ಏರ್‌ಸೆಲ್‌ನ ಡಾಟಾ ಡಾಮಿನೇಟ್ 'ಡಾಟಾ ಸಂಪರ್ಕವೇ ನಮ್ಮ ಶಕ್ತಿ, ಈ ಮಾರುಕಟ್ಟೆಯನ್ನು ಆಧರಿಸಿಯೇ ಸಂಪರ್ಕ ಜಾಲ ಬೆಳೆಸುತ್ತೇವೆ' ಚೆನ್ನೈ ಮೂಲದ ಏರ್‌ಸೆಲ್ ಮೊಬೈಲ್ ನೆಟ್‌ವರ್ಕ್ ಸಂಸ್ಥೆಯ ಸ್ಪಷ್ಟ ನುಡಿಯಿದು. ಸಂಸ್ಥೆಯ ಒಟ್ಟು ಆದಾಯದ ಶೇ.18ರಷ್ಟು ಡಾಟಾ ಸಂಪರ್ಕದಿಂದಲೇ ಬರುತ್ತಿದೆ, ಇದಲ್ಲದೇ ಭಾರತದ ಭವಿಷ್ಯದ ಸಂಪರ್ಕ ಜಾಲ ನಿಂತಿರುವುದು ಕೂಡ ಇದೇ ನೆಟ್‌ವರ್ಕ್ ಆಧರಿಸಿ. ಇದೇ ಕಾರಣದಿಂದ ನೆಟ್‌ವರ್ಕ್ ಸರ್ವರ್‌ಗಳ ಸಾಮರ್ಥ್ಯವನ್ನು ಈಗಾಗಲೇ ಏರ್‌ಸೆಲ್ ದ್ವಿಗುಣಗೊಳಿಸಿದೆ. ಏರ್‌ಸೆಲ್‌ನ ಕರ್ನಾಟಕ ವಿಭಾಗದ ವ್ಯವಹಾರ ಮುಖ್ಯಸ್ಥ ಕೆ. ಕದಿವರನ್ 'ಕನ್ನಡಪ್ರಭ'ದೊಂದಿಗೆ ಕರ್ನಾಟಕದ ಏರ್‌ಸೆಲ್‌ನ ವ್ಯಾವಹಾರಿಕ ವಿಚಾರಗಳನ್ನು ತೇಲಿಬಿಟ್ಟಿದ್ದಾರೆ. ಕರ್ನಾಟಕದ ಯುವಕರು ಹಾಗೂ ವಿದ್ಯಾರ್ಥಿಗಳು ಸಂಸ್ಥೆಯ ಗುರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಏರ್‌ಸೆಲ್ ಕಾರ್ಯೋನ್ಮುಖವಾಗಿದೆ ಎನ್ನುತ್ತಾರೆ ಕದಿವರನ್. ಕಳೆದ 2009 ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಏರ್‌ಸೆಲ್ ಸೇವೆ ಆರಂಭಿಸಿತ್ತು. ಕೆಲ ಪ್ರಮುಖ ನಗರ ಹೊರತುಪಡಿಸಿ ಉಳಿದಲ್ಲಿ ಏರ್‌ಸೆಲ್ ನೆಟ್‌ವರ್ಕ್ ಸಿಗುವುದಿಲ್ಲ ಎಂಬ ಆರೋಪಗಳಿಗೆ ಉತ್ತರಿಸುವ ಅವರು, ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಏರ್‌ಸೆಲ್ ಇಲ್ಲ ಎನ್ನುವುದು ನಿಜ. ಆದರೆ ವಿದ್ಯಾರ್ಥಿಗಳು ಹಾಗೂ ಸುಶಿಕ್ಷಿತ ಯುವಕರು ಇರುವ ಜಾಗಗಳಲ್ಲಿ ಏರ್‌ಸೆಲ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸೇವೆ ಆರಂಭವಾದ ಮೊದಲ 5 ವರ್ಷಗಳಲ್ಲಿ ಮಾರುಕಟ್ಟೆಯ ಶೇ.2.40ರಷ್ಟು ಭಾಗವನ್ನು ಆವರಿಸಿಕೊಂಡಿದ್ದು, ಶೇ.24ರಷ್ಟು ಜನಸಂಖ್ಯಾ ಪ್ರದೇಶವನ್ನು ತಲುಪಿದೆ. ರಾಜದಲ್ಲಿ ಇಂದಿನವರೆಗೆ 3.30 ಕೋಟಿ ಸಿಮ್‌ಗಳು ಲಭ್ಯವಿವೆ. ಇದರಲ್ಲಿ ಏರ್‌ಸೆಲ್‌ನ ಪಾಲು 23.40 ಲಕ್ಷ. ಈಗಾಗಲೇ 143 ಕಡೆ 3ಜಿ ಟವರ್‌ಗಳನ್ನು ನಿರ್ಮಿಸಲಾಗಿದ್ದು, ಮತ್ತೆ 106 ಟವರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮತ್ತೊಂದೆಡೆ ರಿಲೈಯನ್ಸ್ ಹಾಗೂ ಟಾಟಾ ಡೋಕೋಮಾ ಜತೆಗಿನ ನೆಟ್‌ವರ್ಕ್ ಶೇರಿಂಗ್ ವ್ಯವಸ್ಥೆಯೂ ಏರ್‌ಸೆಲ್ ಸೇವೆಯ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಕದಿವರನ್ ಅಭಿಪ್ರಾಯವಾಗಿದೆ. ರಾಜ್ಯದ ಇತರೆಡೆ ನೆಟ್‌ವರ್ಕ್ ಅಭಿವೃದ್ಧಿಗೊಳಿಸುವುದಕ್ಕಿಂತ ಬೆಂಗಳೂರನ್ನೇ ಇನ್ನಷ್ಟು ಕೇಂದ್ರೀಕೃತಗೊಳಿಸಿ ಅಭಿವೃದ್ಧಿಪಡಿಸಲು ಏರ್‌ಸೆಲ್ ಚಿಂತನೆ ನಡೆಸಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಇಂದಿನ ಯುವಜನತೆ ಹಾಗೂ ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್, ಮೆಸೆಂಜರ್, ವಿ ಚಾಟ್‌ನಂಥ ಸಾಮಾಜಿಕ ಅಥವಾ ಚಾಟಿಂಗ್ ತಾಣಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಕರೆ ಸ್ವೀಕರಿಸುವ ಅಥವಾ ಮಾಡುವ ಬದಲು ಸಂದೇಶಗಳಲ್ಲೇ ಮಾತುಗಳನ್ನು ಮುಗಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮೊಬೈಲ್‌ನಲ್ಲಿ ಮಾತನಾಡುವುದಕ್ಕಿಂತ ಕೀ ಪ್ಯಾಡ್‌ನಲ್ಲಿ ಸಂದೇಶ ಒತ್ತುವವರ ಸಂಖ್ಯೆಯೇ ಹೆಚ್ಚುತ್ತಿದೆ. ಇದು ಕೇವಲ ವಿದ್ಯಾರ್ಥಿಗಳ ಖಯಾಲಿಯಲ್ಲ, ಉದ್ಯೋಗ ನಿರತ ಯುವಕರು ದೂರವಾಣಿ ಕರೆಗಿಂತ ಚಾಟಿಂಗ್‌ನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಏರ್‌ಸೆಲ್ ತಿಳಿದುಕೊಂಡಿದೆಯಂತೆ. ಒಟ್ಟು ಆದಾಯದಲ್ಲಿ ಶೇ.50ಕ್ಕಿಂತಲೂ ಹೆಚ್ಚು ಡಾಟಾ ವಿಭಾಗದಿಂದಲೇ ಬರುವಂಥ ಕನಸನ್ನು ಸಂಸ್ಥೆ ಕಾಣುತ್ತಿದೆ. ಮತ್ತೊಂದೆಡೆ ಈ ಮೂಲಕ ಡಾಟಾ ಸಂಪರ್ಕದಲ್ಲಿ ರಾಜ್ಯದ ನಂ.1 ನೆಟ್‌ವರ್ಕ್ ಆಗುವ ಗುರಿಯನ್ನು ಏರ್‌ಸೆಲ್ ಹೊಂದಿದೆ.