ಸ್ಕೂಟರ್ ರೈಯ್ಯಾ ಬೈಕ್‌ಗಿಂತ ಸ್ಕೂಟರ್ರೇ ವಾಸಿ ಸ್ವಾಮಿ! ಭಾರತದ ನಗರವಾಸಿಗಳು ಮೋಟಾರ್‌ಬೈಕ್‌ಗಳಿಗಿಂತ ಸ್ಕೂಟರ್‌ಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ಇದಕ್ಕೆ ಪೂರಕವೆನ್ನುವಂತೆ 2012-13 ಆರ್ಥಿಕ ವರ್ಷದ ಸ್ಕೂಟರ್ ಮಾರಾಟದಲ್ಲಿ ಶೇ.14.24ರಷ್ಟು ಏರಿಕೆಯಾಗಿದೆ. ಆದರೆ ಶೇ.0.12ರಷ್ಟು ಮಾತ್ರ ಮೋಟಾರ್ ಬೈಕ್ ವ್ಯಾಪಾರದಲ್ಲಿ ಏರಿಕೆಯಾಗಿರುವುದು ಆಶ್ಚರ್ಯ ಮೂಡಿಸಿದೆ. ಇಂಧನ ಕ್ಷಮತೆ ಹೆಚ್ಚಳ ಹಾಗೂ ಟ್ರಾಫಿಕ್ ಕಿರಿಕಿರಿಯೇ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಕಾರಣವೆಂದು ಉದ್ಯಮ ತಿಳಿದುಕೊಂಡಿದೆ. ಒಟ್ಟಾರೆ ದ್ವಿ-ಚಕ್ರ ವಾಹನಗಳ ಮಾರಾಟದಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದ್ದರೂ ಸ್ಕೂಟರ್ ಮಾರಾಟದಲ್ಲಿನ ಆಶಾದಾಯಕ ಹೆಚ್ಚಳವೂ ಉದ್ಯಮಿಗಳಲ್ಲಿ ಭರವಸೆ ಹುಟ್ಟಿಸಿದೆ. ಇದೇ ಕಾರಣದಿಂದ 2013ರ ಅಂತ್ಯದೊಳಗೆ ವಿನೂತನ ಮಾದರಿ ಹಾಗೂ ಹೆಚ್ಚು ಇಂಧನ ಕ್ಷಮತೆ ಹೊಂದಿರುವ ಸ್ಕೂಟರ್‌ಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಇದನ್ನು ಭಾರತ ವಾಹನ ಒಕ್ಕೂಟವೂ ಸ್ಪಷ್ಟಪಡಿಸಿದೆ. ಆದರೆ ವರ್ಷಾಂತ್ಯ ತಿಂಗಳ (ಮಾರ್ಚ್) ವ್ಯಾಪಾರವು ಉದ್ಯಮಿಗಳ ಕಂಗೆಡಿಸಿದೆ. ಸ್ಕೂಟರ್ ಮಾರಾಟವು ಶೇ.3.18 ಹಾಗೂ ಮೋಟಾರ್ ಬೈಕ್ ವ್ಯಾಪಾರವು ಶೇ.4.54ಕ್ಕೆ ಸೀಮಿತವಾಗಿದೆ. ಆರ್ಥಿಕ ವರ್ಷದ ಕೊನೆಯ ತಿಂಗಳ ವ್ಯಾಪಾರ ಎಂಬ ನೆಪದಿಂದ ಸುಮ್ಮನಾಗಿದ್ದಾರೆ. ಸ್ಕೂಟರ್‌ಗಳ ವಿನ್ಯಾಸವು ಗ್ರಾಮೀಣ ಭಾರತೀಯರಿಗೆ ಇಂದಿಗೂ ಇಷ್ಟವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ರಸ್ತೆ ಸಮಸ್ಯೆಗೆ ಸ್ಕೂಟರ್ ಸರಿಹೊಂದುವುದಿಲ್ಲ. ಇದೇ ಕಾರಣದಿಂದ ಕಳೆದ ಆರ್ಥಿಕ ವರ್ಷದಲ್ಲಿಯೂ ನಗರವಾಸಿಗಳಿಗೆ ಮಾತ್ರ ಸ್ಕೂಟರ್ ಪ್ರಿಯವಾಗಿದೆ. ಸ್ಕೂಟರ್ ಹಾಗೂ ಮೋಟಾರ್‌ಬೈಕ್ ವಿಭಾಗದಲ್ಲಿನ ಕೆಲ ಹೊಸ ಮಾದರಿಗಳ ಆಗಮನ ನಿರೀಕ್ಷೆಯು ಮಾರುಕಟ್ಟೆಯಲ್ಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಕಳೆದ ವರ್ಷದ ದ್ವಿಚಕ್ರ ವಾಹನ ಮಾರುಕಟ್ಟೆ ಬೆಳವಣಿಗೆಯ ಗಾತ್ರ ಶೇ.2.90ರಿಂದ ಶೇ.6ಕ್ಕೆ ಏರುವ ವಿಶ್ವಾಸವನ್ನು ಮಾರುಕಟ್ಟೆ ಒಕ್ಕೂಟ ಹೊಂದಿದೆ. ಆದರೆ ಪೆಟ್ರೋಲ್ ಬೆಲೆ ಏರಿಕೆಯ ಪ್ರಮಾಣ ಕೂಡ ದ್ವಿಚಕ್ರ ವಾಹನಗಳ ಮಾರಾಟದ ಮೇಲೆ ನೇರ ಪರಿಣಾಮ ಬೀರಲಿದೆ. ಡಸ್ಟರ್ ಜೀವಾಳ ಇಂಧನ ದರ ಹಾಗೂ ಕಾರುಗಳ ದರದಲ್ಲಿನ ಏರಿಕೆಯ ಕಾರಣದಿಂದ ಕಾರು ಮಾರುಕಟ್ಟೆ ಸಂಪೂರ್ಣವಾಗಿ ಕುಸಿತವಾಗಿದ್ದರೂ ರೆನೋ ಡಸ್ಟರ್ ಸೇರಿದಂತೆ ಕೆಲ ಯುಟಿಲಿಟಿ ಕಾರ್‌ಗಳ ಬೂಸ್ಟ್‌ನಿಂದ ಜೀವ ಉಳಿದಂತಿದೆ. ರೆನೋ ಕಾರುಗಳ ಮಾರಾಟದಲ್ಲಿ ಶೇ.237 ಏರಿಕೆಯಾಗಿದ್ದರೆ, ಉಳಿದ ಕಾರುಗಳ ಮಾರಾಟದಲ್ಲಿ ಶೇ.6.69 ಋಣಾತ್ಮಕ ಬೆಳವಣಿಗೆಯಾಗಿದೆ. ಯುಟಿಲಿಟಿ ವಾಹನಗಳ ಕಾರುಗಳ ವಿಭಾಗದಲ್ಲಿ ಶೇ.52.20 ಬೆಳವಣಿಗೆಯಾಗಿದೆ. ರೆನೋ ಹೊರತುಪಡಿಸಿ ಉಳಿದೆಲ್ಲ ಕಂಪನಿಗಳ ಕಾರು ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡುಬಂದಿದೆ. ಮಾರುತಿ ಸುಝುಕಿ ಹಾಗೂ ಮಹೀಂದ್ರಾ ಕಂಪನಿಗಳ ಮಿನಿ ಎಸ್‌ಯುವಿ, ಎಸ್‌ಯುವಿಗಳ ಯಶಸ್ಸಿನಿಂದ ಭಾರಿ ಕುಸಿತದಿಂದ ಪಾರಾಗಿವೆ. ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳಲ್ಲಿನ ಬೆಲೆ ವ್ಯತ್ಯಾಸವು ಈ ಕುಸಿತಕ್ಕೆ ಕಾರಣವಾಗಿರುವುದು ಹಳೆಯ ವಿಷಯ. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ ವ್ಯತ್ಯಾಸವು ಶೇ 16ಕ್ಕೆ ಇಳಿಕೆಯಾಗುವ ನಿರೀಕ್ಷೆಯನ್ನು ವಾಹನ ಮಾರಾಟ ಒಕ್ಕೂಟ ಹೊಂದಿದೆ. ಇದರಿಂದಾದರೂ ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗುವ ನಿರೀಕ್ಷೆಯನ್ನು ಉದ್ಯಮಿಗಳು ಹೊಂದಿದ್ದಾರೆ. ಗೂಡ್ಸ್ ರಿಕ್ಷಾ ಪಲ್ಟಿ ಇಂಧನ ಕ್ಷಮತೆ ಹಾಗೂ ತೂಕ ಸಾಮರ್ಥ್ಯವನ್ನು ಹೆಚ್ಚಿಸಲು ವಿಫಲವಾದ ಹಿನ್ನೆಲೆಯಲ್ಲಿ ಸರಕು ಸಾಗಣೆ ರಿಕ್ಷಾಗಳ ಮಾರಾಟದಲ್ಲಿ ವಿಪರೀತ ಇಳಿಕೆಯಾಗಿದೆ. 2012-13ನೇ ಆರ್ಥಿಕ ವರ್ಷದಲ್ಲಿ ಶೇ.9.20 ಋಣಾತ್ಮಕ ಬೆಳವಣಿಗೆಯನ್ನು ಕಂಡಿದೆ. ಈ ನ್ಯೂನತೆ ಸರಿಪಡಿಸಿಕೊಳ್ಳಲು ಯಾವುದೇ ಪ್ರಯತ್ನವೂ ಗೂಡ್ಸ್ ರಿಕ್ಷಾ ವಿಭಾಗದಲ್ಲಿ ಕಾಣುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿನ ಪರಿಸ್ಥಿತಿ ಬದಲಾಗುವ ನಿರೀಕ್ಷೆ ಕಾಣುತ್ತಿಲ್ಲ. ಆದರೆ ಪ್ರಯಾಣಿಕರ ರಿಕ್ಷಾ ಮಾರಾಟದಲ್ಲಿ ಶೇ.4.87 ಹೆಚ್ಚಳವಾಗಿದೆ. - ರಾಧೆ