ಗೀಜಗನ ಸೋಜಿಗ 'ಹಕ್ಕಿ ಗೂಡು ಬಿಟ್ಟ ಮೇಲೆ ಗೂಡಿಗೇನು ಬೆಲೆಯಿದೆ? ನೀ ನನ್ನ ತೊರೆದ ಮೇಲೆ ಮನಕ್ಕೆ ಶಾಂತಿ ಎಲ್ಲಿದೆ' ಎಂಬುದೊಂದು ಕವಿವಾಣಿ. ಹೇಮಂತದ ಚಳಿ ಕಡಿಮೆಯಾಗುತ್ತಿರುವಂತೆ ಖಾಲಿಯಾಗುವ ಗೀಜಗನ ಗೂಡುಗಳನ್ನು ನೋಡಿದಾಗಲೂ ಮನದಲ್ಲಿ ಅಂಥದ್ದೊಂದು ಭಾವ. ಬಾವಿ, ಹಳ್ಳ, ಹೊಳೆಯ ಅಕ್ಕಪಕ್ಕದ ಗಿಡಗಂಟಿಗಳಲ್ಲಿ ಗೀಜಗಗಳು ಸುಂದರ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ. ಗೀಜಗಗಳ ಮನೆ ಕಥೆಯೂ ಸ್ವಾರಸ್ಯಕರ. ಗಂಡು ಗೀಜಗ ಸುಮಾರು ನಾಲ್ಕು ಗೂಡುಗಳನ್ನು ನಿರ್ಮಿಸುತ್ತದೆ. ಅವುಗಳ ಪೈಕಿ ಹೆಣ್ಣು ಗೀಜಗ ಆಯ್ದ ಗೂಡಿನಲ್ಲೇ ಸಂಸಾರ! ಈ ಹಕ್ಕಿಗಳು ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಸಂತಾನೋತ್ಪತ್ತಿ ಮಾಡಿ ಬಿಳಿ ಬಣ್ಣದ ಎರಡರಿಂದ ನಾಲ್ಕು ಮೊಟ್ಟೆಗಳನ್ನಿಟ್ಟು, 12 ದಿನಗಳವರೆಗೆ ಕಾವು ಕೊಟ್ಟು ಮರಿ ಮಾಡಿ, ಪುಟ್ಟ ಮರಿಯು ಹಾರಾಡಲು ಶಕ್ತವಾಗುತ್ತಿದ್ದಂತೆ ಗೂಡು ಖಾಲಿಮಾಡುತ್ತವೆ. ಆ ನಂತರ ಗೂಡುಗಳು ಪಕ್ಷಿ ಸಂಕುಲದ ಸಂತಾನವೃದ್ಧಿ ಕಾರ್ಯಕ್ಕೇ ಬಳಕೆಯಾಗುತ್ತವೆ! ಗೀಜಗಗಳು ತೊರೆದ ಬಳಿಕ ಬಿಳಿ ಕತ್ತಿನ ರಾಟವಾಳ ಪಕ್ಷಿಗಳು ಈ ಗೂಡುಗಳನ್ನು ಸಂತಾನೋತ್ಪತ್ತಿಗೆ ಉಪಯೋಗಿಸುತ್ತವೆ. ತಮ್ಮ ಕೆಲಸ ಮುಗಿದ ಬಳಿಕ ಅವೂ ಬೇರೆಡೆ ಸಾಗುತ್ತವೆ. ಹೀಗಾಗಿ ಜನವರಿ ಕೊನೆಯ ಹೊತ್ತಿಗೆಲ್ಲ ಗೀಜಗನ ಗೂಡು ಬಣಬಣ. ಕೆಲವರು ಅವನ್ನು ತಂದು ತಮ್ಮ ಮನೆಯಲ್ಲಿ ಅಲಂಕಾರಕ್ಕೆ ಲೇತು ಹಾಕುವುದೂ ಉಂಟು. ಹಾವುಗಳಿಂದ ಮರಿಗಳ ರಕ್ಷಣೆಗಾಗಿ ತೆಳ್ಳಗಿನ ಕೊಂಬೆಗಳ ತುತ್ತ ತುದಿಯಲ್ಲಿ ಗೂಡು ನಿರ್ಮಿಸುತ್ತವೆ ಗೀಜಗಗಳು. ಅವು ಗೂಡು ಕಟ್ಟುವ ಕಲೆ ಜಗತ್ತಿನ ಯಾವ ನುರಿತ ಎಂಜಿನಿಯರ್‌ನಿಂದಲೂ ಸಾಧ್ಯವಿಲ್ಲ. ಅಷ್ಟು ಕಲಾತ್ಮಕವಾಗಿರುತ್ತವೆ. -ಚಿತ್ರ-ಲೇಖನ: ಮಲ್ಲಿಕಾರ್ಜುನ ದಾನನ್ನವರ