ಚೀನೀ ಸೈಕಲ್ಲು ವಿದೇಶಿ ಕಾರುಗಳ ಹಾವಳಿ ಜೋರಾಗಿದೆ. ಪರವಾಗಿಲ್ಲ, ಬಡವರಿಗೆ ನಮ್ಮದೇ ಸೈಕಲ್ಲುಗಳಾದರೂ ಇವೆಯಲ್ಲ ಎಂಬ ಸಮಾಧಾನವಾದರೂ ಇತ್ತು. ಈಗ ಅದೂ ಮೂರಾಬಟ್ಟೆಯಾಗುವ ಸಮಯ. ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೇಡ್ ಬೈಸಿಕಲ್‌ಗಳ ಹಾವಳಿ ಜೋರಾಗಿದೆ. ಇತ್ತೀಚೆಗೆ ಇದನ್ನು ಮನಗಂಡು ಭಾರತೀಯ ಕಸ್ಟಮ್ಸ್‌ನವರು ಚೀನಾ ಮೇಡ್ ಸೈಕಲ್‌ಗಳ ಆಮದಿನ ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದರು. ಆದರೂ ಈ ಸೈಕಲ್ಲುಗಳು ಬಾಂಗ್ಲಾ ಮೂಲಕವೋ, ಶ್ರೀಲಂಕಾ ಮೂಲಕವೋ ಕದ್ದು ಬರುವುದು ತಪ್ಪಿಲ್ಲ. ಇದರಿಂದ ದೇಶೀ ಸೈಕಲ್ ಮೇಕರ್‌ಗಳ ಹೊಟ್ಟೆಯ ಮೇಲೆ ಕೂಡ ಏಟು ಬೀಳುತ್ತಿದೆ. ಚೀನಾದ ಸೈಕಲ್‌ಗಳ ಮೇಲೆ ಹಾಕಿರುವ ತೆರಿಗೆ 30 ಶೇ. ಬಾಂಗ್ಲಾ ಹಾಗೂ ಶ್ರೀಲಂಕಾದ ಮೇಲಿರುವುದು 6 ಶೇ. ಹೀಗಾಗಿಯೇ ಇವು ಕಳ್ಳಮಾರ್ಗಗಳು. ಇದಕ್ಕೆ ಕಾರಣ ದಕ್ಷಿಣ ಏಷ್ಯಾ ಮುಕ್ತ ವಾಣಿಜ್ಯ ಒಪ್ಪಂದ ಎಂಬುದು ವರ್ತಕರ ದೂರು. ಇತ್ತೀಚೆಗೆ ಈ ಹೆಸರಿನಲ್ಲಿ ಮಲೇಷಿಯಾ, ಥಾಯ್ಲೆಂಡ್‌ಗಳಿಂದ ಕೂಡ ಸೈಕಲ್‌ಗಳು ಬರುತ್ತಿವೆಯಂತೆ. ಇವೆಲ್ಲ ಇಲ್ಲಿಯೇ ಮಾಡಲಾಗುವ ಸೈಕಲ್ಲುಗಳಿಂದ 20 ಶೇ. ಅಗ್ಗವಾಗಿದೆಯಂತೆ .ಅದಕ್ಕಾಗಿಯೇ ಗ್ರಾಹಕರು ಅದರತ್ತ ಮುಗಿಬೀಳುತ್ತಾರೆ.