಪಿದೆಯೋ ಇಲ್ಲವೋ ತಿಳಿಯದು. ನಾವು ಚಿಕ್ಕವರಿದ್ದಾಗ ನಡೆಸಿದ ಇಲ್ಲಿನ ಓಡಾಟವನ್ನು ಮರೆಯುವಂತಿಲ್ಲ. ಈಗಲೂ ತಿಂಗಳಿಗೆ ನಾಲ್ಕೈದು ಬಾರಿಯಾದರೂ ಇಲ್ಲಿಗೆ ಬಂದು ಹೋಗದಿದ್ದರೆ ಏನನ್ನೋ ಕಳೆದುಕೊಂಡಂತೆ ಅನಿಸುತ್ತದೆ. ಇಡೀ ರಸ್ತೆಯಲ್ಲಿ ಒಂದು ಸುತ್ತು ಹಾಕಿ, ಹಾಗೇ ಡಿ.ವಿ. ಗುಂಡಪ್ಪ ರಸ್ತೆಯಲ್ಲಿ ನೆಟ್ಟಕಲ್ಲಪ್ಪ ವೃತ್ತದವರೆಗೂ ನಡೆದು, ನಂತರ ಜಯನಗರದ ಹಾದಿ ಹಿಡಿದರೆ ಸಿಗುವ ತೃಪ್ತಿ ನಗರದ ಯಾವುದೇ ಬಡಾವಣೆಯಲ್ಲಾಗಲೀ ಅಥವಾ ಕಣ್ಣು ಕುಕ್ಕಿಸುವ ಶಾಪಿಂಗ್ ಮಾಲ್‌ಗಳಲ್ಲಿ ಅಲೆದಾಡಿದರೂ ಸಿಗುವುದಿಲ್ಲ. - ಕೆ.ಎಸ್. ಸೋಮೇಶ್ವರ