ಬಾಡದ ಹೂ ಅಂದು ಕಾರ್ ಹತ್ತಿ ಕನ್ನಡಿಯಲ್ಲೊಮ್ಮೆ ಮುಖ ನೋಡಿಕೊಂಡು ಕೂದಲು ಸರಿ ಮಾಡಿಕೊಂಡು ಸಮಾಧಾನದ ಮುಗುಳ್ನಗೆ ಬೀರಿ ಹೊರಟ ಆ ಸುಂದರಿ ಮತ್ತೆ ತನ್ನ ಮುಖ ನೋಡಿದ್ದು, ಎರಡೂವರೆ ತಿಂಗಳ ನಂತರ! ಅದೂ ಚರ್ಮ ಕಳಚಿದ, ಆಕಾರವಿಲ್ಲದ ಮಾಂಸದ ಮುದ್ದೆಯಾಗಿ! ಒಬ್ಬರ ಪ್ರೀತಿ ಇನ್ನೊಬ್ಬರ ಬಾಳಲ್ಲಿ ಹಣತೆ ಹಚ್ಚಬೇಕು. ಆದರೆ ಇಲ್ಲೊಬ್ಬನ ಪ್ರೀತಿ ಆಕೆಯ ಬಾಲಿಗೇ ಬೆಂಕಿ ಹಚ್ಚಿತ್ತು. ಇದು 10 ವರ್ಷದ ಹಿಂದಿನ ಕತೆ. ಆಗಷ್ಟೇ ಲಖನೌವಾಸಿ ಮೋನಿಕಾ ಸಿಂಗ್ ದೆಹಲಿಯ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಗೆ ಎರಡನೇ ರ್ಯಾಂಕ್‌ನೊಂದಿಗೆ ಆಯ್ಕೆಯಾಗಿ ಸೇರಿದ್ದಳು. 19 ವರ್ಷದ ಮೋನಿಕಾಗೆ ಕೇವಲ ಫ್ಯಾಷನ್ ಡಿಸೈನರ್ ಅಷ್ಟೇ ಅಲ್ಲ, ಮಾಡೆಲ್ ಕೂಡಾ ಆಗುವ ಕನಸಿತ್ತು. ಆದಕ್ಕೆ ತಕ್ಕ ಸೌಂದರ್ಯವೂ ಇತ್ತು. ಒಂದು ವರ್ಷದ ನಂತರ ಕಾಲೇಜಿನಲ್ಲಿ ಕೊಟ್ಟ ಎರಡು ತಿಂಗಳ ಬೇಸಿಗೆ ರಜೆ ಅವಳ ಚಹರೆಯನ್ನೇ ಬದಲಿಸಿತು. ಊರಿಗೆ ಬಂದ ಮೋನಿಕಾ ಕಾರಿನಲ್ಲಿ ಸುತ್ತಾಡಲು ಹೊರಟಾಗ, ಟ್ರಾಫಿಕ್‌ನಲ್ಲಿ ಅವಳ 6 ವರ್ಷದ ಪರಿಚಿತ ಗೆಳೆಯ ಬಂದು ಕಾರಿನ ಗಾಜು ಇಳಿಸಲು ಹೇಳಿದ. ಇಳಿಸುತ್ತಿದ್ದಂತೇ ಮೈಮೇಲೆ ಬಿಸಿನೀರು ಬಿದ್ದಂತಾಯಿತು. ಕಾಫಿಯನ್ನು ಚೆಲ್ಲಿದ್ದಾರೆ ಎಂದೇ ಒಂದು ಕ್ಷಣ ಯೋಚಿಸಿದ ಮೋನಿಕಾ, ನಂತರ ಉರಿಯತೊಡಗಿದ್ದರಿಂದ ಕಾರನ್ನು ಆಸ್ಪತ್ರೆಯೆಡೆ ಕೊಂಡೊಯ್ಯಲೆಂದು ಕಾಲನ್ನು ಕ್ಲಚ್ ಮೇಲೆ ಇಡಲು ಹೋಗುತ್ತಾಳೆ. ಏಕೋ ತನ್ನ ಯಾವ ಅಂಗವೂ ತನ್ನ ಕೈಲಿಲ್ಲ, ಕೆಲಸ ಮಾಡುತ್ತಿಲ್ಲವೆನಿಸತೊಡಗಿ ಸ್ವಲ್ಪದರಲ್ಲೇ ಪ್ರಜ್ಞೆ ಮಂಕಾಗುತ್ತಾ ಸಾಗುತ್ತದೆ. ಹತ್ತಿರದ ಗೆಳೆಯ ಆಸಿಡ್ ಎರಚಿದ್ದು, ಎಂಥವರಿಗಾದರೂ ಮಾನವ ಜನಾಂಗದ ಮೇಲೆ ನಂಬಿಕೆ ಕಳಚುವ ಸಮಯ. ಆದರೆ ಅದನ್ನು ಮತ್ತೆ ಎತ್ತಿ ಹಿಡಿಯುತ್ತಾನೆ ಅದೆ ಸಮಯದಲ್ಲಿ ಪಕ್ಕದಲ್ಲಿದ್ದ ಆಟೋ ಡ್ರೈವರ್. ಆತ ಓಡಿ ಬಂದು ಈಕೆಯ ಕಾರನ್ನು ಚಲಾಯಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದ. ಅದಾಗಲೇ ಮುಖ ದೇಹದ ಮೇಲ್ಭಾಗವೆಲ್ಲ ಕರಗಿ, ಕಳಚಿ ದೇಹದ ಶೇ.75 ಭಾಗ ಆಸಿಡ್‌ಗೆ ಬಲಿಯಾಗಿತ್ತು! ಅಲ್ಲಿಂದ ಶುರವಾಗದದ್ದು ಸಾವಿನೊಂದಿಗೆ ಮೋನಿಕಾಳ ಸೆಣಸಾಟ. ಈ ಹಿಂದೆ... ಆಸಿಡ್ ಎರಚಿದ ಹುಡುಗ ಮೋನಿಕಾಳ ಗೆಳೆಯ, ಅವಳಿಗೆ ಪ್ರಪೋಸ್ ಮಾಡಿದ್ದ. ದೊಡ್ಡ ಫ್ಯಾಷನ್ ಡಿಸೈನರ್ ಆಗಬೇಕೆಂಬ ಕನಸಿಟ್ಟುಕೊಂಡಿದ್ದ ಮತ್ತು ಆಗಿನ್ನೂ 18ರ ಹರೆಯದಲ್ಲಿದ್ದ ಮೋನಿಕಾ ಆತನ ಪ್ರಪೋಸಲ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ರಿಜೆಕ್ಟ್ ಮಾಡಿದ್ದಳು. ಅವಳನ್ನು ತನಗೆ ಸಿಗದಂತೆ ಮಾಡಿದ ಕನಸನ್ನೂ, ತನಗೆ ಸಿಗದ ಅಂದವನ್ನೂ ನಾಶ ಮಾಡುವ ವಿಕೃತ ಮನಸ್ಥಿತಿ ಅವನದಾಗಿತ್ತು. ಆದರೆ ಘಟನೆ ನಡೆದ ಒಂಬತ್ತು ವರ್ಷಗಳ ನಂತರ ಮೋನಿಕಾಳನ್ನು ನೋಡಿದರೆ ನಮಗನ್ನಿಸುತ್ತದೆ, ಬಾಹ್ಯ ಸೌಂದರ್ಯವನ್ನಷ್ಟೇ ಅವನಿಂದ ಕಸಿಯಲಾಗಿದ್ದು. ಆಂತರಿಕವಾಗಿ ಆಕೆ ಹೆಚ್ಚು ಗಟ್ಟಿಯಾಗುತ್ತಲೇ ಸಾಗಿದಳು. ಆಸಿಡ್‌ನಿಂದ ಮುದುಡಿದ ತನ್ನ ಕನಸು ಸುಡದಂತೆ ನೀರೆರೆಯುತ್ತಲೇ ಬಂದಳು. ಏಕೆಂದರೆ ಜರ್ಝರಿತಗೊಂಡ ದೇಹದ ಮೇಲೆ 42 ಬಾರಿ ಸರ್ಜರಿಗೊಳಗಾದ ನಂತರ, ಇಂದು ಮೋನಿಕಾ ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಗ್ರಿ ಮುಗಿಸಿ, ನ್ಯೂಯಾರ್ಕ್‌ನಲ್ಲಿರುವ ಪ್ರತಿಷ್ಠಿತ ಪಾರ್ಸನ್ಸ್ ನ್ಯೂ ಸ್ಕೂಲ್ ಫಾರ್ ಡಿಸೈನ್‌ಗೆ ಆಯ್ಕೆಯಾಗಿದ್ದಾಳೆ! ಈ ಪ್ರಕ್ರಿಯೆಯಲ್ಲಿ ಮೋನಿಕಾಳ ತಂದೆ ತಮ್ಮೆಲ್ಲ ಆಸ್ತಿಪಾಸ್ತಿಯನ್ನೂ ಮಗಳ ಉಸಿರಾಟವನ್ನು ಹಿಡಿದಿಡಲು ಖಾಲಿ ಮಾಡಿದ್ದಾರೆ. ಪರಿಚಯದವರೂ ತನ್ನನ್ನು ಗುರುತಿಸದ್ದನ್ನು ಕಂಡು ನೊಂದಿದ್ದಾಳೆ. ಆಸ್ಪತ್ರೆಯಲ್ಲಿ ವರ್ಷ ಕಳೆದ ಮೇಲೆ 3 ವರ್ಷದ ಮಗುವಿನಂತೆ ತೊದಲು ಮಾತನಾಡುತ್ತ ಮತ್ತೆ ಎಲ್ಲವನ್ನು ಮೊದಲಿಂದ ಕಲಿತು 28 ವರ್ಷದ ಹುಡುಗಿಯಾಗಿ ಬೆಳೆದಿದ್ದಾಳೆ. ಆದರೆ ಈ ಆಯ್ಕೆಯ ಸಂಭ್ರಮವನ್ನು ನೋಡಲು ಅವಳನ್ನುಳಿಸಿಕೊಳ್ಳಲು ಹಗಲಿರುಳೂ ಹೆಣಗಿದ ಅವಳ ತಂದೆ ಬದುಕಿಲ್ಲ. ತನ್ನ ಬಗ್ಗೆ ಕೊರಗಿನಲ್ಲೇ ಅಪ್ಪ ಹೋದರೆಂಬ ಚಿಂತೆ ಅವಳದು. ಹಾಗಾಗೇ ಅಪ್ಪನ ಆತ್ಮಕ್ಕೆ ನೆಮ್ಮದಿ ತರಲು ಮೋನಿಕಾ ನೋವಿಗೆ ಅವಡುಗಚ್ಚಿ ಕನಸಿನ ಗುರಿಯತ್ತ ಸಾಗಿದ್ದಾಳೆ. ಈಗ ತನ್ನ ಕನಸಿಗಿನ್ನು ಒಂದೇ ಹೆಜ್ಜೆ ಎನ್ನುವಂತೆ ಪಾರ್ಸನ್ಸ್ ಸ್ಕೂಲ್ ಹೊಸ್ತಿಲಲ್ಲಿ ನಿಂತಿರುವ ಮೋನಿಕಾಳಿಗೆ, ಇನ್ನೊಂದು ಹೆಜ್ಜೆ ಇಡಲು 55000 ಡಾಲರ್ ಬೇಕಿದೆ. ಅದಕ್ಕಾಗಿ ಅವಳು ಇಂಟರ್ನೆಟ್ ಮೂಲಕ ದಾನಿಗಳ ಮೊರೆ ಹೋಗಿದ್ದಾಳೆ. ಮನುಷ್ಯನ ಹೀನಕೃತ್ಯಕ್ಕೆ ಬಲಿಯಾದ ಮೋನಿಕಾಗೆ ಮನುಷ್ಯನ ಉದಾರತೆಯೊಂದೇ ಕುಸಿದುಬಿದ್ದ ನಂಬಿಕೆಗಳ ಸೇತುವೆಯನ್ನು ಪುನರ್ನಿರ್ಮಿಸಬಲ್ಲದು. ಅದಕ್ಕೆ ನಿಮ್ಮದೂ ಪಾಲು ನೀಡುವಿರಾದರೆ ಒಮ್ಮೆ ./ ಪುಟ ತೆರೆದುನೋಡಿ. -ರೇಶ್ಮಾರಾವ್ ಸೊನ್ಲೆ