20 ವರುಷದ ಲಾಂಗ್ ಗ್ಯಾಪ್! ಓಂ ಬಿಡುಗಡೆಯಾಗುವ ಮೊದಲು ಈ ಚಿತ್ರದಲ್ಲಿ ಬೆಂಗಳೂರಿನ... ಓಂ ಬಿಡುಗಡೆಯಾಗುವ ಮೊದಲು ಈ ಚಿತ್ರದಲ್ಲಿ ಬೆಂಗಳೂರಿನ ಭೂಗತ ಜಗತ್ತಿನ ಪಾತಕಿಗಳು ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲರನ್ನೂ ಸಿನಿಮಾದ ಬಗ್ಗೆ ಕುತೂಹಲದಿಂದ ನೋಡುವಂತೆ ಮಾಡಿತು. ಅಲ್ಲಿಯತನಕ ರಾಜಕಾರಣಗಳು, ಸಿನಿಮೇತರ ವಿಭಾಗದವರು ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಿನಿಮಾಗಳು ಒಂದು ಮಟ್ಟಿಗೆ ವಿಶೇಷ ಅನಿಸುತ್ತಿದ್ದವಾದರೂ ಅವ್ಯಾವುದೂ ಕ್ರೇಜ್ ಹುಟ್ಟಿಸುತ್ತಿರಲಿಲ್ಲ. ಆದರೆ ಆಗಷ್ಟೇ ಪತ್ರಿಕೆಗಳಲ್ಲಿ ಕ್ರೈಮ್ ಮತ್ತು ಭೂಗತ ಲೋಕದ ಬಗ್ಗೆ ಜನ ಅಚ್ಚರಿ ಮತ್ತು ಭಯದಿಂದ ಕಣ್ಣರಳಿಸುತ್ತಿದ್ದಾಗ, ಆ ಪಾತಕಿಗಳ ಪಾತ್ರಗಳಲ್ಲ, ಅವರೇ ಕುದ್ದು ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಅಂದಾಗ ಸಹಜವಾಗಿಯೇ ಇಡೀ ರಾಜ್ಯದ ಜನತೆ ಚಿತ್ರಕ್ಕಾಗಿ ಕಾಯಲಾರಂಭಿಸಿದರು. ಇದೆಲ್ಲಕ್ಕಿಂತ ಹೆಚ್ಚಾಗಿ, ಕನ್ನಡಿಗರ ಆರಾಧ್ಯದೈವ ರಾಜ್ ಕುಮಾರ್ ರ ಚಿತ್ರ ಸಂಸ್ಥೆಯಲ್ಲಿ ಈ ಥರದ್ದೊಂದು ಚಿತ್ರವಾ ಎಂಬ ದ್ವಂದ್ವ ಭಾವವೂ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸತೊಡಗಿತು. ಕೆಲವರು ಅಪಸ್ವರದಿಂದ ಮಾತನಾಡಿದರೆ, ಕೆಲವರು ರಾಜ್ ಕುಮಾರ್ ಒಪ್ಪಿದ್ದಾರೆ ಅಂದರೆ ಅದರಲ್ಲಿ ಸಮ್ ಥಿಂಗ್ ಏನೋ ಇರಲೇಬೇಕು ಎಂಬ ನಂಬಿಕೆ ಬೆಳೆಸಿಕೊಳ್ಳತೊಡಗಿದರು. ಜೊತೆಗೆ, ಅಲ್ಲಿಯವರೆಗೂ ಶಿವರಾಜ್ಕುಮಾರ್ ಯಾರ ಕಣ್ಣಲ್ಲೂ ಒಬ್ಬ ಗಟ್ಟಿಗ ಹೀರೋ ಅನಿಸಿರಲೇ ಇಲ್ಲ. ಡೈಲಾಗ್ ಡೆಲಿವರಿಯಾಗಲೀ, ಹಾವಭಾವಗಳಾಗಲೀ ಎಲ್ಲವೂ ಇನ್ನೂ ಚಾಕೊಲೇಟ್ ಹೀರೋಗೆ ಸೂಟ್ ಆಗುವಂತಷ್ಟೇ ಇತ್ತು. ಅವರು ನಟಿಸಿದ್ದ ಸಿನಿಮಾಗಳೂ ಕೌಟುಂಬಿಕ ಕಥೆಯ ಅಥವಾ ಗ್ರಾಮೀಣ ಸೊಗಡಿನ ಅಥವಾ ಕಾಲೇಜ್ ಲವ್ ಸ್ಟೋರಿಗಳಷ್ಟೇ ಆಗಿದ್ದವು. ಆಗಲೇ ರಾಜ್ ಕುಟುಂಬದ ಕುಡಿಯೆಂಬ ಕಾರಣದ ಜೊತೆಗೆ ಸದಭಿರುಚಿಯ ಚಿತ್ರಗಳ ಮೂಲಕ, ತನ್ನ ಲವಲವಿಕೆಯ ನೃತ್ಯದ ಮೂಲಕ ಒಂದು ಯುವ ವರ್ಗವನ್ನು ಸೆಳೆದಿದ್ದ ಶಿವರಾಜ್ ಕುಮಾರ್ ಗೆ ಆರಂಭದಲ್ಲೇ ಹ್ಯಾಟ್ರಿಕ್ ಯಶಸ್ಸು ಸಿಕ್ಕಿತ್ತಾದರೂ, ಆ ನಂತರದಲ್ಲಿ ಬಂದ ಯಾವ ಚಿತ್ರಗಳೂ ಅವರ ಇಮೇಜು ಬದಲಿಸುವತ್ತ ಅಥವಾ ಅವರ ಆರಂಭಿಕ ಸಕ್ಸಸ್ಸನ್ನು ಮೀರಿಸುವತ್ತ ಯಶಸ್ವಿಯಾಗಲೇ ಇಲ್ಲ. ಓಂ ಚಿತ್ರದಲ್ಲಿ ಅಂಥ ಪ್ರಯತ್ನವಾಗಿವೆ ಎಂಬ ಸುದ್ದಿ ಹರಡಿದ್ದು, ಅದುವರೆಗೆ ಕಾಣದಿದ್ದ ಕುರುಚಲು ದಾಡಿ, ಕೆದರಿದ ತಲೆಯ ರಫ್ ಲುಕ್ ಪೋಸ್ಟರ್ ಗಳು ಚಿತ್ರಗಳು ಪಸರಿಸಿದ್ದು, ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಮೂಡಿಸತೊಡಗಿತು. ಇದೆಲ್ಲದರ ಜೊತೆಗೆ ಆಗಷ್ಟೇ ಉಪೇಂದ್ರ ಎಂಬ ಪ್ರತಿಭೆ ತನ್ನ ಆಗಮನವನ್ನು ತರ್ಲೆ ನನ್ಮಗ ಮತ್ತು ಶ್ ಚಿತ್ರಗಳ ಮೂಲಕ ಘೋಷಿಸಿತ್ತು. ಹೀಗೆಲ್ಲ ಚಿತ್ರಕ್ಕೆ ಹೆಸರಿಜಬಹುದು ಎಂದು ತೋರಿಸಿದ್ದೇ ಉಪೇಂದ್ರ ಎಂಬ ಕಾಶೀನಾಥ್ ಶಿಷ್ಯ. ಶ್ ಎಂಬ ನಿಶ್ಯಬ್ದ ಬೇಡುವ ಶಬ್ದವನ್ನೇ ಹೆಸರನ್ನಾಗಿ ವಿಕ್ಷಿಪ್ತ ಮಾದರಿಯಲ್ಲಿ ಸಿನಿಮಾ ಮಾಡಿದ್ದ ಉಪೇಂದ್ರ ಹೀಗೊಂದು ಭೂಗತಕತೆಯನ್ನು ಸಿನಿಮಾ ಮಾಡುತ್ತಿದ್ದಾರೆ ಎಂದಾಗಲೇ ಸಿನಿಮಾವಲಯದಲ್ಲಿ ಚರ್ಚೆ ಆರಂಭವಾಗಿತ್ತು. ಇದು ಕನ್ನಡಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯುತ್ತದೆ ಎಂಬ ಭವಿಷ್ಯ ನುಡಿಯಲಾಗಿತ್ತು. ಇಷ್ಟೆಲ್ಲ ನಿರೀಕ್ಷೆಯ ಭಾರದಲ್ಲಿ ತೆರೆಕಂಡ ಓಂ ಚಿತ್ರ ನರ್ತಕಿ, ಉಮಾ, ನವರಂಗ್, ಪ್ರಮೋದ್, ಶಾಂತಿ, ನಂದ ಮುಂತಾದ ಚಿತ್ರಮಂದಿರಗಳಲ್ಲಿ ಮೊದಲ ದಿನವೇ ದಾಖಲೆಯೆನಿಸುವಂಥ ಆರಂಭ ಪಡೆಯಿತು. ಕಾಲೇಜು, ಹೈಸ್ಕೂಲು ಹುಡುಗರೆಲ್ಲರೂ ಎರಡನೇ ಪ್ರದರ್ಶನದ ಹೊತ್ತಿಗೆ ಕ್ಲಾಸ್ ಬಂಕ್ ಮಾಡಿ ಬ್ಲಾಕ್ ಟಿಕೆಟ್ ಪಡೆದು ಥೇಟರೊಳಗೆ ಜಮಾಯಿಸಿದ್ದರು. ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರೆದೆಯಲ್ಲಿ ಭೂಗತಲೋಕದಲ್ಲೇ ಇದ್ದೀವೇನೋ ಎಂಬ ಭಯಭಾವ. ತೆರೆಯ ಮೇಲೆ ಕೊರಂಗು ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ, ಜೇಡರಹಳ್ಳಿ ಕೃಷ್ಣಪ್ಪ, ತನ್ವೀರ್, ಎಳ್ಲ ಕಾಣಿಸುತ್ತಿದ್ದರೆ ಪ್ರೇಕ್ಷಕರಲ್ಲಿ ತಾವು ಎಲ್ಲಿದ್ದೇವೆ ಎಂಬುದೇ ಮರೆತುಹೋಗಿ ಬಾಯಿ ಒಣಗುವಂತಾಗುತ್ತಿತ್ತು. ಮರುಸೃಷ್ಟಿಯಾಗಿದ್ದ ಜಯರಾಜ್, ಆಯಿಲ್ ಕುಮಾರ್ ಮುಂತಾದ ಪಾತ್ರಗಳು ಕೂಡ ಅವರೇ ನಿಜವಾದ ಜಯರಾಜ್, ಆಯಿಲ್ಕುಮಾರ್ ಏನೋ ಅನ್ನುವಷ್ಟು ನೈಜವಾಗಿದ್ದವು. ಆಯಿಲ್ ದಂಧೆಗಳ ದೃಶ್ಯಗಳು ಬೆಂಗಳೂರಿನ ಇನ್ನೊಂದು ಮುಖ ಹೀಗಿದೆಯಾ ಎಂದು ನೋಡುತ್ತಿರುವ ಹೊತ್ತಿನಲ್ಲೇ ದಿಗಿಲು ಮೂಡಿಸುತ್ತಿದ್ದವು. ಮೊದಲ ಹದಿನೈದು ನಿಮಿಷಗಳೆಲ್ಲೆ ಭೂಗತಲೋಕದ್ದೇ ಕಾರುಬಾಕು. ರೌಡಿ ಅಡ್ಡೆಯೊಳಗೆ ಲುಂಗಿಯುಟ್ಟು ಕೂತ ಸತ್ಯ (ಶಿವಣ್ಣ) ಲೈಟರ್ನಿಂದ ಸಿಗರೇಟು ಹಚ್ಚಿ ಕ್ಯಾಮೆರಾದತ್ತ ತಿರುಗುತ್ತಿದ್ದಂತೆಯೇ ಹೊಸ ಗೆಟಪ್ಪಿನ ಶಿವರಾಜ್ ಕುಮಾರ್ನನ್ನು ನೋಡಿದ ಪ್ರೇಕ್ಷಕರಲ್ಲಿ ಉದ್ವೇಗದ ಶಿಳ್ಳೆಗಳು. ನಂತರದ ಫ್ಲಾಶ್ ಬ್ಯಾಕ್ ದೃಶ್ಯಗಳಲ್ಲಿ ಕಾಲೇಜ್ ಯುವಕನ ಪಾತ್ರದ ಶಿವಣ್ಣ ತನ್ನೊಳಗಿನ ಕಲಾವಿದನನ್ನು ಅದ್ಭುತವಾಗಿ ಪ್ರಚುರಪಡಿಸಿದ್ದರು. ಏನಮ್ಮಾ ಸಾಸ್ತ್ರಿ... ಲೋ ಸಾಸ್ತ್ರಿ....ಬಾಮ್ಮಾ ಇಲ್ಲಿ.. ಸಿಗ್ರೇಟ್ ಕುಡ್ಕೋ... ಲೋ..ಇಲ್ ನೋಡ್ರೋ..ನಮ್ಮ ಸಾಸ್ತ್ರಿ ಒಳ್ಳೆ ಪಂಟ್ರು ಥರ ಬತ್ತಾ ಅವ್ನೆ... ಈ ಜಗತ್ತಲ್ಲಿ ನನ್ನನ್ನ ಪ್ರೀತಿಸ್ಬೇಡ ಅಂತ ಹೇಳೋ ಹಕ್ಕು ಯಾರಿಗೂ ಇಲ್ಲ..ಐ ಲವ್ ಯೂ... ಯೂ ಮಸ್ಟ್ ಲವ್ ಮೀ... ಈ ಥರ ಡೈಲಾಗುಗಳು ಕಾಲೇಜು ಹುಡುಗರ ಮಾತಿನ ಶೈಲಿಯನ್ನೇ ಬದಲಿಸಿಬಿಟ್ಟವು. ಹೀಗೆ ಪ್ರತಿ ದೃಶ್ಯಗಳೂ ಇಪ್ಪತ್ತು ವರ್ಷಗಳ ನಂತರವೂ ಓಂ ನೋಡಿದ ಪ್ರೇಕ್ಷಕರಲ್ಲಿ ಷಾಟ್ ಬೇ ಷಾಟ್ ಅನಾವರಣಗೊಳ್ಳುತ್ತಲೇ ಹೋಗುತ್ತವೆ. ಓಂ ಸಿನಿಮಾ ಇಷ್ಟೊಂದು ನೆನಪಲ್ಲಿ ಉಳಿಯಲು ಕಾರಣ ಏನು? ಉಪೇಂದ್ರರ ನಿರೂಪಣಾ ಶೈಲಿ ಅಂದಿಗೆ ಭಾರತೀಯ ಚಿತ್ರರಂಗಕ್ಕೇ ಅತಿ ಹೊಸತು. ಅದು ರಿವರ್ಸ್ ಸ್ಕ್ರೀನ್ ಪ್ಲೇ ಕೂಡ ಅಲ್ಲ. ಪ್ರೇಕ್ಷಕರನ್ನು ಕನ್ಫ್ಯೂಸ್ ಮಾಡುವ ತಂತ್ರವದು. ನೀವು ಇಷ್ಟೊತ್ತು ನೋಡಿದ್ದು ನಿಜವಲ್ಲ. ಈಗ ನೋಡೋದು ನಿಜ ಎಂಬಂತೆ ಮಾಡುವ ತಂತ್ರ. ಪಾತ್ರಧಾರಿಗಳಿಗೇ ತಮ್ಮ ಮುಂದಿನ ನಡೆಯೇನು ಎಂಬುದು ಗೊತ್ತಿಲ್ಲವೇನೋ ಎಂಬಷ್ಟು ಅನಿಶ್ಚಿತತೆ ಮೂಡಿಸುವ ತಂತ್ರಗಾರಿಕೆ ಚಿತ್ರದ ಪ್ರತಿಕ್ಷಣವನ್ನೂ ಕುತೂಹಲದಿಂದ ನೋಡಿಸಿಕೊಂಡಿತು. ಚಿತ್ರಕ್ಕೆ ಅದೇ ಮೊದಲ ಬಾರಿಗೆ ಹೊಸತೊಂದು ಕಲರ್ ನೀಡಲಾಗಿತ್ತು. ಇಡೀ ಚಿತ್ರ ನಿಮ್ಮನ್ನು ಆವರಿಸಿಕೊಳ್ಳಲು ಆ ಬಣ್ಣ ಕೂಡ ಒಂದು ಮುಖ್ಯ ಕಾರಣ. ಸೇಪಿಯಾ ಎಂಬ ತುಸು ಕಿತ್ತಳೆಕಂದಿನ ಬಣ್ಣದಲ್ಲಿ ಚಿತ್ರೀಕರಿಸಿದ್ದು ಭೂಗತಲೋಕ ಅಂದಕೂಡಲೇ ಆ ಬಣ್ಣ ನೆನಪಿಗೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಸಂಭಾಷಣಾ ಶೈಲಿ ಅದುವರೆಗೂ ಕನ್ನಡದಲ್ಲಿ ಗ್ರಾಂಥಿಕವೆನಿಸುವ ಕನ್ನಡ ಬಳಕೆಯಲ್ಲಿತ್ತು. ಅದೇ ಮೊದಲ ಬಾರಿಗೆ ತೀರಾ ಆಡುಭಾಷೆಯ, ಬೆಂಗಳೂರಿನ ಪಡ್ಡೆಗಳು, ಭೂಗತ ಲೋಕದ ಪಂಟರುಗಳು ಬಳಸುವ, ಕಾಲೇಜು ಹುಡುಗಹುಡುಗೀರು ಬಳಸುವ, ಎಲ್ಲ ಟಪೋರಿಪದಗಲನ್ನೂ ಸಂಭಾಷಣೆಯಲ್ಲಿ ಕಚ್ಚಾ ಎನಿಸುವಂತೆ ತಂದುಬಿಟ್ಟಿರು ಉಪ್ಪಿ. ಅದು ರಾತ್ರೋರಾತ್ರಿ ಹಿಟ್ ಆದದ್ದಷ್ಟೇ ಅಲ್ಲ. ಚಿತ್ರ ನೋಡುಗರ ಬಾಯಲ್ಲಿ ಆ ಡೈಲಾಗುಗಳು ಉದುರತೊಡಗಿದವು. ಟ್ರಾಕ್ ಬದಲಿಸಿದ ಹಂಸಲೇಖ ಹಂಸಲೇಖ ಆ ವರೆಗೆ ಬರೆದಿದ್ದ ಹಾಡುಗಳದ್ದೇ ಒಂದು ತೂಕವಾದರೆ, ಓಂ ಚಿತ್ರದ ಹಾಡುಗಳದ್ದೇ ಇನ್ನೊಂದು ತೂಕ. ಪ್ರೇಮಲೋಕದ ಥರದ ಸರಳಪ ಬಳಕೆಯ ಹಾಡುಗಳ ಜೊತೆಗೆ ಅತ್ಯಂತ ಕಾವ್ಯಾತ್ಮಕ ಹಾಡುಗಳನ್ನೂ ಹಂಸ್ ಬರೆದು ತಮ್ಮದೇ ರೆಪ್ಯುಟೇಶನ್ ಬೆಳೆಸಿಕೊಂಡಿದ್ದರು. ಆದರೆ ಈ ಚಿತ್ರಕ್ಕಾಗಿ ಅವರು ತಮ್ಮ ಶೈಲಿಯನ್ನೇ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಬಂದಿತು. ಅದನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡರು. ಕೋಳಿ ಮಂಜಾ.. ಡೀಲಾ... ಕೋಮಾ ಕೋಮಾ ಕೋಮಾ ಹಾಡುಗಳು ಹೊಸತನ ಪರಮಾವಧಿ ಅನಿಸಿಬಿಟ್ಟವು. ಅದರ ನಡುವೆಯೇ ಹೇ ದಿನಕರ ಶುಬಕರ ಎಂಬ ಭಕ್ತಿ ರಸದ ಗೀತೆ, ಓ ಗುಲಾಬಿಯೇ ಎಂಬ ಫಿಲಾಸಫಿಕಲ್ ಗೀತೆ ಬರೆದು ಟ್ಯೂನ್ ಹಾಕಿ, ತಾವು ಟ್ರೆಂಡ್ ಸೆಟ್ಟರ್ಗೇ ಟ್ರೆಂಡ್ ಸೆಟ್ಟರ್ ಎಂದು ಸಾರಿದರು. ಲಾಂಗ್ ಲಿವ್ ಶಿವಣ್ಣ ಈಗಲೂ ಶಿವರಾಜ್ಕುಮಾರ್ ಮತ್ತು ಉಪೇಂದ್ರರ ಮೇಲೆ ಅದು ಒಮ್ಮೊಮ್ಮೆ ಆರೋಪವಾಗಿಯೂ, ಕೆಲವೊಮೆ ಆರೋಪವಾಗಿಯೂ, ಕೆಲವೊಮ್ಮೆ ಹೆಮ್ಮೆಯಿಂದಲೂ ಚಿತ್ರರಂಗ ಹೇಳುತ್ತಲೇ ಇರುತ್ತದೆ. ಕನ್ನಡ ಚಿತ್ರರಂಗಕ್ಕೆ ಲಾಂಗ್ ಪರಿಚಯಿಸಿದ್ದೇ ಇವರು ಅಂತ! ಹೌದು, ಅಲ್ಲಿಯವರೆಗೂ ಹೀರೋಗೂ ವಿಲನ್ಗೂ ಮುಷ್ಟಿಯುದ್ಧಗಳು, ಹೆಚ್ಚೆಂದರೆ ಬಂದೂಕು ಪಿಸ್ತೂಲುಗಳು, ಚಾಕು ಕಾಣಿಸಿಕೊಳ್ಳುತ್ತಿದ್ದವು. ಇದೇ ಮೊದಲ ಬಾರಿಗೆ, ಲಾಂಗು ಎಂಬ ಉದ್ದದ ಆಯುಧ ತೆರೆಯ ಮೇಲೆ ರಾರಾಜಿಸಿತು. ಅಂದು ಶುರುವಾದ ಟ್ರೆಂಡು ಅಖಂಡ ಇಪ್ಪತ್ತು ವರ್ಷಗಳ ನಂತರವೂ ಉಳಿದುಕೊಂಡೇ ಬಂದಿದೆ ಅಂದರೆ ಓಂ ಟ್ರೆಂಡ್ ಸೆಟ್ಟರ್ ಅನ್ನದಿರಲಾದೀತೆ? ಓಂ ಚಿತ್ದ ಲಾಂಗು ಇಡೀ ಭಾರತೀಯ ಚಿತ್ರರಂಗದೆಲ್ಲೆಡೆ ತನ್ನ ರಕ್ತ ಚಿಮ್ಮನಸಿದ್ದಂತೂ ಹೌದು. ಇವತ್ತೂ ಅನೇಕ ಚಿತ್ರಗಳು ಲಾಂಗ್ ಅನ್ನು ಹೊತ್ತು ತರುತ್ತಿವೆ. ಆದರೆ, ಅವುಗಳಲ್ಲಿ 'ಓಂ ನಂತೆ ಹೊಳಪೂ ಇಲ್ಲ, ಆ ಡೈಲಾಗ್ಗಲು ಅಷ್ಟು ಹರಿತವೂ ಅಲ್ಲ. - ನವೀನ್ ಸಾಗರ್