ಜೀವನದಲ್ಲಿ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳು ಮನುಷ್ಯನ ವೈಯಕ್ತಿಕ ಅಥವಾ ವೃತ್ತಿ ಜೀವನದಲ್ಲಿ ಧನಾತ್ಮಕ ಮನೋಭಾವನೆ ಅಳವಡಿಸಿಕೊಳ್ಳುವುದು .... ಮನುಷ್ಯನ ವೈಯಕ್ತಿಕ ಅಥವಾ ವೃತ್ತಿ ಜೀವನದಲ್ಲಿ ಧನಾತ್ಮಕ ಮನೋಭಾವನೆ ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಹಾಗಾದರೆ ನಿತ್ಯ ಜೀವನದಲ್ಲಿ ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಜ್ಞರು ಇಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ನಮ್ಮ ಮನಸ್ಸಿನಿಂದ ಗೊಂದಲಕಾರಿ ಅಂಶಗಳನ್ನು ತೆಗೆದುಹಾಕಿ ತೊಂದರೆಗಳ ಬದಲಾಗಿ ಪರಿಹಾರಗಳ ಕಡೆಗೆ ಗಮನಹರಿಸಬೇಕು ಎಂದು ಅವರು ಹೇಳುತ್ತಾರೆ. ಟರೊಟ್ ಮತ್ತು ಏಂಜೆಲ್ ಕಾರ್ಡ್ ಓದುಗರಾದ ನಿಖಿತಾ ದುಗ್ಗಲ್ ಮತ್ತು ಮಧು ಕೊಟಿಯಾ ಹೀಗೆ ಹೇಳುತ್ತಾರೆ: ಗೊಂದಲಗಳನ್ನು ಮನಸ್ಸಿನಿಂದ ತೆಗೆದುಹಾಕಿ: ಕೆಲಸದಲ್ಲಿ ನಮಗೆ ಯಶಸ್ಸು ಸಿಗಬೇಕೆಂದರೆ ಮನಸ್ಸಿನಲ್ಲಿರುವ ಗೊಂದಲಗಳನ್ನು ಮನುಷ್ಯ ತೆಗೆದುಹಾಕಬೇಕು. ಮನಸ್ಸನ್ನು ಹಗುರ ಮಾಡಿಕೊಳ್ಳುವ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು. ಹಸಿರನ್ನು ಬೆಳೆಸಿ: ನಮ್ಮ ಮನೆ ಮನಸ್ಸನ್ನು ಪ್ರಶಾಂತಗೊಳಿಸಲು ಇರುವ ಜಾಗ. ನಮ್ಮ ಕೆಲಸದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ಗಿಡಗಳನ್ನು ನೆಡಿ. ಧನಾತ್ಮಕ ಗುಂಪಿನ ಬೆಂಬಲ: ಕಷ್ಟ ಕಾಲದಲ್ಲಿ ನಮಗೆ ಸಹಾಯ ಮಾಡಲು ನಮ್ಮ ಸುತ್ತಮುತ್ತಲಿರುವ ಜನರ ಧನಾತ್ಮಕ ಪ್ರೋತ್ಸಾಹದ ಮಾತುಗಳು ಸಹಾಯಕ್ಕೆ ಬರುತ್ತವೆ. ನಿಮ್ಮ ಸುತ್ತಮುತ್ತ ನೂರಾರು ಮಂದಿ ಓಡಾಡುತ್ತಿರಬಹುದು. ಆದರೆ ಅವರ ಚುಚ್ಚು, ಋಣಾತ್ಮಕ ಮಾತುಗಳು ನಿಮ್ಮ ಮನಸ್ಸನ್ನು ಕುಗ್ಗಿಸಬಹುದು. ನಿಮ್ಮ ಸುತ್ತಮುತ್ತಲಿನ ಜನರು ನಿಮಗೆ ಪ್ರೋತ್ಸಾಹ ನೀಡುವವರಾಗಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲಾದರೂ ಕೂಡ ನಿಭಾಯಿಸಬಹುದು. ಜೀವನದ ಬಗ್ಗೆ ಏಕಾಗ್ರತೆಯಿರಲಿ: ನಿಮ್ಮ ದೇಹ ಮತ್ತು ಮನಸ್ಸನ್ನು ನಿಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕು. ದೈಹಿಕ ಕಸರಿತ್ತಿನಿಂದ ಇದು ಸಾಧ್ಯ. ವ್ಯಾಯಾಮ ಮೂಲಕ ಮೆದುಳಿನಲ್ಲಿ ನೈಸರ್ಗಿಕ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ. ಅದು ನಮ್ಮನ್ನು ದಿನವಿಡೀ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಪರಿಹಾರಗಳತ್ತ ಗಮನಹರಿಸಿ ಸಮಸ್ಯೆಗಳ ಕಡೆಗೆ ಅಲ್ಲ: ನಿಮ್ಮ ಗಮನವನ್ನು ಎಲ್ಲಿಗೆ ಯಾವಾಗ, ಹೇಗೆ ಹರಿಸುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳ ಪರಿಸ್ಥಿತಿ ನಿಂತಿರುತ್ತದೆ. ನಿಮ್ಮ ಸಮಸ್ಯೆಗಳ ಬಗ್ಗೆ ಗಮನವಿಲ್ಲದಿದ್ದರೆ ಅದು ನಿಮ್ಮಲ್ಲಿ ಒತ್ತಡ ಮತ್ತು ಋಣಾತ್ಮಕ ಅಂಶವನ್ನು ಸೃಷ್ಟಿಸುತ್ತದೆ. ನಿಮ್ಮ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಿದರೆ ಅದು ಪರಿಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಧನಾತ್ಮಕ ಭಾವನೆಗಳನ್ನು ನೀಡುತ್ತದೆ, ಒತ್ತಡ ಕಡಿಮೆಗೊಳಿಸುತ್ತದೆ ಸ್ವಯಂ ಪರಿಣಾಮಕಾರಿತ್ವದ ಅರ್ಥ ಹುಟ್ಟಿಸುತ್ತದೆ.