ಮಾರುಕಟ್ಟೆ ಏರಿಯಾಕ್ಕೆ ಹೊಸ ಆರಿಯಾ ಟಾಟಾ ಆರಿಯಾ ಕಾರಿಗೆ ಹೊಸ ರೂಪ ಸಿಕ್ಕಿದೆ. ಹೊಸ ಎಂಜಿನ್ ಹಾಗೂ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯಲು ಟಾಟಾ ಚಿಂತಿಸಿದೆ. ಪ್ರಸಕ್ತ ವರ್ಷದ ಮಾರುಕಟ್ಟೆಗೆ ಈಗಾಗಲೇ ಎರಡು ಹೊಸ ಕಾರುಗಳನ್ನು ಬಿಡುಗಡೆ ಮಾಡಿರುವ ಟಾಟಾ, ಆರಿಯಾದ ಹೊಸ ರೂಪದೊಂದಿಗೆ ಭರ್ಜರಿಯಾಗೇ ಪ್ರಸಕ್ತ ಆರ್ಥಿಕ ವರ್ಷಕ್ಕೆ ಕಾಲಿಡುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಪೆಟ್ಟು ತಿಂದ ವಾಹನ ತಯಾರಿಕೆ ಸಂಸ್ಥೆ ಕುಖ್ಯಾತಿಗೆ ಟಾಟಾ ಪಾತ್ರವಾಗಿತ್ತು. ಆದರೆ ತುಸು ಎಚ್ಚೆತ್ತಿರುವ ಟಾಟಾ ಕಂಪನಿಯು, ತನ್ನ ಖ್ಯಾತ ವಿಸ್ತಾ ಕಾರನ್ನು ಅಭಿವೃದ್ಧಿಗೊಳಿಸಿತ್ತು. ಹಿಂದಿನ ಆರಿಯಾ ಕಾರು ಸ್ವಲ್ಪ ಮಟ್ಟಿಗೆ ಮಾರುಕಟ್ಟೆಯಲ್ಲಿ ಹೆಸರು ಮಾಡದ ಕಾರು ಎಂದೇ ಹೇಳಬಹುದು. ಈಗ ಹೊಸ ರೂಪ ನೀಡುವ ಮೂಲಕವಾದರೂ ಗ್ರಾಹಕರ ಮನಗೆಲ್ಲುವ ಪ್ರಯತ್ನ ಮಾಡುತ್ತಿದೆ. ಟೊಯೋಟಾ ಇನೋವಾ ಕಾರಿಗೆ ಸ್ಪರ್ಧಿಯಾಗಿ ಆರಿಯಾ ಮಾರುಕಟ್ಟೆಗೆ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ. ನೂತನ 2.2 ಲೀ. ವರಿಕಾರ್ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಬಂದಿದ್ದು, ಎಂಜಿನ್‌ಗೆ 3 ವರ್ಷ ಅಥವಾ ಒಂದೂವರೆ ಲಕ್ಷ ಕಿ.ಮೀ. ವಾರಂಟಿ ನೀಡಲಾಗುತ್ತಿದೆ. ಉಪಗ್ರಹ ಆಧಾರಿತ ನೇವಿಗೇಷನ್ ವ್ಯವಸ್ಥೆ, ಆಕರ್ಷಕ ಡ್ಯಾಶ್‌ಬೋರ್ಡ್ ಅನ್ನು ಕಾರಿನಲ್ಲಿ ಅಳವಡಿಸಲಾಗಿದೆ. ಇದರ ಜತೆಗೆ ಒಳ ವಿನ್ಯಾಸದಲ್ಲಿ ಬದಲಾವಣೆ ತರಲಾಗಿದೆ ಹಾಗೂ 6 ಏರ್‌ಬ್ಯಾಗ್‌ಗಳನ್ನು ಮೊದಲ ಬಾರಿಗೆ ನೀಡಲಾಗಿದೆ. ಕತ್ತಲನ್ನು ಅಟೋಮೆಟಿಕ್ ಆಗಿ ಗುರುತಿಸುವ ಹೆಡ್‌ಲ್ಯಾಂಪ್ ಹಾಗೂ ಮಳೆ ಬಂದಾಗ ತನ್ನಿಂದ ತಾನೆ ಗುರುತಿಸುವ ವೈಪರ್‌ಗಳನ್ನು ನೀಡಲಾಗಿದೆ. ಫೀಯಟ್ ಲೀನಿಯಾದಲ್ಲೂ ಈ ಸೌಲಭ್ಯಗಳು ಮೊದಲು ಬಂದಿದ್ದವು.