ತಾಂಡಾ ಸ್ಕೂಲ್ ಲಂಬಾಣಿ ತಾಂಡಾಗಳು ಎಂದಾಕ್ಷಣ 'ಅವರೆಲ್ಲಾ ಅನಕ್ಷರಸ್ಥರು, ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲ,... ಲಂಬಾಣಿ ತಾಂಡಾಗಳು ಎಂದಾಕ್ಷಣ 'ಅವರೆಲ್ಲಾ ಅನಕ್ಷರಸ್ಥರು, ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲ, ಮಕ್ಕಳ ಶಿಕ್ಷಣದ ಬಗ್ಗೆ ಗಮನ ನೀಡುವುದಿಲ್ಲ' ಎನ್ನುವ ಕಲ್ಪನೆ ನಮ್ಮ ಸಮಾಜದಲ್ಲಿದೆ. ಆದರೆ, ಗದಗ ತಾಲೂಕಿನ ಅಡವಿ ಸೋಮಾಪುರದ ಹೊರವಲಯದಲ್ಲಿರುವ ಸಣ್ಣತಾಂಡ ಇದಕ್ಕೆ ಅಪವಾದದಂತಿದೆ. ಗ್ರಾಮಸ್ಥರು ಹಾಗೂ ಮುಖ್ಯ ಶಿಕ್ಷಕರು ಸೇರಿ ತಾಂಡಾದಲ್ಲಿರುವ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ. 1996ರಲ್ಲಿ ಅಡವಿಸೋಮಾಪುರ ಸಣ್ಣ ತಾಂಡಾದಲ್ಲಿ ಸಕಿಪ್ರಾ ಶಾಲೆ ಪ್ರಾರಂಭಿಸಲಾಗಿದೆ. ಅಂದಿನಿಂದ ತಾಂಡಾದಲ್ಲಿರುವ ಅನಕ್ಷರಸ್ಥ ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಲು ಪ್ರಾರಂಭಿಸಿದರು. ಆದರೆ, ದಿನ ಕಳೆದಂತೆ ಗದಗದ ಕೆಲವು ಪ್ರತಿಷ್ಠಿತ ಶಾಲೆಗಳು ಅಲ್ಲಿನ ಮಕ್ಕಳನ್ನು ತಮ್ಮ ಶಾಲೆಯಲ್ಲಿ ಹೆಸರು ನೋಂದಾಯಿಸಿಕೊಂಡು ಅವರಿಗೆ ನಿತ್ಯವೂ ಸಂಚರಿಸಲು ವಾಹನದ ವ್ಯವಸ್ಥೆ ಕಲ್ಪಿಸಿದವು. ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದಂತೆ ಎಚ್ಚೆತ್ತುಕೊಂಡು ಗ್ರಾಮಸ್ಥರು ಮತ್ತು ಮುಖ್ಯ ಶಿಕ್ಷಕರು, ಖಾಸಗಿ ಶಾಲೆಯಂತೆ ತಮ್ಮ ತಾಂಡಾದಲ್ಲಿರುವ ಶಾಲೆಯನ್ನೇ ಅಭಿವೃದ್ಧಿಪಡಿಸುವ ಕನಸು ಕಂಡು ಪ್ರಯತ್ನ ಆರಂಭಿಸಿದರು. ಇಂದು ಅದು ಸಾಕಾರಗೊಂಡಿದೆ. 115 ಲಂಬಾಣಿ ಮಕ್ಕಳು ಇಲ್ಲಿ 1-5ನೇ ತರಗತಿಗಳಿವೆ. 118 ಮಕ್ಕಳು ಓದುತ್ತಿದ್ದಾರೆ. ಅವರಲ್ಲಿ 115 ಮಕ್ಕಳು ಲಂಬಾಣಿಗರು. ಇನ್ನು ಗ್ರಾಮದ ಹಿರಿಯರು, ಮುಖ್ಯಶಿಕ್ಷಕರ ಶ್ರಮದಿಂದಾಗಿ ಮಕ್ಕಳಿಗಾಗಿಯೇ ಸಣ್ಣದೊಂದು ಗ್ರಂಥಾಲಯ ಪ್ರಾರಂಭಿಸಿದ್ದು, ಗ್ರಾಮಸ್ಥರ ಹಣದಿಂದಲೇ ಪುಸ್ತಕಗಳನ್ನು ಖರೀದಿಸಿ ನೀಡುತ್ತಿದ್ದಾರೆ. ಸದ್ಯ 400ಕ್ಕೂ ಹೆಚ್ಚು ಪುಸ್ತಕಗಳಿವೆ. ಪ್ರತಿ ಶನಿವಾರ ಮಕ್ಕಳಿಗೆ ಪುಸ್ತಕ ನೀಡಿ ಓದಲು ಒಂದು ವಾರದ ಕಾಲಾವಕಾಶ ನೀಡಲಾಗುತ್ತದೆ. ಇದರೊಟ್ಟಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಮಕ್ಕಳಿಗೆ ಕಂಪ್ಯೂಟರ್‌ನ ಬೇಸಿಕ್ ಮಾಹಿತಿಯನ್ನು ನೀಡಲಾಗುತ್ತಿದೆ. ಶಾಲೆಯಲ್ಲಿನ ಪ್ರತಿಯೊಂದು ಗೋಡೆಗಳು ಜ್ಞಾನದ ಸುಧೆ ಬೀರುತ್ತಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡಿಗರು ಹೀಗೆ ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಗೆ ಬೇಕಾದ ಎಲ್ಲ ಅಗತ್ಯತೆ ಇಲ್ಲಿ ಅಳವಡಿಸಲಾಗಿದೆ. ತರಗತಿಗಳ ಬೋಧನೆಯಲ್ಲಿಯೂ ಸಾಕಷ್ಟು ಹೊಸತನಗಳನ್ನು ರೂಢಿಸಿಕೊಂಡಿದ್ದು, ಇಲ್ಲಿ ಕಲಿಯುತ್ತಿರುವ ಮಕ್ಕಳು ಯಾವುದೇ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಕಡಿಮೆ ಇಲ್ಲ. ಮೂಲಭೂತ ಸೌಲಭ್ಯಗಳ ವಿಚಾರದಲ್ಲೂ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ. ಅಪಾರ ಕಾಳಜಿ ಈ ಶಾಲೆಗೆ ಸರ್ಕಾರ ಅಗತ್ಯ ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಹಲವಾರು ಅಗತ್ಯ ವಸ್ತುಗಳನ್ನು ದಾನಿಗಳೇ ನೀಡಿದ್ದಾರೆ. ಶಾಲೆಯ ಪ್ರಗತಿ ಗಮನಿಸಿದ ಗದಗ ನಗರದ ಹಲವಾರು ದಾನಿಗಳು ಶಾಲೆಗೆ ಪೀಠೋಪಕರಣಗಳು, ರ್ಯಾಕ್, ಫ್ಯಾನ್ ಸೇರಿದಂತೆ ಹಲವಾರು ವಸ್ತುಗಳನ್ನು ನೀಡಿದ್ದಾರೆ. ಗ್ರಾಮಸ್ಥರು ಮಕ್ಕಳ ಶಿಕ್ಷಣದ ಬಗ್ಗೆ ಇರುವ ಕಾಳಜಿ ಇಷ್ಟಕ್ಕೆ ಮುಗಿಯುವುದಿಲ್ಲ. ತಮ್ಮ ತಾಂಡಾದಲ್ಲಿ 5ನೇ ತರಗತಿಯವರೆಗೆ ಮಾತ್ರ ಶಾಲೆ ಇರುವುದರಿಂದ 6ನೇ ತರಗತಿಗೆ ಮಕ್ಕಳು ಬೇರೆಡೆ ಹೆಸರು ನೋಂದಾಯಿಸುವುದು ಅನಿವಾರ್ಯ. ಅದಕ್ಕಾಗಿ ಮಕ್ಕಳು ಬಸ್‌ನಲ್ಲಿ ಹೋಗಿ ಬರುವ ವೆಚ್ಚವನ್ನು (ಬಸ್‌ಪಾಸ್) ಗ್ರಾಮಸ್ಥರೇ ನೀಡುತ್ತಾರೆ. ಅದರಲ್ಲಿಯೂ ಅತ್ಯಂತ ಬಡತನದಲ್ಲಿರುವ ಮಕ್ಕಳಿಗೆ ಉಚಿತ ನೋಟ್‌ಬುಕ್, ಸ್ಕೂಲ್ ಬ್ಯಾಗ್ ನೀಡುವ ದಾನಿಗಳು ಇದ್ದಾರೆ. - ಶಿವಕುಮಾರ ಕುಷ್ಟಗಿ