ಸಂಚಾರಿ ಗಿಣಿ! ಅನೇಕರಿಗೆ ಅಂದಿನ ತಮ್ಮ ಭವಿಷ್ಯ ಹೇಗಿದೆ ಎಂದು ತಿಳಿದುಕೊಂಡು ವ್ಯಾಪಾರ ವ್ಯವಹಾರದ ಮಾರ್ಗ ನಿರ್ಧರಿಸುವುದು ಹವ್ಯಾಸವಾಗಿರುತ್ತದೆ. ಅಂಥವರ ಭವಿಷ್ಯ ಹೇಳುವುದರಿಂದ ಕೆಲವರ ಭವಿಷ್ಯ ರೂಪುಗೊಳ್ಳುತ್ತದೆ. ಅಂಥವರಲ್ಲಿ ಕೈಯಲ್ಲೊಂದು ಸಣ್ಣ ಬುಡಬುಡಕೆ ಹಿಡಿದುಕೊಂಡು ಊರಿಂದೂರು ಸುತ್ತುವ ಬುಡುಬುಡಿಕೆಯವರೆಂದೇ ಖ್ಯಾತರಾದ ಭವಿಷ್ಯವಾದಿಗಳೂ ಸೇರುತ್ತಾರೆ. ಮೂಲತಃ ಆಂಧ್ರದ ರಾಯಲಸೀಮೆಯಿಂದ ಜೀವನೋಪಾಯ ಹುಡುಕುತ್ತ ಕರ್ನಾಟಕಕ್ಕೆ ಕಾಲಿಸಿದ ಬುಡುಬುಡಿಕೆಯವರು, ಇಲ್ಲಿ ಸುಖವಾದ ಬುದುಕಿಗೆ ಸಾಕಷ್ಟು ಮೇವು ಸಿಗುತ್ತದೆಂದು ಅರಿತೇ ಇಲ್ಲಿ ನೆಲೆಯೂರಿದರು. ಶಿವಮೊಗ್ಗ ದಾವಣಗೆರೆ ಮೊದಲಾದೆಡೆ ತಮ್ಮ ಅನೇಕ ಕುಟುಂಬಗಳು ಬಹು ಹಿಂದೆಯೇ ಬಂದು ನೆಲೆಸಿ ಭವಿಷ್ಯ ಹೇಳುವ ಕಾಯಕದಿಂದ ಜೀವನ ನಡೆಸುತ್ತಿದ್ದಾರೆನ್ನುತ್ತಾರೆ ಇಲ್ಲೊಬ್ಬ ಬುಡುಬುಡಿಕೆಯವ. ಭವಿಷ್ಯ ಹೇಳೋರ ಭೂತಕತೆ! ಇವರು ಹೇಳುವ ಕಥೆ ಯಾವ ಪುರಾಣದಲ್ಲಿದೆಯೊಂದು ಗೊತ್ತಿಲ್ಲ. ಬ್ರಹ್ಮನು ಜ್ಯೋತಿಷ್ಯ ಸೃಷ್ಟಿಸಿ ಇವರ ಕೈಗೆ ಕೊಟ್ಟು ಹೋಗುವ ತನಕ ನೆಲದಲ್ಲಿಡಬಾರದೆಂದು ಎಚ್ಚರಿಸಿದನಂತೆ. ಇವರು ಆ ಮಾತನ್ನು ಮರೆತು ನಿದ್ರೆ ಬಂದಿತೆಂದು ಅದನ್ನು ನೆಲದಲ್ಲಿಸಿ ಮರದ ಕೆಳಗೆ ಮಲಗಿಬಿಟ್ಟರು. ಸ್ಮಶಾದಲ್ಲಿರುವ ಹಕ್ಕಿಯೊಂದು ಬಂದು ಹಣ್ಣೆಂದು ಭ್ರಮಿಸಿ ಜ್ಯೋತಿಷ್ಯವನ್ನು ನುಂಗಿಬಿಟ್ಟಿತು. ಅಷ್ಟರಲ್ಲಿ ಎಚ್ಚರವಾಗಿ ಅವರು ಹಕ್ಕಿಯನ್ನು ಹಿಡಿದುಕೊಂಡರು. ಹಕ್ಕಿಯೂ ನುಂಗಿದುದೆಲ್ಲ ಜೀರ್ಣವಾಗಿದೆ. ಪುನಃ ಉಗುಳುವಂತಿಲ್ಲ. ಆದರೆ ದಿನಾ ಬೆಳಗ್ಗೆ ಸ್ಮಶಾನಕ್ಕೆ ಬಂದು ಭದ್ರ ಕಾಳಿಯನ್ನು ನೆನೆದರೆ ಆ ದಿನ ನೀವು ಹೋಗುವ ಮನೆಗಳಲ್ಲಿ ಯಾರ ಭವಿಷ್ಯ ಏನು ಅನ್ನುವುದನ್ನು ನಿಮ್ಮ ಕಿವಿಯಲ್ಲಿ ಬಂದು ಹೇಳ್ತೀನಿ ಅಂತ ಭರವಸೆ ನೀಡಿತಂತೆ. ಅದೇ ಪ್ರಕಾರ ಇವರು ಯಾವ ಊರಲ್ಲಿ ಠಿಕಾಣಿ ಹೂಡಿದ್ರೂ ಬೆಳಗ್ಗೆದ್ದು ಮಸಣಕ್ಕೆ ಹೋಗುತ್ತಾರೆ. ಹಕ್ಕಿಯಿಂದ ಭವಿಷ್ಯ ತಿಳಿದುಕೊಂಡು ಬಂದು ಅಷ್ಟು ಮನೆಗಳಿಗೆ ಮಾತ್ರ ಹೋಗ್ತಾರಂತೆ. ಬುಡುಬುಡಿಕೆ ಬಾರಿಸುತ್ತಿದ್ದಂತೆ ಭವಿಷ್ಯವೇನು ಅನ್ನೋದು ನಾಲಗೆ ತುದಿಗೆ ಬಂದ್ಬಿಡುತ್ತೆ. ಅದನ್ನು ಹೇಳಿ ಮನೆಯವರು ನೀಡಿದ ಹಣ, ಅಕ್ಕಿ, ಇನ್ನೇನಾದರೂ ಸ್ವೀಕರಿಸಿ ಮುಂದಿನ ಮನೆಗೆ ತೆರಳುತ್ತಾರೆ. ಜತೆಗೆ ಇವರು ಹೇಳಿದ ಪರಿಹಾರ ಮಾರ್ಗದಿಂದ ಫಲ ಕಂಡವರು ಮುಂದಿನ ವರ್ಷ ಇವರು ಆ ಮನೆಗೆ ಬಂದಾಗ ಉಡುಗೊರೆ ನೀಡುವ ಕ್ರಮವೂ ಇದೆಯಂತೆ. ವಿಶೇಷ ಫಲ ಬೇಕಿದ್ದರೆ ಅವರ ಕೈಯಲ್ಲಿ ತಾಳೆವಾಲೆಯ ಭವಿಷ್ಯ ಗ್ರಂಥವಿದೆ. ಫಲ ಬಯಸುವವರು ಅದರ ಮಧ್ಯ ಕಡ್ಡಿ ಹಾಕಬೇಕು. ಕಡ್ಡಿಯಿರುವ ಪುಟದಲ್ಲಿರುವ ಭವಿಷ್ಯವನ್ನು ವ್ಯಾಖ್ಯಾನಿಸುವ ಕೆಲಸ ಇವರದು. ಒಂದೂರಲ್ಲಿ ಇವರ ಕುಟುಂಬದ ಸದಸ್ಯರು ವಸತಿ ಹೂಡಿ ಒಬ್ಬೊಬ್ಬರು ಒಂದೊಂದು ಹಳ್ಳಿ ಸುತ್ತಿ ಊರು ಖಾಲಿಯಾದ ಬಳಿಕ ಮುಂದಿನ ಊರಿಗೆ ಹೋಗುತ್ತಾರೆ. ಇಡೀ ರಾಜ್ಯ ತಿರುಗಲು ಒಂದು ವರ್ಷ ಬೇಕು. ಮತ್ತೆ ಪುನರಾವರ್ತೆನೆ. ಒಂದು ಮನೆಗೆ ಹೋಗುವಾಗ ಯಜಮಾನನ ಮುಖದಲ್ಲಿ ಮರಣರೇಖೆ ಕಾಣಿಸಿದರೆ ಎಚ್ಚರಿಸಿ ಬರುತ್ತಾರಂತೆ. ಅಲ್ಲಿ ಕಾಣಿಕೆ ಸ್ವೀಕರಿಸುವುದಿಲ್ಲ. ಮುಂದಿನ ವರ್ಷ ಹೋದಾಗ ಮರಣ ಗಂಡಾಂತರದಿಂದ ಆ ಯಜಮಾನ ಪಾರಾಗಿದ್ದರೆ ಕೊಡುವ ಉಡುಗೊರೆ ಭರ್ಜರಿಯಾಗಿರುತ್ತದೆಂಬ ಹೆಗ್ಗಳಿಕೆ ಇವರದು. ಮದುವೆಯಾಗದವರಿಗೆ ಮದುವೆ, ಮಕ್ಕಳಾಗದವರಿಗೆ ಸಂತಾನ, ಬಯಲಾದ ಶತ್ರುಗಳ ಸಂಚು ಇದೆಲ್ಲವೂ ತಮ್ಮ ಭವಿಷ್ಯದದಿಂದ ಸಾಧ್ಯವಾಗಿದೆ. ಇಂದು ಅಧಿಕಾರದಲ್ಲಿರುವ ಅನೇಕ ರಾಜಕಾರಣಿಗಳಿಗೆ ಇವರು ಹೇಳಿದ ಭವಿಷ್ಯ ನಿಜವಾಗಿದೆಯಂತೆ. ಎಲ್ಲವೂ ಸರಿ. ಆದರೆ, ಇವರಿಗೂ ಓದು ಬರಹವಿಲ್ಲ. ಮಕ್ಕಳಿಗೂ ಶಾಲೆಯಿಲ್ಲ. ಜತೆಗೇ ಅವರನ್ನು ಕರೆದೊಯ್ಯುತ್ತಾರೆ. ಆ ಮಕ್ಕಳ ಭವಿಷ್ಯವನ್ನು ಯಾರು ಹೇಳುತ್ತಾರೆ ಅನ್ನೋದು ಸಾರ್ವಕಾಲಿಕ ಕಗ್ಗಂಟು. -ಪ.ರಾಮಕೃಷ್ಣಶಾಸ್ತಿ