ಮಳ್ಳಿ ಮಲ್ಲಳ್ಳಿ ಕರ್ನಾಟಕ ಪ್ರವಾಸೋದ್ಯಮ ವಿಷಯ ಬಂದಾಗಲೆಲ್ಲ ಶೌರ್ಯ, ಸಂಸ್ಕೃತಿಯಲ್ಲಿ ವಿಶೇಷ ಕೊಡುಗೆ ನೀಡಿರುವ ಕೊಡಗು ಜಿಲ್ಲೆಯನ್ನು ಮರೆಯಲು ಸಾಧ್ಯವೇ ಇಲ್ಲ. ಮನಸ್ಸು ಆಕರ್ಷಿಸುವ ಇಲ್ಲಿನ ಪ್ರವಾಸ ತಾಣಗಳು ಸದಾ ಸ್ಮರಣೆಯಲ್ಲಿ ಉಳಿಯುವಂಥವು. ಅಂಥ ಚೆಲುವಿನ ತಾಣಗಳಲ್ಲಿ ಸೋಮವಾರಪೇಟೆ ಸನಿಹದ ಮಲ್ಲಳ್ಳಿ ಜಲಪಾತವೂ ಒಂದು. ಸುಮಾರು 200 ಅಡಿ (ಅಂದಾಜು 62 ಮೀ.) ಎತ್ತರದಿಂದ ಭೋರ್ಗರೆವ ಈ ಫಾಲ್ಸ್ ಕುಮಾರಧಾರ ನದಿಯ ಕೊಡುಗೆಯಾಗಿದೆ. ಸುತ್ತಲೂ ಬೆಟ್ಟಗಳಿಂದ ಆವೃತವಾಗಿರುವ ಹಚ್ಚಹಸಿರು ಕಾನನದಲ್ಲಿ ಜಲಪಾತದ ಮೊರೆತ ತನ್ಮಯರಾಗಿಸುತ್ತದೆ. ಪುಷ್ಪಗಿರಿ (ಕುಮಾರಪರ್ವತ) ಸಂರಕ್ಷಿತಾರಣ್ಯದಲ್ಲಿ ಧುಮ್ಮಿಕ್ಕಿ ಹರಿಯುವ ನದಿಯು ಮುಂದೆ ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸೇರುತ್ತದೆ. ಈ ನದಿಗಳ ಸಂಗಮ ಪವಿತ್ರ ಕ್ಷೇತ್ರವಾಗಿ ಭಕ್ತರನ್ನು ಆಕರ್ಷಿಸುತ್ತದೆ. ಬೆಂಗಳೂರಿನಿಂದ 265 ಕಿ.ಮೀ. ಸೋಮವಾರಪೇಟೆಯಿಂದ 25 ಕಿ.ಮೀ. ಅಂತರದಲ್ಲಿದೆ. ಬೆಟ್ಟದಹಳ್ಳಿ ಗ್ರಾಪಂ ವ್ಯಾಪ್ತಿಯ ಈ ನಿಸರ್ಗ ಸಿರಿಗೆ ತಲುಪಲು ರಜಾದಿನಗಳಲ್ಲಿ ಪಯಣಿಗರು ಚಾರಣ ಕೈಗೊಳ್ಳುವುದು ಪರಿಸರ ಆಸ್ವಾದಿಸಲು. ಎತ್ತರದ ಬೆಟ್ಟಗಳ ಮಧ್ಯೆ ಧೋ ಎಂದು ಸುರಿವ ಈ ಫಾಲ್ಸ್ ಅನ್ನು ಎತ್ತರದ ದಂಡೆ ಮೇಲೆ ನಿಂತು ನೋಡುವುದೇ ಚಂದ. ಮಳೆ, ಬಿಸಿಲಿನ ಬೆಳಕಿನಾಟದಲ್ಲಂತೂ ಝರಿ ಅದ್ಭುತವಾಗಿ ಗೋಚರಿಸುವುದು. ನೂರಾರು ಅಡಿ ಎತ್ತರದಿಂದಲೇ ವೀಕ್ಷಿಸಬೇಕಿರುವ ಈ ಜಲಪಾತದ ಬುಡಕ್ಕೆ ತೆರಳುವ ಕಾಲು ದಾರಿ ದುರ್ಗಮ. ಬೆಟ್ಟದ ಕಾಲು ದಾರಿಯಲ್ಲೇ ಇಳಿದು ಫಾಲ್ಸ್ ತಲುಪಲು ಸಾಹಸ ಬೇಕು. ಕೆಲವೇ ದೂರದವರೆಗೆ ಮಾತ್ರ ಮೆಟ್ಟಿಲುಗಳಿವೆ. ಮುಕ್ಕಾಲು ಕಿ.ಮೀ. ಭಯಾನಕ ಕಾಲು ದಾರಿಯಿದೆ. ಮಳೆಗಾಲದಲ್ಲಿ ತೆರಳುವಾಗ ಪ್ರಾಣಭಯ ಕಾಡದಿರದು. ಎಂಥ ಹಠವಾದಿ ಸಾಹಸಿಗನನ್ನೂ ತರಗಲೆಯಂತೆ ತೇಲಿಸಿಬಿಡುವಂಥ ವೇಗದ ಹರಿವು ಇರುವ ಕಾರಣ ಫಾಲ್ಸ್‌ಗೆ ಇಳಿಯುವುದು ಅಪಾಯಕರ. ಫಾಲ್ಸ್‌ಗೆ ತೆರಳುವ ಕಾಲುದಾರಿಯ ಮೆಟ್ಟಿಲುಗಳಲ್ಲಿ ವಿರಮಿಸುವುದೇ ಮನಕಾನಂದ. ಇಲ್ಲಿನ ಬೃಹತ್ ಬಂಡೆಗಳು ಹಾಗೂ ಕಾನನ ಮಧ್ಯೆ ಭೋರ್ಗರೆವ ಜಲಪಾತದ ರಮಣೀಯತೆ ನಿಮಗೆಂದೂ ಸಪ್ಪೆ ಎನಿಸುವಂತಹ ಫೋಟೋಗಳನ್ನು ಕ್ಲಿಕ್ಕಿಸಲು ಅವಕಾಶ ನೀಡುವುದಿಲ್ಲ. ದಡದಿಂದ ಜಲಪಾತ ಸುಮಾರು 2 ಕಿ.ಮೀ. ದೂರವಿರುವಾಗಲೇ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ತೆರಳಬೇಕು. ಏಕೆಂದರೆ, ಕೊಂಚ ದೂರದವರೆಗೆ ಮಾತ್ರವೇ ಮಣ್ಣಿನ ರಸ್ತೆ ಉತ್ತಮವಾಗಿದ್ದು, ಮಳೆಗಾಲದಲ್ಲಿ ಅಲ್ಲಲ್ಲಿ ನೀರು ಹರಿದು ಕೊರಕಲು ಸೃಷ್ಟಿಯಾಗಿರುತ್ತದೆ. ಕೊಡಗಿನ ಇನ್ನಿತರೆ ಫಾಲ್ಸ್ ಅಂದ ಹಾಗೆ, ಚಾರಣಕ್ಕೆ ತೆರಳುವಾಗ ಸ್ಥಳೀಯ ಗ್ರಾಪಂಗೆ ಪ್ರವೇಶ ಶುಲ್ಕ ಪಾವತಿಸಬೇಕು. ಇಲ್ಲಿಯೇ ಕೊಡಗು ಸ್ಪೆಷಲ್ ಜೇನುತುಪ್ಪ, ವೀಳ್ಯದೆಲೆ, ದ್ರಾಕ್ಷಿರಸ ಮತ್ತಿತರ ತಿನಿಸುಗಳು ಲಭ್ಯ. ಮಡಿಕೇರಿಯಿಂದ 7 ಕಿ.ಮೀ. ದೂರದ ಅಬ್ಬಿಫಾಲ್ಸ್, ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ರಕ್ಷಿತಾರಣ್ಯ ವ್ಯಾಪ್ತಿಯ ಇರುಪ್ಪು ಫಾಲ್ಸ್ ಅಥವಾ ಲಕ್ಷ್ಮಣತೀರ್ಥ ಫಾಲ್ಸ್ (ಶ್ರೀಮಂಗಳ ಬಳಿ ಲಕ್ಷ್ಮಣತೀರ್ಥ ನದಿ ಕೊಡುಗೆ), 16 ಕಿ.ಮೀ. ದೂರದಲ್ಲಿರುವ ಚೇಲಾವರ ಫಾಲ್ಸ್ (2 ಕಿ.ಮೀ. ಅಂತರದಲ್ಲಿರುವ ಚೋಮಕುಂಡ್ ಬೆಟ್ಟದಿಂದ ಉತ್ತಮ ದೃಶ್ಯ ಕಾಣಬಹುದು. ಯಾವಾಗಲೂ ಫಾಗ್‌ನಿಂದ ಕೂಡಿರುವ ಪ್ರದೇಶವಿದು.) -ಶಿವಮೊಗ್ಗ ಗಿರಿಧರ್ @. ಚಿತ್ರಗಳು: ದೇವರಾಜ್ ಎಲ್.