ಭಲೇ ಬಸವ...! ಕಾಶಿ ವಿಶ್ವನಾಥ, ಅಮರನಾಥ ದೇವಾಲಯ, ಶಂಕರಾಚಾರ್ಯ ಮಂದಿರ, ಬದ್ರಿನಾಥ, ಕೇದಾರನಾಥ ದೇವಾಲಯ ಹೀಗೆ ಎಲ್ಲ ದೇವಾಲಯಗಳಲ್ಲಿ ಬಸವಣ್ಣನ ಮೂರ್ತಿಯ ಮುಂದೆ ಲಿಂಗ ಇದೆ. ಆದರೆ, ಖಿಳೇಗಾಂವಿ ಬಸವಣ್ಣನ ಮೂರ್ತಿಯ ಮುಂದೆ ಶಿವಲಿಂಗವಿಲ್ಲ, ಇಲ್ಲಿ ಸಾಕ್ಷಾತ್ ಶಿವನೇ ಬಸವಣ್ಣನ ಸ್ವರೂಪದಲ್ಲಿ ಉದ್ಭವ ಮೂರ್ತಿಯಾಗಿ ಕಾಣಿಸಿಕೊಂಡಿದ್ದಾನೆ! ಹುತ್ತದಲ್ಲಿ ಉದ್ಭವ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿದೆ ಖಿಳೇಗಾಂವಿ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಊರು. ಈ ಪ್ರದೇಶದಲ್ಲಿ ಡವಳಪ್ಪ ಎನ್ನುವ ದನಗಾಹಿ, ದನಗಳನ್ನು ಮೇಯಿಸುತ್ತಿದ್ದಾಗ ಒಂದು ಬರಡು ಆಕಳು ನಿತ್ಯ ದೊಡ್ಡದಾದ ಹುತ್ತದ ಮೇಲೆ ಹಾಲುಣಿಸಿ ಬರುತ್ತಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಅವನ ಸ್ವಪ್ನದಲ್ಲಿ ಹುತ್ತವನ್ನು ತೆಗೆಯುವಂತೆ ವಾಣಿಯಾಯಿತಂತೆ. ಇದರಿಂದ ಅಚ್ಚರಿಗೊಂಡ ಡವಳಪ್ಪ ಇದರ ಮರ್ಮ ಅರಿಯಲು ಹುತ್ತವನ್ನು ತೆಗೆಯಲು ಮುಂದಾಗಿದ್ದಾನೆ. ಹುತ್ತ ತೆಗೆಯಲು ಪ್ರಾರಂಭಿಸುತ್ತಿದ್ದಂತೆ ಬಸವಣ್ಣನ ದೊಡ್ಡದಾದ ಮೂರ್ತಿ ಗೋಚರವಾಗಿದೆ. ಈ ವಿಷಯ ಎಲ್ಲೆಡೆ ಪಸರಿಸಿ ಸುತ್ತಮುತ್ತಲಿನ ಹಳ್ಳಿಗಳ ಜನರು ಬಸವಣ್ಣನ ಮೂರ್ತಿಗೆ ಪೂಜೆ, ಅಭಿಷೇಕ ಮಾಡಲು ಪ್ರಾರಂಭಿಸಿದ್ದಾರೆ. ಇದು ನಡೆದದ್ದು ನೂರಾರು ವರ್ಷ ಹಿಂದೆ. ಆ ನಂತರ ಹಲವು ಹವಾಡಗಳು ಅಲ್ಲಿ ನಡೆಯುತ್ತಲೇ ಇವೆ ಎನ್ನುತ್ತವೆ ಊರ ಹಿರಿಯರು. ಸಾಕ್ಷಾತ್ ಶಿವನೇ ಈ ರೂಪದಲ್ಲಿ ಉದ್ಭವವಾಗಿದ್ದಾನೆ ಎನ್ನುವುದು ಜನರ ನಂಬಿಕೆ. ಈ ಕಲ್ಲು ದೇವರ ಮಹಿಮೆ, ಪವಾಡ ತಿಳಿದು ಬಿಜಾಪುರದ ಸುಲ್ತಾನ್ ಸತ್ವ ಪರೀಕ್ಷೆಗೆಂದು ಸೈನ್ಯ ಸಮೇತ ಬಂದು ಕುಹಕದಿಂದ ಬಸವಣ್ಣನ ಮುಂದೆ ಮಾಂಸದ ತುಂಡುಗಳನ್ನು ನೈವೇದ್ಯ ಮಾಡಿ ಇಟ್ಟಿದ್ದಾನೆ. ಆದರೆ, ಅವುಗಳು ಕ್ಷಣಾರ್ಧದಲ್ಲೇ ಕೆಂಪು ದಾಸವಾಳ ಹೂವುಗಳಾಗಿ ಮಾರ್ಪಾಡಾಗಿವೆ. ಇಷ್ಟಕ್ಕೆ ಸುಮ್ಮನಾಗದ ಸುಲ್ತಾನ್ ಮೂರ್ತಿ ಧ್ವಂಸಗೊಳಿಸಲು ಭರ್ಜಿಯಿಂದ ಬಸವಣ್ಣನ ಮೂರ್ತಿಯ ಎಡ ಹಾಗೂ ಬಲಭಾಗಕ್ಕೆ ಹೊಡೆದ್ದಿದ್ದಾನೆ. ಆದರೆ, ಚುಚ್ಚಿದ ಸ್ಥಳದಿಂದ ಸಜೀವದಂತೆ ಹಾಲು, ರಕ್ತ ಸೋರಲಾರಂಭಿಸಿದೆ. ಬಳಿಕ ಆ ಸುಲ್ತಾನ್‌ನ ಕಣ್ಣು ಹೋಗಿವೆ. ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ಆ ರಾಜ ದೇವಸ್ಥಾನ ಕಟ್ಟಿಕೊಡವುದಾಗಿ ಪ್ರಾರ್ಥಿಸಿದ್ದಾನೆ. ಅಲ್ಲದೆ, ಅವನೇ ದೇವಸ್ಥಾನ ನಿರ್ಮಿಸಿದನೆಂದು ಬಸವಣ್ಣನ ಚರಿತ್ರೆಯಿಂದ ತಿಳಿದು ಬರುತ್ತದೆ. ಈಗಲೂ ಬಸವಣ್ಣನ ಮೂರ್ತಿಯ ಬಲ, ಎಡ ಭಾಗಕ್ಕೆ ಭರ್ಜಿಯಿಂದ ಹೊಡೆದ ಗುರುತು ಕಾಣುತ್ತವೆ. ನಮಸ್ಕರಿಸುವ ಕುದುರೆ! ಚೈತ್ರ ಮಾಸದ ಪ್ರತಿಪದೆಯಿಂದ ಪಂಚಮಿಯವರೆಗೆ ಖಿಳೇಗಾಂವಿಯಲ್ಲಿ ಬಸವಣ್ಣನ ಜಾತ್ರೆ ನಡೆಯುತ್ತದೆ. ಇಲ್ಲಿ ಪಾಡ್ಯದಿಂದ ನಿತ್ಯ ಪಲ್ಲಕ್ಕಿ ಸೇವೆ, ಪಂಚಾಮೃತ ಅಭಿಷೇಕ, ಬ್ಯಾಳಿ ಪೂಜೆ ಇನ್ನಿತರ ವಿಶೇಷ ಪೂಜೆ ಜರುಗುತ್ತವೆ. ಹೀಗೆ ಯುಗಾದಿ, ಶಿವರಾತ್ರಿ, ಶ್ರಾವಣ ಮಾಸದ ವೇಳೆ ನಿತ್ಯ ಭಜನೆ, ಕೀರ್ತನೆ, ನಾಟಕ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಬಸವಣ್ಣನ ಕುದುರೆಯೊಂದು ಇದೆ. ಅದು ಬಸವಣ್ಣನ ಜಾತ್ರೆ, ಮೆರವಣಿಗೆ ವೇಳೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಲಗೆ ನಾದಕ್ಕೆ ತಕ್ಕಂತೆ ನೃತ್ಯ ಮಾಡುತ್ತದೆ. ಬಸವಣ್ಣನ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಬಸವಣ್ಣನ ಮೂರ್ತಿ ಮುಂದೆ ಮಂಡಿಯೂರಿ ನಮಸ್ಕರಿಸುವುದು ನೋಡುಗರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಹೀಗೆ ಬನ್ನಿ.. ರೇಲ್ವೆ ಮೂಲಕ ಬರುವವರು ಹುಬ್ಬಳ್ಳಿ-ಬೆಳಗಾವಿ-ಮೀರಜ ಮೂಲಕ ಕೌಟೇಮಹಾಂಕಾಳಕ್ಕೆ ರಬೇಕು. ಅಲ್ಲಿಂದ ಸಮೀಪದಲ್ಲಿಯೇ ಖಿಳೇಗಾಂವಿ ಕ್ಷೇತ್ರವಿದೆ. ಬಸ್ ಮೂಲಕ ಆಗಮಿಸುವವರು ಅಥಣಿಗೆ ಬಂದರೆ ಅಲ್ಲಿಂದ 25 ಕಿ.ಮೀ. ದೂರದಲ್ಲಿ ದೇವಸ್ಥಾನವಿದೆ. ಈ ಕ್ಷೇತ್ರಕ್ಕೆ ಬರುವ ಭಕ್ತಸಾಗರಕ್ಕೆ ನಿತ್ಯವೂ ಇಲ್ಲಿ ಅನ್ನಪ್ರಸಾದ ವಿರುತ್ತದೆ. ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇದೆ. ದೇವಸ್ಥಾನದ ಕಮಿಟಿ ಹಾಗೂ ಭಕ್ತರ ಸಹಕಾರದಿಂದ ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. - ಮಹಾಂತೇಶ ಕುಳ್ಳೊಳ್ಳಿ