ಭಾಷಾವಸಾನ ಕನ್ನಡ ಮಾತೆ ತನ್ನ ಮಕ್ಕಳಿಂದಲೇ ಕಡೆಗಣಿಸಲ್ಪಡುತ್ತಿರುವ ಕರಾಳಪರಿಸ್ಥಿತಿ.. ಕೆಳಗಿನ ಕವಿತಾ ಸಂಭಾಷಣೆಯ ಮೂಲಕ - ಸಮಸ್ಯೆಯ ಪರಿಚಯ ಗಮನಿಸಿ ಕನ್ನಡಿಗ: ಓ ತಾಯಿ ನೀನೇಕೆ ಬೇಡುತಿಹೆ ಭಿಕ್ಷೆ ಎಲ್ಲಿ ಹೋಯಿತು ನಿನ್ನ ಮನೆ ಮಂದಿ ರಕ್ಷೆ ಬಾಡಿ ನಲುಗಿಹುದಲ್ಲ ಈ ನಿನ್ನ ವದನ ಏನಾಯ್ತು ಆ ನಿನ್ನ ಬಹು ಭವ್ಯ ಸದನ ಭುವನೇಶ್ವರಿ ದೇವಿ (ಕನ್ನಡ ಮಾತೆ:) ಓ ಮಗುವೆ ಮನೆಯಿದ್ದು ಪರದೇಶಿ ನಾನು ದಿನವೂ ನಾ ಅರೆಹೊಟ್ಟೆ ನೀ ತಿಳಿಯೆಯೇನು ನನ್ನ ಕೋರಿಕೆಗಿನಿತು ಕೊಡದೆ ಬೆಲೆಯನ್ನು ಬೇಯಿಸುತ ಬಡಿಸಿಹರು ಕಲಬೆರೆಕೆಯನ್ನು ಹಸಿವೆಯಿಂ ಕಂಗೆಟ್ಟು ದೇಹ ಸೊರಗಿಹುದು ಭಿಕ್ಷೆ ಬೇಡಲು ನಡೆಯೆ ಕಾಲು ಸೋತಿಹುದು ಬರಿ ಹೊಟ್ಟೆ, ಕಲಬೆರಕೆ ಸೌಖ್ಯವೆನಗಿಲ್ಲ ನಾ ಪೊರೆದ ಮಕ್ಕಳಿಂ ಏನು ಸುಖವಿಲ್ಲ ಕನ್ನಡ ಮಾತೆ ತನ್ನ ಮಕ್ಕಳಿಂದಲೇ ಕಡೆಗಣಿಸಲ್ಪಡುತ್ತಿರುವ ಕರಾಳ ಪರಿಸ್ಥಿತಿಯನ್ನು ಚಿತ್ರಿಸುವ ಕವನದ ಸಾಲುಗಳು ಇವು. ಕನ್ನಡವನ್ನು ಕುರಿತಂತೆ ಕೆಳಗಿನ ಚಿಂತಾಜನಕ ಬೆಳವಣಿಗೆಗಳನ್ನು ಗಮನಿಸಿ: ಸರಕಾರೀ ಕನ್ನಡ ಶಾಲೆಗಳಲ್ಲಿ ಮಕ್ಕಳಿಲ್ಲ ಕನ್ನಡ ಶಾಲೆಗಳನ್ನು ಮುಚ್ಚಲು ಸರಕಾರದ ನಿರ್ಧಾರ ಕನ್ನಡ ಮಾಧ್ಯಮದಲ್ಲಿ ಕಲಿಸುವ ಖಾಸಗೀ ಶಾಲೆಗಳಿಲ್ಲ ಕನ್ನಡ ಮಾಧ್ಯಮದ ಪರವಾನಗಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಕಲಿಸುವ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಸರಕಾರದ ನಿರ್ಧಾರ ಖಾಸಗೀ ಶಾಲೆಗಳ ಶುಲ್ಕ ಪೋಷಕರಿಗೆ ಹೊರೆ ಆದರೆ ಸರಕಾರೀ ಶಾಲೆಗಳಿಗೆ ಬೆನ್ನು ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಯಶಸ್ಸು- ಕನ್ನಡದಲ್ಲಿ ಕಲಿತರೆ ಆಪತ್ತು ಸರ್ವೋಚ್ಛನ್ಯಾಯಾಲಯದ ತೀರ್ಪು ಈ ಎಲ್ಲ ಮೇಲಿನ ತಲೆಬರಹಗಳುಳ್ಳ ಲೇಖನಗಳನ್ನು ನೀವೆಲ್ಲಾ ಓದೇ ಇರುತ್ತೀರಿ. ಕನ್ನಡವನ್ನು ಆದರಿಸಿ ಪೋಷಿಸುವ ಬದಲು ಅದರ ಬುಡಕ್ಕೇ ಕೊಡಲಿ ಹಾಕುವಂತಹ ಕಾನೂನಿನ ಹೋರಾಟವನ್ನು ಪೋಷಕರೂ, ಖಾಸಗೀ ಶಾಲೆಯ ಬಂಡವಾಳಶಾಹಿಗಳೂ ನಡೆಸಿದ್ದು ಒಂದು ದುರದೃಷ್ಟಕರ ಬೆಳವಣಿಗೆಯಲ್ಲದೆ ಮತ್ತೇನು? ಭಾರತದ ಉಚ್ಛ ನ್ಯಾಯಾಲಯ ಮಕ್ಕಳ ಶಿಕ್ಷಣದಲ್ಲಿ ಮಾಧ್ಯಮವನ್ನು ಕುರಿತಂತೆ ಯಾವ ಭಾಷೆಯಲ್ಲಿ ಕಲಿಸಬೇಕು ಎನ್ನುವ ನಿರ್ಣಯ ಪೋಷಕರದ್ದು ;ಸರಕಾರಕ್ಕೆ ಆ ಅಧಿಕಾರ ಇಲ್ಲ ಎಂದು ಹೇಳಿದೆ. ಮಾತೃಭಾಷೆ ಎಂಬ ಪರಿಕಲ್ಪನೆಯ ಹಿಂದಿನ ಭಾವನಾತ್ಮಕ/ ಸಾಂಸ್ಕೃತಿಕ / ರಾಷ್ಟ್ರೀಯ / ಪ್ರಾಂತೀಯ ಪ್ರಾಮುಖ್ಯತೆಯನ್ನು ಕಡೆಗಣಿಸಿ, ಶಿಕ್ಷಣವನ್ನು ಒಂದು ಸರ್ವತೋಮುಖ ಪರಿವೀಕ್ಷಣೆಗೆ ಒಳಪಡಿಸದೆ ಕೇವಲ ವ್ಯಾಪಾರೀ ದೃಷ್ಟಿಯಿಂದ ಮಾತ್ರ ಪರಿಗಣಿಸಿ , ದೀರ್ಘಕಾಲಿಕ ದುಷ್ಪರಿಣಾಮಗಳನ್ನು ನಿರ್ಲಕ್ಷಿಸಿ ನೀಡಿದ ಈ ತೀರ್ಪು ಕನ್ನಡದ ಅಳಿವು ಉಳಿವನ್ನು ನಿರ್ಧರಿಸಲಿದೆ. ನೀವು ಈ ಲೇಖನ ಓದ್ತಾ ಇದೀರಾ ಅಂತ ಅಂದ್ರೆ ನಿಮಗೆ ಕನ್ನಡದ ಮೇಲಿನ ಕಳಕಳಿ ಇದೆ ಅಂತಾಯ್ತು.ಇಲ್ದೇ ಇದ್ರೆ ಇಷ್ಟ್ಹೊತ್ಗೆ ಮೂಗ್ ಮುರ್ದು ಬೇರೆ ಪುಟಕ್ಕೆ ಹೋಗಿರ್ತಿದ್ರಿ. ನಾನು ಯಾಕೆ- ಯಾರಿಗೆ ಈ ಲೇಖನ ಬರೀಬೇಕು? ಅಂತ ನನ್ನನ್ನು ನಾನೇ ಬಹಳ ಸಾರಿ ಪ್ರಶ್ನೆ ಮಾಡ್ಕೊಂಡೆ. ಭಾಷಾ ಮರಣದ ಬಗ್ಗೆ ಜಾಗೃತಿ ಮೂಡಿದ್ರೆ, ಅದರ ಸಂದೇಶ ನಿಧಾನವಾಗಿ ಬೇರೆಯವ್ರಿಗೂ ಹರಡಬಹುದೇನೋ ಆ ಮೂಲಕ ಜನರ ವಿಚಾರಸರಣಿಯಲ್ಲಿ ಸ್ವಲ್ಪ ಬದಲಾವಣೆ ಆಗಬಹುದೆಂಬ ಅಭಿಲಾಷೆ ನನ್ನದು. ರೋಗಿಯನ್ನು ಗುಣಪಡಿಸಲು ವೈದ್ಯರಿಗೆ ರೋಗಲಕ್ಷಣಗಳ ಪರಿಚಯ ಹೇಗೆ ಮುಖ್ಯವೋ ಹಾಗೆ ಕನ್ನಡದ ಇಂದಿನ ಬವಣೆ ನೀಗಿಸಲು ನಾವೆಲ್ಲರೂ ಒಂದು ಬಗೆಯ ನುಡಿ ವೈದ್ಯರಾಗುವ ಅವಷ್ಯಕತೆ- ಅನಿವಾರ್ಯತೆ ಇದೆ ಎಂಬುದು ನನ್ನ ಭಾವನೆ. ಈ ನಿಟ್ಟಿನಲ್ಲಿ ಹಲವಾರು ಆಯಾಮಗಳಿಂದ ಕನ್ನಡದ ದುರ್ಗತಿಯನ್ನು ಪರೀಕ್ಷಿಸಿ ಕನ್ನಡಿಗರಾಗಿ ನಮ್ಮ ಭಾಷೆಗೆ ನಾವು ಮಾಡಬಹುದಾದ ಸೇವೆಯನ್ನು ಪರ್ಯವಲೋಕಿಸುವುದು ಅದನ್ನು ನಿಮ್ಮೊಂದಿಗೆ ಹಂಚಿಕೊಳುವುದು ನನ್ನ ಸದಾಶಯ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಹಾನ್ ಕೃತಿಗಳ ಸಂಪತ್ತಿದೆ, ತನ್ನದೇ ಆದ ಸರಳ, ಸಮೃದ್ಧ,ಸುಂದರ ಲಿಪಿಯೂ ಇದೆ,ಕನ್ನಡವನ್ನಾಡುವ ಜನಗಳು ತಮ್ಮ ನೆಲವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲ ಭೌಗೋಳಿಕ ಚೌಕಟ್ಟಿನ ಪರಿಸರವೂ ಇದೆ, ಇತ್ತೀಚೆಗೆ ಶಾಸ್ತ್ರೀಯ ಸ್ಠಾನ ಮಾನಗಳೂ ದೊರೆತಿವೆ. ಇವೆಲ್ಲಾ ಇದ್ದೂ ಕನ್ನಡಮಾತೆ ಭಿಕ್ಷೆ ಬೇಡುವ ಕಾರ್ಪಣ್ಯಕ್ಕೂ, ನಾನಿಂದು ಈ ಲೇಖನವನ್ನು ಬರೆಯುತ್ತಿರುವುದಕ್ಕೂ ಕಾರಣವೇನು? ಒಂದು ಭಾಷೆ ಉಳಿದು ಬೆಳೆಯಲು ಭಾಷೆಯ ಸಮೃದ್ಧಿ ಮತ್ತು ಶಕ್ತಿಯಷ್ಟೇ ಸಾಲದು. ಅದನ್ನು ಬಳಸುವ ಸಮಾಜದಲ್ಲಿನ ಜನಗಳ ಮನೋವ್ಯಾಪಾರ / ಅಭಿರುಚಿ / ಅವಶ್ಯಕತೆಗಳು/ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳು /ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳು ಹಾಗೂ ಸಾಮಾಜಿಕ ಮೌಲ್ಯಗಳು ಪರಿಣಾಮ ಬೀರುತ್ತವೆ. ಎಲ್ಲಕ್ಕಿಂತ ಪ್ರಮುಖವಾಗಿ ಭಾಷಿಕರು ಅದರಲ್ಲೂ ಮಕ್ಕಳು ಮತ್ತು ಯುವಪೀಳಿಗೆ ಭಾಷೆಯೊಂದರ ಅಳಿವು ಉಳಿವಿನ ಅತಿಮುಖ್ಯ ರೂವಾರಿಗಳು. ಇವುಗಳನ್ನು ಒಂದೊಂದಾಗಿ ಗಮನಿಸೋಣ. ಕನ್ನಡವ ಕುರಿತಂತೆ ಕನ್ನಡಿಗರ ಮನೋಧೋರಣೆಗಳ ಪಕ್ಷಿನೋಟ ವಿಶ್ವದಲ್ಲಿ ಇಂದು ( ಮತ್ತು ಕರ್ನಾಟಕದಲ್ಲಿ ಅನ್ಯ ಭಾಷೆಯ ಜನಗಳನ್ನು ಹೊರತುಪಡಿಸಿ ) ಕನ್ನಡಿಗರೆಂದು ಅವರ ಹುಟ್ಟು ಹಾಗೂ ವಂಶಜರ ಭಾಷೆಯ ಮೂಲಕ ಗುರುತಿಸಲ್ಪಟ್ಟ ಜನಗಳನ್ನು ಒಟ್ಟುಗೂಡಿಸಿ ಕನ್ನಡದ ಬಗೆಗಿನ ಅವರ ಧೋರಣೆಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದರೆ ಅವರುಗಳನ್ನು ಹಲವು ಗುಂಪು (ಪಂಗಡ) ಗಳಾಗಿ ವಿಂಗಡಿಸಬಹುದು. ಗುಂಪು-೦ ( ಅಲ್ಪಸಂಖ್ಯಾತ ಕನ್ನಡ ಪ್ರೇಮಿಗಳು) ಆರ್ಥಿಕ ಚೈತನ್ಯ ಇಲ್ಲಿ ಅಮುಖ್ಯ. ನಾಡು-ನುಡಿ-ಸಂಸ್ಕೃತಿಗೆ ಪ್ರಾಮುಖ್ಯತೆ. ಸಮಾಜ ಮುಖಿ ಕುಟುಂಬ ವ್ಯವಸ್ಥೆ. ವೈಯಕ್ತಿಕ ಹಿತಕ್ಕಿಂತ ಸಾರ್ವತ್ರಿಕ ಹಿತಕ್ಕೆ ಆದ್ಯತೆ. ಮನೆಯಲ್ಲಿ ಪೂರಕ ವಾತಾವರಣ. ಮಕ್ಕಳ ಸಮಗ್ರ ಬೆಳವಣಿಗೆ- ಆತ್ಮವಿಶ್ವಾಸ ವಿಕಾಸ. ನನ್ ಮಕ್ಳು ಕನ್ನಡದಲ್ಲೇ ಕಲಿತು ಬೆಳೆಯಲಿ ಕನ್ನಡದಲ್ಲಿ ಕಲಿತ್ರೆ ನಮ್ಮ ಸಂಸ್ಕೃತಿ ಸಾಹಿತ್ಯದ ಬಗ್ಗೆ ತಿಳುವಳಿಕೆ ಬರುತ್ತೆ ನಾವ್ ಅಲ್ದೆ ನಂ ಭಾಷೆ -ಸಂಸ್ಕೃತಿನ ಯಾರು ಉಳಿಸಬೇಕು ಮಕ್ಕಳಿಸ್ಕೂಲ್ ಮನೇಲಲ್ವೆ. ನಾವ್ ಪ್ರೋತ್ಸಾಹ ಕೊಟ್ರೆ ಯಾವ್ ಮಾಧ್ಯಮ ದಲ್ಲಿ ಓದಿದ್ರೂ ಜಯಿಸ್ಕೊಂಡ್ ಬರ್ತಾರೆ. ಹೊರ ನಾಡಿನಲ್ಲಿದ್ದರೂ ಮಕ್ಕಳಿಗೆ ಕನ್ನಡದ ತಿಳಿವು ಮೂಡಿಸಿ ಬೆಳೆಸುವ ಮಹಾ ಚೈತನ್ಯಗಳು ಗುಂಪು-೧/೨ ( ಕನ್ನಡದ್ ಮೇಲ್ ಅಭಿಮಾನ ಇದ್ರೂ ಸಮಾಜದ ಪ್ರತಿಷ್ಟೆ/ ಭವಿಷ್ಯದ ಆತಂಕ ಇತ್ಯಾದಿಗಳಿಂದ ಮತಿಭ್ರಮಣೆಗೊಳಗಾದ ಗುಂಪು) ಹೆಂಗಾದ್ರೂ ಸರಿ ಮಕ್ಕಳು ಮುಂದೆ ಬರ್ಲಿ. ನಮ್ಗೆ ಸಿಗ್ದೇ ಇದ್ದದ್ದು ನಮ್ ಮಕ್ಳಿಗಾದ್ರೂ ಸಿಗ್ಲಿ ಹೆಣಗಾಟ ಇವರ ಮುಖ್ಯ ಲಕ್ಷಣ. ಆರ್ಥಿಕವಾಗಿ ಬಹಳ ಬಲಿಷ್ಠರಲ್ಲದ ಸಾಮಾಜಿಕ ವರ್ಗ. ಪೋಷಕರ ವಿದ್ಯಾರ್ಹತೆಯೂ ಬಹುತೇಕ ಮಧ್ಯಮ ಅಥವಾ ಕನಿಷ್ಠ ಆರ್ಥಿಕ ಚೈತನ್ಯ ಕಡಿಮೆ; ಅದರೆ ತೀರಾ ಬಡವರಲ್ಲ ಕಡಿಮೆ ದರ್ಜೆಯ ಖಾಸಗೀ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದು ಉತ್ತಮ ದರ್ಜೆಯ ಸರ್ಕಾರೀ ಶಾಲೆ ತಿರಸ್ಕರಿಸುವುದು ಕೆಳಮಟ್ಟದ ಶಿಕ್ಷಕರು,ಬೋಧನೆ,ಮನೆಯಲ್ಲಿ ಪೂರಕ ಮಾರ್ಗದರ್ಶನದ ಕೊರತೆ ಮಕ್ಕಳ ಯೋಗ್ಯತೆ ಹಾಗೂ ಇರುವ ಸೌಲಭ್ಯಗಳನ್ನು ಮೀರಿದ ನಿರೀಕ್ಷೆ ಮಕ್ಕಳು ಎಲ್ಲಿಯೂ ಸಲ್ಲದಂತಾಗುವೆ ಅನಿವಾರ್ಯತೆ ಗುಂಪು -೧ ( ಕಾವೇರಿ ನೀರ್ ಕುಡ್ದು ಕನ್ನಡದಲ್ಲೇ ಮಾತಾಡ್ತಾ ಕನ್ನಡಕ್ಕೆ ಗುನ್ನ ಹಾಕೋವ್ರು) ಆರ್ಥಿಕವಾಗಿ ಸಬಲರು. ಆಡಂಬರ,ಅರೆ ತಿಳುವಳಿಕೆ ಹೆಚ್ಚು. ಭೌತಿಕ ಸಂಪನ್ಮೂಲಗಳ ಮೂಲಕ ಮನುಷ್ಯನ ದರ್ಜೆ ಅಳೆಯುವ ಮಂದಿ ವೈಯಕ್ತಿಕ ಹಿತ, ಪ್ರತಿಷ್ಠೆ ಪ್ರಮುಖ ಅಂಶಗಳು ಭಾಷೆಯೂ ವ್ಯಾವಹಾರಿಕ ಸರಕು ಮಾತ್ರ. ಅಯ್ಯೊ ನಮ್ ಮಗನ್ನ ನಾವು ಕಾನ್ವೆಂಟ್ಗೆ ಸೆರ್ಸೋದು. ದುಡ್ಡು ಎಷ್ಟಾದ್ರೂ ಸರೀನೆ. ಎಲ್ಲರ್ ಮಕ್ಳೂ ಇಂಗ್ಲೀಷ್ ನಲ್ಲೇ ಓದ್ತವೆ, ನಮ್ ಮಕ್ಳು ಮಾತ್ರಾ ಭಿಕಾರಿಗಳ್ ಥರ ಕನ್ನಡದಲ್ಲಿ ಓದ್ಬೇಕಾ ಕನ್ನಡ ಮೀಡಿಯಮ್ ನಲ್ಲಿ ಓದಿದ್ರೆ ಮಣ್ ತಿನ್ಬೇಕಷ್ಟೆ ನಮ್ ಭಾಷೆ ಕನ್ನಡ ಆದ್ರೆ ಏನಂತೆ; ನಾವು ಅದನ್ನ ಮಕ್ಳಿಗೆ ಕಲ್ಸದೇನ್ ಬೇಕಿಲ್ಲ. ಕನ್ನಡ ಕಲಿಯೊದ್ರಿಂದ ಏನೂ ಪ್ರಯೋಜನ ಇಲ್ಲ. ಈಗೆಲ್ಲಾ ಕಡೆ ಇಂಗ್ಲೀಷೇ ಬೇಕು. ಇವೆಲ್ಲಾ ಯಾಕ್ರೀ ತಲೆನೋವು. ಒಳ್ಳೆ ಸ್ಕೂಲಿಗ್ ಹಾಕ್ತೀವಿ. ಇಂಗ್ಲೀಶ್ನಲ್ಲೇ ಓದ್ಲಿ ಬಿಡಿ. ಕನ್ನಡ ಕಟ್ಕೊಂಡ್ ನಮ್ಗೇನಾಗ್ಬೇಕು ಗುಂಪು-೨ (ಕಾವೇರಿ ನೀರ್ ಕುಡುದ್ರೂ ಥೇಮ್ಸ್ ನದಿ ನೀರ್ ಕುಡ್ದೌರ್ ಥರ ಆಡೋರು) ಮೇಲಿನ ಗುಂಪಿನ ಎಲ್ಲ ಗುಣಗಳೂ ಇವರಲ್ಲಿ ಮೇಳೈಸಿರುವುದಲ್ಲದೆ ಕೆಳಗಿನ ಕುಚೇಷ್ಟೆಯೂ ಸೇರಿರುತ್ತವೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲ ಪೋಷಕರು. ರಾಷ್ಟ್ರೀಯತೆಯಾಗಲೀ, ಭಾಷಾಭಿಮಾನವಾಗಲೀ ಕಡಿಮೆ. ಸ್ವಾರ್ಥಪರ ಕುಟುಂಬ ವ್ಯವಸ್ಥೆ. ಸಾಮಾಜಿಕ ಹಿತಕ್ಕಿಂತ ವೈಯಕ್ತಿಕ ಪ್ರತಿಷ್ಠೆ ಮುಖ್ಯ. ಆರ್ಥಿಕವಾಗಿ ಬಲಿಷ್ಠರು ಸಾಂಸ್ಕೃತಿಕವಾಗಿ ದಿವಾಳಿಗಳು. ಮೋಜು, ಮಸ್ತಿ , ಹಣ, ಹನನಕ್ಕೆ ಆದ್ಯತೆ. ನಾನು ನಮ್ ಹಸ್ಬಂಡು ಮೊದ್ಲೇ ಡಿಸೈಡ್ ಮಾಡಿದ್ದೀವಿ. ಆಲ್ ಅವರ್ ಚಿಲ್ಡ್ರೆನ್ ವಿಲ್ ಗೊ ಟು ಇಂಗ್ಲೀಷ್ ಮೀಡಿಯಮ್ ಈಗೆಲ್ಲ ಗ್ಲೋಬಲ್ ಸಿವಿಲೈಸೇಷನ್. ವ್ಹೂ ವುಡ್ ವಾಂಟ್ ಕನ್ನಡ ಹಾಯ್ ಚಿಲ್ಡ್ರೆನ್ ಹ್ಯಾಡ್ ಯುವರ್ ಫುಡ್. ತಿಂದ್ರಾ? ಡೋಂಟ್ ಡೂ ಇಟ್. ಐ ಹ್ಯಾವ್ ಟೋಲ್ಡ್ ಯು.ಹೇಳ್ಲಿಲ್ವಾ? ಆಲ್ ಅವರ್ ಚಿಲ್ದ್ರೆನ್ ಅಂಡರ್ಸ್ತ್ಯಾಂಡ್ ವೆರಿ ಲಿಟ್ಟ್ಲ್ ಕನ್ನಡ. ಗುಂಪು -೩ ( ಕನ್ನಡದವರಾದ್ರೂ ಕನ್ನಡಾದ ಹಂಗೇ ಇಲ್ಲದಂತಿರುವವರು). ಇವರ ಬಗ್ಗೆ ಬರೆಯೋಕೂ ನನಗೆ ಬೇಜಾರು ಬರುತ್ತೆ. ನೀವೇ ಊಹೆ ಮಾಡ್ಕೊಳಿ. ಗುಂಪು -೪ (ಜೀವನದಲ್ಲಿ ಆಯ್ಕೆಯ ಸ್ವಾತಂತ್ರ್ಯ- ಸಾಮರ್ಥ್ಯ ಇಲ್ಲದ ಬಡ ಜನತೆ) ಆಪಾರ ಸಂಖ್ಯೆಯ ಜನಸ್ತೋಮ ಆದರೆ ಬದಲಾವಣೆಯ ಪ್ರಕ್ರಿಯಯಲ್ಲಿ ಇವರ ಯಾವ ಪಾತ್ರವೂ ಇರದು ಕನ್ನಡದ ಉಳಿವಿಗೆ ಈ ಗುಂಪು ಹೆಚ್ಚು ಶಕ್ತಿ ನೀಡಬಲ್ಲದು. ಆದರೆ ಉತ್ಕೃಷ್ಟ ಕಲಿಕಾ ಸೌಲಭ್ಯ ಇವರಿಗೆ ಲಭ್ಯವಾಗುವುದೆಂತು? ಹೀಗೆ ಮೇಲೆ ವಿಶದೀಕರಿಸಿದಂತೆ ವಿವಿಧ ಬಗೆಯ ಮನೋಧೋರಣೆಗಳಿಂದಾದ ಒಂದು ಭಾಷೆಯ ಜನಪದವು ಆ ಭಾಷೆಯ ಆರೋಗ್ಯ ಮತ್ತು ಸ್ಥಿತಿ-ಗತಿಗಳನ್ನು ನಿರ್ಧರಿಸುತ್ತದೆ. ಅದನ್ನು ಈಗ ನೋಡೋಣ. (ಮುಂದುವರಿಯುವುದು) -ಸುದರ್ಶನ