ನಾಟ್ಯ, ಕಾವ್ಯದಾ ಮಿಲನ ಓರಗೆಯವರು ಆಡುತ್ತಿದ್ದರೆ ಈಕೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದಳು... ಎಲ್ಲರೂ ಆಟಪಾಠದಲ್ಲಿ ತಲ್ಲೀನರಾಗಿದ್ದಾಗ ಈಕೆ ಪೆನ್ನು ಹಿಡಿದು ಕವನ ಗೀಚುತ್ತಿದ್ದಳು... ಓರಗೆಯವರು ಆಡುತ್ತಿದ್ದರೆ ಈಕೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದಳು... ಎಲ್ಲರೂ ಆಟಪಾಠದಲ್ಲಿ ತಲ್ಲೀನರಾಗಿದ್ದಾಗ ಈಕೆ ಪೆನ್ನು ಹಿಡಿದು ಕವನ ಗೀಚುತ್ತಿದ್ದಳು... ಭಾಗಮಂಡಲದ ಭರತ್ ಮತ್ತು ಇಂದಿರಾ ದಂಪತಿಯ ಮೂರನೇ ಮಗಳು ಮಿಲನಾ. ತಂದೆ ಕೃಷಿಕರು ಮಾತ್ರವಲ್ಲ ಬಿ.ಎ. ಪದವೀಧರರು, ಲೇಖಕರೂ ಕೂಡ. ತಾಯಿ ಪ್ರಾಥಮಿಕ ಶಾಲೆಯ ಶಿಕ್ಷಕಿ. ತಾಯಿಯಿಂದಲೇ ಸ್ಫೂರ್ತಿ ಪಡೆದ ಮಿಲನಾ, 4- 5ನೇ ವಯಸ್ಸಿನಲ್ಲೇ ತಾಯಿಯೊಂದಿಗೆ ನೃತ್ಯ ಚಟುವಟಿಕೆಯಲ್ಲಿ ತೊಡಗಿದರು. ಈಕೆಯ ಆಸಕ್ತಿ ಗುರುತಿಸಿದ ಹೆತ್ತವರು ಮಿಲನಾ 6ನೇ ವಯಸ್ಸಿನಲ್ಲಿದ್ದಾಗ 'ಮಿಲನಾ ನೃತ್ಯ ಬಳಗ' ಎಂಬ ಚಾರಿಟಿ ಸಂಸ್ಥೆ ಹುಟ್ಟುಹಾಕಿದರು. ಮಿಲನಾರ ನೃತ್ಯ ಜೀವನದ ಮೊದಲ ಗುರು ತಾಯಿಯಾದರೂ, ನಂತರ ಮಡಿಕೇರಿ ನೃತ್ಯ ಕಲಾ ಶಾಲೆಯಲ್ಲಿ ಶ್ರೀವಿದ್ಯಾ ಮುರಳೀಧರ್, ಮಂಗಳೂರಿನ ಪ್ರವೀಣ್ ನೃತ್ಯ ಜೀವನ, ನಾಟ್ಯನಿಕೇತನದಲ್ಲಿ ರಾಜಶ್ರೀ, ಸವಿತಾ ಜೀವನ್ ಅವರಿಂದ ನೃತ್ಯ ತರಬೇತಿ ಪಡೆದರು. ಬೆಂಗಳೂರಿನ ನವರಸ ಆರ್ಟ್ಸ್‌ನಲ್ಲಿ ಮಧುಲಿತಾ ಮಹಾಪೋದ್ಯ ಅವರಿಂದ ಓಡಿಸ್ಸಿ, ರುಮೇಲಾ ಅವರಿಂದ ಕಥಕ್ ನೃತ್ಯಭ್ಯಾಸ ಮಾಡಿದ ಬಳಿಕ ಇಲ್ಲಿಯೇ ಇತರ ಮಕ್ಕಳಿಗೆ ಭರತನಾಟ್ಯವನ್ನು ಕಲಿಸಿಕೊಡುತ್ತಿದ್ದರು. 18 ವರ್ಷದ ನಂತರ ಮಿಲನಾ ನೃತ್ಯ ಬಳಗಕ್ಕೆ 'ನಾಟ್ಯ ಮಿಲನ' ಎಂದು ಹೆಸರಿಟ್ಟ ಮಿಲನಾ ಭರತ್, ಇಲ್ಲಿ 60 ಮಕ್ಕಳಿಗೆ ಭರತನಾಟ್ಯ, ಓಡಿಸ್ಸಿ, ಜಾನಪದ ನೃತ್ಯವನ್ನು ಕಲಿಸಿಕೊಡುತ್ತಿದ್ದಾರೆ. ಈ ಸಂಸ್ಥೆ ಮುಖಾಂತರ 30 ಮಕ್ಕಳು ಉಚಿತವಾಗಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಕೊಡಗಿಗೆ ಬಂದ ಅಸ್ಸಾಂ, ಕೇರಳದ ವಿದ್ಯಾರ್ಥಿಗಳು ಇವರಿಂದ ನೃತ್ಯಭ್ಯಾಸ ಮಾಡಿಕೊಂಡು ಹೋಗಿದ್ದಾರೆ. ಯುಕೆಜಿಯಿಂದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಮಾತ್ರವಲ್ಲದೆ ಇತ್ತೀಚೆಗೆ ಕೆಲವು ಮಹಿಳೆಯರೂ ಕೂಡ ಇವರಲ್ಲಿ ನೃತ್ಯಭ್ಯಾಸಕ್ಕೆ ಸೇರಿಕೊಂಡಿದ್ದಾರೆ. ಕರ್ನಾಟಕ, ದೆಹಲಿ, ತಮಿಳುನಾಡು ಮೊದಲಾದೆಡೆ 300ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮ ನೀಡಿದ್ದಾರೆ. ಈ ಟಿವಿಯ ಟ್ಯಾಲೆಂಟ್ ಶೋ 2009ರಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಧಾರವಾಹಿಗಳಾದ ಮುಂಬೆಳಕು, ಜೋಗುಳದಲ್ಲಿ ಬಣ್ಣ ಹಚ್ಚಿದ್ದರು. ಬರವಣಿಗೆಯಲ್ಲೂ ಛಾಪು ಮೂಡಿಸಿದ್ದಾರೆ. ಸುಮಾರು 400 ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದು, 'ಭಾವ ಲಹರಿ' ಕವನ ಸಂಕಲನವನ್ನು ಹೊರತಂದಿದ್ದಾರೆ. ಇನ್ನೊಂದು ಕವನ ಸಂಕಲನ ಹಾಗೂ 'ಕೊಡಗಿನಲ್ಲಿ ಐನ್‌ಮನೆ' ಸಂಸ್ಕೃತಿ ಅಧ್ಯಯನ ಕೃತಿ ಬಿಡುಗಡೆಗೆ ಸಿದ್ಧಗೊಂಡಿದ್ದು, ಮಡಿಕೇರಿಯಲ್ಲಿ ಜನವರಿಯಲ್ಲಿ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ. ದ.ರಾ. ಬೇಂದ್ರೆ ರಾಜ್ಯ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಅವಾರ್ಡ್, ಕೊಡಗು ಜಿಲ್ಲಾ ಮುಖ್ಯ ಲೇಖಕಿ, ಕಾವ್ಯಶ್ರೀ, ಅರಳು ಮಲ್ಲಿಗೆ, ಹಂಸಕವಿ ರಾಜ್ಯ ಪ್ರಶಸ್ತಿ, ಕಿರುತೆರೆ ಮಿಸ್ ಅವಾರ್ಡ್... ಹೀಗೆ ಪ್ರಶಸ್ತಿಗಳ ಸಾಲುಸಾಲು ಇವರನ್ನು ಅರಸಿಕೊಂಡು ಬಂದಿದೆ. ಮೀನುಗಾರಿಕೆ ವಿಜ್ಞಾನದಲ್ಲಿ ಬೀದರ್ ಯೂನಿರ್ವಸಿಟಿಯಿಂದ ಪದವಿ ಪಡೆದ ಮಿಲನಾ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಸೈನ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ (ಎಂಎಸ್‌ಎಂ) ಪ್ರಥಮ ರ್ಯಾಂಕ್ ಪಡೆದು ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಬೆಂಗಳೂರಿನ ಕೃಪಾನಿಧಿ ಕಾಲೇಜ್‌ನಲ್ಲಿ ಕೆಲಕಾಲ ಉಪನ್ಯಾಸಕಿಯಾಗಿದ್ದರು. 2011- 12ನಲ್ಲಿ ಕೆಪಿಎಸ್‌ಸಿ ಸೆಲೆಕ್ಷನ್ ಆಗಿ ಪ್ರಸ್ತುತ ಸೋಮವಾರಪೇಟೆ ಮೀನುಗಾರಿಕಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಣ್ಯ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಬೇಕು, ಓಡಿಸ್ಸಿ ನೃತ್ಯಾಭ್ಯಾಸದಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ನಡೆಸಬೇಕೆಂಬ ಮಹದಾಸೆ ಅವರದು. ಎಲ್ಲಾ ಸೌಲಭ್ಯ ಇರುವಲ್ಲಿ ಹೋಗಿ ಕಾರ್ಯಕ್ರಮ ಕೊಡುವುದಕ್ಕಿಂತ ಏನೂ ಸೌಲಭ್ಯ ಇಲ್ಲದೇ ಇರುವ ಸ್ಥಳಕ್ಕೆ ಹೋಗಿ ಕಾರ್ಯಕ್ರಮ ಕೊಡುವುದು ತುಂಬಾ ಇಷ್ಟ. ಇದರಿಂದ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಸುಲಭವಾಗಿ ಇನ್ನೊಬ್ಬರಿಗೆ ತಲುಪಿಸಬಹುದು, ಮಾತ್ರ ಕಲಾ ಸೇವೆಯಲ್ಲಿ ಅವರನ್ನು ತೊಡಗಿಸಬಹುದು. - ಮಿಲನಾ ಭರತ್ - ವಿದ್ಯಾ ಇರ್ವತ್ತೂರು