ಮಹಾ ಸಾಧನೆ ಕನ್ನಡ ಕಿರುತೆರೆ 25 ವರ್ಷಗಳ ಇತಿಹಾಸ ಕಂಡಿದ್ದರೂ ನೂರಾರು ಮೆಗಾ ಧಾರಾವಾಹಿಗಳು ಬಂದಿದ್ದರೂ... ಕನ್ನಡ ಕಿರುತೆರೆ 25 ವರ್ಷಗಳ ಇತಿಹಾಸ ಕಂಡಿದ್ದರೂ ನೂರಾರು ಮೆಗಾ ಧಾರಾವಾಹಿಗಳು ಬಂದಿದ್ದರೂ, ಸಾವಿರ ಎರಡು ಸಾವಿರ ಕಂತುಗಳು ದಾಟಿದ ಸಾಮಾಜಿಕ ಧಾರಾವಾಹಿ ಪ್ರಸಾರವಾಗಿದ್ದರೂ, ಪೌರಾಣಿಕ ಧಾರಾವಾಹಿಗಳನ್ನು ಕನ್ನಡದಲ್ಲಿ ಮಾಡುವ ಸಾಹಸ ಯಾರೂ ಮಾಡುವುದಿಲ್ಲ ಎಂಬ ನಂಬಿಕೆ ಬೇರೂರಿತ್ತು. ಕನ್ನಡದಲ್ಲಿ ನಾಲ್ಕೈದು ಮನರಂಜನಾ ಚಾನೆಲ್‌ಗಳು ಪ್ರಾರಂಭವಾದರೂ ಪೌರಣಿಕ ಧಾರಾವಾಹಿಗೆ ಯಾರೂ ಮನಸ್ಸು ಮಾಡಿರಲಿಲ್ಲ. ನಿಧಾನವಾಗಿ ಈ ಸೀನ್ ಬದಲಾಯಿತು. ಶಿವಲೀಲಾಮೃತ ಎಂಬ ಧಾರಾವಾಹಿ ಮೊದಲಿಗೆ ಪ್ರಸಾರವಾಯಿತು. ಆದರೆ ರಾಮಾಯಣ, ಮಹಾಭಾರತಗಳನ್ನು ಕನ್ನಡ ಕಿರುತೆರೆಗೆ ಅಳವಡಿಸುವ ಸಾಹಸವನ್ನು ಅತ್ಯಂತ ಜನಪ್ರಿಯ ನಿರ್ಮಾಪಕರು ಕೂಡ ಮಾಡಲಿಲ್ಲ. ಪೌರಾಣಿಕ ಧಾರಾವಾಹಿಗೆ ಬೇಕಾದ ಪಾತ್ರಧಾರಿಗಳು, ಸೆಟ್‌ಗಳು, ಮೇಕಪ್ ಸಾಧನಗಳು, ಗ್ರಾಫಿಕ್ ತಂತ್ರಜ್ಞಾನ ಇವೆಲ್ಲಕ್ಕೂ ಅತ್ಯಂತ ಹೆಚ್ಚು ವೆಚ್ಚವಾಗುವುದರಿಂದ ಬಹುಶಃ ಹಿಂದೆಗೆದದ್ದಿರಬೇಕು. ಆರ್.ಎನ್. ಜಯಗೋಪಾಲ್‌ರು ರಾಮಾಯಣವನ್ನು ಕಿರುತೆರೆಗೆ ನಿರ್ಮಿಸಲು ಮುಂದಾದರು. ಆದರೆ ಅವರ ನಿಧನದಿಂದಾಗಿ ರಾಮಾಯಣ ಧಾರಾವಾಹಿ ಮುಂದುವರಿಯಲಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕು ವರ್ಷ ಹಿಂದೆ ಆರಂಭವಾದ ಮಹಾಭಾರತ ಧಾರಾವಾಹಿಯನ್ನು ನೋಡಬೇಕು. ಸಿನಿವೆಸ್ಟಾ ಲಿಮಿಟೆಡ್ ಸಂಸ್ಥೆ ಸೀತೆ ಹೆಸರಿನಲ್ಲಿ ರಾಮಾಯಣದ ಕಥೆಯನ್ನು ಐನೂರಕ್ಕೂ ಹೆಚ್ಚು ಕಂತುಗಳಲ್ಲಿ ನಿರ್ಮಿಸಿತು. ಉದಯ ಟಿವಿಯಲ್ಲಿ ಪ್ರಸಾರವಾದ ಸೀತೆ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಗಳಿಸಿತು. ಇದರಿಂದ ಉತ್ಸಾಹಗೊಂಡ ಸಿನಿವೆಸ್ಟಾ ಸಂಸ್ಥೆ ಮಹಾಭಾರತ ಮೆಗಾ ಧಾರಾವಾಹಿಯನ್ನು ನಿರ್ಮಿಸಿತು. ಇದೂ ಕೂಡ ಉದಯ ಟಿವಿಯಲ್ಲಿ ಸಂಜೆ ಆರು ಗಂಟೆಗೆ ಪ್ರಸಾರವಾಗುತ್ತಿದೆ. ಈಗ ಅದು 500 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿ ಮುಂದೆ ಧಾವಿಸುತ್ತಿದೆ. ಬೆಂಗಳೂರಿನ ಕುಂಬಳಗೂಡಿನಲ್ಲಿ ಹತ್ತು ಸಾವಿರ ಚದರಡಿಯಲ್ಲಿ ಇದಕ್ಕಾಗಿ ಅತ್ಯಂತ ಅದ್ದೂರಿ ಸೆಟ್ ಹಾಕಲಾಗಿದೆ. ಗ್ರಾಫಿಕ್ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪೌರಾಣಿಕ ಧಾರಾವಾಹಿ 500 ಕಂತು ದಾಟಿ ಮುನ್ನಡೆಯುತ್ತಿರುವುದೊಂದು ವಿಶಿಷ್ಟ ಸಾಧನೆಯೇ ಸರಿ. ಇದಕ್ಕೆ ಮುನ್ನ ಬೇರೆ ಭಾಷೆಗಳಲ್ಲಿ ಬಂದ ಮಹಾಭಾರತಗಳೂ 200 ಕಂತುಗಳನ್ನೂ ಮೀರಿದಂತಿಲ್ಲ. ಆದರೆ ಕನ್ನಡದ ಧಾರಾವಾಹಿ ಮಹಾಭಾರತದ ಎಲ್ಲ ಪ್ರಮುಖ ಘಟನೆಗಳನ್ನು ಒಳಗೊಂಡಂತೆ 500 ಕಂತುಗಳಲ್ಲಿ ವಿರಾಟಪರ್ವದವರೆಗೆ ವಿಸ್ತರಿಸಿದೆ. ಉದಯ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ಸಾಕಷ್ಟು ಜನಪ್ರಿಯ. 5 ತರಹದ ಅದ್ದೂರಿ ಸೆಟ್ಟುಗಳು, ಗ್ರಾಫಿಕ್ ತಂತ್ರಜ್ಞಾನ, ರಥ, ಕುದುರೆ, ವರ್ಣಮಯ ಪೋಷಾಕು, ಹೊರಾಂಗಣ ಚಿತ್ರೀಕರಣ, ನೂರಾರು ಹಿರಿತೆರೆ ಮತ್ತು ಕಿರುತೆರೆ ಕಲಾವಿದರ ಪ್ರತಿಭಾಪೂರ್ಣ ಅಭಿನಯಗಳಿಂದ ಈ ಧಾರಾವಾಹಿ ಕನ್ನಡದ ಮನದಲ್ಲಿ ನೆಲೆಸಿದೆ. ಹಿರಿಯ ನಿರ್ದೇಶಕ ಕಿಷನ್ ಸೇಠಿ ಈ ಧಾರಾವಾಹಿ ನಿರ್ದೇಶಿಸಿದ್ದಾರೆ. ಸಂಶೋಧನೆ, ಚಿತ್ರಕಥೆ ಜೆ.ಎಂ. ಪ್ರಹ್ಲಾದ್ ಮತ್ತು ಸಂಭಾಷಣೆ ರುದ್ರಮೂರ್ತಿ ಶಾಸ್ತ್ರಿಯ ಮತ್ತು ಜೆ.ಎಂ ಪ್ರಹ್ಲಾದ್ ಅವರದು. ಚಿನ್ನ ಹೊನ್ನೂರು ಸಂಕಲನ. ಶಂಕರ್ ಮಹದೇವನ್ ಹಾಡಿದ ಶೀರ್ಷಿಕೆ ಗೀತೆಯನ್ನೂ ಒಳಗೊಂಡಂತೆ ಅನೇಕ ಹಾಡುಗಳಿಗೆ ವೀರ್‌ಸಮರ್ಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿವೆಸ್ಟಾ ಸಂಸ್ಥೆಯ ಮುಖ್ಯಸ್ಥ ಸುನೀಲ್ ಮೆಹ್ತಾ ಹೇಳುವಂತೆ ಇದನ್ನು ಇನ್ನಷ್ಟು ಆಕರ್ಷಕವಾಗಿ, ವಿಸ್ತೃತವಾಗಿ ಮಾಡುವ ಪ್ರಯತ್ನ ನಡೆದಿದೆ. ಕುಮಾರ್