ಕೆರಿದೇವಿಯ ಆಫ್ರಿಕನ್ ಪ್ರೇಮಿ ಕೆರಿದೇವಿಯ ಆಫ್ರಿಕನ್ ಪ್ರೇಮಿ, ಪಶ್ಚಿಮ ಘಟ್ಟದ ಕಾಡಿನ ನಡುವೆಯಿರುವ ಪುಟ್ಟದೊಂದು.. ಪಶ್ಚಿಮ ಘಟ್ಟದ ಕಾಡಿನ ನಡುವೆಯಿರುವ ಪುಟ್ಟದೊಂದು ಹಳ್ಳಿ. ಅಲ್ಲೊಬ್ಬಳು ರೈತನ ಹೆಂಡತಿ. ಹೆಸರು ಕೆರಿದೇವಿ. ಅವಳೊಂಥರಾ ವಿಚಿತ್ರ ಹೆಂಗಸು. ಮೂರು ಕಾರಣಕ್ಕೆ ಅವಳು ವಿಚಿತ್ರವಾಗಿದ್ದಳು. 1. ಅವಳ ಬಗಲಿನ ಸಂದಿಯಲ್ಲಿ ಚರ್ಮದ ಬದಲು ಉಗುರು ಬೆಳೆದಿತ್ತು. ಎರಡೂ ಬಗಲಿನಲ್ಲೂ ತಲಾ ಮೂರು ಉದ್ದುದ್ದ ಉಗುರು ಕತ್ತರಿಸಿದಷ್ಟೂ ಬೆಳೆಯುತ್ತಿತ್ತು. 2. ಅವಳ ಮೊಲೆ ತೊಟ್ಟುಗಳು ಕೆಸುವಿನ ಬಿಳಲಿನಂತೆ ಕನಿಷ್ಠವೆಂದರೂ ಮೂರು ಮೀಟರ್ ಉದ್ದವಿದ್ದವು! ಅವಳು ಮಗುವಿಗೆ ಹಾಲುಣಿಸುವಾಗ ತೊಟ್ಟನ್ನು ಹೆಗಲ ಮೇಲೆ ಹಾಕಿ ಕಂಕುಳಿನ ಸಂದಿಯಿಂದ ಮುಂದೆ ತಂದು ಬಾಯಿಗಿಡುತ್ತಿದ್ದಳು. 3. ಅವಳು ಅಸಾಧ್ಯ ಶಕ್ತಿವಂತೆ. ಎಷ್ಟೇ ತಾಕತ್ತಿರುವ ಗಂಡಸರನ್ನು ಬೇಕಾದರೂ ನಿಂತ ಮೆಟ್ಟಿನಲ್ಲಿ ನೆಲಕ್ಕೆ ಬೀಳಿಸುತ್ತಿದ್ದಳು. ಅವಳನ್ನು ತೃಪ್ತಿಪಡಿಸುವುದಕ್ಕೂ ಯಾವುದೇ ಗಂಡಸಿನಿಂದ ಸಾಧ್ಯವಿಲ್ಲ ಎಂಬ ಸುದ್ದಿ ಹರಡಿತ್ತು. ನಾಲ್ಕೈದು ಜನ ಪ್ರಯತ್ನಿಸಿ ಸೋತಿದ್ದರಂತೆ. ಇಂತಹ ಕೆರಿದೇವಿ ಒಂದು ದಿನ ಅನಾರೋಗ್ಯದಿಂದ ಸತ್ತುಹೋದಳು. ಹದಿಮೂರನೆಯ ದಿನ ಅವಳು ದೆವ್ವವಾಗಿ ಗಂಡನನ್ನು ಕಾಡತೊಡಗಿದಳು. ಆ ಕಾಟ ತಾಳಲಾರದೆ ಅವನು ಒಂದು ದಿನ ನಿಗೂಢವಾಗಿ ರಕ್ತ ಕಾರಿಕೊಂಡು ಸತ್ತ. ಅವಳು ಆ ಪರಿ ಕಾಡಲು ಅವನು ಮಾಡಿದ್ದ ದ್ರೋಹವಾದರೂ ಏನು ಎಂಬುದು ಊರವರಿಗೆ ಬಗೆಹರಿಯಲಿಲ್ಲ. ದ್ರೋಹದ ಮನೆ ಹಾಳಾಯಿತು, ಗಂಡ ಸತ್ತಮೇಲೆ ಅವಳು ಊರವರನ್ನೇ ಕಾಡತೊಡಗಿದಳು. ಆಗಾಗ ಅಲ್ಲಲ್ಲಿ ಕಾಣಿಸಿಕೊಂಡು ಮೊಲೆ ತೊಟ್ಟಿನಿಂದ ಛಿಟಾರನೆ ಬೆನ್ನಿಗೆ ಬಾರಿಸುತ್ತಿದ್ದಳು. ಹಾಗೆ ಹೊಡೆಸಿಕೊಂಡವರು ಕಡ್ಡಾಯವಾಗಿ ಒಂದು ವಾರ ಚಳಿಜ್ವರದಿಂದ ಮಲಗುತ್ತಿದ್ದರು. ಹೆಂಗಸರಿಗೂ ಈ ಹೊಡೆತ ತಪ್ಪಲಿಲ್ಲ. ಒಂದು ದಿನ ಆಫ್ರಿಕಾದ ಕರಿಯನೊಬ್ಬ ತಾನು ವಿಜ್ಞಾನಿ ಎಂದು ಹೇಳಿಕೊಂಡು ಆ ಊರಿಗೆ ಕಾಳಿಂಗ ಸರ್ಪದ ಅಧ್ಯಯನಕ್ಕೆ ಬಂದ. ಮೊದಲ ದಿನ ರಾತ್ರಿಯೇ ಅವನ ಬೆನ್ನಿಗೆ ಭರ್ಜರಿ ಹೊಡೆತ ಬಿತ್ತು. ಆದರೆ, ಎಲ್ಲರಿಗೂ ಆಶ್ಚರ್ಯವಾಗುವಂತೆ ಅವನು ಜ್ವರದಿಂದ ಮಲಗಲಿಲ್ಲ. ಬೆನ್ನ ಮೇಲೆ ಎದ್ದ ಬಾಸುಂಡೆಗೆ ಮೆಣಸಿನ ಕಾಳಿನ ರಸ ಹಚ್ಚಿಕೊಂಡು ಒಂದೇ ದಿನಕ್ಕೆ ಹುಷಾರಾದ. ಮರುದಿನ ಅವನಿಗೆ ಕೆರಿದೇವಿಯ ಕತೆ ಹೇಳಲಾಯಿತು. ಅವಳು ಗಂಡನನ್ನು ಕೊಂದಿದ್ದು, ಅವಳಿಗಿದ್ದ ವಿಶೇಷ ಶಕ್ತಿಗಳು, ಜನರಿಗೆ ಬೀಳುವ ನಿಗೂಢ ಹೊಡೆತಗಳ ಬಗ್ಗೆ ಕೇಳಿದ ಅವನು ಒಂದೇ ಮಾತು ಹೇಳಿದ: ಅವಳ ಸಮಾಧಿಗೆ ಎಲ್ಲೋ ಒಂದು ತೂತಿದೆ. ಅದನ್ನು ಮುಚ್ಚಬೇಕು. ಊರವರೆಲ್ಲ ಸೇರಿ ಕೆರಿದೇವಿಯ ಸಮಾಧಿ ಬಳಿ ಹೋಗಿ ಹುಡುಕಿದರು. ನಿಜಕ್ಕೂ ಅಲ್ಲೊಂದು ದೊಡ್ಡ ರಂಧ್ರವೇ ಇತ್ತು. ಹೆಗ್ಗಣದ ಬಿಲದಂತೆ ತೋರುವ ಆಳವಾದ ರಂಧ್ರ. ಅದರಲ್ಲಿ ಕೈಹಾಕುವ ಧೈರ್ಯ ಯಾರಿಗೂ ಬರಲಿಲ್ಲ. ಎಲ್ಲರೂ ಸೇರಿ ಕಲ್ಲು, ಮಣ್ಣು, ಸಿಮೆಂಟು ಹಾಕಿ ಅದನ್ನು ಮುಚ್ಚಿದರು. ನಿರೀಕ್ಷಿತ ಎಂಬಂತೆ ಆವತ್ತಿನಿಂದ ಕೆರಿದೇವಿಯ ಕಾಟ ನಿಂತುಹೋಯಿತು. ಆದರೆ ಆಫ್ರಿಕಾದ ಕರಿಯನ ಗ್ರಹಚಾರ ಕೆಟ್ಟಿತು. ಊರವರನ್ನೆಲ್ಲ ಬಿಟ್ಟ ಕೆರಿದೇವಿ ಅವನನ್ನು ಹಿಡಿದುಕೊಂಡಳು. ಅವನೂ ಸಾಮಾನ್ಯನೇನಲ್ಲ. ಇದಕ್ಕೊಂದು ಕೊನೆ ಹುಡುಕಲೇಬೇಕು ಎಂದು ಪಟ್ಟು ಹಿಡಿದು ಊರಲ್ಲೇ ಉಳಿದ. ಹದಿನೈದು ದಿನ ಕಳೆದರೂ ಅವನಿಗೆ ಪರಿಹಾರ ಹೊಳೆಯಲಿಲ್ಲ. ಕೊನೆಗೆ, ಯಲ್ಲಾಪುರದ ಕಾಡಿನಲ್ಲಿ ತನ್ನ ಪೂರ್ವಜರಾದ ಸಿದ್ಧಿಗಳು ವಾಸಿಸುತ್ತಿದ್ದಾರೆಂದೂ, ಅವರಲ್ಲೊಬ್ಬ ಮಂತ್ರವಾದಿಯಿದ್ದಾನೆಂದೂ, ಅವನ ಬಳಿಗೆ ಹೋಗಿ ಇದಕ್ಕೊಂದು ಉಪಾಯ ಹುಡುಕಿ ತರುತ್ತೇನೆಂದೂ ಹೇಳಿ ಹೊರಟ. ಅವನು ಸುಳ್ಳುಹೇಳಿ ಇಲ್ಲಿಂದ ಓಡಿಹೋದ ಎಂದು ಊರವರು ಭಾವಿಸಿದರು. ಆದರೆ ಅಚ್ಚರಿಯೆಂಬಂತೆ ಮೂರು ದಿನ ಬಿಟ್ಟು ಅವನು ವಾಪಸ್ ಬಂದ. ಅವನ ಕೈಲೊಂದು ಖಡ್ಗವಿತ್ತು. ಅದರ ಹೆಸರು ಜಿಗಾಂಡುಕುಕ್. ಜಿಗಾಂಡುಕುಕ್ ಅವನ ಬಳಿಯಿದ್ದಷ್ಟು ದಿನ ಅವನಿಗೆ ಯಾವ ತೊಂದರೆಯೂ ಆಗಲಿಲ್ಲ. ಸುಮಾರು ಮೂರೂವರೆ ತಿಂಗಳು ಅವನು ಆ ಊರಿನ ಸುತ್ತಮುತ್ತಲ ಕಾಡಿನಲ್ಲಿ ಕಾಳಿಂಗ ಸರ್ಪಗಳ ಅಧ್ಯಯನ ಮಾಡಿದ. ನಂತರದ ಒಂದು ತಿಂಗಳು ಅವನು ಅದೇ ಊರಿನಲ್ಲಿ ಕೂತು ವರದಿಯೊಂದನ್ನು ಬರೆಯಬೇಕಿತ್ತು. ಆದರೆ, ಜಿಗಾಂಡುಕುಕ್ ಖಡ್ಗ ಕೊಟ್ಟ ಯಲ್ಲಾಪುರದ ಸಿದ್ಧಿ, ಇವನಿಗೆ ಮೂರು ತಿಂಗಳ ನಂತರ ಅದನ್ನು ವಾಪಸ್ ತಂದುಕೊಡುವಂತೆ ಹೇಳಿದ್ದ. ಇವನು ತಡವಾಗಿಹೋಯಿತು ಎಂದುಕೊಳ್ಳುತ್ತ ಮೂರೂವರೆ ತಿಂಗಳಿಗೆ ಹೋಗಿ ಖಡ್ಗವನ್ನು ವಾಪಸ್ ಕೊಟ್ಟು ಬಂದ. ನಂತರದ ಒಂದು ತಿಂಗಳು ಪಟ್ಟಾಗಿ ಕೂತು ಕಾಳಿಂಗ ಸರ್ಪಗಳ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಿದ. ಕೊನೆಗೂ ಅವನ ಕೆಲಸ ಯಶಸ್ವಿಯಾಗಿ ಮುಗಿದಿತ್ತು. ಊರವರಿಗೆ ಕೆರಿದೇವಿಯ ಕಾಟದಿಂದ ಮುಕ್ತಿಯೂ ದೊರಕಿತ್ತು. ಎಲ್ಲರೂ ಸೇರಿ ಅವನಿಗೆ ಸನ್ಮಾನ ಮಾಡಿ ಬೀಳ್ಕೊಟ್ಟರು. ಬೆನ್ನಿನ ಮೇಲೆ ಹೆಣಭಾರದ ಬ್ಯಾಗ್ ಹೊತ್ತು ಅವನು ಅಲ್ಲಿಂದ ಜಾಗ ಖಾಲಿ ಮಾಡಿದ. ಆ ಊರಿನಿಂದ ಶಿರಸಿಗೆ ಏಳು ಮೈಲು ದೂರ. ಕಾಡಿನ ಹಾದಿಯಲ್ಲಿ ನಡೆಯಬೇಕು. ಬೆಳಿಗ್ಗೆ ಹೊರಟರೆ ಸಂಜೆಯೊಳಗೆ ಶಿರಸಿ ತಲುಪಬಹುದು. ಅಲ್ಲಿಂದ ಅವನು ಬಸ್ ಹತ್ತಿ ಬೆಂಗಳೂರಿಗೆ ಹೋಗಿ ತನ್ನ ದೇಶಕ್ಕೆ ವಿಮಾನ ಹಿಡಿಯಬೇಕಾಗಿತ್ತು. ಆ ಊರಿನಿಂದ ಆಫ್ರಿಕಾದ ಕರಿಯ ಸುಮಾರು ನಾಲ್ಕು ಮೈಲು ನಡೆದಿರಬಹುದು. ಮಧ್ಯಾಹ್ನ ಹನ್ನೆರಡರ ರಣಬಿಸಿಲು. ಹಿಂದಿನಿಂದ ಯಾರೋ ಕೈಹಾಕಿ ಸೊಂಟ ಬಳಸಿ ಹಿಡಿದಂತಾಯಿತು. ಹೂ ದ ಹೆಲ್ ಆರ್ ಯೂ ಎಂದು ಬೈಯುತ್ತ ಇವನು ಹಿಂದಕ್ಕೆ ತಿರುಗುವಷ್ಟರಲ್ಲಿ ಎರಡು ಹಗ್ಗ ಹೆಣೆದುಕೊಂಡು ಮುಖದ ಮೇಲೆ ಯಾರೋ ರಪ್ಪನೆ ಹೊಡೆದರು. ಇವನು ಕಣ್ಣಿಗೆ ಕತ್ತಲೆ ಕವಿದಂತಾಗಿ ತಿರುಗಿಬಿದ್ದ. ಅವನನ್ನು ಬೋರಲು ಮಲಗಿಸಿ ಕೆರಿದೇವಿ ಮೈಮೇಲೆ ಬಿದ್ದಳು. ತೃಪ್ತಿಪಡಿಸಲು ಇವನ ಮೈಯಲ್ಲಿ ತ್ರಾಣವಿರಲಿಲ್ಲ.(ಮುಂದುವರೆಯುವುದು..) -ಅಮ್ಮಜ್ಜನದುಗ್ಗ (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/55398ಗೆ ಭೇಟಿನೀಡಿ.