ಪ್ರಾಚೀನ ಭಾರತದಲ್ಲಿ ಶೃಂಗಾರ ಶೃಂಗಾರ! ಈ ಪದ ಅದೆಷ್ಟು ಮಧುರ! ಅದೆಷ್ಟು ಮನೋಹರ! ಯೌವನಕಾಲದ ಬಂಗಾರ,. ಶೃಂಗಾರ! ಈ ಪದ ಅದೆಷ್ಟು ಮಧುರ! ಅದೆಷ್ಟು ಮನೋಹರ! ಯೌವನಕಾಲದ ಬಂಗಾರ, ಪ್ರೇಮಿಗಳ ಜೀವಕ್ಕೆ ಸಡಗರ, ಕವಿ, ಕಲಾವಿದರಿಗೆ ಜೇನಿನಾಗರ! ಸ್ತ್ರೀ ಪುರುಷರ ನಡುವಿನ ಆಕರ್ಷಣೆ ಪ್ರಕೃತಿ ಸಹಜವಾದುದು. ಅಂತೆಯೇ ಆನಂದ ನೀಡುವಂತಹುದು! ಇದು ಎಲ್ಲ ಜೀವಿಗಳಲ್ಲೂ ಉಂಟು, ನಿಜ. ಆದರೆ ಇತರ ಜೀವಿಗಳಲ್ಲಿ ಇದು ಸಂತಾನೋತ್ಪತ್ತಿಗಾಗಿ ಇರುವ ಸಹಜವಾದ ದೈಹಿಕ ಮಿಲನಕ್ಕಷ್ಟೇ ್ನಮೀತವಾಗಿದ್ದರೆ, ಮಾನವರಲ್ಲಿ ಕಲಾತ್ಮಕವಾಗಿ ವಿಕಾಸ ಹೊಂದಿದೆ, ಮನೋದೈಹಿಕವಲಯಗಳೆರಡರಲ್ಲೂ ಇದು ವಿಹರಿಸುತ್ತದೆ. ಮನದಲ್ಲಿ ಮೊಗ್ಗಾಗಿ ಮೊಳೆತು, ತನುವಲ್ಲಿ ಹೂವಾಗಿ ಅರಳಿ, ಪುನಃ ಮನದಲ್ಲೇ ಹಣ್ಣಾಗಿ ಪರಿಪೂರ್ಣ ಆನಂದವನ್ನು ಕೊಡುವ ಈ ಶೃಂಗಾರ, ಒಂದು ಸುಂದರ ಅನುಭವ. ಕಾಮವೆಂಬುದು ಜೀವನಕ್ಕೆ ಅವಶ್ಯಕವಾದ ್ನ್ತ್ರಪುರುಷರ ದೈಹಿಕ ಮಿಲನವನ್ನು ಸೂಚ್ನಿದರೆ, ಪ್ರೇಮವೆಂಬುದು ಅವರ ಮಾನ್ನಕ ಒಂದಾಗುವಿಕೆಯನ್ನು ಸೂಚಿಸುತ್ತದೆ. ಆದರೆ ಶೃಂಗಾರವೆಂಬ ಪದವು ಈ ಎರಡನ್ನೂ ಬಹಳ ಕಲಾತ್ಮಕವಾಗಿ ಸೂಚಿಸುತ್ತದೆ ಎಂದು ಹೇಳಬಹುದು. ಶೃಂಗಾರ ಎಂಬ ಪದದ ನಿರ್ವಚನವನ್ನು ಭೋಜರಾಜನು ತನ್ನ 'ಶೃಂಗಾರ ಪ್ರಕಾಶ' ಎಂಬ ಗ್ರಂಥದಲ್ಲಿ, 'ಯೇನ ಶೃಂಗಂ ರೀಯತೇ ಸ ಶೃಂಗಾರಃ' ಎಂದು ಸೊಗಸಾಗಿ ಬರೆದಿದ್ದಾನೆ. ಶೃಂಗ ಎಂದರೆ 'ಜಿಂಕೆಯ ಕೊಂಬು', ಶೃಂಗಾರ ಎಂದರೆ 'ಸುಖದ ಇಂಥ ಕೊಂಬಿನ ತುತ್ತತುದಿಯನ್ನು ತಲುಪುವುದು' ಎಂದು. ಅಂತೆಯೇ ತನ್ನ ಸರಸ್ವತೀಕಂಠಾಭರಣವೆಂಬ ಗ್ರಂಥದಲ್ಲಿ, 'ರಸೋಭಿಮಾನೋಹಂಕಾರಃ ಶೃಂಗಾರ ಇತಿ ಗೀಯತೇ'- ಅಂದರೆ, 'ನಾನು ಎಂಬ ಅಭಿಮಾನರೂಪವಾದ ಅಹಂಕಾರ ರಸವನ್ನೇ ಶೃಂಗಾರ' ಎನ್ನುತ್ತಾನೆ. ಇದು ಜಂಭ ಅಥವಾ ಗರ್ವ ಎಂಬ ಅರ್ಥದ ಅಹಂಕಾರವಲ್ಲ. ನಾನು ಎಂಬ ಅಭಿಮಾನರೂಪದ್ದಾಗಿದ್ದು, ಆತ್ಮಗುಣಸಂಪನ್ನವಾಗಿರುತ್ತದೆ ಹಾಗೂ ಅನೇಕ ಜನ್ಮಗಳ ಸಂಸ್ಕಾರದಿಂದ ್ನದ್ಧಿಸುತ್ತದೆ ಎನ್ನುತ್ತಾನೆ. ಹಾಗಾಗಿ ಇದು ಬರಿಯ ್ನ್ತ್ರಪುರುಷಪ್ರೇಮಭಾವವಷ್ಟೇ ಅಲ್ಲದೇ ಯಾವುದೇ ಪ್ರಿಯವಾದ ಭಾವವಾಗಬಹುದು. ಯಾವುದೇ ವಿಷಯವಾಗಲೀ, ಅದನ್ನು ಅಭಿಮಾನವು ಆವರ್ನಿದರೆ ಅದು ರಸಮಯ ಅಥವಾ ಪ್ರಿಯವಾಗುತ್ತದೆ! ಹಾಗಾಗಿ ಭೋಜನು ಶೃಂಗಾರವೊಂದೇ ರಸ, ಮಿಕ್ಕ ರಸಗಳು, ಅದರ ಜನ್ಯರಸಗಳು ಅಥವಾ ಭಾವಗಳು ಎನ್ನುತ್ತಾನೆ. ಇತರ ಲಾಕ್ಷಣಿಕರು ಒಂಭತ್ತು ರಸಗಳಿವೆಯೆಂದೂ, ಕೆಲವರು ಎಂಟೆಂದೂ ಕೆಲವರು ಹತ್ತೆಂದೂ ಹೇಳಿದ್ದಾರೆ. ಉಪನಿಷತ್ತುಗಳಲ್ಲಿ 'ರಸೋ ವೈಸಃ' ಅಂದರೆ ಭಗವಂತನು ರಸರೂಪಿಯಾಗಿದ್ದಾನೆ ಎಂಬಂತೆ ರಸವು ಆನಂದಮಯವಾದುದು, ಬ್ರಹ್ಮಭಾವದಿಂದ ಕೂಡಿರುವುದು ಎಂಬರ್ಥದಲ್ಲಿ ಶಾಂತರಸವೇ ಪ್ರಧಾನರಸ ಎಂದು ಅಭಿನವಗುಪ್ತನು ಹೇಳಿದ್ದಾನೆ. ಆದರೆ ಭೋಜನು, ಇರುವುದೊಂದೇ ರಸ, ಅದು ಶೃಂಗಾರ ಎಂದಿದ್ದಾನೆ. ಏನೇ ಆದರೂ ಶೃಂಗಾರವು ್ನ್ತ್ರಪುರುಷ ಪ್ರಣಯಾತ್ಮಕವಾದ ರಸವೆಂದೇ ಪ್ರಚಲಿತ. ಶೃಂಗಾರ, ಹಾಸ್ಯ, ಕರುಣಾ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತ ಎಂಬ ಒಂಬತ್ತು ರಸಗಳಲ್ಲಿ ಶೃಂಗಾರವೇ ಮೊದಲನೆಯದು ಹಾಗೂ ಪ್ರಧಾನವಾದುದು. ಜನಪ್ರಿಯವೂ ಲೋಕರಂಜಕವೂ ಆದ ಇದು ಪ್ರಕೃತ್ನಿದ್ಧವಾದುದೂ ಪಶುಪಕ್ಷಿಗಳೂ ಸೇರಿದಂತೆ ಎಲ್ಲೆಲ್ಲೂ ಕಂಡು ಬರುವಂತಹದ್ದೂ ಆದುದರಿಂದ ಪ್ರಮುಖವಾದ ರಸವಾಗಿದೆ. ಇದರ ಸ್ಥಾಯಿಭಾವ ರತಿ ಅಥವಾ ್ನ್ತ್ರ ಪುರುಷರ ಪರಸ್ಪರ ಪ್ರೇಮ. 'ಮಮ್ಮಟ'ನು ್ನ್ತ್ರಪುರುಷರ ಪರಸ್ಪರ ಪ್ರೇಮಾಭಿವ್ಯಕ್ತತೆಗೆ ಮಾತ್ರವೇ ಶೃಂಗಾರವೆಂದು ಕರೆದು ಇತರರನ್ನು ಕುರಿತ ಪ್ರೀತಿಯ ಅಭಿವ್ಯಕ್ತತೆಗೆ ಭಾವ ಎನ್ನುತ್ತಾನೆ. ಕನ್ನಡದ 'ನೇಮಿಚಂದ್ರ'ನೂ 'ಶೃಂಗಾರರಸಮೇ ರಸಂ, ್ನ್ತ್ರರೂಪಮೇ ರೂಪಂ' ಎನ್ನುತ್ತಾನೆ. ಇದು ರಸಗಳ ರಾಜ! ಪ್ರಾಚೀನ ಭಾರತದಲ್ಲಿ ಶೃಂಗಾರಕ್ಕೆ, ಶೃಂಗಾರಮಯವಾದ ಜೀವನಕ್ಕೆ ಬಹಳ ಪ್ರಾಮುಖ್ಯತೆಯಿತ್ತು. ಇಂದಿನ ದಿನಗಳಲ್ಲಿ ಕಾಮ,ಪ್ರೇಮ, ಶೃಂಗಾರ ಮೊದಲಾದ ಪದಗಳನ್ನು ಕೇಳಿದ ಮಾತ್ರಕ್ಕೆ ಮೂಗು ಮುರಿಯುವ ಮಡಿವಂತಿಕೆಯ ಗೊಡ್ಡರೂ, ತೆರೆಯ ಮರೆಯಲ್ಲಿ ಮಾತ್ರ ಗುಟ್ಟಾಗಿ ವಿಚಾರ್ನಿ ಚರ್ಚಿಸುವ ಮುಗ್ಧರೂ ಆಷಾಢಭೂತಿಗಳೂ, ಹಿಂದಿನವರಿಗಿಂತಲೂ ತಮಗೇ ಇವುಗಳ ಬಗ್ಗೆ ಬಹಳ ಗೊತ್ತು ಎಂದು ಬೀಗುವ ಯುವಕರೂ ಪ್ರಾಚೀನ ಭಾರತದ ಕಾಮ, ಶೃಂಗಾರಗಳ ಬಗೆಗಿನ ಅತ್ಯುತ್ತಮ ಸಾಧನೆಗಳನ್ನು ಒಮ್ಮೆ ಅವಲೋಕ್ನಿದರೆ, ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಈಗ ಇವುಗಳಲ್ಲಿ ಬಹಳ ಮುಂದುವರೆದವರೆನ್ನಿಕೊಂಡಿರುವ ಪಾಶ್ಚಾತ್ಯರು ವಿಕ್ಟೋರಿಯಾ ಯುಗದಲ್ಲಿ ಕ್ರೈಸ್ತಮತದ ಪ್ರಭಾವದಿಂದ ಕಾಮವನ್ನು ಪಾಪವೆಂದೂ ಶೃಂಗಾರಭಿವ್ಯಕ್ತತೆಯನ್ನು ಅಶ್ಲೀಲವೆಂದೂ ಭಾವ್ನಿ ಇವು ಸಂತಾನೋತ್ಪತ್ತಿಗಷ್ಟೇ ಇರುವ ಅನಿವಾರ್ಯ ಕ್ರಿಯೆಯೆಂದು ಇವುಗಳ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ತಾಳಿದ್ದರು. ಹಾಗಾಗಿ, ನಮ್ಮನ್ನಾಳಿದ ಬ್ರಿಟಿಷರು ನಮ್ಮ ಮೇಲೂ ಈ ಭಾವನೆಗಳನ್ನು ಹೇರಿ, ನಮ್ಮಲ್ಲಿ ಗೊಂದಲವುಂಟುಮಾಡಿದರು. ಆದರೆ ಪ್ರಾಚೀನ ಭಾರತದಲ್ಲಿ ಕಾಮವು ಕಲಾತ್ಮಕವಾಗಿ ಶೃಂಗಾರವೆಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಿತ್ತು. ನಾಟ್ಯಶಾಸ್ತ್ರದಲ್ಲಿ ಶೃಂಗಾರ ರಸದ ಅಧಿದೇವತೆ ಸಾಕ್ಷಾತ್ ನಾರಾಯಣನೇ ಆಗಿದ್ದಾನೆ. ಆಗಲೇ ಹೇಳಿದಂತೆ, ಶೃಂಗಾರವೆಂದರೆ ಬರಿಯ ದೈಹಿಕ ಕಾಮುಕತೆಯಲ್ಲ. ಒಟ್ಟಾರೆ ರಸಮಯವಾದ ಅನುಭವ, ಕಾಮವೂ ಸೇರಿದಂತೆ ಸಂತೋಷಮಯವಾದ, ಭೋಗಮಯವಾದ ಜೀವನ, ಬದುಕಿನ ಪ್ರೀತಿಯೆನ್ನಬಹುದು. ಈ ಭಾವದಲ್ಲೇ 'ಆನಂದವರ್ಧನ'ನು ತನ್ನ 'ಧ್ವನ್ಯಾಲೋಕ' ಗ್ರಂಥದಲ್ಲಿ ಹೇಳುತ್ತಾನೆ- ಶೃಂಗಾರೀ ಚೇತ್ ಕವಿಃ ಕಾವ್ಯೇ ಜಾತಂ ರಸಮಯಂ ಜಗತ್ ೤ ಸ ಏವ ವೀತರಾಗಶ್ಚೇತ್ ನೀರಸಂ ಸರ್ವಮೇವ ತತ್ ॥ 'ಕವಿಯು ಶೃಂಗಾರಿಯಾದರೆ, ಅರ್ಥಾತ್ ರ್ನಕನಾದರೇ, ಅವನ ಕಾವ್ಯದಲ್ಲಿ ಜಗತ್ತೇ ರಸಮಯವಾಗುತ್ತದೆ. ಅದೇ ಅವನು ಅರ್ನಕನಾದರೆ, ಎಲ್ಲವೂ ನೀರಸವಾಗುತ್ತದೆ!' ಹೀಗೆ ಎಲ್ಲವನ್ನೂ ಸೌಂದರ್ಯದ, ರಸಮಯವಾದ ದೃಷ್ಟಿಯಿಂದ ನೋಡಿ ಅನುಭವಿಸಬೇಕೆಂಬುದು ಭಾರತೀಯರ ಅಭಿಮತ. ್ನ್ತ್ರ ಪುರುಷ ಪ್ರೇಮವು ಈ ಎಲ್ಲೆಂದರಲ್ಲಿ ಹೆಚ್ಚು ಅಭಿಮಾನಪೂರಕವಾದದ್ದೆಂದು ಹೇಳಬಹುದು. ಪ್ರಕೃತಿಸಹಜವಾದ ್ನ್ತ್ರಪುರುಷರ ಆಕರ್ಷಣೆಯನ್ನು ಶೃಂಗಾರದ ಸಂಸ್ಕಾರದಿಂದ ಅನುಭವ್ನಿದರೆ ಅದಕ್ಕಿಂತ ಆನಂದಮಯವಾದುದು ಯಾವುದೂ ಇಲ್ಲ. ಪ್ರೇಮಿಯು ತನ್ನ ಪ್ರಿಯತಮೆಯನ್ನು ಸಮರ್ಪಣಾಭಾವದಿಂದ ಅಪ್ಪಿಕೊಂಡಾಗ, ಅವನು ಒಳಗೂ ಹೊರಗೂ ಏನನ್ನೂ ಕಾಣದೆ ತನ್ನ ಇರುವಿಕೆಯನ್ನೂ ಮರೆತು, ಒಂದು ಅವರ್ಣನೀಯ ಆನಂದಾನುಭೂತಿಯನ್ನು ಹೊಂದುತ್ತಾನೆ. ಇದೂ ಒಂದು ಯೋಗವೇ, ಬ್ರಹ್ಮಾನಂದದ ಸಹೋದರನೇ ಎನ್ನಬಹುದು. ಇದು ಧರ್ಮಕ್ಕೆ ಪೂರಕವಾಗಿದ್ದರೆ, ಅದು ಸ್ವಯಂ ತಾನೇ ಎಂದು ಭಗವಂತನೇ ಭಗವದ್ಗೀತೆಯಲ್ಲಿ, 'ಧರ್ಮಾವಿರುದ್ಧೋ ಭೂತೇಷು ಕಾಮ್ನ್ಮೋ ಭರತರ್ಷಭ' ಅಂದರೆ, 'ಎಲೈ ಭರತರ್ಷಭನೇ! ಧರ್ಮಕ್ಕೆ ವಿರುದ್ಧವಲ್ಲದ ಕಾಮವು ನಾನೇ ಆಗಿದ್ದೇನೆ!' ಎಂದು ಅರ್ಥ. 'ಯಾವುದು ಭೂಮಿಯನ್ನು ಅಥವಾ ಜೀವನವನ್ನು ಧರಿಸುವುದೋ ಅದೇ ಧರ್ಮ' ಎಂದಿರುವುದರಿಂದ, ಇಲ್ಲಿ ಧರ್ಮಕ್ಕೆ ಪೂರಕವೆಂದರೆ ಯಾರಿಗೂ ತೊಂದರೆಯಾಗದೇ ಉಳ್ನಿ, ಪೋಷ್ನಿ ಬೆಳೆಸುವ ಸತ್ಕಾಮವೆಂದು ಅರ್ಥ. ಹೀಗೆ ಧರ್ಮಕ್ಕೆ ವಿರುದ್ಧವಲ್ಲದ ಕಾಮ, ಭಗವತ್ಸ್ವರೂಪವೇ ಹೌದು. ಹಾಗಾಗಿಯೇ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳಲ್ಲಿ ಕಾಮವೂ ಒಂದೆಂದು ಭಾರತೀಯರು ಸಾರಿದ್ದಾರೆ. ಅಂತೆಯೇ, ವೇದೋಪನಿಷತ್ತುಗಳಲ್ಲೂ ಕಾಮದ ಬಗ್ಗೆ ಪ್ರಶಂಸನೀಯ ವಾಕ್ಯಗಳನ್ನು ನೋಡಬಹುದು. ಉದಾಹರಣೆಗೆ ಕೆಲವನ್ನು ನೋಡೋಣ- -ಕಾಮೋ ಜಜ್ಞೇ ಪ್ರಥಮೋ ೤ 'ಎಲ್ಲಕ್ಕಿಂತ ಮೊದಲು ಕಾಮವು ಹುಟ್ಟಿತು' (ಅಥರ್ವವೇದ) -ಕಾಮೋಕಾರ್ಷೀತ್ ಕಾಮಃ ಕರೋತಿ ನಾಹಂ ಕರೋಮಿ ೤ 'ಕಾಮದಿಂದಲೇ ಎಲ್ಲವೂ ನಡೆಯುತ್ತದೆ. ಕಾಮವೇ ಮಾಡುತ್ತದೆ, ನಾನು ಮಾಡುವುದಿಲ್ಲ.' (ಮಹಾನಾರಾಯಣೋಪನಿಷತ್) -ಯಥಾ ವೃಕ್ಷಂ ಲಿಬುಜಾ ಸುಮಂತಂ ಪರಿಷಸ್ವಜೇ ೤ ಏವಂ ಪರಿಷಸ್ವಜ ಮಾಮ್ ೤ 'ಮರವನ್ನು ಬಳ್ಳಿಯು ಸುತ್ತಿಕೊಳ್ಳುವಂತೆ ನೀನು ನನ್ನನ್ನು ಅಪ್ಪಿಕೋ (ಅಥರ್ವವೇದ)'. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಒಂದು ಸುಂದರ ವಿಚಾರವಿದೆ. ಅಲ್ಲಿ ಹೇಳಿರುವಂತೆ, ಸೃಷ್ಟಿಗೆ ಮೊದಲು ಭಗವಂತನೊಬ್ಬನೇ ಇದ್ದನಂತೆ. ಆಗ ಅವನಿಗೆ ರಮಿಸಲಾಗಲಿಲ್ಲ. ಹಾಗೆಯೇ, ಈಗಲೂ ಯಾರಾದರೂ ಒಬ್ಬರೇ ಇದ್ದರೆ, ಅವರು ಸಂತೋಷಿಸುವುದಿಲ್ಲ ಅಥವಾ ರಮಿಸುವುದಿಲ್ಲ. ಹಾಗಾಗಿ, ಭಗವಂತನು ಎರಡನೆಯದೊಂದನ್ನು ಬಯ್ನದನು. ಆಗ ಅವನು ್ನ್ತ್ರಪುರುಷರು ಆಲಿಂಗಿತರಾಗಿರುವಂಥ ಭಾವವೊಂದನ್ನು ತಾಳಿ ಅಂಥ ಒಂದು ಸಂಯುಕ್ತ ಶರೀರವಾದನು. ಆ ವಿಶೇಷ ಶರೀರವನ್ನು ಎರಡಾಗಿ ್ನಳಲು, ಆ ಎರಡೂ ಭಾಗಗಳು ಪತಿ, ಪತ್ನಿಯರಾದರು. ಆದ್ದರಿಂದ ಪುರುಷ ಶರೀರವು, ಅರ್ಧ ಬೀಜದಂತೆ ಎಂದು ಯಾಜ್ಞವಲ್ಕ್ಯನು ಹೇಳಿದ್ದಾನೆ. ಆ ಅರ್ಧವು ್ನ್ತ್ರಯೊಂದಿಗೆ ಬೆರೆತಾಗ ಪರಿಪೂರ್ಣವಾಗುತ್ತದೆ. ಈ ಇಬ್ಬರಿಂದಲೇ ಮನುಷ್ಯರು ಹುಟ್ಟಿದರು. ಈ ವಿಚಾರವೇ ಪುರಾಣಗಳಲ್ಲಿ ಸ್ವಾಯಂಭುವ ಮನು, ಶತರೂಪೆಯರ ಕಥೆಯಾಗಿ ಬಂದಿದೆ. ಬ್ರಹ್ಮನು, ನವಬ್ರಹ್ಮರೆಂಬ ಋಷಿಗಳನ್ನು ಸೃಷ್ಟ್ನಿದರೂ ಸೃಷ್ಟಿಯು ಮುಂದುವರೆಯದಿರಲು, ಅವನು ಒಂದು ದೇಹವನ್ನು ಸೃಷ್ಟ್ನಿ ಅದನ್ನು ಎರಡಾಗ್ನಿದನು. ಒಂದು ಗಂಡಾಯಿತು. ಅವನೇ 'ಸ್ವಾಯಂಭುವ ಮನು', ಇನ್ನೊಂದು ಹೆಣ್ಣಾಯಿತು, ಅದೇ 'ಶತರೂಪೆ'. ಇವರಿಬ್ಬರ ಸಂಯೋಗದಿಂದ ಸೃಷ್ಟಿ ಮುಂದುವರೆಯಿತು. ಹೀಗೆ ್ನ್ತ್ರಪುರುಷರು ಒಂದೇ ಶಕ್ತಿಯ ಎರಡು ಅಂಗಗಳು ಹಾಗೂ ಇವರಿಬ್ಬರ ಸೇರುವಿಕೆಯಿಂದ ಆ ಶಕ್ತಿ ಪರಿಪೂರ್ಣವಾಗುತ್ತದೆ ಎಂಬ ಭಾರತೀಯ ಕಲ್ಪನೆಯಲ್ಲಿ ಕಾಮಕ್ಕೆ ಒಂದು ಪೂಜ್ಯ, ಉನ್ನತ ಸ್ಥಾನವನ್ನು ನೀಡಲಾಗಿದೆ. ತಾಂತ್ರಿಕ ಸಾಹಿತ್ಯ, ಪೂಜೆಗಳಲ್ಲೂ ್ನ್ತ್ರಪುರುಷ ಮೈಥುನವನ್ನು ಶಕ್ತಿ ಮತ್ತು ಶಿವರ ಸಂಗಮ ಎಂದು ಹೇಳಲಾಗಿದೆ. ಭಾರತೀಯರು ಜೀವನಕ್ಕೆ ಹಾಗೂ ಸಂತೋಷಕ್ಕೆ ಬೇಕಾದ ಯಾವುದನ್ನೂ ತುಚ್ಛ ಅಥವಾ ಅನಗತ್ಯ ಎಂದು ನಿರಾಕರಿಸಲಿಲ್ಲ. ಎಲ್ಲ ಜೀವಿಗಳಂತೆ, ಮನುಷ್ಯರಿಗೂ ಆಹಾರ, ನಿದ್ರೆಗಳಂತೆ ಕಾಮವೂ ಅವಶ್ಯಕ ಎಂದು ಪ್ರಾಚೀನ ಭಾರತೀಯರು ಚೆನ್ನಾಗಿ ತಿಳಿದಿದ್ದರು. ಆದರೆ ಪ್ರಾಣಿಗಳಲ್ಲಿರುವಂತೆ, ಕಾಮವು ಕೇವಲ ಸಂತಾನೋತ್ಪತ್ತಿ ಮತ್ತು ಲೈಂಗಿಕ ತೃಪ್ತಿಗಳಿಗಷ್ಟೇ ಮೀಸಲಾಗಿರುವುದಿಲ್ಲ. ವರ್ಷಪೂರ್ತಿ ಬೇಕಾಗುತ್ತದೆ. ಆದ್ದರಿಂದ ಮನುಷ್ಯರಲ್ಲಿ ಪರಿಪೂರ್ಣ ಕಾಮತೃಪ್ತಿಯಾಗಬೇಕೆಂದರೆ ಸಾಕಷ್ಟು ಪೂರ್ವ್ನದ್ಧತೆ, ಪ್ರಚೋದನೆಗಳ ಅವಶ್ಯಕತೆಯಿರುತ್ತದೆ. ವೈಜ್ಞಾನಿಕವಾಗಿಯೂ ದೃಢಪಟ್ಟಿರುವ ಹಾಗೆ, ಪುರುಷರಲ್ಲಿ ಕಾಮಭಾವನೆಗಳು ಬೇಗನೆ ಅರಳಿದರೆ, ್ನ್ತ್ರಯರಲ್ಲಿ ಅವು ಅರಳುವುದು ನಿಧಾನ. ಇದಕ್ಕೆ ಪುರುಷರಿಂದ ಸಾಕಷ್ಟು ಪ್ರಚೋದನೆ ಬೇಕು. ಇದನ್ನು ಕೂಡಾ ಪ್ರಾಚೀನ ಭಾರತೀಯರು ಬಹಳ ಚೆನ್ನಾಗಿ ಅರಿತಿದ್ದರು. ಹಾಗಾಗಿಯೇ ಅವರು ರತಿಕ್ರೀಡೆಯ ಈ ಪ್ರಚೋದನಾಂಶಗಳಾದ ಚುಂಬನ, ಆಲಿಂಗನ, ನಖಕ್ಷತ, ದಂತಕ್ಷತ, ್ನತ್ಕಾರ ್ನ ್ನ ಮೊದಲಾದ ಮಧುರ ಶಬ್ದಗಳನ್ನು ಮಾಡುವುದು, ಪ್ರಹರಣ (ಮೆಲ್ಲನೆ ಹೊಡೆಯುವುದು) ಮೊದಲಾದ ಶೃಂಗಾರದಾಟಗಳಿಗೆ ಹೆಚ್ಚಿನ ಒತ್ತು ಕೊಟ್ಟರು. ಕಾಮಶಾಸ್ತ್ರಜ್ಞರು ಈ ಕ್ರಿಯೆಗಳಿಗೆ ಬಾಹ್ಯರತಿಯೆಂದೂ, ಸಂಭೋಗದ ಕೊನೆಯ ಕ್ರಿಯೆಗೆ ಅಭ್ಯಂತರ ರತಿಯೆಂದೂ ಕರೆದಿದ್ದಾರೆ. ಇಂಥ ಶೃಂಗಾರದಾಟಗಳಿಂದ ಕಾಮವನ್ನು ಹೆಚ್ಚು ಕಲಾತ್ಮಕವಾಗ್ನಿಕೊಂಡರೆ ಉನ್ನತ ಆನಂದವನ್ನೂ ಪಡೆಯಬಹುದು ಹಾಗೂ ಸಂಗಾತಿಗಳಿಗೆ ಬೇಸರವೂ ಏಕಾಂತತೆಯೂ ಉಂಟಾಗಲಾರದು ಎಂದು ಸಾರಿದರು. ಈ ಎಲ್ಲ ವಿಚಾರಗಳನ್ನೂ ಕ್ರೋಢೀಕರ್ನಿ, ಹಾಗೆಯೇ ಅಂದಿನ ದಿನಗಳಲ್ಲಿ ಪ್ರಚಲಿತವಿದ್ದ ಸಾಮಾಜಿಕ ಕಾಮಜೀವನ, ರಾಜರಾಣಿಯರ ಕಾಮಜೀವನ, ವೇಶ್ಯೆಯರ ಕಾಮಜೀವನ ಮೊದಲಾದ ವಿಚಾರಗಳನ್ನೂ ಅಂತೆಯೇ ಕಾಮಜೀವನವನ್ನು ಸುಧಾರಿಸಲು ಮತ್ತು ಸುಂದರವಾಗಿಸಲು ಬೇಕಾದ ಹಲವಾರು ಔಷಧಿಗಳು, ಸೌಂದರ್ಯವರ್ಧಕಗಳ ವಿಚಾರಗಳನ್ನೂ, ಶೃಂಗಾರ ಜೀವನಕ್ಕೆ ಅಗತ್ಯವಾದ ಗಾಯನ, ವಾದ್ಯ ಸಂಗೀತ, ನರ್ತನ, ಸಾಹಿತ್ಯ, ಕವಿತ್ವ, ಗೃಹಾಲಂಕಾರ ಮೊದಲಾಗಿ ಅರವತ್ತನಾಲ್ಕು ಕಲೆಗಳ ವಿಚಾರಗಳನ್ನೂ ಸುಂದರವಾದ ಸೂತ್ರಗಳಲ್ಲಿ 'ಕಾಮಸೂತ್ರ' ಎಂಬ ಹೆಸರಿನಲ್ಲಿ, ಇದಕ್ಕೆ ಧರ್ಮದ ಲೇಪನವನ್ನಿತ್ತು 'ವಾತ್ಸ್ಯಾಯನ'ನೆಂಬ ಋಷಿಯು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಸಂಸ್ಕೃತದಲ್ಲಿ ಬರೆದನು. ವಿಶ್ವದಲ್ಲೇ ಇದು ಮೊಟ್ಟಮೊದಲ ಹಾಗೂ ಅತ್ಯುತ್ತಮ ಕಾಮಶಾಸ್ತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ವಾತ್ಸ್ಯಾಯನನೇ ಹೇಳುವಂತೆ, ಇದೇ ಮೊದಲನೆಯದಲ್ಲ. ಅಥರ್ವವೇದವೇ ಕಾಮಶಾಸ್ತ್ರಕ್ಕೆ ಮೂಲವೆನ್ನಬಹುದು. ವಾತ್ಸ್ಯಾಯನನು ಹೇಳುವಂತೆ ಕಾಮಶಾಸ್ತ್ರವನ್ನು ರಚ್ನಿದವನು ಶಿವನ ವಾಹನವಾದ ನಂದಿ. ಆನಂತರ ವಿಸ್ತೃತವಾಗಿದ್ದ ಈ ಕಾಮಶಾಸ್ತ್ರವನ್ನು 'ಶ್ವೇತಕೇತು' ಎಂಬ ಋಷಿಯೂ, ಅನಂತರ ಪಾಂಚಾಲದ 'ಬಾಭ್ರವ್ಯ'ನೂ ಸಂಕ್ಷೇಪಗೊಳ್ನಿ ಕೊನೆಗೆ ವಾತ್ಸ್ಯಾಯನನು ಇದನ್ನು ಇನ್ನೂ ಸಂಕ್ಷೇಪ್ನಿ ಸೂತ್ರಗಳ ರೂಪದಲ್ಲಿ ಬರೆದನೆಂದು ಅವನೇ ಹೇಳಿಕೊಂಡಿದ್ದಾನೆ. ಹೀಗೆ ಕಾಮಶಾಸ್ತ್ರಕ್ಕೂ ನಮ್ಮಲ್ಲಿ ದೈವ ಮೂಲವನ್ನು ಗುರುತ್ನಿದ್ದಾರೆ. ಶಿವಪಾರ್ವತಿಯರು ನೂರು ದಿವ್ಯವರ್ಷಗಳ ಕಾಲ ಗುಹೆಯಲ್ಲಿ ನಡ್ನೆದ ರತಿಕೇಳಿಯ ಮಾತುಕತೆಗಳನ್ನು ದ್ವಾರದಲ್ಲಿ ನಿಂತು ಕೇಳಿದ್ದು ನಂದಿಗೆ ಕಾಮಶಾಸ್ತ್ರವನ್ನು ರಚಿಸಲು ಸ್ಫೂರ್ತಿಯಾಯಿತಂತೆ. ವಾತ್ಸ್ಯಾಯನನ ನಂತರ ಕೊಕ್ಕೋಕನೆಂಬ ಪಂಡಿತನು 'ರತಿರಹಸ್ಯ' ಅಥವಾ 'ಕೋಕಶಾಸ್ತ್ರ'ವೆಂಬ ಗ್ರಂಥವನ್ನೂ, ಕಲ್ಯಾಣಮಲ್ಲನೆಂಬುವನು 'ಅನಂಗರಂಗ'ವೆಂಬ ಗ್ರಂಥವನ್ನೂ ಜ್ಯೋತಿರೀಷ್ವರನು 'ಪಂಚಸಾಯಕ'ವನ್ನೂ, ಜಯದೇವನು 'ರತಿಮಂಜರಿ'ಯನ್ನೂ, ಪದ್ಮಶ್ರೀ ಎಂಬುವವನು 'ನಾಗರಸರ್ವಸ್ವ'ವನ್ನೂ, ಕುಮಾರ ಹರಿಹರನು 'ಶೃಂಗಾರರಸಪ್ರಬಂಧದೀಪಿಕ'ವನ್ನೂ, ಮೀನನಾಥನು 'ಸ್ಮರದೀಪಿಕ'ವನ್ನೂ, ಪ್ರೌಢದೇವರಾಜರು 'ರತಿರತ್ನಪ್ರದೀಪಿಕ'ವನ್ನೂ, ಹೀಗೆ ಅನೇಕ ಕಾಮಶಾಸ್ತ್ರಜ್ಞರು ಇಂಥ ಹಲವು ಗ್ರಂಥಗಳನ್ನು ಸಂಸ್ಕೃತದಲ್ಲಿ ರಚ್ನಿದರು. ಕನ್ನಡದಲ್ಲೂ ಕಲ್ಲರಸನ 'ಜನವಶ್ಯ', 'ಮದನತಿಲಕ' ಮೊದಲಾದ ಕಾಮಶಾಸ್ತ್ರದ ಗ್ರಂಥಗಳಿವೆ. ಇವುಗಳೆಲ್ಲವೂ ಬಹುತೇಕ ವಾತ್ಸ್ಯಾಯನನ ವಿಚಾರಗಳನ್ನೇ ಹೇಳಿದರೂ, ಕೆಲವು ಹೊಸ ವಿಚಾರಗಳನ್ನೂ ಹೊಂದಿವೆ. ಆದರೆ ವಾತ್ಸ್ಯಾಯನನ ಕಾಮಸೂತ್ರವು ಪ್ರಾಚೀನ ಭಾರತದ ಕಾಮ, ಶೃಂಗಾರ ವಿಚಾರಗಳು ಹಾಗೂ ಜೀವನ ವಿವರಣೆಗಳನ್ನೂ ಹೊಂದಿರುವ ವಿಶ್ವಕೋಶವೆನ್ನಬಹುದು. ಕಾಮವೆಂದರೆ ಮೂಲತಃ ಬಯಕೆ. ಹಾಗಾಗಿ ಪಂಚೇಂದ್ರಿಯಗಳಿಂದ ಅನುಭವಿಸುವ ಎಲ್ಲ ಸುಖವೂ ಕಾಮವೆನ್ನುತ್ತಾ, ಒಬ್ಬ ಗೃಹಸ್ಥ ನಾಗರಿಕನು ಹೇಗೆ ಸೊಗಸಾದ, ಸುಖಮಯವಾದ, ಶೃಂಗಾರದ ಜೀವನವನ್ನು ನಡೆಸಬೇಕೆಂದು 'ನಾಗರಿಕವೃತ್ತ' ಎಂಬ ಅಧ್ಯಾಯದಲ್ಲಿ ವಿಸ್ತಾರವಾಗಿ ವಿವರ್ನಿದ್ದಾನೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವನು ಸ್ನಾನಾಲಂಕಾರಗಳಿಂದ ಸದಾ ಶುಚಿಯಾಗಿಯೂ ಸುಸಂಸ್ಕೃತನಾಗಿಯೂ ಇರುತ್ತಾ ಸೊಗಸಾದ ಮನೆಯನ್ನು ಹೊಂದಿದ್ದು ಅದನ್ನು ವೀಣೆಯಂಥ ವಾದ್ಯಗಳು, ಪುಸ್ತಕಗಳು, ಚಿತ್ರಪಟಗಳು, ಮೊದಲಾದವುಗಳ ಸಹಿತವಾಗಿ ಸುಂದರವಾಗಿ ಅಲಂಕರ್ನಿರಬೇಕು. ಸಂಗೀತ, ನೃತ್ಯಾದಿಗಳಲ್ಲಿ ಅಭಿರುಚಿ ಹೊಂದಿದ್ದು ಅವುಗಳನ್ನು ನೋಡಲು ಹೋಗಬೇಕು. ಒಳ್ಳೆಯ ಮಿತ್ರರನ್ನಿಟ್ಟುಕೊಂಡು ಕವಿತಾಗೋಷ್ಠಿಗಳಲ್ಲಿ ಪಾಲ್ಗೊಳ್ಳುವುದು, ವಸಂತೋತ್ಸವ ಮೊದಲಾದ ಉತ್ಸವ, ಹಬ್ಬಗಳಲ್ಲಿ ಪಾಲ್ಗೊಳ್ಳುವುದು, ಸತ್ಕಥಾಕಾಲಕ್ಷೇಪದಲ್ಲಿ ತೊಡಗುವುದು, ಕಾಲಕಾಲಕ್ಕೆ ಸರಿಯಾಗಿ ಒಳ್ಳೆಯ ಆಹಾರ ಸೇವಿಸುವುದು, ಪಾನಗೋಷ್ಠಿಗಳಲ್ಲಿ ಪಾಲ್ಗೊಳ್ಳುವುದು, ವನವಿಹಾರಗಳಿಗೆ ಹೋಗುವುದು, ಹಲವು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು. ಹೀಗೆ ಸಮಾಜದಲ್ಲಿ ಬೆರೆತು ಸುಖವಾಗಿ ಜೀವಿಸಬೇಕು. ಅಂದಿನ ದಿನಗಳಲ್ಲಿ ವೇಶ್ಯೆಯರೂ ಒಳ್ಳೆಯ ಕಲಾವಿದೆಯರಾಗಿದ್ದುದರಿಂದ, ಅವರ ನೃತ್ಯ, ಗೋಷ್ಠಿ ಇತ್ಯಾದಿಗಳಲ್ಲಿ ಪಾಲ್ಗೊಳ್ಳುವುದೂ ಒಂದು ಅಭಿರುಚಿಯಾಗಿತ್ತು. ಅವರಿಂದಲೂ ಕಾಮಶಾಸ್ತ್ರ, ಕಾಮಕಲೆಗಳನ್ನು ಕಲಿಯಬೇಕು ಎನ್ನುತ್ತಾನೆ ವಾತ್ಸ್ಯಾಯನ. ಇವೆಲ್ಲವೂ ಅಂದಿನ ಜನರ ಶ್ರೀಮಂತ ಗುಣಮಟ್ಟದ ಸುಖಜೀವನವನ್ನು ತೋರಿಸುತ್ತವೆ. ಇಂಥ ಜೀವನದ ಚಿತ್ರಣವನ್ನು ಸಂಸ್ಕೃತ ಕಾವ್ಯ, ನಾಟಕಗಳಲ್ಲೂ ನೋಡುತ್ತೇವೆ. ಅಂತೆಯೇ ವಾತ್ಸ್ಯಾಯನನು, ಪುರುಷನು ತನ್ನ ಪತ್ನಿಯನ್ನು ಹೇಗೆ ನಾಗರಿಕ ರೀತಿಯಿಂದ, ನಯವಾಗಿ, ಪ್ರೀತಿಯಿಂದ ಪ್ರೇಮದ ವಿಚಾರಗಳನ್ನು ಮಾತನಾಡುತ್ತಾ, ನಿಧಾನವಾಗಿ ರಮಿಸಬೇಕು, ಚುಂಬನಾಲಿಂಗನಗಳಂಥ ಕಾಮಕಲೆಗಳನ್ನು ಕ್ರಮವಾಗಿ ಅವಳಲ್ಲಿ ಪ್ರಯೋಗಿಸುತ್ತಾ, ಅವಳಿಗೂ ಅವನ್ನು ಪ್ರಯೋಗಿಸಲು ಅವಕಾಶ ಕೊಡುತ್ತಾ, ಹೇಗೆ ಅವಳನ್ನು ಶೃಂಗಾರಮಯವಾಗಿ ಮುದ್ದ್ನಿ ಸಂಭೋಗಿಸಬೇಕು ಎಂದು ವಿವರವಾಗಿ ವರ್ಣ್ನಿದ್ದಾನೆ. ಇಂದು ನಾವು ನೋಡುವ ಆತುರತೆ, ಗೊಂದಲ, ಸಮಯಾಭಾವತೆ, ಯಾಂತ್ರಿಕ ಜೀವನಶೈಲಿ, ಇವೆಲ್ಲಾ ಅಂದಿನ ದಿನಗಳ ಚಿತ್ರಣದಲ್ಲಿರಲಿಲ್ಲ. ಅಂತೆಯೇ ರಾಜರುಗಳು, ಯುದ್ಧಾದಿಗಳೆಂದು ದೂರವಿದ್ದಾಗ ರಾಣಿಯರು, ಕಾಮುಕರು, ವೇಶ್ಯಾಸಕ್ತರು ಮೊದಲಾದವರೆಲ್ಲರೂ ಪರ್ನ್ತ್ರ, ಪರಪುರುಷರನ್ನು ಒಲ್ನಿಕೊಳ್ಳಲು ಮಾಡುತ್ತಿದ್ದ ಹಲವಾರು ತಂತ್ರಗಳ ಚಿತ್ರಣವನ್ನೂ ಕಾಮಸೂತ್ರದಲ್ಲಿ ಕಾಣಬಹುದು. ಹೀಗೆ ವಾತ್ಸಾಯನನ ಕಾಮಸೂತ್ರವು ಕಾಮತೃಪ್ತಿಗಾಗಿ ಹಾಗೂ ನಾಗರಿಕ ಶೃಂಗಾರ ಜೀವನಕ್ಕಾಗಿ ಹಲವು ಕಲೆಗಳನ್ನು ಹೇಳುವುದರೊಂದಿಗೆ ಅಂದಿನ ದಿನಗಳ ನಾಗರಿಕ ಶೃಂಗಾರ ಜೀವನದ ಚಿತ್ರಣವನ್ನೂ ನೀಡುತ್ತದೆ. ವಾತ್ಸ್ಯಾಯನನ ಕಾಮಸೂತ್ರವು ಅನೇಕ ಶೃಂಗಾರಕಾವ್ಯಗಳ ರಚನೆಗೂ, ಕಾವ್ಯ ನಾಟಕಗಳಲ್ಲಿ ಶೃಂಗಾರದ ಅಳವಡಿಕೆಗೂ ಪ್ರೇರಣೆ ನೀಡಿತು. ಅಂದಿನ ಶೃಂಗಾರ ಜೀವನ, ಶಿಲ್ಪಕಲೆ, ಚಿತ್ರಕಲೆ, ಸಂಗೀತ, ನಾಟಕಾದಿಗಳಲ್ಲಿನ ಶೃಂಗಾರಕ್ಕೂ ಸ್ಫೂರ್ತಿದಾಯಕವಾಯಿತು. ನಮ್ಮ ಪ್ರಾಚೀನ ದೇವಾಲಯಗಳಲ್ಲೆಲ್ಲಾ ಸಾಮಾನ್ಯವಾಗಿ ಕಾಮ, ಶೃಂಗಾರಗಳ ಸುಂದರ ಶಿಲ್ಪಗಳನ್ನು ಕಾಣಬಹುದು. ವಿಶೇಷವಾಗಿ ಖಜುರಾಹೋ, ಕೋನಾರ್ಕ್ ಸೂರ್ಯದೇವಾಲಯ, ಭುವನೇಶ್ವರದ ಸುಂದರ ದೇವಾಲಯಗಳು, ಬೇಲೂರು ಹಳೇಬೀಡುಗಳ ಸುಂದರ ದೇವಾಲಯಗಳಲ್ಲೆಲ್ಲಾ ಇಂಥ ಅದ್ಭುತ ಶಿಲ್ಪಗಳನ್ನು ಕಾಣಬಹುದು. ಇವು ಅಂದಿನವರ ಸೌಂದರ್ಯ, ಶೃಂಗಾರಾಭಿರುಚಿಗಳಿಗೆ ಸಾಕ್ಷಿಯಾಗಿವೆ. ಕಾಮಸೂತ್ರಾದಿ ಕಾಮಶಾಸ್ತ್ರ ಗ್ರಂಥಗಳು, ಕಾಮವನ್ನು ಶೃಂಗಾರಮಯವಾಗಿ ಸಾಧ್ನಿಕೊಳ್ಳಲು ಹಲವಾರು ಉಪಾಯಗಳನ್ನು ವಿವರಿಸುವ ಪಠ್ಯ ಪುಸ್ತಕಗಳಂಥ ಗ್ರಂಥಗಳು, ಮುಂದೆ ಇವುಗಳ ಸ್ಫೂರ್ತಿಯಿಂದ, ್ನ್ತ್ರಸೌಂದರ್ಯ, ಶೃಂಗಾರ ಚಾಟೂಕ್ತಿಗಳು ಮನೋಹರವಾದ ಶೃಂಗಾರ ಪ್ರಸಂಗಗಳು, ವಿರಹದ ಸನ್ನಿವೇಶಗಳು, ಇವೆಲ್ಲಾ ಇರುವ ಸೊಗಸಾದ ಶೃಂಗಾರ ಕಾವ್ಯಗಳು ರಚನೆಯಾದವು. ಸಾಮಾನ್ಯವಾಗಿ ಈ ಕಾವ್ಯಗಳ ಪದ್ಯಗಳು ಬಿಡಿಬಿಡಿಯಾದ ಸ್ವತಂತ್ರ ಪದ್ಯಗಳಾದುದರಿಂದ ಮುಕ್ತಕಗಳು ಎನ್ನಿದವು. ಮುಕ್ತಕ ಎಂದರೆ ಚಿಕ್ಕ ಮುತ್ತು, ಸುಭಾಷಿತ ಎಂದರೆ ಒಳ್ಳೆಯ, ಚೆನ್ನಾಗಿ ಹೇಳಿದ ಮಾತು. ಇದು ನೀತಿ, ಶೃಂಗಾರ, ವೈರಾಗ್ಯ, ಅನ್ಯೋಕ್ತಿ, ಹೀಗೆ ಹಲವು ಬಗೆಯದ್ದಾಗಿರುತ್ತದೆ. ಹಾಗಾಗಿ ಶೃಂಗಾರಮುಕ್ತಗಳೂ ಸುಭಾಷಿತಗಳೇ. ಇಂಥ ನೂರು ಪದ್ಯಗಳ ಶತಕಗಳು ಸಂಸ್ಕೃತದಲ್ಲಿ ಅನೇಕ ಇವೆ. ಅಲ್ಲದೇ ಬಿಡಿಪದ್ಯಗಳೂ, ಕಾವ್ಯ ನಾಟಕಗಳಲ್ಲಿ ್ನಗುವಂಥವೂ ಸಾವಿರಾರು ಇವೆ. ಬಿಡಿ ಪದ್ಯಗಳು ಅನೇಕ ಸುಭಾಷಿತ ಸಂಗ್ರಹಗಳಲ್ಲಿ ಹೇರಳವಾಗಿ ್ನಗುತ್ತವೆ. ಇವನ್ನೋದಿದರೆ, ಪ್ರಾಚೀನ ಭಾರತೀಯರ ಶೃಂಗಾರ ಜೀವನ ಎಷ್ಟು ಶ್ರೀಮಂತವಾಗಿತ್ತು ಎಂದು ತಿಳಿಯುತ್ತದೆ. ಮಹಾಕಾವ್ಯಗಳ ಅಷ್ಟಾದಶವರ್ಣನೆಗಳಲ್ಲಿ ಸುರತಕ್ರೀಡೆಯೂ ಒಂದು! -ಡಾ. ಬಿ.ಆರ್. ಸುಹಾಸ್ 9880451062 (ಮುಂದುವರೆಯುವುದು..) (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/51515ಗೆ ಭೇಟಿನೀಡಿ.