ಕೇಶವನ ಸನ್ನಿಧಿ ಮೈಸೂರೇ ಹಾಗೆ. ನೋಡಿದಷ್ಟೂ ಮುಗಿಯದ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಬಹಳ ಕಾಲ ಕಾಡುತ್ತವೆ. ಮೈಸೂರೆಂದರೆ ಅರಮನೆ, ವೃಂದಾವನ ಎಂದಷ್ಟೇ ತಿಳಿದವರಿಗೆ ಸೋಮನಾಥಪುರದ ಕೇಶವ ದೇಗುಲ ಅಚ್ಚರಿಯ ಮೂಟೆ. ಹೊಯ್ಸಳರ ಶ್ರೀಮಂತ ವಾಸ್ತುಶಿಲ್ಪದ ಪ್ರತೀಕವಾಗಿ ನಿಂತಿದೆ ಈ ದೇಗುಲ. ಆವರಣದೊಳಗೆ ಸಾಗುತ್ತಿದ್ದಂತೆ ಇದೂ ಒಂದು ಹಾಳು ಹಂಪೆಯಂತಿರಬಹುದು ಎಂಬ ಭಾವನೆ ಮೂಡಿದರೆ ತಪ್ಪೇನಿಲ್ಲ. ಕಾಂಪೌಂಡನ್ನು ಚಂದವಾಗಿಸುವ ಪ್ರಯತ್ನ ನಡೆದಿದೆಯಾದರೂ ಸಾಲದು. ವಿಶ್ವಪ್ರಸಿದ್ಧ ಪ್ರವಾಸಿ ತಾಣಕ್ಕೆ ಒದಗಬೇಕಾದ ನ್ಯಾಯ ಇಲ್ಲಿ ಒದಗಿಲ್ಲ ಎಂದೇ ಹೇಳಬೇಕಾಗುತ್ತದೆ. ಎಲ್ಲೆಂದರಲ್ಲಿ ಅರೆಬರೆ ಮುರಿದಿರುವ ಶಿಲೆಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವ ಪ್ರಯತ್ನ ನಡೆದಿದೆ. ಚೆಂದದ ಹೂದೋಟ ನಿರ್ಮಿಸುವ ಎಲ್ಲಾ ಅವಕಾಶವಿದ್ದರೂ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ. ಇವನ್ನು ದಾಟಿ ಮುಂದೆ ಸಾಗಿದರೆ 64 ದೇವಗೃಹಗಳನ್ನೊಳಗೊಂಡಿರುವ ವಿಶಾಲ ಆವರಣ ಸಿಗುತ್ತದೆ. ಕಣ್ಣಿಗೆ ಹೊಳೆಯುವುದು ಕರುನಾಡ ಶಿಲ್ಪಕಲೆಯ ಒಟ್ಟಂದ. ಹೊರ ಆವರಣದ ಮೂರು ಬದಿ ತನ್ನ ಸೌಂದರ್ಯ ಉಳಿಸಿಕೊಂಡಿದ್ದರೆ, ಒಂದು ಬದಿ ಸಂಪೂರ್ಣ ಶಿಥಿಲವಾಗಿದ್ದು, ದುರಸ್ತಿ ಮುಂದುವರಿದಿದೆ. ದೇಗುಲದ ಗೋಡೆಗಳಲ್ಲಿ ಕೆತ್ತಿರುವ ದೇವಾನುದೇವತೆಗಳು, ಶಿಲಾಬಾಲಿಕೆಯರು, ಪ್ರಾಣಿಗಳ ಕೆತ್ತನೆಗಳಿಗೆ ನೋಡಿಸಿಕೊಂಡು ಹೋಗುವ ತಾಕತ್ತಿದೆ. ಕಾಣುವ ಒಳಗಣ್ಣು ಇರಬೇಕಷ್ಟೇ. ಸುಮ್ಮನೆ ಕಣ್ಣಾಡಿಸಿದರೆ, ಶಿಲ್ಪಿಗಳ ಕೈಚಳಕ, ಚಾಕಚಕ್ಯತೆ ಗಮನಕ್ಕೆ ಬಾರದೆ ಇರದು. ಈ ದೇಗುಲವನ್ನು ಹೊಯ್ಸಳ ಅರಸ ಮುಮ್ಮಡಿ ನರಸಿಂಹನ ಸೇನಾಧಿಪತಿ ಸೋಮನಾಥ ಕ್ರಿ.ಶ.1288ರಲ್ಲಿ ನಿರ್ಮಿಸಿದ. ಹೀಗಾಗಿಯೇ ಇದು 'ಸೋಮನಾಥಪುರ'ವಾಯಿತು. ಮೂರು ಗರ್ಭಗುಡಿ (ತ್ರಿಕೂಟಾಚಲ)ಗಳನ್ನು ಹೊಂದಿರುವುದು ಈ ದೇಗುಲದ ವಿಶೇಷ. ಪೂರ್ವದಲ್ಲಿ ದ್ವಾರವಿದ್ದರೆ, ಪಶ್ಚಿಮ, ಉತ್ತರ, ದಕ್ಷಿಣ ಭಾಗಗಳಲ್ಲಿ ವೇಣುಗೋಪಾಲ, ಕೇಶವ, ಜನಾರ್ದನ ದೇವರ ಮೂರ್ತಿಗಳಿವೆ. ಇಲ್ಲಿನ ವಿಗ್ರಹಗಳ ಪೀಠಗಳಲ್ಲಿ ಮಲ್ಲತಂಮ, ಮಸಣತಂಮ, ಭಾಮೇಯ, ಚಾಮೇಯ ಎಂಬಿತ್ಯಾದಿ ಹೆಸರುಗಳು ಕೆತ್ತಲ್ಪಟ್ಟಿವೆ. ಮಲ್ಲಿ ತಂಮನೇ ಅತಿ ಹೆಚ್ಚು ವಿಗ್ರಹಗಳನ್ನು ಹಾಗೂ ಜನಾರ್ದನ ಗರ್ಭ ಗುಡಿಯ ಶಿಖರವನ್ನು ಕೆತ್ತಿದನೆಂದು ಹೇಳಲಾಗಿದೆ. ಒಳಭಾಗದ ಚಾವಣಿ ಹಾಗೂ ಸ್ತಂಭಗಳ ಕೆತ್ತನೆಗಳು ಒಂದಕ್ಕಿಂತ ಒಂದು ಭಿನ್ನ ಹಾಗೂ ಮನಮೋಹಕ. ದೇಗುಲದೊಳಗೆ ಇಣುಕುವ ಸೂರ್ಯನ ಕಿರಣಗಳ ಕಣ್ಣಾಮುಚ್ಚಾಲೆಯಾಟ ಒಳಾವರಣದ ಸೌಂದರ್ಯಕ್ಕೆ ಮೆರುಗು ನೀಡುತ್ತವೆ. ಒಟ್ಟಿನಲ್ಲಿ ಶಿಲ್ಪಪ್ರಿಯರಿಗೆ ಮೈಸೂರಿನ ಅಷ್ಟೂ ಪ್ರವಾಸಿತಾಣಗಳಿಗಿಂತ ಸೋಮನಾಥಪುರ ದೇಗುಲ ವಿಭಿನ್ನ ಹಾಗೂ ವಿಶಿಷ್ಟವಾಗಿ ಕಂಡುಬಂದರೆ ಅಚ್ಚರಿಯಲ್ಲ. ಹೀಗೆಬನ್ನಿ... ರಾಜಧಾನಿ ಬೆಂಗಳೂರಿನಿಂದ ಬರುವುದಾದರೆ 138 ಕಿ.ಮೀ., ಮೈಸೂರಿನಿಂದ 35 ಕಿ.ಮೀ., ಟಿ. ನರಸೀಪುರದಿಂದ 10 ಕಿ.ಮೀ. ಆಗುತ್ತದೆ. - ಚಿತ್ರ- ಲೇಖನ: ಗಣೇಶಪ್ರಸಾದ್ ಕುಂಬ್ಳೆ