ಸೋಹನ್ ಕುಮಾರಿಯ ಸಂಧ್ಯಾರಾಗ ಗೊತ್ತಿದ್ದೀತು. ಆದರೆ ಮರೆತು ಹೋಗಿರಬಹುದಷ್ಟೇ. ಕರ್ನಾಟಕದ ಕೋಗಿಲೆ ಕಾಳಿಂಗರಾಯರ ಬಗ್ಗೆ ಗೊತ್ತಿರೋ... ಗೊತ್ತಿದ್ದೀತು. ಆದರೆ ಮರೆತು ಹೋಗಿರಬಹುದಷ್ಟೇ. ಕರ್ನಾಟಕದ ಕೋಗಿಲೆ ಕಾಳಿಂಗರಾಯರ ಬಗ್ಗೆ ಗೊತ್ತಿರೋ ಅಂದಿನವರಿಗೆ ಸೋಹನ್ ಕುಮಾರಿ ಪರಿಚಯವಿರಲಿಕ್ಕೇ ಬೇಕು. ಸೋಹನ್ ಕುಮಾರಿ ಎಂಬ ಹೆಸರು ಒಂಟಿಯಾಗಿ ನೆನಪಿಗೆ ಬರುವಂಥದಲ್ಲ. ಅದರೊಂದಿಗೆ ಮೋಹನ್ ಕುಮಾರಿ ಎಂಬ ಹೆಸರೂ ನೆನಪಿನ ದೋಣಿಯಲ್ಲಿ ತೇಲಿಬರುತ್ತದೆ. ಕಾಳಿಂಗರಾಯರೊಂದಿಗೆ ಸಹಗಾಯಕಿಯರೆಂದು ಗುರುತಿಸಿಕೊಂಡ ಸೋಹನ್ ಕುಮಾರಿ -ಮೋಹನ್ ಕುಮಾರಿ ಸಹೋದರಿಯರು. ರಾಯರ ಜೊತೆ ಗಾಢ ಆತ್ಮೀಯತೆ ಹೊಂದಿದ್ದರೆಂಬ ಕಾಣಕ್ಕೆ ಹಲವು ಗುಸುಗುಸುಗಳಿಗೆ ಕಾರಣರಾದವರು. ಕಾಳಿಂಗರಾಯರು ಹೋಗಿ ಮೂರು ದಶಕಗಳೇ ತೀರಿವೆ. ಒಂದೇ ಜೀವ ಎರಡು ದೇಹ ಎಂಬಂತಿದ್ದ ಸೋದರಿಯರಲ್ಲಿ ಮೋಹನ್ ಕುಮಾರಿ ಕೂಡ ಈಗಿಲ್ಲ. ಹಾಗಾದರೆ ಸೋಹನ್ ಕುಮಾರಿ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ? ಅವರು ಬದುಕು ಹೇಗಿದೆ? ಹೀಗೆ ಒಂದಷ್ಟು ಕುತೂಹಲಗಳೊಂದಿಗೆ ಹುಡುಕುತ್ತಿರುವಾಗಲೇ, ಆಶ್ರಯ ಟ್ರಸ್ಟ್‌ವ ರವಿ, ಪತ್ರಿಕೆಯನ್ನು ಸಂಪರ್ಕಿಸಿದ್ದು, ಮಾತಿನ ನಡುವೆ ಸೋಹನ್ ಕುಮಾರಿಯವರ ವಿಷಯ ಪ್ರಸ್ತಾಪವಾದದ್ದು. ಕಳೆದ ಎರಡು ವರ್ಷಗಳಿಂದ ಸೋಹನ್ ಕುಮಾರಿ ಆಶ್ರಯ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಅನಾರೋಗ್ಯದಿಂದ ಪವಾಡ ಸದೃಶವೆಂಬಂತೆ ಚೇತರಿಸಿಕೊಂಡಿದ್ದಾರೆ ಎಂದು ರವಿ ತಿಳಿಸಿದಾಗ, ತಡಮಾಡುವ ಸಾಧ್ಯತೆಯೇ ಇರಲಿಲ್ಲ. ಆಶ್ರಯ ಕಚೇರಿಯ ಹಾಲಿನಲ್ಲೇ ನಾಲ್ಕೈದು ಮಂಚಗಳು. ಒಂದೊಂದು ಮಂಚದಲ್ಲೂ ಒಬ್ಬೊಬ್ಬ ವೃದ್ಧರು ಮಲಗಿದ್ದಾರೆ. ಒಬ್ಬರು ಕೆಮ್ಮುತ್ತಿದ್ದರೆ, ಮತ್ತೊಬ್ಬರು ನಿದ್ದೆ, ಇನ್ನೊಬ್ಬರದ್ದು ಅದೇನೋ ಬಡಬಡಿಕೆ. ಆದರೆ ಅಲ್ಲೊಂದು ವೃದ್ಧಜೀವ ಮಾತ್ರ ತಮ್ಮ ಪಕ್ಕ ನಾಲ್ಕೈದು ಕನ್ನಡ , ಇಂಗ್ಲಿಷ್ ದಿನ ಪತ್ರಿಕೆಗಳನ್ನು ಹರವಿಕೊಂಡು, ಕೈಲೊಂದು ಪತ್ರಿಕೆಯೆತ್ತಿಕೊಂಡು ಓದಿನಲ್ಲಿ ಮುಳುಗಿಹೋಗಿದೆ. ಆಶ್ರಯದ ಒಡತಿ ಶಾರದಮ್ಮ ಅವರತ್ತ ಬೆರಳು ಮಾಡಿ ಹೇಳಿದರು. ಅವರೇ ಸೋಹನ್ ಕುಮಾರಿ. ಅವರು ಓದೋ ಹೊತ್ತಿಗೆ ಅವರನ್ನು ಯಾರೂ ಮಾತನಾಡಿಸೋ ಹಾಗಿಲ್ಲ. ಹೌದು, ಅವರು ಧ್ಯಾನಸ್ಥಿತಿಯಲ್ಲಿದ್ದಂತೆ ಇದ್ದರು. ಅವರು ಓದಿ ಮುಗಿಸೋ ತನಕ ಕಾಯೋದು ಅನಿವಾರ್ಯವಾಗಿತ್ತು. ಬರೋಬ್ಬರಿ ಮುಕ್ಕಾಲು ಗಂಟೆಯ ನಂತರ ಪತ್ರಿಕೆಗಳನ್ನು ಬದಿಗಿಟ್ಟು, ನಮ್ಮತ್ತ ನೋಡಿದರು ಸೋಹನ್ ಕುಮಾರಿ. ಪತ್ರಿಕೆಯವರು ಅಂದಕೂಡಲೇ ಅವರ ಮೊಮ್ಮ ಕ್ಕಳ ವಯಸ್ಸಿನವರೆಂಬುದನ್ನೂ ಲೆಕ್ಕಿಸದೆ ಕೈ ಜೋಡಿಸಿ ಮುಗಿದರು. ಪೂರ್ತಿಯಾಗಿ ನೆರಿಗೆಗಟ್ಟಿರುವ ಚರ್ಮ, ರಕ್ತಮಾಂಸ ಬತ್ತಿಗೋಗಿದೆಯೇನೋ ಎಂಬಷ್ಟು ಕೃಷವಾಗಿರೋ ದೇಹ, ಕಿವಿ ಚುರುಕಿದೆಯಾ? ಮಾತಾಡಲು ದನಿಯಿದೆಯಾ? ಎಂಬೆಲ್ಲ ಮನದೊಳಗಣ ಪ್ರಶ್ನೆಗಳ ನಡುವೆಯೇ ಈಗ ಆರೋಗ್ಯ ಹೇಗಿದೆ? ಅಂತ ಕೇಳಿ ಮಾತಿಗೆ ಶುರುವಿಡಲಾಯ್ತು. ವೃದ್ಧಾಪ್ಯಕ್ಕೆ ಮಸಣ ಮೊದಲ ಮನೆ. ಆಸ್ಪತ್ರೆಯೇ ಎರಡನೇ ಮನೆ. ಈ ಮನೆ ಸುಮ್ಮನೆ ಅಂತ ಪ್ರಾಸವಾಗಿ ಫಿಲಾಸಫಿ ಹರಿಬಿಟ್ಟರು ಸೋಹನ್ ಕುಮಾರಿ. ಮೊದಲ ಮಾತು ಕೇಳುತ್ತಿದ್ದಂತೆಯೇ, ಈ ದನಿಯು ತನ್ನ ಯೌವ್ವನದಲ್ಲಿ ್ಡಹಾಡಿದ್ದವ್ವು ಕೇಳೋದು ಮಿಸ್ ಮಾಡಿಕೊಂಡೆವಲ್ಲಾ ಅನಿಸುತ್ತಿತ್ತು. ಆದರೆ ಒಮ್ಮೆ ಮಾತಾಡಿಸಿದ್ದೇ ತಡ ನಾನ್ ಸ್ಟಾಪಾಗಿ ಅವರ ನೆನಪಿನ ದೋಣಿ ತೇಲುತ್ತಾ ಚಲಿಸತೊಡಗಿತು. ಮಾತನಾಡೋ ಹಂಬಲವಿದೆಯೇ ಹೊರತು, ನೆನಪಿನ ಶಕ್ತಿ ಗಟ್ಟಿಯಾಗಿ ಉಳಿದಿಲ್ಲ. ಆಗ ತಾನೇ ಆಡಿದ ಮಾತಿಗೆ ವ್ಯತಿರಿಕ್ತವಾಗಿ ಮುಂದಿನ ಮಾತುಗಳು. ಆದರೂ ಆ ಉತ್ಸಾಹಕ್ಕೆ ಭಂಗ ತಾರದಂತೆ ಕೇಳುತ್ತಾ ಕುಳಿತದ್ದಾಯ್ತು. ಸೋಹನ್ ಕುಮಾರಿ ಅವರ ಪ್ರತಿ ಮಾತೂ ಶುರುವಾಗುತ್ತಿದ್ದುದು ಕಾಳಿಂಗರಾಯರ ಹೆಸರಿನೊಂದಿಗೆ, ಮುಗಿಯುತ್ತಿದ್ದುದೂ ಕಾಳಿಂಗರಾಯಕ ಹೆಸರಿನೊಂದಿಗೇ! ಸೋಹನ್ ಕುಮಾರಿ ಹೇಳುವಂತೆ, ಅವರ ಪಾಲಿಗೆ ಅಪ್ಪ, ಚಿಕ್ಕಪ್ಪ, ಅಣ್ಣ, ದೇವರು, ಗಾಢ್ ಫಾದರ್, ಅಮ್ಮ ಎಲ್ಲವೂ ಕಾಳಿಂಗರಾಯರು. ತಾವು ಸಿನಿಮಾದಲ್ಲಿ, ನಾಟಕದಲ್ಲಿ ಹಾಡಲು ಕಾರಣ ರಾಯರೇ. ನ್ನ ನನ್ನ ನೃತ್ಯ ಪ್ರೌಢಿಮೆ ಬೆಳಕಿಗೆ ಬಂದದ್ದು ಅವರಿಂದಲೇ. ನಾನು ಮತ್ತು ಮೋಹನ್ ಕುಮಾರಿ ಇಬ್ಬರೂ ಅವಪನ್ನು ಕರೀತಿದ್ದಿದ್ದೇ ಅಂಕಲ್ ಅಂತ. ರಾಜಸ್ತಾನದಿಂದ ಬಂದ ನಮಗೆ ಕನ್ನಡ ಕಲಿಸಿದ್ದು, ಬದುಕು ಕಲಿಸಿದ್ದು ಎರಡೂ ಅವರೇ ಎಂದು ಕಾಳಿಂಗರಾಯರನ್ನು ಸ್ಮರಿಸುತ್ತಲೇ ತಮ್ಮ ಅನಾರೋಗ್ಯದ ಬಗ್ಗೆ ಹೇಳುತ್ತಾ ಸದ್ಯಕ್ಕೆ ಆಶ್ರಯ ಕೊಟ್ಟವರ ಕಡೆಗೆ ನೋಡಿ ಕೈ ಮುಗಿದರು. ಸೋಹನ್ ಕುಮಾರಿಗೆ ಈಗ ವಯಸ್ಸೆಷ್ಟಿರಬಹುದು ಅಂತ ಅವರನ್ನೇ ಕೇಳಿದರೆ, ಒಮ್ಮೆ ತೊಂಬತ್ತಾಯ್ತುಅಂದರು. ಇನ್ನೊಮ್ಮೆ ಇನ್ನೂ ನನಗೆ ಅರವತ್ತೈದು ಎಂದು ಮುಸಿಮುಸಿ ನಕ್ಕರು. ನಾನು ಈಗಲೂ ಕೂತಲ್ಲೇ ನರ್ತಿಸಬಲ್ಲೆ. ವಯಸ್ಸಾಗಿರೋದು ನನ್ನ ಕಾಲ್ಗಳಿಗೆ ಮಾತ್ರ. ನನ್ನ ದನಿಗೆ, ಕೈಗಳಿದೆ ವೃದ್ಧಾಪ್ಯ ಸೋಕಿಲ್ಲ. ಮನಸಿಗಂತೂ ಇನ್ನೂ ಬಾಲ್ಯ ಎಂದು ಹಾಡಲು ಶುರು ಮಾಡಿ ಕೈಬಳುಕಿಸಿ ನರ್ತಿಸತೊಡಗಿದರು ಸೋಹನ್. ಅಷ್ಟೊಂದು ವರ್ಷ ಸಯಾಮಿ ಅವಳಿಗಳಂತೆ ಬದುಕಿದವರು ನೀವು. ಮೋಹನ್ ಕುಮಾರಿ ಇಲ್ಲದ ಬದುಕು ಹೇಗನಿಸುತ್ತಿದೆ ಅಂತ ಕೇಳಿದರೆ, ಅವಳೇ ಪುಣ್ಯವಂತೆ, ಅವಳಿಗೆ ಅಂಕಲ್ ಸಿಕ್ಕಿರುತ್ತಾರೆ ಅಲ್ಲಿ. ನಾನು ಇಲ್ಲಿ ಪೂರ್ತಿ ಒಬ್ಬಂಟಿ. ನಾವಿಬ್ಬರೂ ಜೊತೆಯಲ್ಲೇ ಇರುತ್ತಿದ್ದರೂ ಒಬ್ಬರ ಭಾವ ಇನ್ನೊಬ್ಬರು ಅರಿತದ್ದು ಕಡಿಮೆಯೇ. ನಾವು ಮುಕ್ತವಾಗಿ ಮಾತನಾಡಿಕೊಳ್ಳುತ್ತಲೇ ಇರಲಿಲ್ಲ. ಆದರೆ ಇಬ್ಬರಲ್ಲೂ ಪರಸ್ಪರ ತುಂಬ ಪ್ರೀತಿಯಿತ್ತು. ಆಕೆಯ ಕೊನೆಯ ದಿನಗಳಲ್ಲಿ ಅವಳ ಸೇವೆ ಮಾಡೋ ತಾಕತ್ತು ನನ್ನಲ್ಲಿತ್ತು ಅನ್ನೋದು ನನಗೆ ಸಮಾಧಾನ ಎನ್ನುವ ಹೊತ್ತಿಗೆ ಮುಖದಲ್ಲಿ ಬಲವಂತದ ಮುಗುಳ್ನಗೆಯಿತ್ತಾದರೂ ಕಣ್ಣು ತುಂಬಿಹೋಗಿತ್ತು. ಸೋಹನ್ ಕುಮಾರಿಗೆ ಈಗ ಎಂಬತ್ನಾಲ್ಕು ವರ್ಷ. ಸರ್ಕಾರದಿಂದ ಒಂದು ಬಾರಿ ಸಹಾಯ ಧನ ಸಿಕ್ಕಿದೆ. ಸದ್ಯಕ್ಕೆ ಮಾಸಾಶನವೂ ಇದೆ. ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರದಲ್ಲಿದ್ದ ಮನೆಯಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದ ಜೀವ ಇದೀಗ ಆಶ್ರಯ ವೃದ್ಧಾಶ್ರಮದಲ್ಲಿ ತಮ್ಮಂತೆಯೇ ಇರುವ ಹಲವು ಹಿರಿಯ ಜೀವಗಳೊಂದಿಗೆ ಜೀವನದ ಸಂಧ್ಯಾಕಾಲವನ್ನು ಅನುಭವಿಸುತ್ತಿದೆ. ಎರಡು ಬಾರಿ ತೀವ್ರ ಅನಾರೋಗ್ಯಕ್ಕೊಳಗಾಗಿ ಮರಳಿ ಬಂದರೂ, ಜೀವನೋತ್ಸಾಹ ಮಾತ್ರ ಚೂರೂ ಕುಂದಿಲ್ಲ. ದಾಟಿ ಬಂದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಭಾವುಕರಾಗುತ್ತಾ, ಇನ್ನೂ ನೂರು ವರ್ಷ ಬದುಕುತ್ತೇನೆ ಎಂಬಷ್ಟು ಆತ್ಮವಿಶ್ವಾಸದಲ್ಲೇ ಮಾತನಾಡುತ್ತ, ವೃದ್ಧಾಶ್ರಮದಲ್ಲಿರೋ ಎಲ್ಲರಲ್ಲೂ ಲವಲವಿಕೆ ತುಂಬುತ್ತಾ ಜೀವಿಸುತ್ತಿದ್ದಾರೆ ಸೋಹನ್ ಕುಮಾರಿ. ಅವರಿಗೆ ಇನ್ನಷ್ಟು ಆರೋಗ್ಯ ಮತ್ತು ನೆಮ್ಮದಿ ದೊರಕಲಿ ಎಂದು ಹಾರೈಸುವುದಷ್ಟೇ ನಮ್ಮಿಂದ ಸಾಧ್ಯ. -ನವೀನ್ ಸಾಗರ್