ಅವಳ ಕೈ ಸೋಕಿದಾಗ... ಎಲ್ಲರೂ ಬರುವ ಮುನ್ನ ನನ್ನವಳಾಗಿದ್ದ ಅವಳು, ಎಲ್ಲರೊಳಗೂ ಒಂದಾದ ಮೇಲೆ ನನ್ನ ಕಣ್ಣಿಗೆ ಎಲ್ಲರಂತೆಯೇ ತೋರುತ್ತಿದ್ದಾಳೆ... ಎಲ್ಲರೂ ಬರುವ ಮುನ್ನ ನನ್ನವಳಾಗಿದ್ದ ಅವಳು, ಎಲ್ಲರೊಳಗೂ ಒಂದಾದ ಮೇಲೆ ನನ್ನ ಕಣ್ಣಿಗೆ ಎಲ್ಲರಂತೆಯೇ ತೋರುತ್ತಿದ್ದಾಳೆ... ಮೋಡದ ನಡುವೆ ಮಳೆ ಹನಿಯೊಂದು ಇಣುಕಿ ಭೂಮಿಯನ್ನು ಸ್ಪರ್ಶಿಸುವಂತೆ ಜನ ತುಂಬಿದ್ದ ಬಸ್ಸಿನಲ್ಲಿ ಆಕೆಯ ಕೈ ಸೋಕಿದಾಗ ಮೈಯಲ್ಲೇನೋ ರೋಮಾಂಚನ. ಮನದಲ್ಲಿ ತಳಮಳ. ಹೃದಯ ನನ್ನ ಮಾತು ಕೇಳದೇ ಜೋರಾಗಿ ಬಡಿಯಲಾರಂಭಿಸಿತು. ಜನರ ನೂಕು-ನುಗ್ಗಲಿನಿಂದ ಬಸ್ಸಿನ ಒಳಗೆ ಹೋದೆ ಆಕೆಯನ್ನು ಬಿಟ್ಟು. ಜನರ ಮಧ್ಯದಲ್ಲಿ ಅವಳ ಮುಖವನ್ನು ನೋಡಲು ಹರಸಾಸಹ ಪಟ್ಟೆ. ಅವಳ ಕೇಶದ ಮರೆಯಿಂದ ಸುಂದರ ನಗುಮೊಗವನ್ನು ಒಮ್ಮೆ ತೋರಿಸಿದಳು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನೋಡಿದಷ್ಟು ನೋಡಬೇಕೆನ್ನಿಸುತ್ತಿತ್ತು. ಅವಳ ನಗುವನ್ನು. ನನ್ನ ಆನಂದವನ್ನು ಅದುಮಿಡಲಾಗದೇ ಆ ಕ್ಷಣವೇ ಗೆಳೆಯನಿಗೆ ಅವಳ ವರ್ಣನೆಯನ್ನು ಮೆಸೇಜ್ ಮೂಲಕ ಹರಿದುಬಿಟ್ಟೆ ಅವನಿಂದ ರಿಪ್ಲೈ ಬರದಿದ್ದರೂ ನನ್ನ ವರ್ಣನೆ ಸಾಗುತ್ತಿತ್ತು. ಅವಳು ನನ್ನನ್ನೊಮ್ಮೆ ನೋಡಿದರೆ ಸಾಕು, ನನ್ನ ಜೊತೆ ಮಾತನಾಡಿದ ಅನುಭವವಾಗುತ್ತಿತ್ತು. ನನ್ನ ನೋಡಿ ನಕ್ಕರೆ ಸಾಕು, ನನ್ನ ಜೊತೆ ಏಳು ಹೆಜ್ಜೆ ಹಾಕಿದ ಹಾಗೆ ಕನಸಾಗುತ್ತಿತ್ತು. ಮುಂಗುರುಳನ್ನು ಪದೇ ಪದೇ ಕಿವಿಯ ಕಡೆ ಸಿಕ್ಕಿಸುವಾಗ ನನ್ನ ಮುಖದ ಸ್ಪರ್ಶವಾದಂತೆ, ಕಣ್ ರೆಪ್ಪೆಗಳು ನನ್ನನ್ನೇ ಆಕೆಯ ಬಳಿಗೆ ಕರೆದಂತೆ, ಕುಡಿ ನೋಟವು ನನ್ನ ಹೃದಯವು ಅವಳ ಹೃದಯವನ್ನು ಸೇರಲು ಅನುಮತಿಯನ್ನು ನೀಡಿದಂತೆ ಭಾಸವಾಗುತ್ತಿತ್ತು. ಅವಳ ಮಾತಿಗೆ ಸಹಕರಿಸುವ ತುಟಿಯು..! ಬೇಡ ಬಿಡಿ...ಒಟ್ಟಾರೆ ಚಿನ್ನದ ಗಣಿ, ಕಾವೇರಿ ನದಿ, ಆ ಚಂದಿರನನ್ನೂ ಇವಳಿಗೆ ಹೋಲಿಸಿದರೂ ಕಡಿಮೆಯೇ. ಮೊದಲ ನೋಟದಲ್ಲಿಯೇ ಮನಸ್ಸು ಗೆದ್ದ. ಹೃದಯ ಕದ್ದ ಹುಡುಗಿಯನ್ನು ಹೇಗಾದರೂ ಮಾಡಿ ಮಾತನಾಡಿಸಬೇಕೆಂದು ಆ ಜನರ ನೂಕು ನುಗ್ಗಲಿನಿಂದ ಜಗಳವಾಡುತ್ತಾ ದಾರಿ ಬಿಡಿಸಿಕೊಂಡು ಅವಳ ಇರುವಲ್ಲಿಗೆ ಬರುವುದರೊಳಗೆ ಅವಳು ಬಸ್ಸಿನಿಂದ ಕೆಳಗೆ ಇಳಿದು ಸರಸರನೆ ನಡೆದು ಹೋಗುತ್ತಿದ್ದಳು. ಆ ಸಂದರ್ಭದಲ್ಲಿ ಆಕೆಯ ತುಟಿಯಂಚಿನಲ್ಲಿ ನಗುವಿನತ್ತಾ? ಹತ್ತಿರ ಹೋಗಿ ನೋಡಲು ಧೈರ್ಯ ಬರಲಿಲ್ಲ... -ಮಂಜುನಾಥ್ ಹೆಚ್.ಆರ್.